ಕಾಂಗ್ರೆಸ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಪಕ್ಷ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲಾ ರಾಜ್ಯಗಳಲ್ಲೂ ಆಪರೇಷನ್‌ಕಮಲ ಎನ್ನುವ ಸಂವಿಧಾನ ವಿರೋಧಿ ನಿಲುವುಗಳು ಪ್ರಕಟಗೊಳ್ಳುತ್ತಲೇ ಇವೆ. ಕಾಂಗ್ರೆಸ್ ತನ್ನ ಪಕ್ಷದಲ್ಲೇ ಬೆಳೆದು ಉತ್ತಮ ನಾಯಕರಾದವರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಇತ್ತೀಚಿಗೆ ಮಧ್ಯಪ್ರದೇಶದಲ್ಲಿ ಜೋತಿರಾಧಿತ್ಯ ಸಿಂಧಿಯಾ ಹಾಗೂ ಇದೀಗ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಜಾರಿ ಹೋಗುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ದುಬಾರಿಯಾದರೂ ಚಿನ್ನದ ಮೊಟ್ಟೆಯನ್ನಿಡುವ ಕೋಳಿಗಳ ರಕ್ಷಣೆ ಮಾಡುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗುತ್ತಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗುತ್ತಿದ್ದಂತೆ ಯುವ ಪಡೆಯನ್ನೇ ಕಟ್ಟಲು ಮುಂದಾಗಿದ್ದರು. ಅದೇ ಯೋಜನೆಯಲ್ಲಿ ಎಲ್ಲಾ ರಾಜ್ಯಗಳಲ್ಲೂ ತಂದೆ ರಾಜೀವ್ ಗಾಂಧಿಯಂತೆಯೇ ಯುವ ಸೇನೆ ಕಟ್ಟಲು ಮುಂದಾಗಿದ್ದರು. ಯುವ ನಾಯಕರನ್ನು ಆಯ್ಕೆ ಮಾಡಿಕೊಂಡು, ಕಾಂಗ್ರೆಸ್‌ನಲ್ಲಿ ನೂತನ ಪಡೆ ರಚಿಸಲು ಮುಂದಾಗಿದ್ದರು. ಆದರೆ ರಾಹುಲ್ ಗಾಂಧಿ ಯೋಜನೆಗೆ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರ ಅಪಸ್ವರ ಉಂಟಾಗಿತ್ತು. ಆದರೂ ನಾಯಕರ ಒತ್ತಡಕ್ಕೆ ಮಣಿಯದೆ ಯುವಕರನ್ನು ಮುನ್ನಲೆಗೆ ತರುವ ಕೆಲಸ ಮಾಡಿದ್ರು.
ಸಚಿನ್ ಪೈಲಟ್, ಜೋತಿರಾಧಿತ್ಯ ಸಿಂಧಿಯಾ ಎರಡು ಕಣ್ಣು..!
ಕಾಂಗ್ರೆಸ್‌ನಲ್ಲಿ ರಾಹುಲ್‌ಗಾಂಧಿ ಅತ್ಯಾಪ್ತರಲ್ಲಿ ಸಚಿನ್‌ಪೈಲಟ್‌ಹಾಗೂ ಜೋತಿರಾಧಿತ್ಯ ಸಿಂಧಿಯಾ ಎರಡು ಕಣ್ಣುಗಳಿದ್ದಂತೆ. ಕಳೆದ ಎರಡು ಲೋಕಸಭಾ ಚುನಾವಣೆ ಸೇರಿದಂತೆ ವಿಧಾನಸಭಾ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ಬೆನ್ನೆಲುಬು ಆಗಿದ್ದವರು. ರಾಹುಲ್‌ಗಾಂಧಿ ರಚಿಸಿದ್ದ ಪ್ಲ್ಯಾನಿಂಗ್ ಟೀಂನಲ್ಲಿ ಈ ಇಬ್ಬರು ನಾಯಕರು ಸ್ಥಾನ ಪಡೆದುಕೊಂಡಿದ್ದರು. ಅದೇ ಕಾರಣದಿಂದ ಸಾಕಷ್ಟು ವೇಗವಾಗಿ ಬೆಳೆದುಕೊಂಡ ಈ ಇಬ್ಬರು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ರಾಜ್ಯ ಪ್ರವಾಸ ಮಾಡಿ ಕಾಂಗ್ರೆಸ್‌ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮುಖ್ಯಮಂತ್ರಿ ಆಗಬೇಕಿದ್ದ ನಾಯಕರನ್ನು ಕೈಬಿಟ್ಟ ಕಾಂಗ್ರೆಸ್‌ಪಕ್ಷ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದ ನಾಯಕರು ಎನ್ನುವ ಕಾರಣಕ್ಕೆ ಹಿರಿಯ ನಾಯಕರಿಗೆ ಮಣೆ ಹಾಕಲಾಯ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಹುಲ್ ಗಾಂಧಿ ಮಧ್ಯಪ್ರವೇಶದಿಂದ ಬಂಡಾಯಕ್ಕೆ ಬ್ರೇಕ್..!
ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗಳಿಸಿದ ಬಳಿಕ ಗೆಲುವಿನ ಶ್ರೇಯಕ್ಕೆ ಪಾತ್ರರಾಗಬೇಕಿದ್ದ ಸಚಿನ್ ಪೈಲಟ್ ಹಾಗೂ ಜೋತಿರಾಧಿತ್ಯ ಸಿಂಧಿಯಾ ಅಧಿಕಾರಯುತವಾಗಿ ಮುಖ್ಯಮಂತ್ರಿ ಹುದ್ದೆಗೆ ಏರಬೇಕಿತ್ತು. ಆದರೆ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರಾದ ಕಮಲನಾಥ್ ಹಾಗೂ ಅಶೋಕ್ ಗೆಹ್ಲೋಟ್‌ಗೆ ಮುಖ್ಯಮಂತ್ರಿ ಸ್ಥಾನ ಕರುಣಿಸಲಾಯ್ತು. ಇದೊಂದು ಬಾರಿ ಅಧಿಕಾರ ತ್ಯಾಗಕ್ಕೆ ಮನಸ್ಸು ಮಾಡಿ, ಮುಂದಿನ ದಿನಗಳಲ್ಲಿ ಇಡೀ ಪಕ್ಷ ನಿಮ್ಮ ಪರವಾಗಿ ನಿಲ್ಲಲಿದ್ದು, ಸಾಕಷ್ಟು ಅವಕಾಶಗಳು ಒಲಿದು ಬರಲಿದೆ ಎಂದು ಸ್ವತಃ ರಾಹುಲ್‌ಗಾಂಧಿ ಮಧ್ಯಸ್ಥಿಕೆ ವಹಿಸಿ ಬಂಡಾಯದ ಬಾವುಟವನ್ನು ಕೆಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಷ್ಟು ದಿನ ಹಿರಿಯರು ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದ ನಾಯಕರ ಬಿರುದ್ಧ ಯುವಕರು ಸಿಡಿದೆದ್ದಿದ್ದಾರೆ. ಅದರಲ್ಲಿ ಮೊದಲಿಗನಾಗಿದ್ದು, ಜೋತಿರಾಧಿತ್ಯ ಸಿಂಧಿಯಾ. ಇದೀಗ ಸಚಿನ್ ಪೈಲಟ್.
ಕರ್ನಾಟಕದಲ್ಲೂ ಎದುರಾಗುತ್ತಾ ರಾಜಸ್ಥಾನ ರಾಜಕೀಯ..!
ಕರ್ನಾಟಕಕ್ಕೂ ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜಕೀಯಕ್ಕೂ ಸಾಮ್ಯತೆಯಿದೆ. ಕಾಂಗ್ರೆಸ್‌ಯುವ ಅಧ್ಯಕ್ಷನಾಗಿದ್ದ ಡಿ,ಕೆ ಶಿವಕುಮಾರ್, ಇದೀಗ ಬಹಳ ಮಹತ್ವಾಕಾಂಕ್ಷೆಯಿಂದ ಕಾಂಗ್ರೆಸ್‌ಅಧ್ಯಕ್ಷನಾಗಿದ್ದಾರೆ. ಮುಂದಿನ ಬಾರಿ ಚುನಾವಣೆಗೂ ಮೊದಲು ರಾಜ್ಯಾದ್ಯಂತ ಕಾಂಗ್ರೆಸ್‌ಪಕ್ಷವನ್ನು ಸಂಘಟನೆ ಮಾಡಿ, ಒಂದು ವೇಳೆ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮುಖ್ಯಮಂತ್ರಿ ಸ್ಥಾನ ದಕ್ಕಬೇಕಿರುವುದು ಯಾರಿಗೆ..? ಪಕ್ಷವನ್ನು ಅಧಿಕಾರಕ್ಕೆ ತಂದ ಡಿ.ಕೆ ಶಿವಕುಮಾರ್‌ಅವರಿಗೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿ, ಕಾಂಗ್ರೆಸ್‌ನಲ್ಲಿ ಸಾಕಷ್ಟು ವರ್ಷಗಳಿಂದ ಇದ್ದರೂ ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ ಎನ್ನುವ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯನ್ನು ಕರೆತಂದು ಮುಖ್ಯಮಂತ್ರಿ ಮಾಡಿಬಿಟ್ಟರೆ ಪರಿಸ್ಥಿತಿ ಹೇಗಾಗಬೇಕು. ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತೆ ನೆಲಕಚ್ಚಲಿದೆ ಎನ್ನುವುದು ನಿಶ್ಚಿತ.
ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲೂ ಆಗ್ತಿರೋದು ಇದೇ ಕಥೆ. ಕಾಂಗ್ರೆಸ್‌ನಲ್ಲಿ ಸಾಕಷ್ಟು ವರ್ಷಗಳಿಂದ ಇದ್ದಾರೆ ಎನ್ನುವ ಕಾರಣಕ್ಕೆ ಹುದ್ದೆ ಕೊಡುವುದು ನಿಲ್ಲದಿದ್ದರೆ ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಷ್ಟ. ಯಾವ ನಾಯಕನಿಗೆ ಜನ ಬೆಂಬಲ ಇದೆಯೋ..? ಯಾರು ಪಕ್ಷವನ್ನು ಮುನ್ನಡೆಸಲು ಸಮರ್ಥರಿದ್ದಾರೆಯೋ ಅಂತಹ ನಾಯಕರಿಗೆ ಅಧಿಕಾರ ಸಿಗಬೇಕಾದುದ್ದು ಧರ್ಮ. ಆ ಧರ್ಮವನ್ನು ಬಿಟ್ಟು ಗಾಂಧಿ ಕುಟುಂಬಕ್ಕೆ ಆಪ್ತರು ಎನ್ನುವ ಕಾರಣಕ್ಕೆ ಅಧಿಕಾರ ಕೊಡುತ್ತಾ ಹೋದರೆ ಅಧಿಕಾರಕ್ಕೆ ತರಲು ಶ್ರಮಿಸಿದವರ ಕಥೆ ಏನಾಗಬೇಕು..? ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತಿಸಬೇಕಿದೆ. ಅಧ್ಯಕ್ಷ ಸ್ಥಾನವನ್ನೂ ಅಷ್ಟೇ, ಸೋನಿಯಾ ಗಾಂಧಿ ಅಥವಾ ರಾಹುಲ್‌ಗಾಂಧಿಯೇ ಇರಬೇಕು ಎನ್ನುವುದು ಸೂಕ್ತವಲ್ಲ. ಪಕ್ಷವನ್ನು ಅಧಿಕಾರದತ್ತ ತರುವ ನಾಯಕರಿಗೆ ಸೂಕ್ತ ಸ್ಥಾನ ಮಾನ ಸಿಗಬೇಕು. ಆಗಲೇ ದೇಶದಲ್ಲಿ ಪ್ರಬಲ ಪಕ್ಷವಾಗಿ ಹೊರಹೊಮ್ಮುವುದಕ್ಕೆ ಸಾಧ್ಯ. ಇಲ್ಲದಿದ್ದರೆ, ಇದೇ ಕಥೆ ಚಿನ್ನದ ಮೊಟ್ಟೆಯನ್ನಿಡುವ ಕೊಳಿಗಳು ಕಾಂಗ್ರೆಸ್ ಪಕ್ಷವನ್ನು ತೊರೆದು ಬೇರೆಡೆಗೆ ಹೋಗುವುದು ಮುಂದುವರಿಯುತ್ತದೆ ಅಷ್ಟೆ.