ತಾಯ್ನಾಡ ಭೂಮಿಗಾಗಿ ಲಡಾಖ್ ನ ಗಾಲ್ವಾನ್ ಕಣಿವೆ ಭಾಗದಲ್ಲಿ ಚೀನಾ ಸೈನಿಕರ ನಡುವೆ ಕಾದಾಟ ನಡೆಸಿದ್ದರ ಪರಿಣಾಮ ಭಾರತೀಯ 20 ಯೋಧರು ವೀರಮರಣವನ್ನಪ್ಪಿದ್ದಾರೆ. ವರದಿ ಅನ್ವಯ ಭಾರತದ 60sq KM ಜಾಗವನ್ನ ಚೀನಾ ಅತಿಕ್ರಮಿಸಿದೆ ಎನ್ನಲಾಗಿದೆ. ಆದರೆ ಇನ್ನೊಂದೆಡೆ ಆಳುವ ನರೇಂದ್ರ ಮೋದಿ ಸರಕಾರವು ಚೀನಾ ಮೂಲದ ನಿರ್ಮಾಣ ಕಂಪೆನಿ ಶಾಂಘೈ ಟನಲ್ ಇಂಜಿನಿಯರಿಂಗ್ ಕಂಪೆನಿ ಲಿಮಿಟೆಡ್ (STEC) ಜೊತೆ ಜೂನ್ 12 ರಂದು 1126 ಕೋಟಿ ರೂಪಾಯಿಯ ಗುತ್ತಿಗೆಗೆ ಅನುಮತಿ ನೀಡಿದೆ.
ಭಾರತ ಸರಕಾರದ ಜಂಟಿ ಕಂಪೆನಿಯಾಗಿರುವ ನ್ಯಾಶನಲ್ ಕ್ಯಾಪಿಟಲ್ ರೀಜಿನ್ ಕಾರ್ಪೊರೇಶನ್ (NCRTC) ವರದಿ ಪ್ರಕಾರ, ದೆಹಲಿ, ಹರಿಯಾಣ, ರಾಜಸ್ತಾನ ಹಾಗೂ ಉತ್ತರ ಪ್ರದೇಶ ಮುಂತಾದೆಡೆ ಕ್ಷಿಪ್ರ ಸಾರಿಗೆ ವ್ಯವಸ್ಥೆ ಕಲ್ಪಿಸಲು STEC ಕಡಿಮೆ ಬಿಡ್ಡಿಂಗ್‌ಗೆ ವಹಿಸಿಕೊಂಡಿದ್ದಾಗಿ ತಿಳಿಸಿದೆ. ದೆಹಲಿ-ಮೀರತ್ ನಡುವಿನ ನ್ಯೂ ಅಶೋಕ್ ನಗರ ಹಾಗೂ ಸಾಹಿಬಾಬಾದ್ ನಡುವೆ 5.6 ಕಿಲೋ ಮೀಟರ್ ಉದ್ದದ ಅಂಡರ್ ಗ್ರೌಂಡ್ ರಸ್ತೆ ನಿರ್ಮಿಸಲಿದೆ.
ದೆಹಲಿ-ಮೀರತ್ ನಡುವಿನ RRTS ಮಾದರಿಯಡಿ ನಡೆಯುವ 82.15 ಕಿಲೋ ಮೀಟರ್ ಉದ್ದದ ಸಂಪರ್ಕ ವ್ಯವಸ್ಥೆಯಲ್ಲಿ ಸೆಮಿ ಹೈಸ್ಪೀಡ್ ರೈಲು ಕಾರಿಡಾರ್ ಇದ್ದು 2025 ರ ವೇಳೆಗೆ ಅದು ಪೂರ್ಣಗೊಳ್ಳುವ ಭರವಸೆಯಿದೆ. ಅಲ್ಲದೇ NCRTC ವರದಿ ಪ್ರಕಾರ, ಈ ಕಾರಿಡಾರ್ ನಲ್ಲಿ ರ್ಯಾಪಿಡ್ ರೈಲು 160 ಕಿಲೋ ಮೀಟರ್ ಚಲಿಸಲಿದೆ ಅಂತಾ ಹೇಳಲಾಗಿದೆ. ಅರ್ಥಾತ್, ದೆಹಲಿ-ಮೀರತ್ ನಡುವಿನ ರ್ಯಾಪಿಡ್ ರೈಲು ಕೇವಲ 62 ನಿಮಿಷಗಳಲ್ಲಿ ತನ್ನ ಗುರಿಯನ್ನ ತಲುಪಲಿದೆ.
ಆದರೆ ಈ ಮಧ್ಯೆಯೇ ಲಡಾಖ್ ನಲ್ಲಿ ಗಡಿ ವಿಚಾರವಾಗಿ ಗಾಲ್ವಾನ್ ಕಣಿವೆಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದು, ಸೇನಾಧಿಕಾರಿ ಮಟ್ಟದ ಸಭೆಗಳು ನಡೆದಿದ್ದವು. ಆದರೆ ಅದ್ಯಾವುದೂ ಫಲ ಕಾಣದೇ, ಇದೀಗ ಏಕಾಏಕಿ ಸಂಘರ್ಷದ ಹಾದಿ ಹಿಡಿದಿದೆ. ಆದರೆ ಕಾಮಗಾರಿ ಒಪ್ಪಂದಗಳಿಗೆ ಅನುಮತಿ ನೀಡಿದ್ದ ಮೋದಿ ಸರಕಾರ, ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ಯಾವುದೇ ಚರ್ಚೆಗೆ ಮುಂದಾಗಿರಲಿಲ್ಲ.
ವಿಶ್ಲೇಷಕ ಬ್ರಹ್ಮ ಚೆಲ್ಲಾನಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, “ಲಡಾಖ್ ಪ್ರದೇಶವನ್ನ ಚೀನಾ ಒಂದೂವರೆ ತಿಂಗಳ ಹಿಂದೆಯೇ ಅತಿಕ್ರಮಿಸಿಕೊಂಡಿದೆ. ಆದರೆ ಭಾರತ ಸರಕಾರ ಇತರ ವಿಚಾರಗಳಿಗಷ್ಟೇ ಆದ್ಯತೆ ನೀಡುತ್ತಿತ್ತು. ಚೀನಾದ ಆಕ್ರಮಣವನ್ನ ರಕ್ಷಣಾ ಸಚಿವರು “ವಿವಾದ” ಎನ್ನುವ ಲೇಬಲ್ ಹಚ್ಚುತ್ತಿರುವುದೇ ಅದಕ್ಕೊಂದು ಉದಾಹರಣೆ” ಎಂದಿದ್ದಾರೆ.
ಇನ್ನು ಚೀನಾ ದಾಳಿಯನ್ನ ಖಂಡಿಸಿರುವ RSS ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ (SJM) ಚೀನಾ ಜೊತೆ ನಡೆಸಿರುವ ಒಪ್ಪಂದವನ್ನ ಕೈ ಬಿಡುವಂತೆ ಪ್ರಧಾನಿ ನರೇಂದ್ರ ಮೋದಿಯನ್ನ ಒತ್ತಾಯಿಸಿದೆ. ಮಾತ್ರವಲ್ಲದೇ SJM ಸಹ-ಸಂಚಾಲಕ ಅಶ್ವನಿ ಮಹಾಜನ್, ಚೀನಾ ಕಂಪೆನಿ ಜೊತೆ ಮಾಡಿರುವ ಬಿಡ್ ಅನ್ನ ಕೈ ಬಿಡುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ. ಮಾತ್ರವಲ್ಲದೇ ದೇಶೀಯ ಕಂಪೆನಿಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ.