ಕರೋನಾ ವೈರಸ್ ಇಡೀ ಜಗತ್ತಿನ ಜಂಘಾಬಲವನ್ನೇ ನಡುಗಿಸಿದೆ. ದೈತ್ಯ ದೇಶಗಳೇ ಈ ದುರ್ವಿಧಿಗೆ ದಣಿದುಬಿಟ್ಟಿವೆ. ಮಹಾನಗರಗಳು ಕರೋನಾ ಮಹಾಮಾರಿಯಿಂದ ನರಕಸದೃಶ್ಯವಾಗಿವೆ. ಇಂಥ ಕಡುಕಠೋರಿ ಕರೋನಾ ಈಗ ಭಾರತದ ಮುಂಚೂಣಿ ನಗರಗಳಲ್ಲಿ ಒಂದಾಗಿದ್ದ ಅಹಮದಾಬಾದ್ ಎಂಬ ಪೊಗದಸ್ತಾಗಿದ್ದ ನಗರವನ್ನು ಅಕ್ಷರಶಃ ಜರ್ಝರಿತಗೊಳಿಸಿದೆ. ಗುಜರಾತಿನ ಅಹಮದಾಬಾದ್ ನಗರ ಈಗ ಕರೋನಾ ಹುಟ್ಟುರಾದ ವುಹಾನ್ ಅನ್ನು ನೆನಪಿಸುತ್ತಿದೆ.
ಕಾರಣ ಏಕೆ ಗೊತ್ತಾ? ಅಹಮದಾಬಾದ್ ನಗರದಲ್ಲಿ ಕೇವಲ 5 ದಿನಗಳ ಅಂತರಲ್ಲಿ 100 ಮಂದಿ ಕಡುಪಾಪಿ ಕರೋನಾಕ್ಕೆ ಬಲಿಯಾಗಿದ್ದಾರೆ. ಅಹಮದಾಬಾದ್ ನಗರ ಅಪಾಯದ ಎಲ್ಲಾ ಎಲ್ಲೆಗಳನ್ನು ಮೀರುತ್ತಿದೆ ಎಂಬುದಕ್ಕೆ ಕೇಂದ್ರ ಮತ್ತು ಗುಜರಾತ್ ಸರ್ಕಾರದ ಆರೋಗ್ಯ ಇಲಾಖೆಗಳು ಪ್ರತಿದಿನ ಬಿಡುಗಡೆ ಮಾಡುತ್ತಿರುವ ಸತ್ತವರ ಸಂಖ್ಯೆಗಳೇ ಸಾಕ್ಷಿ.
ಈವರೆಗೆ ಗುಜರಾತ್ ರಾಜ್ಯದಲ್ಲಿ ಕರೋನಾದಿಂದ 368 ಮಂದಿ ಸಾವನ್ನಪ್ಪಿದ್ದಾರೆ. ಅ ಪೈಕಿ ಅಹಮದಾಬಾದ್ ನಗರವೊಂದರಲ್ಲಿ ಸತ್ತವರ ಸಂಖ್ಯೆ ಬರೊಬ್ಬರಿ 273. ಅಂದರೆ ಗುಜರಾತಿನ ಶೇಕಡ 80ರಷ್ಟು ಹೆಚ್ಚು ಸಾವುಗಳು ಅಹಮದಾಬಾದ್ ನಗರವೊಂದರಲ್ಲೇ ಆಗಿವೆ. ಅಹಮದಾಬಾದ್ ನಗರ ಈಗ ಕೆಂಪು ವಲಯ. ಕಟ್ಟುನಿಟ್ಟಿನ ಕ್ರಮಗಳಿವೆ. ಆದರೂ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅದರ ಪರಿಣಾಮ ಕಳೆದ 10 ದಿನಗಳಲ್ಲಿ ಅಹಮದಾಬಾದ್ ನಗರದಲ್ಲಿ 200 ಸಾವುಗಳು ಸಂಭವಿಸಿವೆ. ಶೇಕಡವಾರು ಹೇಳುವುದಾದರೆ 70ರಷ್ಟು ಹೆಚ್ಚು ಸಾವುಗಳು ಕಳೆದ 10 ದಿನಗಳಲ್ಲೇ ಘಟಿಸಿವೆ. ಸೋಮವಾರ ಒಂದೇ ದಿನ 39 ಸಾವು ಸಂಭವಿಸಿವೆ.
ಸಾವಿನ ಸರಣಿ ಇಂತಿದೆ.
ಏಪ್ರಿಲ್ 25 ರಂದು 4 ಸಾವು,
ಏಪ್ರಿಲ್ 26ರಂದು 18 ಸಾವು,
ಏಪ್ರಿಲ್ 27ರಂದು 5 ಸಾವು,
ಏಪ್ರಿಲ್ 28 ರಂದು 19 ಸಾವು,
ಎಪ್ರಿಲ್ 29ರಂದು 14 ಸಾವು,
ಏಪ್ರಿಲ್ 30ರಂದು 15 ಸಾವು,
ಮೇ 1ರಂದು 16 ಸಾವು,
ಮೇ 2 ರಂದು 20 ಸಾವು,
ಮೇ 3ರಂದು 23 ಸಾವು,
ಮೇ 4ರಂದು 26 ಸಾವು ಮತ್ತು
ಮೇ 5ರಂದು 39 ಸಾವು
ಕರೋನಾ ವೈರಸ್ ಹರಡಿ ಸಾವನ್ನಪ್ಪುತ್ತಿರವವರ ಸಂಖ್ಯೆ ದಿನದಿಂದ ದಿನಕ್ಕೆ ಏರುಮುಖವಾಗಿ ಸಾಗುತ್ತಿರುವುದು ಅಹಮದಾಬಾದ್ ನಗರವನ್ನಷ್ಟೇಯಲ್ಲ, ಗುಜರಾತಿಗರೆಲ್ಲರನ್ನು, ಭಾರತೀಯರೆಲ್ಲರನ್ನು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಕಳೆದ ಭಾನುವಾರ ಕರೋನಾ ಅಟ್ಟಹಾಸ ಮಹಾನಗರಗಳಲ್ಲೇ ಹೆಚ್ಚು ಎಂಬ ಮಾಹಿತಿಯೊಂದು ಕೇಳಿಬಂದಿತ್ತು. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಿದಾಗ ಈ ವಿಷಯ ಚರ್ಚೆ ಆಗಿತ್ತು. ದೇಶದ 20 ನಗರಗಳಲ್ಲಿ ಶೇಕಡಾ 78ರಷ್ಟು ಕರೋನಾ ಪೀಡಿತರು ಇದ್ದಾರೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿತ್ತು. ಹೀಗೆ ಕರೋನಾ ದಾಳಿಗೆ ತೀವ್ರವಾಗಿ ತುತ್ತಾಗಿರುವ ಮುಂಬೈ, ದೆಹಲಿ ಚೆನ್ನೈ ಮಹಾನಗರಗಳ ಸಾಲಿನಲ್ಲಿ ಅಹಮದಾಬಾದ್ ಹೆಸರು ಇತ್ತು. ಈಗ ಅಹಮದಾಬಾದ್ ನಗರದಲ್ಲಿ ಕರೋನಾ ಕೇವಲ 5 ದಿನಕ್ಕೆ 100 ಮಂದಿಯನ್ನು ಬಲಿ ತೆಗೆದುಕೊಂಡು ಮತ್ತೊಂದು ದಾಖಲೆ ಬರೆದಿದೆ.
ಅಹಮದಾಬಾದಿನಲ್ಲಿ ಸಾವಿನ ಸಂಖ್ಯೆ ಶರವೇಗದಲ್ಲಿ ಸಾಗುತ್ತಿರುವುದು ಇನ್ನೊಂದು ರೀತಿಯ ಅಪಾಯವನ್ನು ನೆನಪಿಸುವಂತಿದೆ. ಇಷ್ಟು ದಿನ ಲಾಕ್‌ಡೌನ್ ಇತ್ತು. ಕಟ್ಟುನಿಟ್ಟಿನ ಕ್ರಮಗಳಿದ್ದವು. ಸಾಮಾಜಿಕ ಅಂತರದ ಪಾಲನೆ ಆಗುತ್ತಿತ್ತು. ಆ ಸಂದರ್ಭದಲ್ಲೇ ಹೀಗೆ ವ್ಯಾಪಕವಾಗಿ ಹರಡಿದೆ ಎಂದರೆ ಮೇ 17ರ ಬಳಿಕ ಲಾಕ್‌ಡೌನ್ ಮುಕ್ತಾಯಗೊಂಡರೆ ಇನ್ನೆಂಥ ಗಂಡಾಂತರ ಆಗಬಹುದೆಂಬ ಆತಂಕವನ್ನು ಸೃಷ್ಟಿಸಿದೆ.
ಗುಜರಾತ್ ಅಥವಾ ಕೇಂದ್ರ ಆರೋಗ್ಯ ಇಲಾಖೆಗಳ ಮಾಹಿತಿಯ ಪ್ರಕಾರ ಅಹಮದಾಬಾದಿನಲ್ಲಿ ಕರೋನಾ ಇನ್ನು ಕೂಡ ಸಮುದಾಯಕ್ಕೆ ಹರಡಿಲ್ಲ. ಆದರೆ ಲಾಕ್‌ಡೌನ್ ನಿಯಮಗಳು ಸಡಲಿಕೆಗೊಂಡ ಬಳಿಕ ಹರಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಎಂಬ ಚರ್ಚೆಗಳು ನಡೆಯುತ್ತಿವೆ. ಗುಜರಾತಿನಲ್ಲಿ ಈವರೆಗೆ ಒಟ್ಟು 6245 ಜನರು ಕರೋನಾ ಪೀಡಿತರಾಗಿದ್ದಾರೆ. ಆ ಪೈಕಿ ಅಹಮದಾಬಾದ್ ನಗರದಲ್ಲೇ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿ ಹಲವು ಹಾಟ್ಸ್ಪಾಟ್ಗಳನ್ನ ಗುರುತಿಸಿ ಕಂಟೈನ್ಮೆಂಟ್ ಜೋನ್ ಆಗಿ ಪರಿಗಣಿಸಲಾಗಿದೆ. ಇಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನೂ ಕೋವಿಡ್ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೂ ಸೋಂಕು ಪೀಡಿತರ ಮತ್ತು ಸತ್ತವರ ಸಂಖ್ಯೆ ಏರುತ್ತಲೇ ಇದೆ. ಆತಂಕವೂ ಕೂಡ…