ಒಂದು ಕಡೆ ಕರ್ನಾಟಕ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಗೋವು, ಎತ್ತು, ಕರ, ಎಮ್ಮೆ, ಕೋಣಗಳ ಹತ್ಯೆ ಮತ್ತು ಅಕ್ರಮ ಸಾಗಣೆಯನ್ನು ಗಂಭೀರ ಅಪರಾಧವೆಂದು ಮತ್ತು ಅದಕ್ಕೆ ಭಾರೀ ಶಿಕ್ಷೆ, ದಂಡ ವಿಧಿಸುವ ಕಠಿಣ ಕಾನೂನನ್ನೂ ಜಾರಿಮಾಡಲು ವಿಧಾನಸಭಾ ಅನುಮೋದನೆ ಪಡೆದಿದೆ.
ಮತ್ತೊಂದು ಕಡೆ ಇನ್ನೂ ಆ ಕಾನೂನು ಜಾರಿಗೆ ಬರುವ ಮುಂಚೆಯೇ ಅದೇ ಬಿಜೆಪಿ ಆಡಳಿತದ ಗೋವಾದಲ್ಲಿ ಮಾಂಸದ ತೀವ್ರ ಕೊರತೆ ಕಾಣಿಸಿಕೊಂಡಿದ್ದು, ಹಬ್ಬ ಮತ್ತು ಹೊಸ ವರ್ಷಾಚರಣೆಯ ಹಂಗಾಮದಲ್ಲಿ ಮಾಂಸಾಹಾರಿಗಳ ಊಟದ ತಟ್ಟೆಗಳು ಬಣಗುಡುವ ಆತಂಕ ಎದುರಾಗಿದೆ! ಮಾಂಸ ಮಾರಾಟಗಾರರ ಒಕ್ಕೂಟ ಈ ಬಗ್ಗೆ ಈಗಾಗಲೇ ಗೋವಾದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಅದೇನೇ ಆಗಲಿ ಇನ್ನೆರಡು ದಿನದಲ್ಲಿ ಗೋವನ್ನರಿಗೆ ಬೇಕಾದಷ್ಟು ಗೋಮಾಂಸ ಸರಬರಾಜು ಮಾಡಲಾಗುವುದು. ಆ ಸಂಬಂಧ ರಾಜ್ಯಕ್ಕೆ ಅತಿಹೆಚ್ಚು ಗೋಮಾಂಸ ಸರಬರಾಜು ಮಾಡುವ ಕರ್ನಾಟಕ ಸರ್ಕಾರದೊಂದಿಗೆ ಮಾತನಾಡುತ್ತೇನೆ. ಹಾಗಾಗಿ ಗೋಮಾಂಸಪ್ರಿಯರು ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಬಿಜೆಪಿ ಮುಖ್ಯಮಂತ್ರಿ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ!

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ತಿದ್ದುಪಡಿ ಮಸೂದೆ ಅನುಮೋದನೆಗೊಂಡ ಬೆನ್ನಲ್ಲೇ ಗೋವಾದ ಮಾಂಸ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದ್ದು, ಬಹುತೇಕ ಕಳೆದ ಒಂದು ವಾರದಿಂದ ಅಲ್ಲಿನ ಕೋಳಿ ಮತ್ತು ಕುರಿ ಮಾಂಸದಂಗಡಿ ಹೊರತುಪಡಿಸಿ ಉಳಿದೆಲ್ಲಾ ಮಾಂಸ ಮಾರಾಟ ಮಳಿಗೆಗಳು ಬಾಗಿಲು ಮುಚ್ಚಿವೆ. 10 ದಿನಗಳ ಹಿಂದೆ ಗೋವಾ ಕೊನೆಯ ಬಾರಿಗೆ ಮಾಂಸದ ಪ್ರಾಣಿಗಳನ್ನು ಕರ್ನಾಟಕದಿಂದ ಪಡೆದುಕೊಂಡಿತ್ತು. ಅದಾಗಿ ಎರಡೇ ದಿನಕ್ಕೆ ಮಾಂಸ ದಾಸ್ತಾನು ಖಾಲಿಯಾಗಿ, ಬಹುತೇಕ ಮಾಂಸ ಮಾರುಕಟ್ಟೆ ವಹಿವಾಟು ನಿಂತುಹೋಗಿದೆ.
ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಯ ಹಬ್ಬದ ಹಂಗಾಮದಲ್ಲಿ ಕ್ರೈಸ್ತರು ಮತ್ತು ಬಹುತೇಕ ಪ್ರವಾಸಿ ವಿದೇಶಿಯರ ಮೆಚ್ಚಿನ ಆಹಾರಕ್ಕೆ ಹಾಹಾಕಾರ ಉಂಟಾಗಿದ್ದು, ಒಂದು ಕಡೆ ಜನರಿಗೆ ಹಬ್ಬದಡುಗೆಗೆ ಮಾಂಸವಿಲ್ಲದೆ ಬೇರೇನು ಮಾಡುವುದು ಎಂಬ ತಲೆನೋವು ಉಂಟಾಗಿದ್ದರೆ, ಮತ್ತೊಂದು ಕಡೆ ಮಾಂಸದಂಗಡಿಗಳ ವಹಿವಾಟು, ಉದ್ಯೊಗದ ಮೂಲಕ ಜೀವ ನಡೆಸುತ್ತಿರುವ ಸಾವಿರಾರು ಮಂದಿಯ ಬದುಕೇ ದಿಢೀರನೇ ನಿಂತುಹೋದಂತಾಗಿದೆ.
ಕರ್ನಾಟಕ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆ ಅನುಮೋದನೆಗೊಂಡ ಬೆನ್ನಲ್ಲೇ ಅಲ್ಲಿನ ಪಶುವೈದ್ಯರು ಮಾಂಸ ಮತ್ತು ಜಾನುವಾರುಗಳಿಗೆ ಪ್ರಮಾಣಪತ್ರ ನೀಡುವುದನ್ನೇ ನಿಲ್ಲಿಸಿದ್ದಾರೆ. ಹಾಗಾಗಿ ಜಾನುವಾರು ಮಾತ್ರವಲ್ಲದೆ ಮಾಂಸವನ್ನು ಕೂಡ ಸಾಗಣೆ ಮಾಡಲು ಆಗುತ್ತಿಲ್ಲ. ಗೋಮಾಂಸ ಸೇರಿದಂತೆ ಇತರೆ ಜಾನುವಾರು ಮಾಂಸಕ್ಕಾಗಿ ಗೋವಾ ಸಂಪೂರ್ಣ ಕರ್ನಾಟಕವನ್ನೇ ಅವಲಂಬಿಸಿದೆ. ಈಗ ಅಲ್ಲಿನ ಹೊಸ ಕಾನೂನು ಜಾರಿಯಾಗುತ್ತಿರುವುದರಿಂದ ಗೋವಾದ ಮಾಂಸಮಾರುಕಟ್ಟೆ ಮತ್ತು ಮಾಂಸಪ್ರಿಯರಿಗೆ ದಿಕ್ಕೇ ತೋಚದಂತಾಗಿದೆ. ದಿನವೊಂದಕ್ಕೆ ಸರಾಸರಿ 20 ಟನ್ ಮಾಂಸ ಗೋವಾಕ್ಕೆ ಅಗತ್ಯವಿದೆ. ಅಷ್ಟೂ ಪ್ರಮಾಣದ ಮಾಂಸ ಬಹುತೇಕ ಕರ್ನಾಟಕದಿಂದಲೇ ಬರಬೇಕಿದೆ. ಇದೀಗ ಕರ್ನಾಟಕದಿಂದ ಮಾಂಸ ಮತ್ತು ಜಾನುವಾರು ಸಾಗಣೆ ಸಂಪೂರ್ಣ ನಿಂತುಹೋಗಿದೆ. ಹಾಗಾಗಿ ಈ ಬೆಳವಣಿಗೆ ಕೇವಲ ಮಾಂಸ ವ್ಯಾಪಾರಿಗಳು, ಸ್ಥಳೀಯ ಮಾಂಸಪ್ರಿಯರ ಮೇಲಷ್ಟೇ ಅಲ್ಲದೆ, ಬಹುತೇಕ ಪ್ರವಾಸಿಗಳು ಮಾಂಸಾಹಾರಿಗಳೇ ಆದ್ದರಿಂದ ಹಬ್ಬಗಳ ಹೊತ್ತಲ್ಲಿ ಪ್ರವಾಸೋದ್ಯಮದ ಮೇಲೂ ಪರಿಣಾಮಬೀರಲಿದೆ ಎಂದು ಅಲ್ಲಿನ ಮಾಂಸ ಮಾರಾಟಗಾರರ ಒಕ್ಕೂಟ ಹೇಳಿದೆ.

ಈ ಸಂಬಂಧ ಈಗಾಗಲೇ ಒಕ್ಕೂಟ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಮನವಿ ಸಲ್ಲಿಸಿದ್ದು, ಸಮಸ್ಯೆಯನ್ನು ಆದಷ್ಟು ಶೀಘ್ರವೇ ಬಗೆಹರಿಸಿ ಎಂದು ಒತ್ತಾಯಿಸಿದೆ. ಆ ಹಿನ್ನೆಲೆಯಲ್ಲಿ ಭರವಸೆ ನೀಡಿರುವ ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ಸಾವಂತ್, ಮಾಂಸ ಸರಬರಾಜು ಹಿಂದಿನಂತೆ ಸರಾಗವಾಗಿ ನಡೆಯಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಯಾರೂ ಆತಂಕಗೊಳ್ಳಬೇಕಿಲ್ಲ. ಈ ಸಂಬಂಧ ಈಗಾಗಲೇ ರಾಜ್ಯ ಮುಖ್ಯಕಾರ್ಯದರ್ಶಿ, ಪಶುಸಂಗೋಪನಾ ಇಲಾಖೆ ನಿರ್ದೇಶಕರ ಸಭೆ ಕರೆದು ಚರ್ಚಿಸಲಾಗಿದೆ. ಕರ್ನಾಟಕ ಸರ್ಕಾರದ ಜೊತೆಗೂ ಮಾತುಕತೆ ನಡೆಸಲಾಗುವುದು ಮತ್ತು ಅವರ ಹೊಸ ಕಾಯ್ದೆಯ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ.
ಈ ಮೊದಲು ಗೋವಾ ತನ್ನ ಮಾಂಸದ ಬೇಡಿಕೆ ಪೂರೈಸಿಕೊಳ್ಳಲು ಮಹಾರಾಷ್ಟ್ರವನ್ನೂ ಅವಲಂಬಿಸಿತ್ತು. ಆದರೆ, ನಾಲ್ಕು ವರ್ಷಗಳ ಹಿಂದೆ 2015ರಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ಆ ಮೊದಲು ಜಾರಿಯಲ್ಲಿದ್ದ ಗೋಹತ್ಯೆ ನಿಷೇಧ ಮಸೂದೆಗೆ ಕರ್ನಾಟಕದ ಈಗಿನ ತಿದ್ದುಪಡಿ ಮಾದರಿಯಲ್ಲೇ ತಿದ್ದುಪಡಿ ತಂದು ಕೇವಲ ಹಸು ಮಾತ್ರವಲ್ಲದೆ, ಹೋರಿ ಮತ್ತು ಎತ್ತುಗಳ ಮಾಂಸ ಸೇವನೆಯನ್ನೂ ನಿಷೇಧಿಸಿತು. ಆ ಹಿನ್ನೆಲೆಯಲ್ಲಿ ಗೋವಾ ಮತ್ತು ಮಹಾರಾಷ್ಟ್ರ ನಡುವಿನ ಮಾಂಸ ವಹಿವಾಟು ನಿಲುಗಡೆಗೆ ಬಂದಿತ್ತು. ಹಾಗಾಗಿ ಗೋವಾ ಸರ್ಕಾರಿ ಮಾಂಸ ಮಾರುಕಟ್ಟೆ ಕೂಡ ಕಳೆದ ಐದು ವರ್ಷಗಳಿಂದ ಮುಚ್ಚಿದೆ. ಈ ನಡುವೆ ಅಲ್ಲಿನ ಖಾಸಗೀ ಮಾಂಸ ಮಾರಾಟಗಾರರು ಮಾಂಸಕ್ಕಾಗಿ ಮತ್ತು ಮಾಂಸದ ಪ್ರಾಣಿಗಳಿಗಾಗಿ ಸಂಪೂರ್ಣವಾಗಿ ಕರ್ನಾಟಕವನ್ನೇ ಅವಲಂಬಿಸಿದ್ದರು.
ಇದೀಗ ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸುವ ಮೂಲಕ ಸಂಪೂರ್ಣ ಹಸು, ಹೋರಿ, ಎತ್ತು, ಕರು, ಎಮ್ಮೆ-ಕೋಣದ ಮಾಂಸ ಮಾರಾಟ, ಸೇವನೆ, ಆ ಪ್ರಾಣಿಗಳ ಸಾಗಣೆಯನ್ನೇ ನಿಷೇಧಿಸಲು ಮುಂದಾಗಿದೆ. ಇದು ಸಹಜವಾಗೇ ಅದೇ ಬಿಜೆಪಿ ಆಡಳಿತದ ಗೋವಾ ಸರ್ಕಾರಕ್ಕೆ ತಲೆನೋವು ತಂದಿದೆ!










