ಚಿಕ್ಕಬಳ್ಳಾಪುರದ ಹಿರಿಯ ಪತ್ರಕರ್ತ ಎಲ್ ಅಶ್ವಥನಾರಾಯಣ ಅವರು ಪೊಲೀಸರು ಮತ್ತು ಸಚಿವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಶನಿವಾರ ಅಶ್ವಥನಾರಾಯಣ ಅವರು ತಾವು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿಯೂ ಮತ್ತು ತಮ್ಮ ಅಂತಹ ನಿರ್ಧಾರದ ಹಿಂದೆ ದೊಡ್ಡಬಳ್ಳಾಪುರದ ಶಾಸಕ ಹಾಗೂ ಸಚಿವ ಡಾ ಸುಧಾಕರ್, ಜಿಲ್ಳಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್, ಕನ್ನಡಪ್ರಭ ಪತ್ರಿಕೆಯ ಸಂಪಾದಕರು ಮತ್ತು ಸಂಪಾದಕೀಯ ಸಮನ್ವಯಕಾರರು ತಮಗೆ ನೀಡಿದ ಕಿರುಕುಳ ಕಾರಣ ಎಂದು ಸುದೀರ್ಘ ಪತ್ರ ಬರೆದು, ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದರು. ಆ ಬಳಿಕ ಅವರು ನಾಪತ್ತೆಯಾಗಿದ್ದರು.
ಆ ಹಿನ್ನೆಲೆಯಲ್ಲಿ ಪತ್ರ ಫೇಸ್ಬುಕ್ ಮತ್ತು ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಜ್ಯದಲ್ಲಿ ರಾಜ್ಯಮಟ್ಟದ ಮಾಧ್ಯಮಗಳ ಪತ್ರಕರ್ತರಿಗೇ ರಕ್ಷಣೆ ಇಲ್ಲ; ಸ್ವತಃ ಸಚಿವರು, ಮಾಧ್ಯಮದ ಮಂದಿ ಮತ್ತು ಪೊಲೀಸರು ಕೈಜೋಡಿಸಿ ಒಬ್ಬ ಹಿರಿಯ ಪತ್ರಕರ್ತನಿಗೆ ಆತ್ಮಹತ್ಯೆಯಂತಹ ಹತಾಶೆಯ ಅಂತಿಮ ನಿರ್ಧಾರ ಕೈಗೊಳ್ಳುವ ಮಟ್ಟಿಗೆ ಮಾನಸಿಕ ಕಿರುಕುಳ ನೀಡಿದ್ಧಾರೆ. ವಿನಾ ಕಾರಣ ಪ್ರರಕಣದಲ್ಲಿ ಅವರನ್ನು ಸಿಲುಕಿಸಿ ಜೈಲಿಗೆ ಅಟ್ಟಲು ರಾಜಕಾರಣಿ, ಪತ್ರಕರ್ತ ಮತ್ತು ಪೊಲೀಸ್ ಇಲಾಖೆಯ ಪ್ರಭಾವಿಗಳು ಕೈಜೋಡಿಸಿದ್ದಾರೆ ಎಂಬ ವಿಷಯ ಸಾಕಷ್ಟು ಆಘಾತಕ್ಕೆ ಕಾರಣವಾಗಿತ್ತು. ಪತ್ರಕರ್ತರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಈಡಾಗಿತ್ತು. ಮಾಧ್ಯಮದ ಚುಕ್ಕಾಣಿ ಹಿಡಿದ ಮಂದಿ ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿ ಹೇಗೆ ವೃತ್ತಿನಿಷ್ಠ ಪತ್ರಕರ್ತರ ಪಾಲಿಗೆ ಜೀವಕಂಟಕವಾಗುತ್ತದೆ ಮತ್ತು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನೈಜ ಪತ್ರಕರ್ತರು ಎಂಥ ಸಂಕಷ್ಟದ, ಉಸಿರುಗಟ್ಟಿಸುವ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಚರ್ಚೆಗೆ ಈ ಪ್ರಕರಣ ಇಂಬು ನೀಡಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶನಿವಾರ ತಡರಾತ್ರಿ ಅಶ್ವಥನಾರಾಯಣ ಅವರು ತೀವ್ರ ಅಸ್ವಸ್ಥರಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಈ ನಡುವೆ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ಪ್ರರಕಣದ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದು, ಹಿರಿಯ ಪತ್ರಕರ್ತರಿಗೆ ಕಿರುಕುಳ ನೀಡಿ ಅವರು ಆತ್ಮಹತ್ಯೆಯಂತಹ ಹತಾಶೆಯ ತೀರ್ಮಾನ ಕೈಗೊಳ್ಳುವಂತಹ ಪರಿಸ್ಥಿತಿ ನಿರ್ಮಿಸಿದ ಪೊಲೀಸರ ವಿರುದ್ಧ ತನಿಖೆಯಾಗಬೇಕು. ಇಡೀ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆಯಾಗಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ ಪೆಕ್ಟರನ್ನು ಅಮಾನತುಪಡಿಸಿ ತನಿಖೆಗೆ ಕೂಡಲೇ ಚಾಲನೆ ನೀಡಬೇಕು ಎಂದು ಆಗ್ರಹಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಒಂದು ಕಡೆ ಪತ್ರಕರ್ತರ ಸಂಘ ಪ್ರರಕಣದ ನಿಷ್ಟಕ್ಷಪಾತ ತನಿಖೆಗೆ ಒತ್ತಾಯಿಸಿದ್ದರೆ, ಕಾಂಗ್ರೆಸ್ ಪಕ್ಷ ಕೂಡ, ಪ್ರಕರಣದಲ್ಲಿ ಸಚಿವ ಸುಧಾಕರ್ ಪಾತ್ರ ಪ್ರಮುಖವಾಗಿದ್ದು, ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಹೇಳಿದೆ. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರು ಈ ಸಂಬಂಧ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, “ಅಶ್ವಥನಾರಾಯಣ ಆತ್ಮಹತ್ಯೆಗೆ ಯತ್ನಿಸಿರುವುದಕ್ಕೆ ಸಚಿವ ಸುಧಾಕರ್ ಅವರೇ ನೇರ ಕಾರಣ, ಅವರೇ ಬರೆದಿರುವ ಪತ್ರದಲ್ಲೂ ಸಚಿವ ಸುಧಾಕರ್ ಕಾರಣ ಎಂದು ಹೇಳಿದ್ದಾರೆ. ಪತ್ರಕರ್ತರ ಸ್ಥಿತಿಯೇ ಈ ರೀತಿ ಆದರೆ ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಈ ವಿಚಾರವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ತನಿಖೆ ಮುಗಿಯುವವರೆಗೂ ಸುಧಾಕರ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಈ ಸಂಬಂಧ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಪಾಲರು ಹಾಗೂ ರಾಜ್ಯ ಡಿಜಿಪಿ ಅವರಿಗೆ ದೂರು ನೀಡುತ್ತೇವೆ” ಎಂದಿದ್ದಾರೆ.
ಸದ್ಯ ಪ್ರಕರಣ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ನ್ಯಾಯಯುತ ತನಿಖೆಗೆ ಒತ್ತಡ ಹೆಚ್ಚಿದೆ. ಒಂದು ಕಡೆ ಪತ್ರಕರ್ತರ ಸಂಘಟನೆ, ಮತ್ತೊಂದು ಕಡೆ ರಾಜಕೀಯ ವಲಯದಿಂದಲೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹ ಕೇಳಿಬಂದಿದೆ. ಆದರೆ, ಮಾಧ್ಯಮ ಸಂಸ್ಥೆಯ ಮುಖ್ಯಸ್ಥರು, ಪ್ರಭಾವಿ ಸಚಿವರು ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿರುವ ಈ ಪ್ರಕರಣದ ವಿಷಯದಲ್ಲಿ ರಾಜ್ಯ ಸರ್ಕಾರ ನಿಜವಾಗಿಯೂ ತನಿಖೆಗೆ, ಅದರಲ್ಲೂ ನಿಷ್ಪಕ್ಷಪಾತ ತನಿಖೆಗೆ ಮುಂದಾಗುವುದೇ ಎಂಬುದನ್ನು ಕಾದುನೋಡಬೇಕಿದೆ.
ಆ ಹಿನ್ನೆಲೆಯಲ್ಲಿ ಪ್ರಕರಣ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದಾದ ತಿರುವು ಕುತೂಹಲ ಮೂಡಿಸಿದೆ. ಆದರೆ, ಪತ್ರಕರ್ತರೊಬ್ಬರು ತಮ್ಮ ವೃತ್ತಿಯ ಭಾಗವಾಗಿ ಮಾಡಿದ ವರದಿಗಾರಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಮಾಧ್ಯಮ ಮುಖ್ಯಸ್ಥರು, ಪ್ರಭಾವಿ ರಾಜಕಾರಣಿಗಳು ಮತ್ತು ಪೊಲೀಸರು ಪರಸ್ಪರ ಕೈಜೋಡಿಸಿ ಆತ್ಮಹತ್ಯೆಗೆ ಪ್ರಯತ್ನಿಸುವ ಮಟ್ಟಿನ ಕಿರುಕುಳ ನೀಡಿರುವುದು ಸದ್ಯ ರಾಜ್ಯದಲ್ಲಿ ಇರುವ ಮಾಧ್ಯಮ ಸ್ವಾತಂತ್ರ್ಯ ಮತ್ತು ವೃತ್ತಿ ಭದ್ರತೆಗೆ ಕನ್ನಡಿ ಹಿಡಿದಿದೆ. ಆ ಹಿನ್ನೆಲೆಯಲ್ಲಿ ಪ್ರಕರಣ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಪತ್ರಕರ್ತ ಅಶ್ವಥನಾರಾಯಣ ಅವರೇ ಸ್ವತಃ ಬರೆದಿರುವ ಆ ವೈರಲ್ ಪತ್ರದ ಪೂರ್ಣಪಾಠ ಇದು.