ಕರೋನಾ ಸೋಂಕು ಈಗ ಹಳ್ಳಿ ಕಡೆಗೆ ನಮ್ಮ ನಡಿಗೆ ಎನ್ನುತ್ತಿದೆ. ಕಳೆದ ಒಂದು ವಾರದಿಂದ ಈಚೆಗೆ ಕರ್ನಾಟಕವಷ್ಟೇ ಅಲ್ಲದೆ, ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಈವರೆಗೆ ಒಂದೇ ಒಂದು ಪ್ರಕರಣ ಕೂಡ ವರದಿಯಾಗದೇ ಇದ್ದ ಜಿಲ್ಲೆ, ತಾಲೂಕುಗಳಲ್ಲಿ ಕೂಡ ದಿಢೀರನೇ ನೂರಾರು ಪ್ರಕರಣಗಳು ದೃಢಪಟ್ಟಿವೆ. ಮೊದಲ ಮೂರು ಹಂತದ ಲಾಕ್ ಡೌನ್ ವೇಳೆ, ಮಹಾನಗರಗಳಿಗೆ ಸೀಮಿತವಾಗಿದ್ದ ಸೋಂಕು ಇದೀಗ ಅಂತರ ರಾಜ್ಯ ಮತ್ತು ಜಿಲ್ಲಾ ಪ್ರಯಾಣಕ್ಕೆ ಅವಕಾಶ ನೀಡಿದ ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಹಳ್ಳಿಗಳತ್ತ ದಾಳಿ ಇಟ್ಟಿದೆ.
ದೇಶಾದ್ಯಂತ ದೈನಿಕ ಪರೀಕ್ಷೆಗಳ ಪೈಕಿ ಕರೋನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಎರಡನೇ ಹಂತದ ಲಾಕ್ ಡೌನ್ ವೇಳೆ ಶೇ.2.1ರಷ್ಟು ಇದ್ದದ್ದು, ಮೂರನೇ ಹಂತದ ಲಾಕ್ ಡೌನ್ ವೇಳೆ 3.5ಗೆ ಏರಿಕೆಯಾಗಿತ್ತು. ಆದರೆ ಕಳೆದ ಇದೀಗ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೆ ಬಂದು, ದೇಶವ್ಯಾಪಿ ಬಹುತೇಕ ಮುಕ್ತ ಸಂಚಾರದ ಅವಕಾಶ ದೊರೆಯುತ್ತಿದ್ದಂತೆ ಆ ಪ್ರಮಾಣ ಬರೋಬ್ಬರಿ 7.8ಕ್ಕೆ ಏರಿದೆ. ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೆ ಬಂದು ಕೇವಲ ಎರಡು ದಿನಗಳಲ್ಲಿ ಪರೀಕ್ಷೆಗೊಳಪಟ್ಟವರಲ್ಲಿ ಶೇಕಡವಾರು ಪಾಸಿಟಿವ್ ಪ್ರಕರಣಗಳು ಈ ಪರಿಯಲ್ಲಿ ಹೆಚ್ಚಾಗಲು ಮೂಲ ಕಾರಣವೇ ಲಾಕ್ ಡೌನ್ ಸಡಿಲ ಬಳಿಕ ತಮ್ಮ ತಮ್ಮ ಮೂಲ ನೆಲೆಗಳಿಗೆ ವಾಪಸ್ಸಾಗುತ್ತಿರುವ ಮಂದಿ!
ದೇಶದ ಅತಿ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಮೇ 10ರಿಂದ ಈವರೆಗೆ ಕಳೆದ ಹತ್ತು ದಿನಗಳಲ್ಲಿ ಒಟ್ಟಾರೆ ಪ್ರಕರಣಗಳು ಮತ್ತು ದಿನನಿತ್ಯ ಪ್ರಕರಣಗಳ ಅಂಕಿಅಂಶ ಗಮನಿಸಿದರೆ ನಗರದಿಂದ ಹಳ್ಳಿಯ ಕಡೆ ಕರೋನಾ ಹಬ್ಬುತ್ತಿರುವ ಪ್ರಮಾಣದ ವೇಗ ಅರಿವಾಗದೇ ಇರದು. ಉತ್ತರಪ್ರದೇಶದಲ್ಲಿ ಮೇ 10ರ ಹೊತ್ತಿಗೆ ನೂರಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದ ದಿನನಿತ್ಯದ ಹೊಸ ಪ್ರಕರಣಗಳ ಪ್ರಮಾಣ, ಮೇ 17ರಿಂದ 200 ಗಡಿ ದಾಟಿ, ಇದೀಗ 320ಕ್ಕೆ ಬಂದು ತಲುಪಿದೆ, ಅಂದರೆ ಸುಮಾರು ನಾಲ್ಕು ಪಟ್ಟು ಹೆಚ್ಚಳ ಕಂಡಿದೆ. ಬಿಹಾರದಲ್ಲಿ ಕೂಡ ಮೇ 10 ರ ಹೊತ್ತಿಗೆ ನೂರರ ಆಸುಪಾಸಿನಲ್ಲಿದ್ದ ದೈನಂದಿನ ಹೊಸ ಪ್ರಕರಣಗಳ ಪ್ರಮಾಣ, ಬಹುತೇಕ ದುಪ್ಪಟ್ಟಾಗಿದೆ.
ಕರ್ನಾಟಕದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಮೇ 10ರ ವೇಳೆಗೆ ಕೇವಲ 55ರ ಆಸುಪಾಸಿನಲ್ಲಿದ್ದ ದೈನಂದಿನ ಪ್ರಕರಣಗಳು ಪ್ರಮಾಣ ಈಗ ಬರೋಬ್ಬರಿ 150ಕ್ಕೆ ಏರಿದೆ. ಅಂದರೆ ಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ; ಕೇವಲ ಹತ್ತೇ ಹತ್ತು ದಿನದಲ್ಲಿ! ಜೊತೆಗೆ ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ, ಜಿಲ್ಲೆಗಳವಾರು ತೆಗೆದುಕೊಂಡರೆ ಕರೋನಾ ಆರಂಭದ ದಿನಗಳಲ್ಲಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದ ಜಿಲ್ಲೆಗಳಲ್ಲಿ ದೈನಂದಿನ ಪ್ರಕರಣಗಳ ಏರಿಕೆಯ ವೇಗ ತಗ್ಗಿದ್ದು, ಮಂಡ್ಯ, ಹಾಸನ, ದಾವಣೆಗೆರೆ, ಶಿವಮೊಗ್ಗದಂತಹ ಆರಂಭದಲ್ಲಿ ಹಸಿರು ವಲಯದಲ್ಲಿದ್ದ ಜಿಲ್ಲೆಗಳಲ್ಲಿ ದಿಢೀರನೇ ಕಾಣಿಸಿಕೊಂಡ ಸೋಂಕು, ಈಗ ಕೇವಲ 10-12 ದಿನಗಳಲ್ಲಿ ಹತ್ತಾರು ಪಟ್ಟು ಹೆಚ್ಚಳವಾಗಿದೆ. ಹೀಗೆ ದಿಢೀರನೇ ಹೊಸ ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಂಡದ್ದು ಅಂತರ ಜಿಲ್ಲಾ ಮತ್ತು ಅಂತರ ರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಿದ ಬಳಿಕವೇ ಮತ್ತು ಸೋಂಕಿತ ಬಹುತೇಕರು ಅತಿ ಹೆಚ್ಚು ಪ್ರಕರಣಗಳಿರುವ ಮುಂಬೈ, ಚೆನ್ನೈ, ಅಹಮದಾಬಾದ್ ನಂತಹ ನಗರಗಳಿಂದ ವಾಪಸು ತಮ್ಮ ತಮ್ಮ ಮೂಲ ಊರುಗಳಿಗೆ ಬಂದವರೇ ಎಂಬುದು ಗಮನಾರ್ಹ.
ಶಿವಮೊಗ್ಗದಲ್ಲಿ ಮಂಗಳವಾರ ಒಂದೇ ದಿನ ಹತ್ತು ಹೊಸ ಪ್ರಕರಣಗಳು ಕಂಡುಬಂದಿವೆ. ಹಾಗೇ ಮಂಡ್ಯದಲ್ಲಿ ಸೋಮವಾರ ಒಂದೇ ದಿನ 50ಕ್ಕೂ ಹೆಚ್ಚು ಪ್ರಕರಣ ಕಂಡುಬಂದಿದ್ದವು. ಬುಧವಾರ ಕೂಡ ಹಾಸನದಲ್ಲಿ ದಿಢೀರನೇ 21 ಪ್ರಕರಣ ದೃಢಪಟ್ಟಿವೆ. ಹೀಗೆ ತೀರಾ ಇತ್ತೀಚಿನವರೆಗೆ ಹಸಿರು ವಲಯದಲ್ಲಿದ್ದ ಅಥವಾ ನಗಣ್ಯವೆನ್ನುವಷ್ಟು ಬೆರಳೆಣಿಕೆ ಪ್ರಕರಣಗಳಿದ್ದ ಜಿಲ್ಲೆಗಳಲ್ಲಿ ದಿಢೀರ್ ಪ್ರಕರಣ ಹೆಚ್ಚಳಲ್ಲೆ ವಲಸಿಗರೇ ಕಾರಣ ಎಂಬುದು ನಿರ್ವಿವಾದ. ಮಂಡ್ಯ, ಶಿವಮೊಗ್ಗ ಮತ್ತು ಹಾಸನದ ಪ್ರಕರಣಗಳಲ್ಲಿ ಶೇ.90ರಷ್ಟು ಪ್ರಕರಣಗಳ ಮೂಲ ಮುಂಬೈ ಎನ್ನುವುದು ದೃಢಪಟ್ಟಿದೆ.
ಅಂದರೆ, ಅಂತರ ರಾಜ್ಯ ಮತ್ತು ಜಿಲ್ಲಾ ಸಂಚಾರಕ್ಕೆ ಅವಕಾಶ ನೀಡದ ಕೂಡಲೇ ತಮ್ಮ ಮೂಲ ನೆಲೆಗಳಿಗೆ ಬಂದವರು ತಮ್ಮೊಂದಿಗೆ ಬಹುತೇಕ ವೈರಾಣು ಹೊತ್ತು ತಂದಿದ್ದಾರೆ. ಆದರೆ, ಇಲ್ಲಿ ಸಮಸ್ಯೆ ಇರುವುದು ಹೀಗೆ ಬಂದ ವಲಸಿಗರಲ್ಲಿ ಅಲ್ಲ. ಬದಲಾಗಿ, ಲಾಕ್ ಡೌನ್ ಹೇರಿಕೆಯ ಮತ್ತು ಅದನ್ನು ಸಡಿಲಗೊಳಿಸಿದ ಅವೈಜ್ಞಾನಿಕ ಮತ್ತು ವಿವೇಚನಾರಹಿತ ಕ್ರಮಗಳಲ್ಲಿ. ಅದರಲ್ಲೂ ಮುಖ್ಯವಾಗಿ ಯಾವುದೇ ಪೂರ್ವತಯಾರಿ ಇಲ್ಲದೆ ಮೇ 24ರಂದು ಕೇವಲ ನಾಲ್ಕು ಗಂಟೆ ಕಾಲಾವಕಾಶ ನೀಡಿದ ಹೇರಿದ ಲಾಕ್ ಡೌನ್ ಸೃಷ್ಟಿಸಿದ ಅವಾಂತರಗಳು ಇವು. ಸುಮಾರು 60 ದಿನಗಳ ಬಳಿಕ, ಈ ಪ್ರಮಾದ ಈಗ ಫಲ ಕೊಡತೊಡಗಿದೆ.
ಲಾಕ್ ಡೌನ್ ಘೋಷಣೆಗೆ ಮುನ್ನ ದೇಶದ ಆಳುವ ಮಂದಿಗೆ, ಸರ್ಕಾರಕ್ಕೆ ನಗರಗಳಲ್ಲಿ ಉದ್ಯೋಗ ಕಂಡುಕೊಂಡಿರುವ, ಕೂಲಿ ಮಾಡುವ, ಗ್ರಾಮೀಣ ವಲಸಿಗರ ಬಗ್ಗೆ, ಶಾಶ್ವತ ನೀರು ಮತ್ತು ನೆರಳು ಇಲ್ಲದ, ಉದ್ಯೋಗ ಭದ್ರತೆ ಮತ್ತು ಕೂಲಿಯ ಖಾತ್ರಿ ಇಲ್ಲದ ಅವರ ದೈನೇಸಿ ಸ್ಥಿತಿಯ ಬಗ್ಗೆ ಕನಿಷ್ಟ ಅರಿವಿದ್ದಿದ್ದರೆ; ಮತ್ತು ಆ ಅರಿವಿನ ಮೇಲೆ ಲಾಕ್ ಡೌನ್ ನಂಹತ ತೀರ್ಮಾನವನ್ನು ತೆಗೆದುಕೊಂಡಿದ್ದರೆ, ಕೇವಲ ವಲಸೆ ಕಾರ್ಮಿಕರು ಹೆದ್ದಾರಿ ಹೆಣವಾದ ದುರಂತವಷ್ಟೇ ಅಲ್ಲ; ಇಡೀ ಗ್ರಾಮೀಣ ಭಾರತ ಇಂದು ಕರೋನಾ ಸೋಂಕಿಗೆ ತುತ್ತಾಗುವುದನ್ನು ಕೂಡ ತಪ್ಪಿಸಬಹುದಿತ್ತು. ಆದರೆ, ಅಂದು ಆ ವಿವೇಚನೆ ಕೆಲಸ ಮಾಡಲೇ ಇಲ್ಲ. ಕನಿಷ್ಟ ವಲಸಿಗರನ್ನು ತಮ್ಮ ತಮ್ಮ ಊರುಗಳಿಗೆ ತೆರಳಲು ಅವಕಾಶ ನೀಡಿ ಲಾಕ್ ಡೌನ್ ಹೇರಿದ್ದರೆ, ವೈರಾಣು ಇಲ್ಲದೆ ಅವರುಗಳು ತಮ್ಮ ತಮ್ಮ ನೆಲೆಗಳಿಗೆ ತಲುಪುತ್ತಿದ್ದರು. ಉದ್ಯೋಗ ಹೋದರೂ, ಜೀವ ಉಳಿವ ಖಾತರಿ ಇರುತ್ತಿತ್ತು.
ಆದರೆ, ಸರ್ಕಾರ ದೇಶದ ಶೇ.30ರಷ್ಟು ಜನಸಂಖ್ಯೆಯ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ. ಈಗ ಲಾಕ್ ಡೌನ್ ಸಡಿಲಿಕೆ ಬಳಿಕವಾದರೂ ಅಂತಹ ವಲಸಿಗರನ್ನು ಕನಿಷ್ಟ ಸೋಂಕು ಪರೀಕ್ಷೆಗೊಳಪಡಿಸಿ ವ್ಯವಸ್ಥಿತ ಸಾರಿಗೆ ಸೌಲಭ್ಯ ನೀಡಿ ಕಳಿಸಿದ್ದರೂ ಆಗಲೂ ಕರೋನಾ ಗ್ರಾಮೀಣ ಭಾರತಕ್ಕೆ ಹರಡುವುದನ್ನು ತಡೆಯುವ ಅವಕಾಶವಿತ್ತು. ಅದನ್ನೂ ಮಾಡಲಿಲ್ಲ. ಆರಂಭದಲ್ಲಿ ವಾಹನಗಳಲ್ಲಿ ಬಂದವರನ್ನು ಕೆಲವು ಕಡೆ ಜಿಲ್ಲಾ ಗಡಿಗಳಲ್ಲಿ ರಾಜ್ಯ ಗಡಿಗಳಲ್ಲಿ ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಿದ್ದರೂ, ಈಗ ನಾಲ್ಕನೇ ಹಂತದ ಲಾಕ ಡೌನ್ ಬಳಿಕ ಕೆಲವು ಕಡೆ ಅದಕ್ಕೂ ವಿನಾಯ್ತಿ ನೀಡಲಾಗಿದೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಜನರೇ ಚೆಕ್ ಪೋಸ್ಟ್ ಗಳಲ್ಲಿ ಕಣ್ತಪ್ಪಿಸಿ ಕಣ್ಣದಾರಿಗಳ ಮೂಲಕ ಹಳ್ಳಿಗೆ ತಲುಪಿದ್ದಾರೆ.
ಆ ಹಿನ್ನೆಲೆಯಲ್ಲಿಯೇ, ವಿಶ್ವಸಂಸ್ಥೆಯ ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರುವ ದೇಶದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, “ಒಂದು ಕಡೆ ಲಾಕ್ ಡೌನ್ ಸೋಂಕು ತಡೆಯ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದು ಈಗಾಗಲೇ ಯಾವ ಅಡೆತಡೆ ಇಲ್ಲದೆ ಏರುತ್ತಿರುವ ಸೋಂಕಿತರ ಪ್ರಮಾಣವೇ ಹೇಳುತ್ತಿದೆ. ವೈಜ್ಞಾನಿಕ ಗ್ರಹಿಕೆ ಮತ್ತು ಅಂಕಿಅಂಶಗಳ ಮಾಹಿತಿಯ ಬಲವಿಲ್ಲದೆ, ಕೇವಲ ಅನುಕರಣೆಯಾಗಿ ಜಾರಿಗೆ ತಂದ ಲಾಕ್ ಡೌನ್ ದೇಶದಲ್ಲಿ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಅಂತಹ ವಿವೇಚನಾಹೀನ ಕ್ರಮದ ಫಲವಾಗಿ ಇದೀಗ ನಾವು ಗ್ರಾಮೀಣ ಭಾರತಕ್ಕೆ ಕರೋನವನ್ನು ರವಾನೆ ಮಾಡುತ್ತಿದ್ದೇವೆ. ಹಾಗಾಗಿ ಗ್ರಾಮೀಣ ವಲಸಿಗರರು ಈಗ ಅತ್ತ ಉದ್ಯೊಗವೂ ಹೋಯ್ತು, ಇತ್ತಿ ಜೀವವೂ ಉಳಿಯವುದು ಖಾತ್ರಿ ಇಲ್ಲಎಂಬ ಶೋಚನೀಯ ಸ್ಥಿತಿಗೆ ಬಂದು ತಲುಪಿದ್ದಾರೆ” ಎಂದು ಇಡೀ ಲಾಕ್ ಡೌನ್ ದುರಂತವನ್ನು ವಿವರಿಸಿದ್ದಾರೆ.
‘ದಿ ವೈರ್’ ಸುದ್ದಿ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, “ಲಾಕ್ ಡೌನ್ ಯಶಸ್ವಿಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ನಾಲ್ಕು ಮಾನದಂಡಗಳಿವೆ. ಲಾಕ್ ಡೌನ್ ಅವಧಿಯನ್ನು ಪರೀಕ್ಷೆ, ವೈದ್ಯಕೀಯ ಸೌಲಭ್ಯ ಹೆಚ್ಚಳ ಮತ್ತು ಸಜ್ಜುಗೊಳಿಸುವ ಅವಕಾಶವಾಗಿ ಬಳಸಿಕೊಳ್ಳುವುದು ಜಾಗತಿಕವಾಗಿ ಕಂಡುಬಂದಿರುವ ರೀತಿ. ಆದರೆ, ಭಾರತದಲ್ಲಿ ಮಾತ್ರ, ಲಾಕ್ ಡೌನ್ ಸ್ವತಃ ರೋಗ ತಡೆಯುತ್ತದೆ ಎಂಬಂತೆ ಸರ್ಕಾರ ನಡೆದುಕೊಂಡಿದೆ. ಹಾಗಾಗಿ ಟೆಸ್ಟಿಂಗ್ ವಿಷಯದಲ್ಲಿ ನಾವು ಜಿ20 ರಾಷ್ಟ್ರಗಳಲ್ಲೇ 18 ನೇ ಸ್ಥಾನದಲ್ಲಿದ್ದೇವೆ. ಇನ್ನು ಪರೀಕ್ಷೆಗೊಳಪಟ್ಟವರ ಪೈಕಿ ಸೋಂಕು ದೃಢಪಟ್ಟ ಶೇಕಡವಾರು ಪ್ರಮಾಣ ಕೂಡ ನಿರಂತರ ಏರುಗತಿಯಲ್ಲೇ ಇದೆ. ಹಾಗೇ ಸಾವಿನ ಪ್ರಮಾಣ ಕೂಡ ಏರುಗತಿಯಲ್ಲಿದೆ. ಅಂತಿಮವಾಗಿ ಸೋಂಕು ಹರಡುವಿಕೆ ಕೂಡ ವ್ಯಾಪಕವಾಗಿದ್ದು, ಆರಂಭದ ಸೋಂಕಿತ ಜಿಲ್ಲೆಗಳ ಪ್ರಮಾಣ ಮತ್ತು ಈಗಿನ ಪ್ರಮಾಣಕ್ಕೆ ಹೋಲಿಸಿದರೆ ಲಾಕ್ ಡೌನ್ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದರ ಗುಟ್ಟು ರಟ್ಟಾಗುತ್ತಿದೆ. ಹಾಗಾಗಿ ಒಂದರ ಹಿಂದೆ ಒಂದರಂತೆ ಯಾವ ವೈಜ್ಞಾನಿಕ ವಿವೇಚನೆ ಇಲ್ಲದೆ ಹೇರಿದ ನಾಲ್ಕು ಲಾಕ್ ಡೌನ್ ಗಳು ಇಡೀ ದೇಶವನ್ನು ಸುಧಾರಿಸಿಕೊಳ್ಳಲಾಗದ ಸಂಕಷ್ಟಕ್ಕೆ ನೂಕಿವೆ. ಎದ್ದೇಳಲಾರದ ಪ್ರಪಾತಕ್ಕೆ ದೇಶ ಕುಸಿದಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗಾಗಿ, ಲಾಕ್ ಡೌನ್ ಆರಂಭದಲ್ಲಿ ಅಂದಾಜಿಸಿದ್ದ ಲೆಕ್ಕಾಚಾರಗಳು ಈಗ ತಲೆಕೆಳಗಾಗಿವೆ. ಇತರೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಹಳ್ಳಿಗಳು ಸುರಕ್ಷಿತ. ಜನ ದಟ್ಟಣೆ ಕಡಿಮೆ ಇರುವ ಮತ್ತು ನಗರಗಳಿಂದ ದೂರವಿರುವ ಹಳ್ಳಿಗಳಂತೂ ಈ ರೋಗದಿಂದ ಪಾರಾಗಲಿವೆ ಎಂಬ ಅಂದಾಜುಗಳನ್ನು ಅವಿವೇಕದ ಲಾಕ್ ಡೌನ್ ಕ್ರಮ ಹುಸಿಗೊಳಿಸಿದೆ. ವಾಸ್ತವವಾಗಿ ಈಗ ಗ್ರಾಮೀಣ ಭಾರತ ನಿಜಕ್ಕೂ ಹೆಚ್ಚು ಅಪಾಯಕ್ಕೆ ಸಿಲುಕಿದೆ. ಸಣ್ಣ-ಪುಟ್ಟ ಊರುಗಳಲ್ಲೂ ಕರೋನಾ ಪ್ರಕರಣಗಳು ವರದಿಯಾಗತೊಡಗಿವೆ. ಶಿಕ್ಷಣ, ಸ್ವಚ್ಛತೆ, ಭೌತಿಕ ಅಂತರ, ಮತ್ತು ಸಮರ್ಪಕ ಮತ್ತು ಸಕಾಲಿಕ ವೈದ್ಯಕೀಯ ಸೌಲಭ್ಯಗಳ ವಿಷಯದಲ್ಲಿ ನಗರವಾಸಿಗಳಿಗಿಂತ ನೂರಾರು ಪಟ್ಟು ವಂಚಿತರಾಗಿರುವ ಹಳ್ಳಿಗಾಡಿನ ಜನರ ಜೀವ ಅಪಾಯದಲ್ಲಿದೆ.
ಈಗ ಸರ್ಕಾರಗಳ ಮುಂದಿರುವ ಸವಾಲು ದೊಡ್ಡದು. ಆದರೆ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು, ಕರೋನಾದೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಿ ಎಂದು ತಮ್ಮ ಪ್ಯಾರೇ ದೇಶವಾಸಿಗಳಿಗೆ ಕರೆ ನೀಡಿಯಾಗಿದೆ!