ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಶುಕ್ರವಾರ ಕೋಲ್ಕತಾದಲ್ಲಿ ಆರಂಭವಾಗಿರುವ ‘ಗುಲಾಬಿ ಚೆಂಡಿನ ಟೆಸ್ಟ್’ ಬಗ್ಗೆ ಕ್ರಿಕೆಟ್ ಪ್ರಿಯರು ಮಾತ್ರವಲ್ಲದೆ ಇತರೆ ಅನೇಕರಿಗೂ ವಿಶೇಷ ಆಸಕ್ತಿ ಮೂಡಿದೆ. ಇದರಲ್ಲಿ ಹೆಚ್ಚಿನ ವಿಶೇಷವೇನಿಲ್ಲ, ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ‘ಗುಲಾಬಿ ಚೆಂಡು’ ಬಳಸಿ ಆಡಲಾಗುತ್ತಿದೆ. ಭಾರತಕ್ಕೆ ಇದು ಮೊದಲ ‘ಗುಲಾಬಿ ಚೆಂಡಿನ ಟೆಸ್ಟ್’ ಎಂದು ಹೇಳಬಹುದಾದರೂ ‘ಪಿಂಕ್ ಬಾಲ್’ ಕ್ರಿಕೆಟ್ ಜಗತ್ತಿನಲ್ಲಿ ಜನರನ್ನುಸೆಳೆಯುವಲ್ಲಿ ಯಶಸ್ವಿಯಾಗಿರುವುದಂತೂ ಅಷ್ಟೇ ನಿಜವಾಗಿದೆ.
ಸುಮಾರು ಎರಡು ದಶಕಗಳ ಹಿಂದೆ ಟೆಸ್ಟ್ ಕ್ರಿಕೆಟ್ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಗಮನಿಸಿ ಒಂದು ನವೀನತೆಯಾಗಿ ಗುಲಾಬಿ ಚೆಂಡನ್ನು ಬಳಕೆಗೆ ತರಲಾಗಿತ್ತು. ಏಕದಿನ, 20-20 ಕ್ರಿಕೆಟ್‍ಗಳ ಹೆಚ್ಚಿನ ಪ್ರಾಮುಖ್ಯತೆಯಲ್ಲಿ ಟೆಸ್ಟ್ ಕ್ರಿಕೆಟ್ ಮರುಜೀವ ನೀಡಲು ಈ ಪ್ರಯತ್ನ ಕೈಗೊಳ್ಳಲಾಗಿತ್ತು. ಹೊನಲು ಬೆಳಕಿನ ಅಡಿಯಲ್ಲಿ ಕೆಂಪು ಚೆಂಡು ಸೂಕ್ತ ರೀತಿಯಲ್ಲಿ ಕಾಣಸಿಗುವುದಿಲ್ಲ ಎಂಬ ಕಾರಣವಾಗಿ, ಕಿತ್ತಳೆ, ಹಳದಿ, ಗುಲಾಬಿ ಚೆಂಡುಗಳ ಪ್ರಯೋಗ ಆರಂಭವಾಗಿತ್ತು. ಜೊತೆಗೆ ಸುಧಾರಿತ ಬಿಳಿ ಚೆಂಡು ಬಳಕೆಯನ್ನು ಕೈಗೊಳ್ಳಲಾಗಿತ್ತು. ಹೊನಲು ಬೆಳಕಿನಡಿ ಹೆಚ್ಚು ಸ್ಪಷ್ಟವಾಗಿ ಕಾಣಸಿಗುತ್ತದೆ ಎಂದು ಗುಲಾಬಿ ಚೆಂಡು ಆರಿಸಲಾಯಿತು.
ಪ್ರಥಮ ಪ್ರಯೋಗ:
2009ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯವೊಂದರಲ್ಲಿ ಗುಲಾಬಿ ಚೆಂಡು ಮೊದಲ ಬಾರಿಗೆ ಬಳಕೆಯಾಗಿತ್ತು. 2010ರ ಜನವರಿಯಲ್ಲಿ ವೆಸ್ಟ್ ಇಂಡೀಸ್‍ನಲ್ಲಿ ಟ್ರಿನಿಡ್ಯಾಡ್ ಮತ್ತು ಟೊಬ್ಯಾಗೊ ಹಾಗೂ ಆಂಟಿಗಾ ನಡುವಿನ ಪ್ರಥಮ ದರ್ಜೆ ಪಂದ್ಯದಲ್ಲಿ ಪಿಕ್ ಬಾಲ್ ಬಳಸಲಾಗಿತ್ತು. ನಂತರ ಹಲವು ಕಡೆಗಳಲ್ಲಿ ಗುಲಾಬಿ ಚೆಂಡಿನ ಪಂದ್ಯಗಳ ಪ್ರಯೋಗ ಮುಂದುವರಿದಿತ್ತು.
2015ರ ನವೆಂಬರ್‍ನಲ್ಲಿ ಆಸ್ಟ್ರೇಲಿಯಾದ ಅಡಿಲೇಡ್‍ನಲ್ಲಿ ಮೊಟ್ಟ ಮೊದಲ ಹಗಲು-ರಾತ್ರಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಿತು. ಹೆಚ್ಚು ಸ್ವಿಂಗ್ ಆಗುವ ಪಿಂಕ್ ಬಾಲ್ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು.
ಬಿಳಿ ಸೈಟ್ ಸ್ಕ್ರೀನ್, ಗುಲಾಬಿ ಚೆಂಡು:
ಈ ನಡುವೆ ಗುಲಾಬಿ ಚೆಂಡು ಸಾಕಷ್ಟು ಸುಧಾರಣೆಗಳನ್ನು ಕಂಡಿದೆ. ಕಾಲ ಕಳೆದಂತೆ ತಂತ್ರಜ್ಞಾನ ಉತ್ತಮಗೊಂದು ಹೆಚ್ಚಿನ ಲ್ಯಾಕರ್ ಹೊಳಪು ಹೊಂದಿರುವ ಪಿಂಕ್ ಬಾಲ್ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನೊಂದು ಕಡೆ ಬಿಳಿ ಚೆಂಡು ಬಳಸುವಾಗ ಕಪ್ಪಾಗಿದ್ದ ಸೈಟ್ ಸ್ಕ್ರೀನ್, ಗುಲಾಬಿ ಚೆಂಡು ಬಂದಾಗ ಬೆಳ್ಳಗಾಗಿತ್ತು.
ಕ್ರಿಕೆಟ್ ಎಂದರೆ ಬ್ಯಾಟ್ಸ್‌ಮನ್‌ಗಳ ಆಟ ಎಂಬ ಮಾತಿದೆ. ಆದರೆ ಗುಲಾಬಿ ಚೆಂಡು ಬೌಲರ್‍ಗಳಿಗೆ ಹೆಚ್ಚಿನ ಲಾಭನೀಡುತ್ತದೆ ಎಂಬ ಆರೋಪವನ್ನು ಹೊಂದಿದೆ. ಹಲವು ಪಂದ್ಯಗಳಲ್ಲಿ ಉಭಯ ತಂಡಗಳು ಕಡಿಮೆ ಮೊತ್ತ ಕಲೆ ಹಾಕಿದ್ದು ಕಂಡು ಬಂದಿದ್ದರೂ, ಗಮನವಿಟ್ಟು ಆಡಿದಲ್ಲಿ 400 ಮೇಲಿನ ಮೊತ್ತಗಳು ಬಂದಿರುವುದೂ ಇದೆ.
ಹೆಚ್ಚಿದ ಜನಪ್ರಿಯತೆ:
ಗುಲಾಬಿ ಚೆಂಡು ತನ್ನದೇ ಆದ ರೀತಿಯಲ್ಲಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿದೆ. ಬಹಳಷ್ಟು ಕ್ರಿಕೆಟ್ ಪ್ರೇಮಿಗಳು ಪಿಂಕ್ ಬಾಲ್ ಆಟವನ್ನು ವೀಕ್ಷಿಸಲು ಬಹಳ ಇಷ್ಟ ಪಡುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಪಿಂಕ್‍ನೊಂದಿಗೆ ನಡೆದ ಟೆಸ್ಟ್ ಪಂದ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನೂ ಆಕರ್ಷಿಸಿರುವುದು ಇದಕ್ಕೆ ಪುಷ್ಟಿ ನೀಡಿದೆ. ಅಂದಹಾಗೆ ಶುಕ್ರವಾರ ಆರಂಭವಾಗಿರುವ ಭಾರತ – ಬಾಂಗ್ಲಾ ಟೆಸ್ಟ್ ಪಂದ್ಯದ ಮೊದಲ ನಾಲ್ಕು ದಿನ ಟಿಕೆಟ್‍ಗಳು ಮುಂಚಿತವಾಗಿ ಸೋಲ್ಡ್ ಔಟ್ ಆಗಿದ್ದು ಈಗಾಗಲೇ ಸುದ್ದಿಯಾಗಿದೆ.
ಗುಲಾಬಿ ಚೆಂಡು ವೇಗಿಗಳ ಸ್ವಿಂಗ್‍ಗೆ, ಸ್ಪಿನ್ನರ್‌ಗಳ ನಿಧಾನ ತಿರುವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬ ಮಾತು ಪರಿಣತರಿಂದ ಕೇಳಿ ಬಂದಿದೆ. ಇದಕ್ಕೆ ತಕ್ಕಂತೆ ಭಾರತದ ವೇಗಿಗಳು 106 ರನ್‍ಗಳಿಗೆ ಬಾಂಗ್ಲಾ ತಂಡವನ್ನು ಮೊದಲ ದಿನದಲ್ಲೇ ಆಲೌಟ್ ಮಾಡಿದ್ದಾರೆ. ವೇಗಿಗಳಾದ ಇಶಾಂತ್ 5, ಉಮೇಶ್ ಯಾದವ್ 3, ಮೊಹಮದ್ ಶಮಿ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಸ್ಪಿನ್ನರ್‌ಗಳಿಗೆ ಅವಕಾಶವೇ ಸಿಕ್ಕಿಲ್ಲ!.
ಅದೆಲ್ಲಾ ಏನೇ ಇರಲಿ ಯಾವ ಕ್ಷೇತ್ರವಾಗಿರಲಿ, ನವೀನತೆ ಇಂದು ಯಶಸ್ಸಿನ ಮೂಲ ಮಂತ್ರವಾಗಿದೆ. 67,000 ಜನರಿಗೆ ಸ್ಥಳಾವಕಾಶ ಇರುವ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಇಂದು ನಾಲ್ಕು ದಿನಗಳವರೆಗೆ ಹೌಸ್‍ಫುಲ್ ಬುಕಿಂಗ್ ಕಂಡಿದೆ. ಭಾರತದಲ್ಲಿ ಒಂದು ಧರ್ಮ ಎನ್ನುವುದರ ಮಟ್ಟಿಗೆ ಜನಪ್ರಿಯವಾಗಿರುವಕ್ರಿಕೆಟ್ ಆಟಕ್ಕೆ ಪಿಂಕ್ ಬಾಲ್ ಹೊಸ ರಂಗು ತಂದಿದೆ.
ತಡವಾಗಿ ಬಂದ ಭಾರತ :
ಈಗಾಗಲೇ 8 ಟೆಸ್ಟ್ ಆಡುವ 8 ದೇಶಗಳು ‘ಪಿಂಕ್ ಬಾಲ್’ ಟೆಸ್ಟ್ ಪಂದ್ಯಗಳನ್ನು ಆಡಿವೆ. ಭಾರತ ಈಗ 9ನೇ ತಂಡವಾಗಿ ಗುಲಾಬಿ ಕ್ರಿಕೆಟ್‍ಗೆ ಕಾಲಿಟ್ಟಿದೆ. ಅಷ್ಟೊಂದು ಕ್ರಿಕೆಟ್ ಹುಚ್ಚು ಹೊಂದಿರುವ ದೇಶವಾದರೂ ಭಾರತ ಇಷ್ಟು ವರ್ಷ ಕ್ರಿಕೆಟ್‍ನ ಏಕದಿನ, 20-20 ಮತ್ತು ಟೆಸ್ಟ್ ಪಂದ್ಯಗಳಲ್ಲಿ ಗುಲಾಬಿ ಚೆಂಡಿನೊಂದಿಗೆ ಆಡಲು ಹಿಂದೇಟು ಹಾಕಿದ್ದು ಅಚ್ಚರಿಯ ವಿಷಯವಾಗಿದೆ. ಹಲವು ಬಾರಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ದೇಶಗಳಿಂದ ಪಿಂಕ್ ಬಾಲ್ ಟೆಸ್ಟ್‌ಗಾಗಿ ಬಂದ ಮನವಿಯನ್ನು ಭಾರತ ತಿರಸ್ಕರಿಸಿತ್ತು. ಇದುವರೆಗೆ ಗುಲಾಬಿ ಚೆಂಡಿನ 11 ಟೆಸ್ಟ್ ಪಂದ್ಯಗಳ ಪೈಕಿ ಆಸ್ಟ್ರೇಲಿಯ 5 ಪಂದ್ಯಗಳಲ್ಲಿ ಭಾಗವಹಿಸಿ ಎಲ್ಲರಿಗಿಂತ ಮುಂದಿದೆ.
ಗಂಗೂಲಿ ಪ್ರಮುಖ ಪಾತ್ರ:
ಕ್ರಿಕೆಟ್‍ನಲ್ಲಿ ಅತ್ಯಂತ ಆಕರ್ಷಕ ನವೀನ ಬದಲಾವಣೆಗಳಲ್ಲಿ ಒಂದೆಂದು ‘ಪಿಂಕ್ ಬಾಲ್’ ಕ್ರಿಕೆಟ್ಟನ್ನು ಹೆಸರಿಸಲಾಗಿದೆ. ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿಯೇ ಪ್ರಮುಖ ಪಾತ್ರ ವಹಿಸಿ ಭಾರತವನ್ನು ಈ ಗುಲಾಬಿ ಕ್ರಿಕೆಟ್ ಲೀಗ್‍ಗೆ ತರುವಲ್ಲಿ ಯಶಸ್ಸು ಕಂಡಿದ್ದಾರೆ. ಕ್ರಿಕೆಟ್ ಸಮಿತಿ ಸದಸ್ಯರಾಗಿದ್ದಾಗ ಗಂಗೂಲಿಯೇ ಮುಂದಾಗಿ ದುಲೀಪ್ ಟ್ರೋಫಿ ಪಂದ್ಯಗಳಲ್ಲಿ ಗುಲಾಬಿ ಚೆಂಡಿನ ಬಳಕೆಯನ್ನು ಚಾಲ್ತಿಗೆ ತಂದಿದ್ದರು.
ಇನ್ನು ಸಾಮಾಜಿಕ ಜಾಲತಾಣಗಳಲ್ಲೂ “ಪಿಂಕ್ ಬಾಲ್’’ ಬಹಳವಾಗಿ ಹರಿದಾಡುತ್ತಿದೆ. ಫ್ಲಡ್‍ಲೈಟ್ಸ್ ಬಂದ ನಂತರ ‘ಗುಲಾಬಿ ಚೆಂಡು’ ಉತ್ತಮ ರೀತಿಯ ಕಾಣಸಿಗುತ್ತದೆ. ಈ ಬೆಳಕಿನಲ್ಲಿ ಕೆಂಪು ಚೆಂಡನ್ನು ಗುರುತಿಸುವುದು ಬ್ಯಾಟ್ಸ್‍ಮನ್‍ಗಳು ಮತ್ತು ಫೀಲ್ಡರ್‌ಗಳೆಲ್ಲರಿಗೂ ಕಷ್ಟವಾಗುತ್ತದೆ. ಇದೇ ಕಾರಣ ಗುಲಾಬಿ ಚೆಂಡು ಬದಲಾವಣೆಯ ಗುರುತಾಗಿ ಬಂದಿದೆ.
ರಿಸಲ್ಟ್ ಗ್ಯಾರೆಂಟಿ:
ಇದುವರೆಗೆ ಪಿಂಕ್ ಬಾಲ್‍ನಲ್ಲಿ ಆಡಿರುವ ಟೆಸ್ಟ್ ಪಂದ್ಯಗಳಲ್ಲೆಲ್ಲ ಫಲಿತಾಂಶ ಬಂದಿರುವುದು ವಿಶೇಷ. ಬೌಲರ್‌ಗಳ ಮೇಲುಗೈ ಆದಲ್ಲಿ ಸ್ವಾಭಾವಿಕವಾಗಿ ರಿಸಲ್ಟ್ ಬಂದೇ ಬರುತ್ತದೆ. ಪಂದ್ಯ ನೀರಸ ಡ್ರಾ ಆಗುವುದಿಲ್ಲಅಲ್ಲವೇ? ಇದೇ ಕಾರಣ ಟೆಸ್ಟ್ ಕ್ರಿಕೆಟ್ ಕಡೆಗೆ ಜನರ ಗಮನ ಹೊರಳಬಹುದಾಗಿದೆ.
ಹೀಗೆ ಹಲವಾರು ಕಾರಣಗಳಿಂದ ಗುಲಾಬಿ ಚೆಂಡಿನ ಕ್ರಿಕೆಟ್ ಜನಾಸಕ್ತಿಯ ಕೇಂದ್ರವಾಗಿದೆ. ಹೊಡಿಬಡಿ ಕ್ರಿಕೆಟ್ ಮಾದರಿಗಳ ನಡುವೆ ಮಾಸಿ ಹೋಗುತ್ತಿದ್ದ ಕ್ರಿಕೆಟ್‍ನ ಪರಿಶುದ್ಧ ರೂಪವಾದ ಟೆಸ್ಟ್ ಕ್ರಿಕೆಟ್‍ಗೆ ಪುನರುಜ್ಜೀವನ ನೀಡುವಲ್ಲಿ ‘ಗುಲಾಬಿ ಚೆಂಡು’ಯಶಸ್ವಿಯಾಗಿದೆ.