ಗದಗ ಜಿಲ್ಲಾಡಳಿತ ಮೊದಲಿನಿಂದಲೂ ಕೋವಿಡಾಂತದ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಹರಡುವಿಕೆ ತಡೆಯಲು ಶ್ಲಾಘನೀಯ ಕ್ರಮ ಕೈಗೊಂಡು ಜನಮನ್ನಣೆಗೆ ಪಾತ್ರರಾದರೂ ನಂತರದಲ್ಲಿ 80 ವರ್ಷದ ವೃದ್ಧೆಯ ಬಗ್ಗೆ ಬಂದಾಗ ಲೋಪಗಳ ಹೊರೆ ಹೊರಬೇಕಾಯಿತು. ವೃದ್ಧೆಗೆ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬ ಉತ್ತರ ನೀಡಲು ಜಿಲ್ಲಾಧಿಕಾರಿಗಳು ಹಿಂದೇಟು ಹಾಕಿದ್ದು ನಂತರ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದು ಬಂದು ಹೇಳಬೇಕಾಯಿದು. ಇದು ಯಾಕೆ ಎಂದು ಕೇಳಿದರೆ ಅಧಿಕಾರಿಗಳ ಉತ್ತರ ಮೌನ.
ಒಂದೆ ಕೇಸ್ ಪತ್ತೆಯಾದ ನಂತರ ಟ್ರೇಸಿಂಗ್ ಸಮಿತಿಯವರು ವೃದ್ಧೆ ವಾಸವಾಗಿದ್ದ ಏರಿಯಾ ರಂಗನವಾಡ ಅನ್ನು ಸಂಪೂರ್ಣ ಸೀಲ್ ಮಾಡಿದರೂ ಅಲ್ಲಿನ ಜನರು ಹೊರಗಡೆ ಹೋದ ಕೆಲ ಸಂಗತಿಗಳು ಜಿಲ್ಲಾಡಳಿತವನ್ನು ಮುಜುಗರಕ್ಕೀಡು ಮಾಡಿವೆ. ಒಟ್ಟಿನಲ್ಲಿ ಜಿಲ್ಲಾಡಳಿತ ಸೋಂಕು ತಡೆಯಲು ಜನರನ್ನು ಮೊದಲೇ ಲಾಕ್ ಡೌನ್ ಮಾಡಿದ್ದ ಒಂದು ಸಂಗತಿಯನ್ನು ಬಿಟ್ಟರೆ ಉಳಿದ ವಿಷಯದಲ್ಲಿ ಹಲವು ಲೋಪಗಳಾಗಿವೆ.
ಗದುಗಿನಲ್ಲಿ ಪಾಸಿಟಿವ್ ಕೇಸ್ ಗಳ ಸಂಖ್ಯೆ 5 ಮುಟ್ಟಿದರೂ, ಈ ಊರಿಗೆ ಕೋವಿಡ್-19 ಎಂಬ ಮಾರಿ ಹೇಗೆ ಬಂತು ಎಂಬ ಮೂಲ ಇನ್ನೂ ನಿಗೂಡ ರಹಸ್ಯ! ಟ್ರೇಸಿಂಗ್ ಕಮಿಟಿಯವರಿಗೆ ಈ ರಹಸ್ಯ ಭೇದಿಸಲು ಆಗದೇ ತಲೆನೋವಾಗಿ ಪರಿಣಮಿಸಿದೆ.
ಗದಗಿಗೆ ಕೆಲ ದಿನಗಳ ನಂತರ ಅಂದರೆ ಮಾರ್ಚ್ ನಲ್ಲಿ ಲಾಕ್ ಡೌನ್ ಆದರೂ ಎಪ್ರಿಲ್ 7 ರಂದು ಮೊದಲನೆಯ ಪಾಸಿಟಿವ್ ಕೇಸ್ ಪತ್ತೆಯಾಯಿತು. ಆ ವೃದ್ಧೆ ತೀರಿ ಹೋದ ನಂತರ ಅದರ ಬಗ್ಗೆ ಬಹಳ ಚರ್ಚೆಗಳು ನಡೆದವು. ವೈದ್ಯರ ನಿಗಾದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಆ ವೃದ್ಧೆಯ ಕುಟುಂಬದ ಸದಸ್ಯರಿಗೆ ಕರೋನಾ ಬಂದೇ ಇಲ್ಲ, ಬಂದಿದ್ದರೆ ಹೇಗೆ ಎಂಬ ಮೂಲ ತೋರಿಸಿ ಎಂದು ಪಟ್ಟು ಹಿಡಿದರು. ಎರಡನೆಯ ಪಾಸಿಟಿವ್ ಕೇಸ್ ಬಂದಾಗ ವೃದ್ಧೆಗೆ ಎರಡನೇಯ ಕೇಸ್ ಸಂಪರ್ಕದಿಂದ ಬಂತು ಎನ್ನಲಾಗುತ್ತಿದೆ. ಇದು ಎಷ್ಟು ನಿಜವೋ ಗೊತ್ತಿಲ್ಲ.
ಮುಂದಿನ ದಿನಗಳು ಹೇಗೆ?
ಕೋವಿಡ್-19 ಕೇವಲ ಸರಕಾರದಿಂದ, ಲಾಕ್‌ಡೌನ್ ದಿಂದ, ಚಿಕಿತ್ಸೆಯಿಂದ ನಿಯಂತ್ರಣಕ್ಕೆ ತರಲು ಸಾಧ್ಯವೇ ಇಲ್ಲ. ಇದರ ನಿಯಂತ್ರಣ ಪ್ರತಿಯೊಬ್ಬ ವ್ಯಕ್ತಿಯನ್ನು ಅವಲಂಬಿಸಿದೆ. ಕರೋನಾ ಬರದಂತೆ ಎಚ್ಚರಿಕೆವಹಿಸುವುದೇ ಬಹುದೊಡ್ಡ ಚಿಕಿತ್ಸೆಯಾಗಿದೆ. ಮನೆಯಲ್ಲಿರಬೇಕು, ಸಾಮಾಜಿ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಅನಾವಶ್ಯಕವಾಗಿ ಮನೆಯಿಂದ ಹೊರಗೆ ಹೋಗದಿರಲು ನಿರ್ಧಾರ ಕೈಗೊಳ್ಳಬೇಕು ಮತ್ತು ಕೈ ತೊಳೆಯುವುದು, ಸಾನಿಟೈಜರ್ ಬಳಸುವುದು ಸೇರಿದಂತೆ ಯಾವುದೇ ಮುಲಾಜಿಗೆ ಒಳಗಾಗದೆ ಎಲ್ಲರಿಂದ ದೂರ ಇರುವುದರಿಂದ ಈ ಕರೋನಾ ವೈರಸ್ ನಮ್ಮಿಂದ ದೂರ ಹೋಗಲು ಸಾಧ್ಯ.
ಬರೀ ಪೊಲೀಸ್ ರಿಂದ ಪೋಲಿಗಳನ್ನು ಮಟ್ಟ ಹಾಕಬಹುದೇ ಹೊರತು ಕೋವಿಡ ರಾಕ್ಷಸನನ್ನಲ್ಲ. ಪೊಲೀಸ್ ಅಧಿಕಾರಿಗಳಿಗಿಂತ ಕೆಲವು ಪೇದೆಗಳು ಹಾಗೂ ಹೋಮ್ ಗಾರ್ಡ್ಸ ಗದುಗಿನಲ್ಲಿ ತುಸು ಹೆಚ್ಚೇ ಆಸಕ್ತಿ ತೋರಿ ಜನರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆಂದು ಜನರಿಗೆ ಅನ್ನಿಸತೊಡಗಿದೆ. ಇರಲಿ… ಅದು ಅವರ ಕರ್ತವ್ಯ. ಆದರೆ ವೈದ್ಯರಿಗಿಂತ ಹೆಚ್ಚಿನ ಜವಾಬ್ದಾರಿ ಇವರ ಮೇಲಿದೆ ಎಂಬಂತೆ ಕೆಲವರು ಸಂಯಮ ಕಳೆದುಕೊಂಡು ವರ್ತಿಸಿದ್ದೂ ಇದೆ.
ಗದಗ ಜಿಲ್ಲೆಯಲ್ಲಿ ಮೊದಲು ಯಾವುದೇ ಸೋಂಕಿನ ಪ್ರಕರಣಗಳು ಇರಲಿಲ್ಲ, ನಂತರ ಐದು ಪ್ರಕರಣಗಳು ಪಾಸಿಟಿವ್ ಸಿಕ್ಕಿವೆ. ಒಬ್ಬರು ಮೃತಪಟ್ಟಿದ್ದಾರೆ, ಸುತ್ತಲಿನ ಜಿಲ್ಲೆಗಳು ರೆಡ್ ಝೋನ್‌ಗಳಲ್ಲಿವೆ. ಲಾಕಡೌನ್ ಸಡಿಲಿಕೆಯಿಂದ ಕರೋನಾ ಭಯ, ಆತಂಕ, ಎಚ್ಚರಿಕೆ, ಜಾಗೃತಿ ಡೌನ್ ಆಗಿದ್ದು, ಜನರು ತಿರುಗಾಡಲು ಶುರು ಮಾಡಿದ್ದು, ಜಿಲ್ಲೆಯಲ್ಲಿ 843 ಜನರು ನಿಗಾದಲ್ಲಿರುವುದನ್ನು ಅರಿತಾಗ ಗದಗ ಜಿಲ್ಲೆಗಿಂತ ಗದಗ ಪಟ್ಟಣದಲ್ಲಿ ಮುಂದಿನ ದಿನಗಳು ಹೇಗೆ! ಈ ಚಿಂತೆ ಎಲ್ಲರನ್ನೂ ಕಾಡುತ್ತಲೇ ಇದೆ !!!
ಜಿಲ್ಲೆಯಲ್ಲಿ ಐದು ಜನ ಕರೋನಾ ಸೋಂಕಿರು…
ಕೊವಿಡ್–19 ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರದವರೆಗಿನ ಮಾಹಿತಿಯಂತೆ 1047 ಜನರು ಕರೋನಾ ಶಂಕಿತ ನಿಗಾಕ್ಕೆ ಒಳಗಾಗಿದ್ದು, ಅವರಲ್ಲಿ 203 ಜನರು 28 ದಿನಗಳ ನಿಗಾ ಅವಧಿತನವನ್ನು ಪೂರೈಸಿ ನಿಗಾದಿಂದ ಮುಕ್ತಿ ಪಡೆದಿದ್ದು, ಕರೋನಾ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರು ಪತ್ತೆಯಾಗಿದ್ದು, ಶಂಕಿತರಾಗಿರುವ 843 ಜನರು ನಿಗಾದಲ್ಲಿದ್ದಾರೆಂದು ಜಿಲ್ಲಾಧಿಕಾರಿಗಳ ಮಾಹಿತಿಯಲ್ಲಿ ತಿಳಿದು ಬಂದಿದೆ.
ಸೋಮವಾರದ ವರದಿಯಂತೆ 843 ಜನ ಕರೋನಾ ಶಂಕಿತರಲ್ಲಿ 810 ಜನರು ಮನೆಯಲ್ಲಿಯೇ ಪ್ರತ್ಯೆಕ ನಿಗಾದಲ್ಲಿದ್ದಾರಲ್ಲದೆ ಹೊಸದಾಗಿ ಸೇರಿರುವ 8 ಜನರು ಸೇರಿದಂತೆ ಒಟ್ಟು 33 ಜನರು ಸೌಲಭ್ಯದೊಂದಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆಂದು ಜಿಲ್ಲಾಧಿಕಾರಿಗಳಾದ ಎ0. ಜಿ ಹಿರೇಮಠ ತಿಳಿಸಿದ್ದು, ಕರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ನಾಲ್ಕು ಕರೋನಾ ಸೋಂಕಿತರಲ್ಲಿ ಒಬ್ಬ ವೃದ್ದೆ ಮೃತರಾಗಿದ್ದಾರೆಂದು ತಿಳಿಸಿದ್ದಾರೆ.
ಸೋಂಕಿನ ಪರೀಕ್ಷೆಗಾಗಿ ಹೊಸದಾಗಿ ಸೇರಿರುವ 30 ಜನರು ಸೇರಿದಂತೆ ಇದುವರೆಗೆ 1019 ಜನರ ಮಾದರಿಯಲ್ಲಿ 909 ಮಾದರಿಗಳು ನೆಗೆಟಿವ್ ಬಂದಿದ್ದು 52 ಜನರ ವರದಿಗಳು ತಿರಸ್ಕರಿಸಲಾಗಿದ್ದು 54 ವರದಿಗಳು ಬರಲು ಬಾಕಿ ಇದೆ ಎಂಬುದು ಒಂದು ಕಡೆಯಾದರೆ ಈಗಾಗಲೇ ಜಿಲ್ಲೆಯಲ್ಲಿ P166. P304, P370, P396 ಸೇರಿದಂತೆ ಒಟ್ಟು 4 ಕೋವಿಡ್-19 ಪ್ರಕರಣಗಳು ಕರೋನಾ ಪಾಸಿಟಿವ್ ಸ್ಪಷ್ಟವಾಗಿದ್ದು ಈ ನಾಲ್ಕು ಜನರಲ್ಲಿ P166 ಪ್ರಕರಣದ ವೃದ್ಧೆ ಮೃತಪಟ್ಟಿದ್ದಾರೆ.
ಗದಗ ಜಿಲ್ಲೆಯು ಹಳದಿ ಝೋನ್‌ನಲ್ಲಿ ಇರುವುದು ಒಂದು ಕಡೆಯಾದರೆ, ಗದಗ ಜಿಲ್ಲೆಯ ಸುತ್ತಲೂ ಇರುವ ಧಾರವಾಡ, ಬೆಳಗಾವಿ, ಬಾಗಲಕೋಟೆ ರೆಡ್ ಝೋನ್ನಲ್ಲಿ ಇರುವುದು ಆತಂಕಕಾರಿಯಾಗಿರುವುದರಿಂದ ಗದಗ ಜಿಲ್ಲೆಯ ಜನರು ಬಹಳಷ್ಟು ಎಚ್ಚರವಹಿಸಬೇಕಾದ ಅಗತ್ಯವಿದೆ. 2ನೇ ಹಂತದ ಲಾಕ್‌ಡೌನ್ ಮೇ 3 ರವರೆಗೆ ಮುಂದುವರೆದಿದ್ದರೂ ಸಹ ಕೊಂಚ ಸಡಿಲಿಕೆಯಾಗಿದ್ದು ಭಯ, ಆತಂಕಕ್ಕೆ ಕಾರಣವಾಗಿದೆ ಎಂಬ ಚರ್ಚೆಗಳನ್ನು ಅಲ್ಲಗಳೆಯಲಾರದು !!!