ಶೀಘ್ರವೇ ಕರ್ನಾಟಕ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾನ್ ಶುಕ್ರವಾರ ಹೇಳಿದ್ದಾರೆ.
ಕೋವಿಡ್-19 ಸಂಕಷ್ಟಗಳು ನಿವಾರಣೆಯಾಗುವದರೊಂದಿಗೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧವನ್ನು ಜಾರಿಗೆ ತರುವ ಕುರಿತು ಚಿಂತಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಗೋ ಹತ್ಯೆ ನಿಷೇಧಿಸಿರುವ ಗುಜರಾತ್, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಗೆ ತಜ್ಞರ ಸಮಿತಿಯನ್ನು ಕಳುಹಿಸಲಾಗುವುದು ಎಂದು ಪತ್ರಕರ್ತರೊಂದಿಗೆ ಹೇಳಿದ್ದಾರೆ.
ಪ್ರಭು ಚೌಹಾನ್ ಹೇಳಿಕೆಯೊಂದಿಗೆ ಗೋಹತ್ಯೆ ನಿಷೇಧದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2010 ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದ್ದರು. ಈ ಮಸೂದೆಯ ಪ್ರಕಾರ ಸಂಪೂರ್ಣ ಗೋಹತ್ಯೆ ನಿಷೇಧ ತರುವುದು ಬಿಜೆಪಿ ಸರ್ಕಾರದ ಆಶಯವಾಗಿತ್ತು. 2018 ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಗೋ ಹತ್ಯೆ ನಿಷೇಧ ಮಾಡುವುದಾಗಿ ಹೇಳಿತ್ತು.
12 ವರ್ಷ ಮೇಲ್ಪಟ್ಟ ಮತ್ತು ಸಂತಾನೋತ್ಪತ್ತಿಗೆ ಅಶಕ್ತವಾಗಿರುವ ಎತ್ತು, ಕೋಣ, ಎಮ್ಮೆ ಅಥವಾ ಹಾಲು ನೀಡದ ಹಸುವನ್ನು ವಧೆಗೊಳಿಸಬಹುದೆಂದಿರುವ 1964 ರ ಜಾನುವಾರು ವಧೆ ಕಾಯ್ದೆಗೆ 2010ರಲ್ಲಿ ಯಡಿಯೂರಪ್ಪ ಮಂಡಿಸಿರುವ ಮಸೂದೆ ತದ್ವಿರುದ್ಧವಾಗಿತ್ತು.
ಅದಾಗ್ಯೂ ಈ ಮಸದೆ ಕಾನೂನಾಗಿ ಜಾರಿಗೆ ಬಂದಿರಲಿಲ್ಲ. 2013 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ 1964 ರ ಕಾನೂನನ್ನೆ ಮುಂದುವರೆಸಿತ್ತು.
