ಇಡೀ ಜಗತ್ತು ಕರೋನಾ ಸೋಂಕಿನಿಂದ ತತ್ತರಿಸುತ್ತಿರುವ ಹೊತ್ತಿನಲ್ಲೇ ಇತ್ತ ಚಿನಿವಾರ ಪೇಟೆಯಲ್ಲಿ ಹಳದಿ ಲೋಹದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2020ನೇ ಸಾಲಿನ ಮೊದಲ ಏಳು ತಿಂಗಳಲ್ಲಿ ಶೇ.40-42ರಷ್ಟು ಏರಿಕೆ ದಾಖಲಿಸಿದೆ. ಜುಲೈ 27 ರಂದು 24 ಕ್ಯಾರೆಟ್ಟಿನ ಹತ್ತು ಗ್ರಾಮ್ ಚಿನ್ನ ಸರಾಸರಿ 52,000 ರುಪಾಯಿಗಳ ಮಟ್ಟದಲ್ಲಿ ವಹಿವಾಟಾಗಿದೆ. ಇದು ಸರ್ವಕಾಲಿಕ ಗರಿಷ್ಠ ದರವಾಗಿದೆ. ಚಿನ್ನದ ಜತೆಗೆ ಬೆಳ್ಳಿಗೂ ಚಿನ್ನದ ಬೆಲೆ ಬಂದಿದೆ. ಬೆಳ್ಳಿದರವೂ ಪ್ರತಿ ಕೆಜಿಗೆ 65,000ದ ಗಡಿದಾಟಿದ್ದು ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪಿಸಿದೆ.
ಈ ದಿನಗಳಲ್ಲಿ ಚಿನ್ನದ ಮೇಲಿನ ಹೂಡಿಕೆ ಅತ್ಯಂತ ಹೆಚ್ಚಿನ ಲಾಭ ತಂದುಕೊಟ್ಟಿದೆ. ವರ್ಷದ ಹಿಂದೆ ಸುಮಾರು 30,000 ರುಪಾಯಿ ಇದ್ದ ಚಿನ್ನದ ದರ ಈಗ 52,000 ದಾಟಿದೆ. ಅಂದರೆ, ಒಂದೇ ವರ್ಷದಲ್ಲಿ ಹೂಡಿಕೆದಾರರಿಗೆ ದಕ್ಕಿರುವ ಲಾಭದ ಪ್ರಮಾಣವು ಶೇ.70ಕ್ಕಿಂತಲೂ ಹೆಚ್ಚು. ಈ ಅವಧಿಯಲ್ಲಿ ಬೇರಾವ ಹೂಡಿಕೆಗಳೂ ಇಷ್ಟು ದೊಡ್ಡಪ್ರಮಾಣದಲ್ಲಿ ಲಾಭ ತಂದುಕೊಟ್ಟಿಲ್ಲ ಎಂಬುದು ಗಮನಾರ್ಹ.
ಚಿನ್ನದರ ಏರಿಕೆಗೂ ಜಾಗತಿಕ ಆರ್ಥಿಕ-ರಾಜಕೀಯ ಕ್ಷೋಭೆಗೂ ಸಂಬಂಧ ಇದೆ. ಯಾವ್ಯಾಗ್ಯಾವಾಗ ಜಾಗತಿಕ ಆರ್ಥಿಕ ಮತ್ತು ರಾಜಕೀಯ ಕ್ಷೋಭೆಗಳಾಗುತ್ತದೋ ಆಗೆಲ್ಲ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ಈ ಹಿಂದೆ ಚಿನ್ನದ ದರವು ಸರ್ವಕಾಲಿಕ ಗರಿಷ್ಠ ಮಟ್ಟ ದಾಖಲಿಸಿದ್ದು ಕೂಡಾ ತೀವ್ರಜಾಗತಿಕ ಕ್ಷೋಭೆಯನ್ನು ಕಂಡ 2011ರಲ್ಲಿ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಸ್ತುತ ಚಿನ್ನದ ದರ ಏರಿಕೆಗೆ ಅಮೆರಿಕ- ಚೀನಾ ನಡುವಿನ ವ್ಯಾಪಾರ ಸಮರ ಕಾರಣವಾಗಿದೆ. ಹಿಂದೆಲ್ಲ ಬಾಂಬುಗಳನ್ನು ಹಾಕಿ ಯುದ್ಧ ಮಾಡುತ್ತಿದ್ದರೆ, ಈಗ ಆರ್ಥಿಕ ನಿರ್ಬಂಧಗಳನ್ನು ಹೇರುವ ಅಥವಾ ಪರೋಕ್ಷವಾಗಿ ಸರಕು ಮತ್ತು ಸೇವೆಗಳ ತಾತ್ಕಾಲಿಕ ಅಭಾವ ಸೃಷ್ಟಿಸುವ, ಹೆಚ್ಚಿನ ಸುಂಕ ವಿಧಿಸುವ ಮೂಲಕ ಯುದ್ಧ ಮಾಡಲಾಗುತ್ತಿದೆ. ಹೀಗಾಗಿ ಯುದ್ಧದ ಸ್ವರೂಪವೇ ಬದಲಾಗಿದೆ. ಸದ್ಯಕ್ಕೆ ಅಮೆರಿಕಾ- ಚಿನಾದ ನಡುವೆ ನಡೆಯುತ್ತಿರುವ ವ್ಯಾಪಾರ-ಸಮರವು ಜಾಗತಿಕ ಆರ್ಥಿಕ ರಾಜಕೀಯ ಪರಿಸ್ಥಿತಿಯ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದೆ.
ಒಂದು ಕಡೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶನ ಮಾಡುತ್ತಿದ್ದರೂ ಅವುಗಳ ಬಳಕೆ ಮಾಡುತ್ತಿಲ್ಲ. ನಿಜವಾದ ಯುದ್ಧ ಮಾಡುತ್ತಿರುವುದು ವ್ಯಾಪಾರ ವಹಿವಾಟು ನಿಯಂತ್ರಿಸುವ ಮೂಲಕ. ಪ್ರಧಾನಿ ನರೇಂದ್ರ ಮೋದಿ ಕರೋನಾ ನಿಯಂತ್ರಿಸುವಲ್ಲಿ ವಿಫಲರಾದ ನಂತರ ನಾವೆಲ್ಲರೂ ‘ಆತ್ಮನಿರ್ಭರ’ರಾಗಬೇಕು ಅರ್ಥಾತ್ ಸ್ವಾವಲಂಬಿಗಳಾಗಬೇಕು ಎಂದು ಘೋಷಿಸಿಬಿಟ್ಟಿದ್ದಾರೆ. ಆದರೆ, ಭಾರತ ಸೇರಿದಂತೆ ಇಡೀ ಜಗತ್ತು ಸ್ವಾವಲಂಬಿಗಳಾಗಲು ಸಾಧ್ಯವೇ ಆಗದಷ್ಟು ವ್ಯಾಪಾರ ವಹಿವಾಟು ವಿಸ್ತಾರಗೊಂಡಿವೆ. ಕೆಲವು ದೇಶಗಳು ಕಚ್ಚಾ ತೈಲ ಮಾರುತ್ತವೆ, ಕೆಲ ದೇಶಗಳು ಕಚ್ಚಾ ಲೋಹಗಳನ್ನು ಮಾರುತ್ತವೆ, ಕೆಲವು ತಂತ್ರಜ್ಞಾನ ಮಾರಿದರೆ, ಕೆಲವು ದೇಶಗಳು ಶಸ್ತ್ರಾಸ್ತ್ರಗಳನ್ನು ಮಾರುತ್ತವೆ. ಶಸ್ತ್ರಾಸ್ತ್ರ ಪೂರೈಕೆ ಮಾಡುವ ದೇಶಗಳೂ ಸಹ ಬಿಡಿ ಉಪಕರಣಗಳಿಗೆ ಭಾರತದಂತಹ ದೇಶಗಳನ್ನೇ ಅವಲಂಬಿಸಿವೆ.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಪರಿಕಲ್ಪನೆಯನ್ನು ಘೋಷಿಸಿದ್ದರೂ ಅದು ಕರೋನಾ ನಿಯಂತ್ರಿಸುವ ನಿಟ್ಟಿನಲ್ಲಾದ ವೈಫಲ್ಯವನ್ನು ಬೇರೆಡೆ ಸೆಳೆಯುವ ತಂತ್ರವಾಗಬಹುದೇ ಹೊರತು ವಾಸ್ತವಿಕವಾಗಿ ಜಾರಿಮಾಡಲು ಸಾಧ್ಯವಿಲ್ಲ. ಮೋದಿ ಆತ್ಮನಿರ್ಭರ ಘೋಷಣೆ ಮಾಡಿದ ನಂತರವೂ ಚೀನಾದ ಒಂದು ಡಜನ್ ಹೊಸ ಸ್ಮಾರ್ಟ್ ಫೋನ್ ಗಳು ಭಾರತದಲ್ಲಿ ಬಿಡುಗಡೆಯಾಗಿ ಕಡ್ಲೆಪುರಿಯಂತೆ ಮಾರಾಟವಾಗುತ್ತಿವೆ.
ಪ್ರಸ್ತುತ ಅಮೆರಿಕ-ಚೀನಾ ನಡುವೆ ನಡೆದಿರುವ ವ್ಯಾಪಾರ ಸಮರದಿಂದ ಉದ್ಭವಿಸಿರುವ ಕ್ಷೋಭೆಯು ಮತ್ತಷ್ಟು ದಿನಗಳ ಕಾಲ ಮುಂದುವರೆಯಲಿದೆ. ಕರೋನಾ ಸೋಂಕಿಗೆ ಸಿದ್ಧೌಷಧ ಶೋಧಿಸುವವರೆಗೂ ಈ ಕ್ಷೋಭೆಯು ಮುಂದುವರೆಯುತ್ತಲೇ ಇದೆ. ಅಮೆರಿಕಾ ಮತ್ತು ಚೀನಾ ಕರೋನಾ ಸೋಂಕಿನಿಂದ ಅತಿ ಹೆಚ್ಚು ಸಂಕಷ್ಟಕ್ಕೀಡಾದ ದೇಶಗಳು. ಮತ್ತು ಆ ದೇಶಗಳ ಜನರು ಸರ್ಕಾರಗಳ ವಿರುದ್ಧ ದಂಗೆ ಏಳುವಷ್ಟರ ಮಟ್ಟಿಗೆ ಅಸಮಾಧಾನಗೊಂಡಿದ್ದಾರೆ. ಈಗ ಸದ್ಯಕ್ಕೆ ಈ ಮೊದಲೇ ಉದ್ಭವಿಸಿದ್ದ ವ್ಯಾಪಾರ ಸಮರದ ಕ್ಷೋಭೆಯನ್ನು ಜೀವಂತವಾಗಿಟ್ಟುಕೊಳ್ಳುವುದು ಅಮೆರಿಕಾ-ಚೀನಾ ಸರ್ಕಾರಗಳ ಹುನ್ನಾರ. ಮತ್ತು ಆ ಸರ್ಕಾರಗಳಿಗೆ ಇದು ಅನಿವಾರ್ಯ ಕೂಡಾ.

ಕುಸಿದಿರುವ ಆರ್ಥಿಕತೆ, ಕಚ್ಚಾ ತೈಲ, ಕಚ್ಚಾ ಖನಿಜಗಳ ಬೆಲೆ ಕುಸಿತ, ಚೇತರಿಕೆ ಕಾಣದ ಆರ್ಥಿಕ ಚಟುವಟಿಕೆಗಳಿಂದಾಗಿ ಡಾಲರ್ ಸೇರಿದಂತೆ ಬಹುತೇಕ ಪ್ರಮುಖ ದೇಶಗಳ ಕರೆನ್ಸಿಗಳ ಮೌಲ್ಯಗಳು ಇಳಿಜಾರಿನಲ್ಲಿ ಸಾಗಿವೆ. ಹೀಗಾಗಿ ಹಲವು ದೇಶಗಳ ಸರ್ಕಾರಗಳು ಸೇರಿದಂತೆ ಹೂಡಿಕೆದಾರರೆಲ್ಲರೂ ತಮ್ಮ ಹೂಡಿಕೆಯನ್ನು ಚಿನ್ನದ ರೂಪದಲ್ಲಿಡಲು ಮುಂದಾಗಿದ್ದಾರೆ. ಹೀಗಾಗಿ ಚಿನ್ನದ ದರ ಏರುತ್ತಲೇ ಇದೆ. ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು ಒಂದು ಔನ್ಸ್ ಗೆ 1950 ಡಾಲರ್ ಆಜುಬಾಜಿನಲ್ಲಿದೆ (ಒಂದು ಔನ್ಸ್ ಎಂದರೆ 28.35 ಗ್ರಾಮ್). ಇನ್ನೊಂದು ವರ್ಷದಲ್ಲಿ ಈ ದರವು 2,500 ಡಾಲರ್ ದಾಟುವ ಮುನ್ನಂದಾಜು ಮಾಡಲಾಗಿದೆ. ಆ ಲೆಕ್ಕದಲ್ಲಿ ಭಾರತದಲ್ಲಿ ಚಿನ್ನದ ದರವು 60,000- 65000ಕ್ಕೆ ಏರಿಕೆಯಾಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಚಿನ್ನದ ಉತ್ಪಾದನೆ ತೀರಾ ಅತ್ಯಲ್ಪ. ಹೀಗಾಗಿ ಆಮದನ್ನೇ ಅವವಲಂಬಿಸಿದೆ. ವಾರ್ಷಿಕ ಸರಾಸರಿ 30 ಬಿಲಿಯನ್ ಡಾಲರ್ ಮೌಲ್ಯದಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. 2018-19ರಲ್ಲಿ 32.91 ಬಿಲಿಯನ್ ಡಾಲರ್ ಮೌಲ್ಯದಷ್ಟು ಚಿನ್ನ ಆಮದು ಮಾಡಿಕೊಂಡಿತ್ತು. 2019-20ರಲ್ಲಿ ಇದು ಶೇ.14ರಷ್ಟು ಕುಗ್ಗಿದ್ದು 28.2 ಬಿಲಿಯನ್ ಡಾಲರ್ ಗಳಾಷ್ಟಾಗಿತ್ತು. ಚಿನ್ನದ ಮೇಲಿನ ಹೂಡಿಕೆಯನ್ನು ಡಿಮೆಟಿರಿಯಲೈಸ್ (ಕಾಗದರಹಿತ) ಮಾಡಿದ ಪರಿಣಾಮ ಇದು.
ಈ ಹಂತದಲ್ಲಿ ಚಿನ್ನ ಕೊಳ್ಳಬೇಕೆ? ಮದುವೆ, ಮತ್ತಿತರ ಸಮಾರಂಭಗಳಿಗೆ ಅನಿವಾರ್ಯ ಎನಿಸಿದರೆ ಖರೀದಿಸುವುದು ಉತ್ತಮ. ಸದ್ಯಕ್ಕೆ ಚಿನ್ನದ ಬೆಲೆ ಇಳಿಯುವ ಲಕ್ಷಣ ಇಲ್ಲ. ಆದರೆ, ಹೂಡಿಕೆ ಮಾಡುವವರು, ಗಟ್ಟಿ ಚಿನ್ನವನ್ನು ಖರೀದಿಸುವ ಬದಲು ಚಿನ್ನದ ಬಾಂಡ್ ಖರೀದಿಸುವುದು ಉತ್ತಮ. ಚಿನ್ನದ ಬಾಂಡ್ ಖರೀದಿಸಿದರೆ, ವಾರ್ಷಿಕ ಶೇ.2ರಷ್ಟು ಬಡ್ಡಿಯು ದೊರೆಯುತ್ತದೆ. ಗಟ್ಟಿಚಿನ್ನದ ಮೇಲೇರುವ ತೆರಿಗೆಯು ಉಳಿಯುತ್ತದೆ. ನಿರ್ಧಿಷ್ಟ ಅವಧಿಯ ನಂತರ ಮಾರಾಟ ಮಾಡುವಾಗ, ಮಾರುಕಟ್ಟೆಯಲ್ಲಿನ ಚಿನ್ನದ ದರಕ್ಕೆ ಸರಿಸಮನಾಗಿ ಚಿನ್ನದ ಬಾಂಡ್ ಗಳನ್ನು ಮಾರಾಟ ಮಾಡಬಹುದು. ಲಾಭಾಂಶದ ಮೇಲಿನ ತೆರಿಗೆಯ ಹೊರೆಯೂ ಇರುವುದಿಲ್ಲ.
ಕೊರೊರೊ ಸೋಂಕಿಗೆ ಸಿದ್ಧೌಷದ ಪತ್ತೆಯಾದ ನಂತರ ಜಾಗತಿಕ ಆರ್ಥಿಕ ಪರಿಸ್ಥಿತಿಯು ಯಥಾಸ್ಥಿತಿಗೆ ಮರಳಿದಾಗ ಖಂಡಿತವಾಗಿಯೂ ಚಿನ್ನದ ಮೇಲಿನ ಬೇಡಿಕೆ ಕುಸಿಯುತ್ತದೆ. ಆಗ ಚಿನ್ನದ ದರವೂ ಕುಸಿಯುತ್ತದೆ. ಕಚ್ಚಾ ತೈಲ,ಕಚ್ಚಾ ಖನಿಜಗಳ ದರಗಳ ಏರಿಳಿತದ ಚಕ್ರವು ಅಲ್ಪಕಾಲದ್ದಾದರೆ, ಚಿನ್ನ, ಬೆಳ್ಳಿಯಂತಹ ಬಹುಬೆಲೆಯ ಲೋಹಗಳ ದರ ಏರಿಳಿತದ ಚಕ್ರವು ದೀರ್ಘಕಾಲದ್ದಾಗಿರುತ್ತದೆ. ಮುಂದಿನ ವರ್ಷ ಚಿನ್ನದ ಪ್ರತಿ 10 ಗ್ರಾಮ್ ಗೆ 65,000 ರುಪಾಯಿಗೆ ಏರಿದರೂ ಆ ನಂತರದಲ್ಲಿ ಮತ್ತೆ 50000 ರುಪಾಯಿ ಆಜುಬಾಜಿಗೆ ಇಳಿಯುವ ಸಾಧ್ಯತೆಗಳು ನಿಚ್ಛಳವಾಗಿರುತ್ತವೆ. ಆದರೆ, ಸುದೀರ್ಘಕಾಲದಲ್ಲಿ ಚಿನ್ನದ ಮೇಲಿನ ಹೂಡಿಕೆಯು ಅತ್ಯಂತ ಸುರಕ್ಷಿತವಾದದ್ದು. ಮಾರುಕಟ್ಟೆಯಲ್ಲಿನ ದರದ ಏರಿಳಿತಗಳನ್ನು ಮರೆತು ಸುದೀರ್ಘ ಕಾಲದ ಸುರಕ್ಷಿತ ಹೂಡಿಕೆ ಬಯಸುವವರಿಗೆ ಚಿನ್ನ ಸರ್ವಕಾಲಿಕ ಹೂಡಿಕೆಯೂ ಹೌದು.