ಕರೋನಾ ಸೋಂಕಿನ ಜೊತೆಗೆ ಜೋರಾಗಿ ಕೇಳಿ ಬಂದ ಭಾರತದಲ್ಲಿನ ʼಇಸ್ಲಾಮೋಫೋಬಿಯಾʼ ದೇಶದ ನ್ಯಾಯಾಂಗ ವ್ಯವಸ್ಥೆಗೂ ವಕ್ಕರಿಸಿತೇ? ಹೀಗೊಂದು ಪ್ರಶ್ನೆ ಸಹಜವಾಗಿಯೇ ಮೂಡುತ್ತಿದೆ. ಕಾರಣ, ಇತ್ತೀಚೆಗೆ ದೇಶದ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಗಳಲ್ಲೂ ಕಂಡು ಬರುತ್ತಿರುವ ವ್ಯತಿರಿಕ್ತ ತೀರ್ಪು ಅಥವಾ ನಿರ್ಧಾರಗಳು ದೇಶದ ಅಲ್ಪಸಂಖ್ಯಾತರಲ್ಲಿ ಒಂದು ರೀತಿಯ ಅಭದ್ರತೆ, ತಾರತಮ್ಯದ ಭಾವನೆ ಮೂಡಿಸುತ್ತಿದೆ. ಮೊದಲೇ ಕೇಂದ್ರದಲ್ಲಿ ಅಧಿಕಾರ ಪಡೆದಿರುವ ನರೇಂದ್ರ ಮೋದಿ ನೇತೃತ್ವ ಸರಕಾರ ಮುಸ್ಲಿಮರನ್ನ ಹಣಿಯಲು ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದೆ. ಅಮಿತ್ ಶಾ ರಂತಹವರನ್ನ ಗೃಹ ಸಚಿವರನ್ನಾಗಿಸಿದ ಬಳಿಕ ಅರಾಜಕತೆಯೂ ಸೃಷ್ಟಿಯಾಗಿದೆ ಎನ್ನಬಹುದು. ಅದೆಲ್ಲಕ್ಕೂ ಜಾಸ್ತಿ, ಮೊದಲೇ ʼಮೋದಿ ನೀತಿʼಯಿಂದ ಹದಗೆಟ್ಟು ಹೋಗಿರುವ ಆರ್ಥಿಕ ಪರಿಸ್ಥಿತಿ ಈ ಮಧ್ಯೆ ʼಕರೋನಾʼ ತಂದಿಟ್ಟ ಸಂಕಷ್ಟ. ಆದರೆ ಈ ಎರಡು ವಿಚಾರಗಳಿಂದ ಪಾರಾಗುವ ಬದಲು ಕೇಂದ್ರ ಸರಕಾರ ಅನಗತ್ಯ ಎನಿಸಿಕೊಂಡಿರುವ ʼಹಿಂದುತ್ವʼ ಅಜೆಂಡಾವನ್ನೇ ಕೈಗೆತ್ತಿಕೊಂಡಿದೆ. ಇದೇ ಸರಿಯಾದ ಸಮಯವೆಂದು ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ 2019) ವಿರೋಧಿಗಳನ್ನ ಬಂಧಿಸಿ, ಜೈಲಿಗೆ ಅಟ್ಟುವ ಕೆಲಸ ಮಾಡಿದೆ. ದುರಂತ ಅಂದರೆ ಬಂಧಿತರೆಲ್ಲರ ಮೇಲೆ ಕಠಿಣ ಕಾನೂನುಗಳನ್ನ ಹೇರಲಾಗಿದ್ದು, ಹಾಗೂ ಸರಕಾರವೊಂದು ವ್ಯವಸ್ಥಿತವಾಗಿ ವಿದ್ಯಾರ್ಥಿಗಳ ಭವಿಷ್ಯವನ್ನೇ ಚಿವುಟಿ ಹಾಕುವ ಕೆಲಸದಲ್ಲಿ ನಿರತವಾಗಿದೆ. ಇದಕ್ಕೆ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಪೊಲೀಸ್ ಇಲಾಖೆಯನ್ನ ಸಂಪೂರ್ಣವಾಗಿ ಕೇಂದ್ರ ಸರಕಾರ ಬಳಸಿಕೊಂಡಿವೆ.
ಕಳೆದ ಒಂದು ವಾರದಿಂದ ಸಿಎಎ ವಿರೋಧಿ ಹೋರಾಟಗಾರರ ಬಂಧನ ಅನ್ನೋದು ಲಾಕ್‌ಡೌನ್ ಮಧ್ಯೆಯೂ ಆನ್‌ಲೈನ್‌ಗಳ ಮೂಲಕ ಸುದ್ದಿಯಲ್ಲಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಮಾತ್ರವಲ್ಲದೇ ಭಾರತದಲ್ಲಾದ ಹೋರಾಟ ದಮನ ನೀತಿಯನ್ನ ಲಂಡನ್ ಮೂಲದ ಕೇಂಬ್ರಿಡ್ಜ್, ಆಕ್ಸ್ ಫರ್ಡ್ ನಂತಹ ಯೂನಿವರ್ಸಿಟಿಗಳ ಪ್ರೊಫೆಸರ್ ಗಳು ಸೇರಿದಂತೆ 90 ವಿದ್ವಾಂಸರು ಖಂಡಿಸಿ ಸಹಿ ಮಾಡಿದ್ದರು. ಅಲ್ಲದೇ ಆನ್‌ಲೈನ್ ಅಭಿಯಾನದಲ್ಲಿ ಪಾಲ್ಗೊಳ್ಳುವ ಕುರಿತಾದ ಸುದ್ದಿಯನ್ನ ʼಪ್ರತಿಧ್ವನಿʼಯೂ ವರದಿ ಮಾಡಿತ್ತು. ಆದರೆ ಇದೀಗ ಅದೆಲ್ಲಕ್ಕೂ ಜಾಸ್ತಿ, ಈಶಾನ್ಯ ದೆಹಲಿ ಗಲಭೆ ಸಂಬಂಧ ಬಂಧನವಾಗಿರುವ ಎರಡು ಗುಂಪುಗಳಾಗಿ ಗಮನಿಸಿದಾಗ ಗಲಭೆ ಸಂದರ್ಭ ʼಗನ್ ಪೂರೈಕೆʼ ಮಾಡಿದ್ದ ಬಹುಸಂಖ್ಯಾತ ಧರ್ಮಕ್ಕೆ ಸೇರಿದವನಿಗೆ ಜಾಮೀನು ನೀಡಿದ್ದು, ಇನ್ನೊಂದೆಡೆ ಅದೇ ಕಾಯ್ದೆಯಡಿ ಬಂಧಿತಳಾಗಿರುವ ಸಫೂರಾ ಝರ್ಗಾರ್ ಅನ್ನೋ ಗರ್ಭಿಣಿ ಯುವತಿಗೆ ಇನ್ನೂ ಜಾಮೀನು ನೀಡದೇ ಇರೋದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಸಫೂರಾ ಝರ್ಗಾರ್ ಹಾಗೂ ಮೇ 6 ರಂದು ದೆಹಲಿ ಗಲಭೆ ಪ್ರಕರಣದಡಿ ಬಂಧಿತನಾಗಿ, ಜಾಮೀನು ಪಡೆದ ಮನೀಶ್ ಸಿರೋಹಿ ನಡುವಿನ ನ್ಯಾಯಾಂಗ ತೀರ್ಪಿನಲ್ಲಿ ಸಾಕಷ್ಟು ವ್ಯತ್ಯಾಸ ಕಾಣಬಹುದು. ಕಾರಣ, ಎಪ್ರಿಲ್ 13 ರಂದು ಸಫೂರಾ ಝರ್ಗಾರ್ ಬಂಧಿಸಬೇಕಾದರೆ ಆಕೆಯಿಂದ ಯಾವೊಂದು ಮಾರಕಾಸ್ತ್ರವನ್ನೂ ವಶಕ್ಕೆ ಪಡೆದಿರಲಿಲ್ಲ. ಆದರೆ ಅದೇ ಮನೀಶ್ ಸಿರೋಹಿ ಬಂಧನ ಸಮಯದಲ್ಲಿ 5 ಪಿಸ್ತೂಲ್ ಹಾಗೂ 20 ಸಜೀವ ಗುಂಡುಗಳನ್ನ ವಶಕ್ಕೆ ಪಡೆದಿದ್ದರು. ಇವರಿಬ್ಬರ ಮೇಲೂ ಒಂದೇ ಮಾದರಿಯ FIR ಕೂಡಾ ದಾಖಲಾಗಿತ್ತು. ಭಯೋತ್ಪಾದನಾ ಚಟುವಟಿಕೆ ಹತ್ತಿಕ್ಕುವ UAPA ಕಾಯ್ದೆಯನ್ನೇ ಹೇರಲಾಗಿತ್ತು. ಆದರೆ ಮನೀಶ್ ಸಿರೋಹಿಗೊಂದು ನ್ಯಾಯ, ಗರ್ಭಿಣಿ ಸಫೂರಾ ಝರ್ಗಾರ್ ಗೆ ಒಂದು ನ್ಯಾಯ ಅನ್ನೋದನ್ನ ರಾಷ್ಟ್ರ ರಾಜಧಾನಿಯ ಕೋರ್ಟ್‌ಗಳು ಪ್ರದರ್ಶಿಸಿವೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಭರವಸೆ ಕಳೆದುಕೊಳ್ಳಲು ಇದೊಂದು ಸಣ್ಣ ಉದಾಹರಣೆಯಷ್ಟೇ.
ಇನ್ನು ಸಫೂರಾ ಝರ್ಗಾರ್ ಬಂಧಿಸಿ ವಿಚಾರಣೆ ನಡೆಸುವ ಸಮಯದಲ್ಲಿ ವಕೀಲರಿಗಾಗಲೀ, ಅವರ ಕುಟುಂಬಿಕರಿಗಾಗಲೀ ಯಾವ ಸೆಕ್ಷನ್ ಮೇಲೆ FIR ದಾಖಲಾಗುತ್ತವೆ ಅನ್ನೋದನ್ನ ತಿಳಿಸಿರಲಿಲ್ಲ. ಇಂಟೆರೆಸ್ಟಿಂಗ್ ಅಂದ್ರೆ ದೆಹಲಿ ಗಲಭೆಯ ವಿಚಾರಣೆ ತನಿಖೆ ನಡೆಸಿದ್ದ ಕ್ರೈಂ ಬ್ರಾಂಚ್‌ನ ವಿಶೇಷ ತಂಡ ಜಫ್ರಾಬಾದ್ ರಸ್ತೆ ಸಂಚಾರ ಅಡ್ಡಿ ಪ್ರಕರಣದಡಿ ಬಂಧಿಸಿ ಕರೆದೊಯ್ದಿತ್ತು. ಆ ನಂತರ ಎಪ್ರಿಲ್ 13 ರಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದ ಸಮಯದಲ್ಲಿ ಸಫೂರಾ ಝರ್ಗಾರ್ ಜಾಮೀನು ಅರ್ಜಿ ಪುರಸ್ಕರಿಸಿದ್ದು, ಪರಿಣಾಮ ಬಿಡುಗಡೆಗೊಂಡಿದ್ದರು. ಇನ್ನೇನು ಮನೆ ಸೇರಿ ಕುಟುಂಬದ ಜೊತೆ ಕಾಲ ಕಳೆಯುತ್ತೇನೆ ಎಂದುಕೊಂಡಿದ್ದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯ ಸಂಶೋಧನಾ ವಿದ್ಯಾರ್ಥಿನಿಯನ್ನ ಇನ್ನೊಂದು FIR ಹಾಕಿ ಬಂಧಿಸಲಾಗುತ್ತದೆ. ಹೀಗೆ ಬಂಧನಕ್ಕೀಡಾದ ಸಫೂರಾ ಝರ್ಗಾರ್ ಅದಾಗ 3 ತಿಂಗಳ ಗರ್ಭಿಣಿ ಎಂದು ತಿಳಿದರೂ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಮುನ್ನವೇ ನೇರವಾಗಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಕನಿಷ್ಟ ಪಕ್ಷ ಆಕೆಯ ವಕೀಲರಿಗೂ ಮಾಹಿತಿ ನೀಡಿರಲಿಲ್ಲ. ಹೀಗೆ ಕಣ್ಣಾಮುಚ್ಚಾಲೆ ಆಡಿದ್ದ ಈ ಪ್ರಕರಣದಲ್ಲಿ ಸಫೂರಾ ಪರ ವಕೀಲರು ಎಪ್ರಿಲ್ 21 ರಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ 5 ನಿಮಿಷಗಳ ವಾದ ಆಲಿಸಿದ ನ್ಯಾಯಾಲಯ 5 ನಿಮಿಷದಲ್ಲೇ ಸಫೂರಾ ಜಾಮೀನು ಅರ್ಜಿ ತಿರಸ್ಕರಿಸಿತ್ತು.
Also Read: ತಿಹಾರ್ ಜೈಲಿನಿಂದಲೇ ʼರಂಝಾನ್ʼ ಆರಂಭಿಸುವಂತಾದ CAA ವಿರೋಧಿ ಗರ್ಭಿಣಿ ಹೆಣ್ಣು ಮಗಳು!
ಮಾರ್ಚ್ 6 ರಂದು ದಾಖಲಾದ FIR (FIR 59/2020) ನಲ್ಲಿಯೇ ಸಫೂರಾ ಹಾಗೂ ಮನೀಶ್ ಸಿರೋಹಿ ಹೆಸರು ದಾಖಲಾಗಿತ್ತು. ಆದರೆ ಮನೀಶ್ ಸಿರೋಹಿಗೆ ಜಾಮೀನು ನೀಡಿದ ನ್ಯಾಯಾಲಯ, ಸಫೂರಾ ಝರ್ಗಾರ್ ಗರ್ಭಿಣಿ ಎಂದು ಅರಿತಿದ್ದರೂ ಜಾಮೀನು ನೀಡದಿರಲು ಕಾರಣ ಏನು ಅನ್ನೋದನ್ನ ಕೇಳದೇ ಇರಲು ಸಾಧ್ಯವಾದೀತೆ? ಇನ್ನೂ ಅಚ್ಚರಿ ಅಂದ್ರೆ ಕೋವಿಡ್-19 ಭೀತಿಯಿಂದ ದೆಹಲಿಯ ಪಟಿಯಾಲ ನ್ಯಾಯಾಲಯವು ಮನೀಶ್ ಸಿರೋಹಿಗೆ ಜಾಮೀನು ನೀಡುತ್ತೆ ಅಂತಾದರೆ ಅದೇ ಸೆಕ್ಷನ್‌ನಡಿ ಜೈಲು ಸೇರಿದ, ಅದರಲ್ಲೂ 4 ತಿಂಗಳ ಗರ್ಭಿಣಿಯಾದ ಸಫೂರಾ ಝರ್ಗಾರ್‌ಗೆ ನ್ಯಾಯಾಲಯ ಯಾಕೆ ಜಾಮೀನು ನಿರಾಕರಿಸುತ್ತದೆ? ನ್ಯಾಯಾಂಗದ ಇಬ್ಬಗೆ ನೀತಿಯನ್ನ ಪ್ರಶ್ನಿಸದೇ ಇರಲು ಸಾಧ್ಯವೇ?
ದೆಹಲಿ ಗಲಭೆಗೆ ಪ್ರಚೋದನೆ ನೀಡಿರುವ ಆರೋಪ ಇರುವುದೇ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ದೆಹಲಿ ಬಿಜೆಪಿ ಶಾಸಕ ಕಪಿಲ್ ಮಿಶ್ರಾ ಅವರ ಮೇಲೆ. ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ಹಾಗೂ ಕಪಿಲ್ ಮಿಶ್ರಾ ನಡೆಸಿದ ಸಿಎಎ ವಿರೋಧಿ ಹೋರಾಟಗಾರರ ವಿರುದ್ಧದ ಮೆರವಣಿಗೆ ಇವುಗಳೆಲ್ಲವೂ ದೆಹಲಿ ಗಲಭೆಗೆ ಪ್ರಾಥಮಿಕ ಕಾರಣ ಅನ್ನೋದು ಗೊತ್ತಿದ್ದರೂ ಆಳುವ ಪಕ್ಷದ ಕೈಗೊಂಬೆಯಾಗಿರುವ ಪೊಲೀಸ್ ಇಲಾಖೆ ಈ ನಾಯಕರುಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಬದಲು, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಸಫೂರಾ ಝರ್ಗಾರ್, ಮೀರನ್ ಹೈದರ್, ಶಿಫಾ-ಉರ್-ರೆಹಮಾನ್, ಖಾಲಿದ್ ಸೈಫಿ ಹಾಗೂ ಇಶ್ರತ್ ಜೆಹಾನ್ ಮುಂತಾದವರನ್ನೇ ಟಾರ್ಗೆಟ್ ಮಾಡಿ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ಸಂಚು ನಡೆಸಿ ಫೆಬ್ರವರಿ 23 ರಂದು ಗಲಭೆ ಆರಂಭಿಸಿದ್ದರು ಎಂದು ಆರೋಪಿಸಲಾಗಿದೆ. ಇವರ ಮೇಲೆ IPC ಅನ್ವಯ ಸೆಕ್ಷನ್ 147, 148, 149, 120 (B), 302, 307, 124A (ದೇಶದ್ರೋಹ), 153 A ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಹಾಗೂ UAPA ಅಡಿ ಇನ್ನಿತರ ಸೆಕ್ಷನ್ ಗಳನ್ನ ಹಾಕಲಾಗಿದೆ.

ಆದರೆ ಮನೀಶ್ ಸಿರೋಹಿ ವಿಚಾರಣೆ ನಡೆಸಿದ್ದ ಪೊಲೀಸರು ಪಟಿಯಾಲ ನ್ಯಾಯಾಲಯಕ್ಕೆ ತಮ್ಮ ವಿಚಾರಣೆ ಮುಗಿದಿದ್ದು ಎನ್ನುತ್ತಲೇ ಪಟಿಯಾಲ ಹೌಸ್ ಕೋರ್ಟ್ ಜಾಮೀನು ನೀಡುತ್ತೆ. ಆದರೆ ಸಫೂರಾ ಝರ್ಗಾರ್ ವಿಚಾರದಲ್ಲಿ ಮಾತ್ರ ದೆಹಲಿ ನ್ಯಾಯಾಲಯಗಳು ಜಾಣ ಮೌನ ತಾಳಿದೆಯೇ? ಅನ್ನೋ ಅನುಮಾನ. ಕಾರಣ, ನಾಲ್ಕು ತಿಂಗಳ ಗರ್ಭಿಣಿಗೆ ಬೇಕಿರುವ ಮನೆಯ ವಾತಾವರಣದ ಬದಲು ತಿಹಾರ್ ನಂತಹ ಜೈಲಿನಲ್ಲಿಡುವ ವ್ಯವಸ್ಥೆ ದೇಶದಲ್ಲಿ ನಡೆಯುತ್ತಿದೆ ಎಂದರೆ ಅದರ ಹಿಂದೆ ಕೇಂದ್ರ ಸರಕಾರದ ಅಲ್ಪಸಂಖ್ಯಾತ ದಮನ ನೀತಿ ಎದ್ದು ಕಾಣದೇ ಇರದು. ಆದರೆ ಕೇಂದ್ರ ಸರಕಾರದ ʼಇಸ್ಲಾಮೋಫೋಬಿಯಾʼ ನೀತಿ ನ್ಯಾಯಾಂಗ ವ್ಯವಸ್ಥೆಗೂ ವಕ್ಕರಿಸಿ ಬಿಟ್ಟಿತೇ ಎಂದು ದಿಟ್ಟಿಸಿ ನೋಡಬೇಕಾದ ಸ್ಥಿತಿ ದೇಶಕ್ಕೆ ಬಂದೆರಗಿತೇ ಅನ್ನೋದೆ ನೋವಿನ ಸಂಗತಿ.
 
			
 
                                 
                                 
                                