ಬದುಕಿನ ಬಹುತೇಕ ಕಾಲಮಾನವನ್ನು ಭಾರತದ ಸ್ವಾತಂತ್ರ್ಯ ಚಳವಳಿ, ದೇಶದ ಏಳ್ಗೆಗಾಗಿ ಮುಡಿಪಾಗಿಟ್ಟ ಅಮೆರಿಕಾ, ದಕ್ಷಿಣ ಆಫ್ರಿಕಾ ಹಾಗೂ ಮ್ಯಾನ್ಮಾರ್ ಸೇರಿದಂತೆ ಹಲವು ರಾಷ್ಟ್ರಗಳ ರಾಷ್ಟ್ರೀಯ ಹೋರಾಟಕ್ಕೆ ಪ್ರೇರಣೆಯಾದವರು ಮಹಾತ್ಮ ಗಾಂಧೀಜಿ. ಅಹಿಂಸಾ ತತ್ವದ ಮೂಲಕ ಬ್ರಿಟಿಷರನ್ನು ಭಾರತದಿಂದ ಹೊರಹಾಕುವ ಐತಿಹಾಸಿಕ ಪ್ರಸಿದ್ಧ ರಾಜಕೀಯ ಹೋರಾಟ ನಡೆಸಿ ಮಾನವ ಸಂತತಿ ಇರುವ ತನಕವೂ ಚಿರಸ್ಥಾಯಿಯಾಗಿ ಉಳಿಯಲಿರುವ ಗಾಂಧೀಜಿಯವರನ್ನು ಭಾರತದ ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಈಗ ಈ ಮಹಾನ್ ಗೌರವವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವರ್ಗಾಯಿಸಲು ಆಡಳಿತ ಪಕ್ಷದ ಸಚಿವರು ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಪೈಪೋಟಿಗೆ ಇಳಿದಿದ್ದಾರೆ.
ಅಮೆರಿಕ ಕಂಡ ಅತ್ಯಂತ ಮೂರ್ಖ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಮೋದಿಯವರನ್ನು ಹೊಗಳುವ ಬರದಲ್ಲಿ ಅವರನ್ನು ಭಾರತದ ರಾಷ್ಟ್ರಪಿತ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ಕೇಂದ್ರದ ಸಚಿವರಾದ ಜಿತೇಂದ್ರ ಸಿಂಗ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮೋದಿಯವರನ್ನು ರಾಷ್ಟ್ರಪಿತ ಎಂಬುದಕ್ಕೆ ವಿರೋಧ ವ್ಯಕ್ತಪಡಿಸುವವರು ದೇಶದ್ರೋಹಿಗಳು ಎನ್ನುವ ಮೂಲಕ ತಾನೊಬ್ಬ ಅಯೋಗ್ಯ ಹಾಗೂ ಭಟ್ಟಂಗಿ ಎಂಬುದನ್ನು ಸಾರಿದ್ದಾರೆ.
ಇಷ್ಟಕ್ಕೂ, ಬಿಜೆಪಿಯ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ಶಾಖೆಗಳಿಂದ ಹೊರಬಂದ ಅಥವಾ ಸಂಘದ ವಿಚಾರಧಾರೆಗಳಿಂದ ಪ್ರೇರಿತರಾದದವರಿಂದ ಇಂಥ ಮಾತುಗಳು ಹೊರಡುವುದು ಆಶ್ಚರ್ಯ ಉಂಟು ಮಾಡುವ ವಿದ್ಯಮಾನವೇ ಅಲ್ಲ. ಗಾಂಧೀಜಿಯವರನ್ನು ಕೊಂದಿದ್ದು ಆರ್ ಎಸ್ ಎಸ್ ಸಿದ್ಧಾಂತದಿಂದ ಪ್ರೇರಿತನಾಗಿದ್ದ ನಾಥೂರಾಮ್ ಗೋಡ್ಸೆ. ಇದೇ ಸಂಘದ ಕೂಸು ಬಿಜೆಪಿ. ಆದ್ದರಿಂದ ಬಿಜೆಪಿ ಹಾಗೂ ಸಂಘದ ವಿಚಾರಧಾರೆಗಳು ಸಹಜವಾಗಿ ಗಾಂಧಿ ವಿರೋಧಿ ಎಂಬುದರಲ್ಲಿ ಕಿಂಚಿತ್ ಅನುಮಾನವಿಲ್ಲ ಎಂಬುದನ್ನು ಇತ್ತೀಚೆಗೆ ನಡೆದಿರುವ ಹಲವು ಬೆಳವಣಿಗೆಗಳು ಸಾಬೀತುಪಡಿಸಿವೆ.
ಕೆಲವು ದಿನಗಳ ಹಿಂದೆ ಆರ್ ಎಸ್ ಎಸ್ ನ ಅಂಗಸಂಸ್ಥೆಯೊಂದು ಗಾಂಧೀಜಿಯನ್ನು ಕೊಂದ ಗೋಡ್ಸೆಗೆ ದೇವಸ್ಥಾನ ನಿರ್ಮಿಸಿದೆ. ತದನಂತರ ಇನ್ನೊಂದು ಹಿಂದೂಪರ ಸಂಘಟನೆ ಗಾಂಧೀಜಿಯವರ ಪೋಸ್ಟರ್ ಗೆ ಪಿಸ್ತೂಲಿನಲ್ಲಿ ಶೂಟ್ ಮಾಡುವ ವಿಡಿಯೋ ತುಣುಕೊಂದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಇದೆಲ್ಲಕ್ಕಿಂತಲೂ ಮಹತ್ತರ ಬೆಳವಣಿಗೆಯೊಂದು ನಡೆದಿದೆ. ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಸದಸ್ಯರಾಗಿ ಚುನಾಯಿತರಾದ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಗಾಂಧಿಯನ್ನು ಕೊಂದ ಗೋಡ್ಸೆಯ ಪರವಾಗಿ ಮಾತನಾಡಿದ್ದರು. ಇದು ದೇಶಾದ್ಯಂತ ಕಿಚ್ಚುಹಬ್ಬಿಸಿತ್ತು. ಆದರೆ, ಆಕೆಯ ವಿರುದ್ಧ ಮೋದಿ-ಶಾ ನೇತೃತ್ವದ ಬಿಜೆಪಿ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇಂಥ ಮೋದಿ ಇಂದು ಗಾಂಧೀಜಿಯ ಮೇಲೆ ಅಪಾರ ಗೌರವ ಹೊಂದಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಗಾಂಧೀಜಿಯ ಮೇಲೆ ಅಭಿಮಾನವಿದ್ದರೆ, ಗಾಂಧೀಜಿ ವಿರುದ್ಧವಾದ ನಿಲುವು ವ್ಯಕ್ತಪಡಿಸಿದ ಶಕ್ತಿಗಳಿಗೆ ಕಟುವಾದ ಶಿಕ್ಷೆ ವಿಧಿಸುವ ಸೂಚನೆ ನೀಡುವ ಮೂಲಕ ತನ್ನ ಬದ್ಧತೆಯನ್ನು ಮೋದಿ ಪ್ರದರ್ಶಿಸುತ್ತಿದ್ದರು.
ಆದರೆ, ಅಂಥ ತೀರ್ಮಾನವನ್ನು ಮೋದಿ ಕೈಗೊಳ್ಳುವುದಿಲ್ಲ. ಬದಲಾಗಿ ಐಕನ್ ಗಳನ್ನು ಹೈಜಾಕ್ ಮಾಡುವ ಮೂಲಕ ರಾಜಕೀಯ ಸಂಕಥನ ಸೃಷ್ಟಿಸುವುದು ಬಿಜೆಪಿಯ ತಂತ್ರ. ಇದರ ಭಾಗವಾಗಿಯೇ ಸ್ವಚ್ಛ ಭಾರತ, ಸರ್ದಾರ್ ಪಟೇಲ್ ಅವರ ಪ್ರತಿಮೆ ನಿರ್ಮಾಣವನ್ನು ರೂಪಿಸಲಾಗಿದಯೇ ವಿನಾ ನೈಜವಾಗಿ ಗಾಂಧೀಜಿ ಕಂಡ ಕನಸನ್ನು ಸಾಕಾರಗೊಳಿಸುವ ಬದ್ಧತೆ ಮೋದಿಯ ಸರ್ಕಾರಕ್ಕೆ ಇಲ್ಲ ಎಂಬುದಕ್ಕೆ ದೇಶದ ಉದ್ದಗಲಕ್ಕೂ ತಾಂಡವವಾಡುತ್ತಿರುವ ಅಸ್ಪೃಶ್ಯತೆ, ಮತಾಂಧತೆಗಳು ಕಣ್ಮುಂದೆ ಇವೆ. ಧರ್ಮಾತೀತವಾಗಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಜೀವನದ ಉದ್ದಕ್ಕೂ ಹೋರಾಡುತ್ತಲೇ ಬಂದ ಗಾಂಧೀಜಿಯವರ 150ನೇ ವರ್ಷಾಚರಣೆ ಮಾಡಲಾಗುತ್ತಿದೆ.

ಆಧುನಿಕ ಭಾರತದ ನಿರ್ಮಾತೃಗಳಾದ ಗಾಂಧೀಜಿ, ಪಂಡಿತ್ ಜವಾಹರಲಾಲ್ ನೆಹರೂ, ಅಂಬೇಡ್ಕರ್ ಅವರ ತೇಜೋವಧೆ ಮಾಡುವ ಪ್ರಕರಣಗಳು ಆರ್ ಎಸ್ ಎಸ್ ಹಾಗೂ ಅದರ ಪ್ರೇರಿತ ಸಂಘ-ಸಂಸ್ಥೆಗಳಿಂದ ನಿರಂತರವಾಗಿ ನಡೆಯುತ್ತಿದೆ. ರಾಜಕೀಯ ಸಮೀಕರಣ ಹೊಂದಿಸಲು ಗಾಂಧೀಜಿ ಹಾಗೂ ಅಂಬೇಡ್ಕರ್ ಬಗ್ಗೆ ಬಹಿರಂಗವಾಗಿ ನಾಜೂಕಿನಿಂದ ಮಾತನಾಡುವ ಸಂಘ-ಪರಿವಾರ ಹಾಗೂ ಬಿಜೆಪಿಯು ಅಂತರಂಗದಲ್ಲಿ ಇವರನ್ನು ತೀವ್ರವಾಗಿ ವಿರೋಧಿಸುತ್ತವೆ. ಬಿಜೆಪಿಯ ಚುನಾಯಿತ ಸಂಸದರು, ಶಾಸಕರು, ಪದಾಧಿಕಾರಿಗಳು ಹಾಗೂ ಆರ್ ಎಸ್ ಎಸ್ ನ ಪ್ರಮುಖರು ಆಗಾಗ್ಗೆ ಸಂವಿಧಾನ ಹಾಗೂ ಮೀಸಲಾತಿಯ ಬಗ್ಗೆ ಆಡುವ ಮಾತುಗಳು ಅಂಬೇಡ್ಕರ್, ಗಾಂಧಿ, ನೆಹರೂ ವಿರುದ್ಧದ ಅಸಹನೆಯನ್ನು ಹೊರಹಾಕುವ ಬಗೆಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ನೆಹರೂ, ಅಂಬೇಡ್ಕರ್ ಹಾಗೂ ಗಾಂಧೀಜಿಯವರ ತೇಜೋವಧೆ ಮಾಡುವ ಕೃತ್ಯ ವ್ಯಾಪಕವಾಗಿದೆ. ಇವರೆಲ್ಲರೂ ಆಡಳಿತ ಪಕ್ಷದ ನಿಲುವು ಹೊಂದಿರುವವರು ಅಥವಾ ಅದರ ಸಮೀಪ ವರ್ತಿಗಳಾಗಿರುವವರೇ ಆಗಿದ್ದಾರೆ. ಇಂಥ ಸೈದ್ದಾಂತಿಕ ನಿಲುವಿನ ಪಕ್ಷದ ನೇತೃತ್ವ ವಹಿಸಿರುವ ಮೋದಿಯವರ ಚಲನವಲನ ನಾಟಕೀಯ ಹಾಗೂ ಅವರ ಪಕ್ಷದ ನಾಯಕರು ಆಡುವ ಮಾತುಗಳು ಆಕಸ್ಮಿಕವಲ್ಲ. ಇದೊಂದು ದೊಡ್ಡ ಪಿತೂರಿಯ ಭಾಗ ಎಂಬ ಕಟು ಸತ್ಯವನ್ನು ಒಪ್ಪಲೇಬೇಕಿದೆ.