ಅಮೇರಿಕಾ ಸೇರಿದಂತೆ ಎಂಟು ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಾಯಕರು ಚೀನಾದ ವಿರುದ್ಧವಾಗಿ ಸಂಸದೀಯ ಮೈತ್ರಿ ಸಾಧಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಚೀನಾದ ಪ್ರಭಾವವು ಜಾಗತಿಕ ವ್ಯಾಪಾರ, ಭದ್ರತೆ ಹಾಗೂ ಮಾನವ ಹಕ್ಕುಗಳಿಗೆ ಕಂಟಕವಾಗುತ್ತದೆಂದು ಹೊಸದಾಗಿ ರಚನೆಯಾಗಿರುವ ಸಂಸದೀಯ ಮೈತ್ರಿಯು ಹೇಳಿದೆ.
ಅಲ್ಲದೆ ಹಾಂಕಾಂಗ್ ನಗರದ ಮೇಲೆ ರಾಷ್ಟ್ರೀಯ ಭದ್ರತಾ ಶಾಸನ ವಿಧಿಸಿರುವ ಚೀನಾ ಸರ್ಕಾರದ ನಡೆಯನ್ನು ಖಂಡಿಸಿರುವ ಒಕ್ಕೂಟವು, ಇದು ನಗರದ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

ಹಾಂಕಾಂಗ್ ಬಿಕ್ಕಟ್ಟು ದೇಶದ ಆಂತರಿಕ ಸಮಸ್ಯೆ, ತನ್ನ ಆಂತರಿಕ ರಾಜತಾಂತ್ರಿಕ ವಿಸ್ತರಣೆಯಿಂದ ಜಗತ್ತಿಗೆ ಯಾವ ತೊಂದರೆಯೂ ಆಗುವುದಿಲ್ಲ. ಈ ವಿಚಾರದಲ್ಲಿ ಹೊರ ರಾಷ್ಟ್ರ ಶಕ್ತಿಗಳು ತಲೆ ಹಾಕಬಾರದೆಂದು ಚೀನಾ ಹೇಳಿದೆ.
ಒಟ್ಟು ಸೇರಿರುವ ನಾಯಕರು ವಾಸ್ತವವನ್ನು ಒಪ್ಪಬೇಕು. ಅಂತರಾಷ್ಟ್ರೀಯ ಸಂಬಂಧದ ಮೂಲ ನಿಯಮಗಳನ್ನು ಗೌರವಿಸಬೇಕು. ರಾಜಕೀಯ ಹಿತಾಸಕ್ತಿಗಳಿಗಾಗಿ ಆಂತರಿಕ ರಾಜತಾಂತ್ರಿಕ ಸಮಸ್ಯೆಗಳಿಗೆ ತಲೆ ಹಾಕಬಾರದೆಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್ ಹೇಳಿದ್ದಾರೆ.