“ಕಲಂಕ್ ನೀರ್ ಡ್ ಮೀನ್ ಪತ್ತುನಿ” (ಕಲುಷಿತ ನೀರಲ್ಲಿ ಮೀನು ಹಿಡಿಯುವುದು) ಎಂಬುದು ಕರಾವಳಿಯ ಗಾದೆ ಮಾತು. ಅಮೆರಿಕಾದ ಹೂಡಿಕೆ ನಿರ್ವಹಣಾ ಕಂಪೆನಿ ‘ಮಡ್ಡಿ ವಾಟರ್ಸ್’ ಕೂಡ ಮಾಡಿದ್ದು ಇದನ್ನೇ. ಇದು ಬಾವಗುತ್ತು ರಘುರಾಮ ಶೆಟ್ಟಿ ಅವರ ಕತೆ. ಕೊಲ್ಲಿ ರಾಷ್ಟ್ರಗಳಲ್ಲಿ ದೊಡ್ಡ ಹೆಸರು ಮಾಡಿರುವ ಬಿ.ಆರ್.ಶೆಟ್ಟಿ ಇದೀಗ ದೇಶಕ್ಕೆ ಹಿಂತಿರುಗಿದ್ದಾರೆ. ಶೆಟ್ಟಿ ಅವರೊಂದಿಗೆ ಅವರ ಕಂಪೆನಿ ಪಾಲುದಾರರಾದ ಕೇರಳ ಮಂಘಟ್ ಸಹೋದರರು ಕೂಡ ಭಾರತಕ್ಕೆ ವಾಪಸ್ ಬಂದಿದ್ದಾರೆ.
ಭಾರತದಲ್ಲಿ ಬ್ಯಾಂಕುಗಳಿಗೆ ಉಂಡೆ ನಾಮ ಹಾಕಿದವರು ವಿದೇಶಕ್ಕೆ ಓಡುತ್ತಿದ್ದಾರೆ. ಇಲ್ಲಿ ಬ್ಯಾಂಕುಗಳಿಂದ ದೊಡ್ಡ ಪ್ರಮಾಣದ ಸಾಲ ಪಡಕೊಂಡವರು ಭಾರತಕ್ಕೆ ಓಡಿ ಹೋಗಿದ್ದಾರೆ ಎಂಬ ಮಾತುಗಳು ಕೊಲ್ಲಿ ರಾಷ್ಟ್ರಗಳಿಂದ ಕೇಳಿ ಬಂದಿದೆ. ಬಿ.ಆರ್.ಶೆಟ್ಟಿ ಅವರಿಗೆ ಸೇರಿದ ಎಲ್ಲ ಕಂಪೆನಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವಂತೆ ಎಮಿರೇಟ್ಸ್ ನ ಸೆಂಟ್ರಲ್ ಬ್ಯಾಂಕ್ ಆದೇಶ ನೀಡಿದೆ.
ಮೆಡಿಕಲ್ ರೆಪ್ ಆಗಿ ಅಬುದಾಬಿಗೆ ಹೋಗಿದ್ದ ಬಿ.ಆರ್.ಶೆಟ್ಟಿ ಚೈನ್ ಆಫ್ ಹಾಸ್ಪಿಟಲ್, ದೇಶ ವಿದೇಶಗಳಿಗೆ ಹಣ ವರ್ಗಾಯಿಸುವ ಹಣಕಾಸು ಸಂಸ್ಥೆಗಳನ್ನು ಕಟ್ಟಿರುವುದು ಇದೀಗ ಇತಿಹಾಸ. ಕೇವಲ ಕೊಲ್ಲಿ ರಾಷ್ಟ್ರದಲ್ಲಿ ಮಾತ್ರವಲ್ಲದೆ ಅರ್ಧ ವಿಶ್ವದಲ್ಲೇ ಹೆಸರು ಮಾಡಿರುವ ಆಗರ್ಭ ಶ್ರೀಮಂತ ಬಾವಗುತ್ತು ರಘುರಾಮ ಶೆಟ್ಟಿ ಅವರ ಹಿಂದೆ ಎಮಿರೇಟ್ಸ್ ನ ಹಲವು ಬ್ಯಾಂಕುಗಳು ಕಾನೂನಿನ ಕುಣಿಕೆ ಸಿದ್ಧಪಡಿಸುತ್ತಿವೆ.
ನ್ಯೂ ಮೆಡಿಕಲ್ ಕಂಪೆನಿಯ (NMC) ಆಸ್ಪತ್ರೆ ಸಾಮ್ರಾಜ್ಯವನ್ನು ಅಮೆರಿಕಾದಲ್ಲಿ ಕುಳಿತ ಬಂಡವಾಳ ಹೂಡಿಕೆ ಕಂಪೆನಿಯೊಂದು ವಸ್ತುಶಃ ಬೆತ್ತಲೆ ಮಾಡಿದೆ. ಮಡ್ಡಿ ವಾಟರ್ಸ್ ಎಂಬ ಈ ಕಂಪೆನಿ ಹೆಸರೇ ಹೇಳುವಂತೆ ಸ್ಟಾಕ್ ಎಕ್ಸ್ ಚೇಂಜುಗಳಲ್ಲಿ ಲಿಸ್ಟ್ ಮಾಡಲಾದ ಯಾವ ಕಂಪೆನಿಗಳ ಲೆಕ್ಕ ಪತ್ರಗಳಲ್ಲಿ ಅಪರ ತಪರ ಇರುತ್ತದೆಯೊ ಅವುಗಳನ್ನು ಬಯಲು ಮಾಡುತ್ತದೆ. ಬಯಲು ಮಾಡುವುದು ಮಾತ್ರವಲ್ಲದೆ ತೀರ ಕಡಿಮೆ ದಕ್ಕುವುದಾದರೆ ಅಂತಹ ಕಂಪೆನಿಯ ಶೇರುಗಳನ್ನು ಖರೀದಿಸುತ್ತದೆ ಕೂಡ. ಇದು ʼMuddy watersʼ ಕಂಪೆನಿ ಸ್ಥಾಪಕನ ವ್ಯವಹಾರದ ಮಾದರಿ.
ಬಿ.ಆರ್.ಶೆಟ್ಟಿ ಅವರ ಎನ್ಎಂಸಿ ಕಂಪೆನಿ ಮಾಡಿರುವ ಒಂದು ಟ್ವೀಟ್ ಲಂಡನ್ ಶೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು. ಎನ್ಎಂಸಿಯ ಶೇರು ಬೆಳೆಗಳು ಪಾತಾಳಕ್ಕೆ ಇಳಿಯಿತು. ಅದೇ ಲಂಡನ್ ಶೇರು ಮಾರುಕಟ್ಟೆಯನ್ನು ಉಪಯೋಗಿಸಿಯೇ ಬಿ.ಆರ್.ಶೆಟ್ಟಿ ಮತ್ತಿತರ ಪ್ರವರ್ತಕರು ದೊಡ್ಡ ಪ್ರಮಾಣ ಹಣವನ್ನು ಬಾಚಿಕೊಂಡಿದ್ದರು.
ಅಬುದಾಬಿಯಲ್ಲಿ ವೈದ್ಯಕೀಯ ಮತ್ತು ಹಣಕಾಸು ನಿರ್ವಹಣೆ ಸರಣಿ ಕಂಪೆನಿಗಳನ್ನು ಸ್ಥಾಪಿಸಿ ಅಂದಾಜು ಮೂವತ್ತು ಸಾವಿರ ಕೋಟಿ ರೂಪಾಯಿ ಒಡೆಯನಾಗಿದ್ದರು ಬಾವಗುತ್ತು ರಘುರಾಮ ಶೆಟ್ಟಿ. ನಾಲ್ಕು ದಶಕಗಳ ಹಿಂದೆ ತನ್ನ ಉದ್ಯೋಗ, ಬ್ಯಾಗ್ ಎಲ್ಲವನ್ನು ಕಳಕೊಂಡು ಬರಿಗೈಯಲ್ಲಿದ್ದ ರಘುರಾಮ ಶೆಟ್ಟಿ ಇದೀಗ ಮತ್ತೊಂದು ಪತನವನ್ನು ಕಂಡಿದ್ದಾರೆ. ಉತ್ತುಂಗಕ್ಕೆ ಏರಿದ್ದ ಅವರ ಕಂಪೆನಿಗಳ ಶೇರು ಮೌಲ್ಯ ಕುಸಿದಿದೆ. ಅವರೇ ಕಟ್ಟಿದ್ದ ಸಾಮ್ರಾಜ್ಯದಿಂದ ಹೊರಬಂದಿದ್ದಾರೆ.
ಸಾಮಾನ್ಯ ಮೆಡಿಕಲ್ ರೆಪ್ ಆಗಿ ಅಬುದಾಬಿಯಲ್ಲಿ ಸುತ್ತುತ್ತಿದ್ದ ರಘುರಾಮ ಶೆಟ್ಟಿ ಒಂದು ದಿನ ಕೆಲಸವನ್ನು ಮಾತ್ರವಲ್ಲದೆ ತನ್ನ ಬ್ಯಾಗನ್ನು ಕೂಡ ಕಳಕೊಂಡಿದ್ದರು. ಭಾರತೀಯನೊಬ್ಬನ ಟೀ ಅಂಗಡಿ ಚಹ ಕುಡಿದು “ಇನ್ನು ತಾನು ಮತ್ತೆ ಊರಿಗೆ ಹೋಗುವುದೇ ಗತಿ” ಎಂದಿದ್ದರು. “ಊರಿಗೆ ಹೋಗಿ ಏನು ಮಾಡುತ್ತೀಯ. ಕೆಲಸವೊ, ವ್ಯವಹಾರವೊ ಮಾಡುವುದಾದರೆ ಇಲ್ಲಿಯೇ ಮಾಡು. ಈ ಕೊಲ್ಲಿ ರಾಷ್ಟ್ರದಲ್ಲಿ ಸಾಕಷ್ಟು ಅವಕಾಶ ಇದೆ” ಎಂದ ಅಂಗಡಿಯವನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಶೆಟ್ಟಿ ಅಲ್ಲೆ ನೆಲೆ ನಿಂತರು ಎನ್ನುತ್ತಾರೆ ಅವರ ಆಪ್ತರು.
ಅಬುದಾಬಿಯಲ್ಲಿ ಸರಕಾರದ ವತಿಯಿಂದ ಉಚಿತ ವೈದ್ಯಕೀಯ ಸೌಲಭ್ಯ ದೊರೆಯುತ್ತಿದ್ದ ಕಾಲದಲ್ಲಿ ಬಿ.ಆರ್.ಶೆಟ್ಟಿ ನ್ಯೂ ಮೆಡಿಕಲ್ ಸೆಂಟರ್ ಆರಂಭಿಸಿದ್ದರು. ಶೆಟ್ಟರ ಮಡದಿಯೇ ಆಸ್ಪತ್ರೆಯ ಏಕ ಮಾತ್ರ ವೈದ್ಯೆ. ಮೊದಲಿಗೆ ಮೂವರು ಪೇಷೆಂಟ್ ಬಂದಿದ್ದರು.
ಸರಕಾರದ ವತಿಯಿಂದ ಉಚಿತ ವೈದ್ಯಕೀಯ ಸೇವೆ ದೊರೆಯುತ್ತಿದ್ದರೂ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಇದನ್ನು ಸದುಪಯೋಗ ಪಡಿಸಿಕೊಂಡ ಶೆಟ್ಟಿ ಅಬದಾಬಿಯ ಹಮ್ದಾನ್ ಗಲ್ಲಿಯಲ್ಲಿ ಚಿಕ್ಕದೊಂದು ಬಾಡಿಗೆ ಜಾಗದಲ್ಲಿ ಕ್ಲಿನಿಕ್ ಆರಂಭಿಸಿ ಯಶಸ್ವಿಯದಾರು. ಅದೇ ಕಟ್ಟಡದಲ್ಲಿ ಸಿಂಗಲ್ ಬೆಡ್ ರೂಮ್ ಅಪಾರ್ಟ್ಮೆಂಟಿನಲ್ಲಿ ದಂಪತಿ ವಾಸವಾಗಿದ್ದರು.
ಬಿ.ಆರ್.ಶೆಟ್ಟಿ. ತಮ್ಮ ವಸತಿಯನ್ನು ದುಬಾಯಿಯ ಬುರ್ಜ್ ಖಲೀಫಾಕ್ಕೆ ಶಿಫ್ಟ್ ಮಾಡಿದ್ದರು. ಅತೀ ಎತ್ತರದ ಈ ಕಟ್ಟಡ ಎರಡು ಅಂತಸ್ತುಗಳನ್ನು ಶೆಟ್ಟಿ ಖರೀದಿಸಿದರು. ಮಂಗಳೂರಿನ ಕರಂಗಲಪಾಡಿ – ನಂತೂರು ರಸ್ತೆಯಲ್ಲಿ ಅಲ್ಲಲ್ಲಿ ಇವರದೇ ಆಸ್ತಿ. ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿ ʼಮಹಾಭಾರತʼ ಸಿನಿಮಾ ಮಾಡುವ ಘೋಷಣೆ ಮಾಡಿದ್ದರು. ಅವರು ಸ್ಥಾಪಿಸಿದ ಎನ್ಎಂಸಿ ಹೆಲ್ತ್ ಲಂಡನ್ ಶೇರು ಮಾರುಕಟ್ಟೆಯಲ್ಲಿ ನೋಂದಾವಣಿ ಆಯ್ತು. ಅದು ಅವರ ಬದುಕಿನ ಮತ್ತೊಂದು ಬಹುದೊಡ್ಡ ತಿರುವು.
ಮೂರು ಪೇಷೆಂಟುಗಳೊಂದಿಗೆ ಆರಂಭವಾದ ವೈದ್ಯಕೀಯ ಸೇವೆ ಇದೀಗ ಎಂಟು ರಾಷ್ಟ್ರಗಳಲ್ಲಿ ಹಬ್ಬಿದೆ. ಕೊಲ್ಲಿ ರಾಷ್ಟ್ರಗಳು ಮಾತ್ರವಲ್ಲದೆ, ಬ್ರೆಜಿಲ್, ಇಟಲಿ, ಕೊಲಂಬಿಯ, ಸ್ಪೇಯ್ನ್ , ಡೆನ್ಮಾರ್ಕ್ ದೇಶಗಳಲ್ಲಿ ಒಟ್ಟು 45 ಬೃಹತ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳನ್ನು ಎನ್ಎಂಸಿ ಹೆಲ್ತ್ ಹೊಂದಿದೆ.
ಅಬುದಾಬಿಯಲ್ಲಿ ಬಹು ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ, ಹಲವು ಬಹುರಾಷ್ಟ್ರೀಯ ಕಂಪೆನಿಗಳನ್ನು ಕಟ್ಟಿದ ಉಡುಪಿ ಕಾಪು ಬಾವಗುತ್ತು ರಘುರಾಮ ಶೆಟ್ಟಿ ಇದೀಗ ವಿಶ್ವದ ಬಹುದೊಡ್ಡ ಎನ್ಎಂಸಿ ಹೆಲ್ತ್ ಎಂಬ ವೈದ್ಯಕೀಯ ಕಂಪೆನಿಯಿಂದ ಹೊರನಡೆದಿದ್ದಾರೆ. ಎನ್ಎಂಸಿ ಹೆಲ್ತ್ ಎಂಬ ಬಹುರಾಷ್ಟ್ರೀಯ ಕಂಪೆನಿಯ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಶೆಟ್ಟಿ ರಾಜಿನಾಮೆ ನೀಡಬೇಕಾಯ್ತು.
ಉಡುಪಿ ಜಿಲ್ಲೆಯ ಕಾಪು ಗ್ರಾಮದ ಸಮೀಪದ ಬಾವಗುತ್ತು ಎಂಬಲ್ಲಿಯ ರಘುರಾಮ ಶೆಟ್ಟಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ದುಬಾಯಿಗೆ ಹೋಗಿದ್ದ ವ್ಯಕ್ತಿ, ಅನಂತರ ಬಿಲಿಯಾಧಿಪತಿಯಾಗಿ ಭಾರತ ಸರಕಾರದಿಂದ ʼಪದ್ಮಶ್ರೀʼ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತರು ಕೂಡ.
ಹಲವು ವರ್ಷಗಳ ಹಿಂದೆ ಬಿ.ಆರ್.ಶೆಟ್ಟಿ ಅಬುದಾಬಿಯಲ್ಲಿ ಸ್ಥಾಪಿಸಿದ ‘ನ್ಯೂ ಮೆಡಿಕಲ್ ಸೆಂಟರ್’ ಇದೀಗ ಕಳೆದ ಒಂದೆರಡು ದಶಕಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಕಂಪೆನಿಯಾಗಿ ಬೆಳೆದಿದ್ದು, ಅಮೆರಿಕಾದ ‘ಮಡ್ಡಿ ವಾಟರ್ಸ್’ ಎಂಬ ಹೂಡಿಕೆದಾರ ಕಂಪೆನಿ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ತನ್ನದೇ ಕಂಪೆನಿಯಿಂದ ಹೊರಹಾಕಲ್ಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಪ್ತರಾಗಿರುವ ಮತ್ತು ಮಂಗಳೂರಿನಲ್ಲಿ ತಮ್ಮದೇ ಗೆಳೆಯರ ಬಳಗದ ಬಂಟರ ಸಂಘಟನೆ ಹೊಂದಿರುವ ಬಿ.ಆರ್.ಶೆಟ್ಟಿ ಇದೇ ಮೊದಲ ಬಾರಿಗೆ ಕಳೆದ ನಾಲ್ಕು ದಶಕಗಳ ಅನಂತರ ಮೊದಲ ಬಾರಿಗೆ ಆರ್ಥಿಕ ಮತ್ತು ಕಾರ್ಪೋರೇಟ್ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಮೊದಲ ಬಾರಿ ಕೊಲ್ಲಿ ರಾಷ್ಟ್ರದಲ್ಲಿ ಆರ್ಥಿಕ ಸಂಕಷ್ಟ ಸೂಚನೆ ಬಂದಾಗಲೇ ಶೆಟ್ಟಿ ಅಲ್ಲಿನ ರಾಯಲ್ ಫ್ಯಾಮಿಲಿ ಮೂಲಕ ತನ್ನ ಕಂಪೆನಿಗೆ ಹೂಡಿಕೆ ಮಾಡಿದ್ದರು. ಅನಂತರವೇ ಲಂಡನ್ ಶೇರು ಮಾರುಕಟ್ಟೆ ಪ್ರವೇಶ ಮಾಡಿದ್ದು. ಶೇರು ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಇವರ ಶೇರುಗಳ ಬೆಲೆ ಏರಿಕೆಯಾಯ್ತು. ಶೆಟ್ಟಿ ಮತ್ತು ಕಂಪೆನಿಯ ಇತರ ಹೂಡಿಕೆದಾರರು ಲಾಭ ಮಾಡಿಕೊಂಡರು.
2018ರಲ್ಲಿ ‘ಪೋರ್ಬ್ಸ್’ ಪತ್ರಿಕೆ ಲೆಕ್ಕ ಹಾಕಿದ ಪ್ರಕಾರ ಬಿ.ಆರ್.ಶೆಟ್ಟಿ ಅಂದಾಜು 30,000 ಕೋಟಿ ರೂಪಾಯಿ ಒಡೆಯನಾಗಿದ್ದರು.
ಈಗ ಎಲ್ಲ ಬ್ಯಾಂಕುಗಳು ಶೆಟ್ಟಿ ಮತ್ತವರ ಪಾಲುದಾರರ ವಿರುದ್ಧ ಕಾಗದ ಪತ್ರ ಸಿದ್ಧಪಡಿಸುತ್ತಿವೆ. ಈ ಮಧ್ಯೆ, “ತನಗೆ ಗೊತ್ತಿಲ್ಲದೆ ಕಂಪೆನಿಯ ಉದ್ಯೋಗಿಗಳ ಗುಂಪೊಂದು ವಂಚನೆ ಮಾಡಿದೆ” ಎಂದು ‘ಗಲ್ಫ್ ನ್ಯೂಸ್’ ಪತ್ರಿಕೆಗೆ ಬಿ.ಆರ್.ಶೆಟ್ಟಿ ಹೇಳಿಕೆ ನೀಡಿದ್ದಾರೆ. ಮುಂದೇನಾಗುವುದೊ ಕಾದು ನೋಡಬೇಕಾಗಿದೆ.