ಕರ್ನಾಟಕ ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಕರೋನಾ ಸೋಂಕು ಏರಿಕೆ ಆಗುತ್ತಲೇ ಸಾಗಿದೆ. ಇದೀಗ ರಾಜ್ಯದಲ್ಲಿ ಒಂದೂವರೆ ಸಾವಿರ ಆಸುಪಾಸಿನಲ್ಲಿ ಕರೋನಾಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್ ಪಾಟೀಲ್, ಹಿರಿಯ ನಾಯಕ ಡಾ. ಜಿ. ಪರಮೇಶ್ವರ್, ಎಚ್.ಕೆ ಪಾಟೀಲ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್ ಸೇರಿದಂತೆ ಹಲವರು ಭಾಗಿಯಾದರು. ಕರೋನಾ ಸಂಕಷ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನಾ ಫಲಕಗಳನ್ನು ಹಿಡಿದು ಧರಣಿ ನಡೆಸಿದ್ದಾರೆ. APMC ಕಾಯ್ದೆ ಹಿಂಪಡೆಯುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಸುರಿಮಳೆ ಸುರಿಸಿದ ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಬೋಗಸ್ ಘೋಷಣೆ ಆಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಗಗನಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಕೂಡಲೇ ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯ ಮಾಡಿದರು. ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವಂತೆಯೂ ಪ್ರತಿಭಟನೆ ವೇಳೆ ಒತ್ತಾಯ ಮಾಡಿದ್ರು. ಜನ ವಿರೋಧಿ, ಭ್ರಷ್ಟ ಸರ್ಕಾರದ ವಿರುದ್ಧ 144 ಸೆಕ್ಷನ್ ಇದ್ದರೂ ಪ್ರತಿಭಟನೆ ಮಾಡಬೇಕಾಗಿ ಬಂತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಇಲ್ಲಿವರೆಗೂ ಸರ್ಕಾರಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುತ್ತಾ ಬಂದಿದ್ದೇವೆ. ಆದರೆ ಬಹಳ ದಿನ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ನಾವು ಬಿ.ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೇವೆ. ಕಾರ್ಮಿಕರು, ವಲಸೆ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ವಸತಿ, ಊಟ, ನೀರು ಕೊಟ್ಟಿದ್ದರೆ ರಾಜ್ಯ ಬಿಟ್ಟು ಹೋಗ್ತಿರಲಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕರೋನಾ ತಡೆಯಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಿನ್ನೆ ಒಂದೇ ದಿನ 172 ಕೇಸ್ಗಳು ಪತ್ತೆಯಾಗಿವೆ ಎಂದ ಸಿದ್ದರಾಮಯ್ಯ, ಇಷ್ಟು ದಿನ ತಬ್ಲಿಗಿಗಳಿಂದ ಬಂದಿದೆ ಅಂತಿದ್ರು. ಇದೀಗ ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಬಂದಿದೆ. ಅವರನ್ನು ರಾಜ್ಯದ ಒಳಗೆ ಬಿಟ್ಟುಕೊಂಡಿದ್ದು ಇದೇ ಸರ್ಕಾರ ಅಲ್ವಾ..? ಬಾರ್ಡರ್ನಲ್ಲಿಯೇ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಟ್ಟು ಕರೆ ತರಬೇಕಿತ್ತು. ಮಡಿವಾಳರಿಗೆ, ಸವಿತಾ ಸಮಾಜದವರಿಗೆ, ಕರ ಕುಶಲಕರ್ಮಿಗಳಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ ಕೊಡಿ ಅಂತ ಮನವಿ ಮಾಡಿದ್ದೆವು. ಆದರೆ ನಾವು ಹೇಳಿದ ಯಾವುದನ್ನೂ ಸರ್ಕಾರ ಇದುವರೆಗೂ ಮಾಡಿಲ್ಲ. ನರೇಂದ್ರ ಮೋದಿ ಘೋಷಣೆ ಮಾಡಿರೋದು ಬೋಗಸ್ ಪ್ಯಾಕೇಜ್ ಎಂದು ಚಾಟಿ ಬೀಸಿದ್ದಾರೆ. ಎಪಿಎಂಸಿ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಗಾಂಧಿ ತತ್ವವನ್ನೇ ನಂಬಿಕೊಂಡಿರುವ ಕಾಂಗ್ರೆಸ್ ಕೂಡ ಕಮಲ ಪಾಳಯದ ಕಿವಿ ಹಿಂಡುತ್ತಾ ಗೊತ್ತಿಲ್ಲ.












