ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ಮೂಡಿದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತ್ ಚುನಾವಣೆಯನ್ನ ತಾತ್ಕಾಲಿಕವಾಗಿ ಮುಂದೂಡಿ ಆದೇಶವಿತ್ತಿದೆ. ಕೋವಿಡ್-19 ನಿಂದ ಉಂಟಾದ ʼಅಸಾಧಾರಣ ಪರಿಸ್ಥಿತಿʼ ಎಂದು ಪರಿಗಣಿಸಿ ರಾಜ್ಯ ಚುನಾವಣಾ ಆಯೋಗವು ಚುನಾವಣೆ ಮುಂದೂಡಿದೆ. ಈಗಾಗಲೇ ರಾಜ್ಯದ ಹಲವು ಗ್ರಾಮ ಪಂಚಾಯತ್‌ಗಳ ಅಧಿಕಾರಾವಧಿ ಅಂತ್ಯವಾಗಿದೆ. ಇದರಿಂದ ಸಹಜವಾಗಿಯೇ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ, ಸೇರ್ಪಡೆ ಹಾಗೂ ಮರು ಮೀಸಲಾತಿ ಹಂಚಿಕೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಈ ಹಿಂದೆ ಆದೇಶವಿತ್ತಿದ್ದಾರೂ, ಲಾಕ್‌ಡೌನ್ ಕಾರಣದಿಂದಾಗಿ ಇದು ಸ್ಥಗಿತಗೊಂಡಿತ್ತು. ಅಲ್ಲದೇ ರಾಜ್ಯ ಸರಕಾರವು ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗವನ್ನ ಒತ್ತಾಯಿಸಿದ್ದವು.
ಆದರೆ ಇದೀಗ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿದ್ದಕ್ಕೆ ವಿಪಕ್ಷ ನಾಯಕರು ಗರಂ ಆಗಿದ್ದಾರೆ. ಸರಣಿ ಟ್ವೀಟ್ ಮೂಲಕ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಪಂಚಾಯತ್ ರಾಜ್ ಕಾಯ್ದೆ 1993 ರ ಕಾಯ್ದೆಗೆ ಅಪಚಾರವಾಗಿದ್ದು, ಇದನ್ನೆಲ್ಲ ನ್ಯಾಯಾಲಯದಲ್ಲಿ ಪ್ರಶ್ನಿಸೋದಾಗಿ ತಿಳಿಸಿದ್ದಾರೆ.
ಬಿಜೆಪಿ ನಾಯಕರು ಈ ಹಿಂದೆಯೇ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆಗೆ ಆಸಕ್ತಿ ತೋರಿದ್ದರು. ಮಾತ್ರವಲ್ಲದೇ ರಾಜ್ಯ ಸರಕಾರ ಆಡಳಿತಾಧಿಕಾರ ನೇಮಿಸಿತ್ತು. ಜೊತೆಗೆ ರಾಜ್ಯ ಸರಕಾರವೇ ಪ್ರತಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಹಾಲಿ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಕಷ್ಟ ಸಾಧ್ಯ ಎಂದು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಜಿಲ್ಲಾಧಿಕಾರಿಗಳ ವರದಿ ಪಡೆದ ರಾಜ್ಯ ಚುನಾವಣಾ ಆಯೋಗವು ಅದರಂತೆ ಸಂವಿಧಾನದ 243-K ಪರಿಚ್ಛೇದದಂತೆ ತನಗಿರುವ ಅಧಿಕಾರವನ್ನ ಬಳಸಿಕೊಂಡು ತಾತ್ಕಾಲಿಕವಾಗಿ ಚುನಾವಣೆಯನ್ನ ಮುಂದೂಡಿದೆ.
ಸಾರ್ವಜನಿಕರ ಆರೋಗ್ಯ ಸುರಕ್ಷತಾ ದೃಷ್ಟಿ ಹಾಗೂ ಚುನಾವಣಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿಗಳ ಕೊರತೆ, ಸಾರಿಗೆ ಸಮಸ್ಯೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬಲ್ಲ ಆರಕ್ಷಕರ ಕೊರತೆಯ ಬಗ್ಗೆಯೂ ಗಂಭೀರವಾಗಿ ಆಲೋಚಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿಯೂ ರಾಜ್ಯ ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದು, ಮುಂದಿನ ಪರಿಸ್ಥಿತಿ ಅವಲೋಕಿಸಿ ಚುನಾವಣಾ ಸಿದ್ಧತೆ ನಡೆಸುವುದಾಗಿಯೂ ತಿಳಿಸಿದೆ.