ಕರೋನಾ ಎಂಬ ಕಂಡುಕೇಳರಿಯದ ಕಷ್ಟದಿಂದ ಹೊರಬರಲು ಕೇಂದ್ರ ಸರ್ಕಾರ ದೇಶದ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರ 2 ವರ್ಷದ ಸಂಸದರ ನಿಧಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಮೂಲಕ ಕೇಂದ್ರ ಸರ್ಕಾರ ತನ್ನ ಬೊಕ್ಕಸ ಬರಿದಾಗಿದೆ ಎಂಬ ಸಂಗತಿಯನ್ನು ಬಹಳ ಸ್ಪಷ್ಟವಾಗಿ ಒಪ್ಪಿಕೊಂಡಿದೆ. ಅಲ್ಲದೆ ಕೇಂದ್ರ ಸರ್ಕಾರ ಖಾಲಿ ಖಜಾನೆಯೊಂದಿಗೆ ಕರೋನಾ ಎಂಬ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದೆ ಮತ್ತು
ಕೇಂದ್ರ ಸರ್ಕಾರದ ಭಾಗವಾಗಿರುವ ಸಂಸದರು ಖಾಲಿ ಕೈ ಇಟ್ಟುಕೊಂಡು ಮುಂದಿನ ಎರಡು ವರ್ಷ ತಮ್ಮ ಕ್ಷೇತ್ರಗಳ ಕರೋನೋತ್ತರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬ ಮತ್ತೆರಡು ‘ಹಾರ್ಡ್ ರಿಯಾಲಿಟಿ’ಗಳು ಬಯಲಾಗಿವೆ.
ಈಗ ಕೇಂದ್ರ ಸಚಿವ ಸಂಪುಟ ಸಭೆ ಕೇವಲ ಸಂಸದರ ನಿಧಿಯನ್ನು 2 ವರ್ಷಗಳ ಮಟ್ಟಿಗೆ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರಕ್ಕೆ ಮಾತ್ರ ಅಸ್ತು ಎಂದಿಲ್ಲ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿಗಳಿಗೆ ಒಂದು ವರ್ಷದವರೆಗೆ ಸಂಬಳ ಕೊಡುವುದಿಲ್ಲ. ಲೋಕಸಭೆಯ 543 ಮತ್ತು ರಾಜ್ಯಸಭೆಯ 245 ಸದಸ್ಯರಿಗೂ ಪೂರ್ತಿ ಸಂಬಳ ಕೊಡುವುದಿಲ್ಲ. ಅವರ ಸಂಬಳದಲ್ಲಿ (ತಿಂಗಳಿಗೆ ಒಂದು ಲಕ್ಷ ರೂಪಾಯಿ) ಶೇಕಡ 30ರಷ್ಟು ಹಣವನ್ನು ಕಡಿತ ಮಾಡಲಾಗುವುದು, ಮಾಜಿ ಸಂಸದರ ನಿವೃತ್ತಿ ವೇತನದಲ್ಲೂ ಶೇಕಡ 30ರಷ್ಟು ಕಡಿಮೆ ಮಾಡಲಾಗುವುದು ಎಂದು ನಿರ್ಧರಿಸಿದೆ. ಇದು ಸುಲಭಕ್ಕೆ ತೆಗೆದುಕೊಂಡ ನಿರ್ಧಾರವಂತೂ ಅಲ್ಲವೇ ಅಲ್ಲ. ಆದರೂ ತೆಗೆದುಕೊಳ್ಳಲಾಗಿದೆ ಎಂದರೆ ಅದಕ್ಕೆ ಬಲವಾದ ಕಾರಣಗಳು ಇರಲೇಬೇಕು.
ಲಾಕ್‌ಡೌನ್ ಏಪ್ರಿಲ್ 14ನೇ ತಾರೀಖು ಮುಗಿದುಹೋಗುತ್ತದೆಯೋ ಅಥವಾ ಇನ್ನೂ ಮುಂದುವರೆಯುತ್ತದೆಯೋ ಎಂಬ ಬಗ್ಗೆ ನಾನಾ ನಮೂನೆಯ ಸುದ್ದಿಗಳು ಹರಿದಾಡುತ್ತಿವೆ. ಜನರಿಗೆ ವದಂತಿಯಾಗಿ ಕಾಡುತ್ತಿರುವ ಈ ಸಂಗತಿ ಕೇಂದ್ರ ಸರ್ಕಾರಕ್ಕೆ ಜಿಜ್ಞಾಸೆಯಾಗಿ ಪರಿಣಮಿಸಿದೆ. ಸದ್ಯ ಕರೋನಾ ಸೋಂಕು ಹರಡುತ್ತಿರುವ ಪ್ರಮಾಣ, ವಿಶ್ವ ಆರೋಗ್ಯ ಸಂಸ್ಥೆ ನೀಡುತ್ತಿರುವ ಎಚ್ಚರಿಕೆ, ವೈದ್ಯಕೀಯ ಕ್ಷೇತ್ರದ ಮೇಧಾವಿಗಳು ನೀಡುತ್ತಿರುವ ಸಲಹೆ ಹಾಗೂ ಕರೋನಾದಿಂದ ಕಂಗೆಟ್ಟುಹೋಗಿರುವ ಇತರೆ ರಾಷ್ಟçಗಳ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಲಾಕ್‌ಡೌನ್ ಅನ್ನು ಮುಂದುವರೆಸುವುದು ಅನಿವಾರ್ಯ. ಏಕೆಂದರೆ ಸದ್ಯ ಕರೋನಾ ದೇಶದಲ್ಲಿ ಯಾವ ಹಂತದಲ್ಲಿದೆ? ಕಮ್ಯುನಿಟಿ ಸ್ಪೆçಡ್ ಆಗಿದೆಯೋ ಇಲ್ಲವೋ? ಏಪ್ರಿಲ್ 14ರ ಬಳಿಕ ಕರೋನಾ ಸೋಂಕು ಹರಡುವಿಕೆ ಕ್ರಮೇಣವಾಗಿ ಕ್ಷೀಣಿಸುತ್ತದೆಯೋ ಇಲ್ಲವೋ ಎಂಬ ವಿಷಯಗಳು ಊಹೆಗೆ ನಿಲುಕಲಾರದ ಸಂಗತಿಗಳಾಗಿವೆ. ಈ ಹಂತದಲ್ಲಿ ಲಾಕ್‌ಡೌನ್ ಬ್ರೇಕ್ ಮಾಡುವ ಮೂಲಕ ತಹಬದಿಯಲ್ಲಿರುವ ಸೋಂಕನ್ನು ಸರ್ಕಾರವೇ ಹರಡಲು ಬಿಟ್ಟಂತೆ ಆಗಿಬಿಡಬಹುದು ಎಂಬ ಆತಂಕ ಕೇಂದ್ರ ಸರ್ಕಾರವನ್ನು ಕಾಡುತ್ತಿದೆ.
ಇದು ಒಂದು ರೀತಿಯ ಸಮಸ್ಯೆಯಾದರೆ, ಪಾತಾಳಮುಖಿಯಾಗಿರುವ ದೇಶದ ಈಗಿನ ಆರ್ಥಿಕ ಸ್ಥಿತಿಯಲ್ಲಿ ಲಾಕ್‌ಡೌನ್ ಮುಂದುವರೆಸಿದರೆ ಆರ್ಥಿಕತೆ ಮೇಲೆ ಮತ್ತಷ್ಟು ಪೆಟ್ಟು ಬೀಳಬಹುದು. ಹಣಕಾಸಿನ ವ್ಯವಹಾರಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲಹೆ-ಮಾರ್ಗದರ್ಶನ ಮಾಡುವ ನೀತಿ ಆಯೋಗ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಎರಡೂ ಕೂಡ ಲಾಕ್‌ಡೌನ್ ಮುಂದುವರೆಸಿದರೆ ‘ಗಾಯಗೊಂಡಿರುವ ದೇಶದ ಆರ್ಥಿಕತೆ ಮೇಲೆ ಬರೆ ಎಳೆದಂತಾಗುತ್ತದೆ’ ಎಂಬುದಾಗಿ ಎಚ್ಚರಿಸಿವೆ. ಈಗ ಕರೋನಾ ಸೋಂಕು ಹರಡುವುದನ್ನು ತಡೆಯಲು ಕೈಗೊಂಡ ಮಾರ್ಗಗಳು, ವೈದ್ಯಕೀಯ ವೆಚ್ಚಗಳು ಮತ್ತು ಇದರಿಂದ ಪರೋಕ್ಷವಾಗಿ ಆಗುತ್ತಿರುವ ದುಷ್ಪರಿಣಾಮಗಳಿಗೆ ಹಣ ವಿನಿಯೋಗಿಸುವುದು ಒಂದು ಆಯಾಮ. ಕರೋನಾ ಸೋಂಕು ಹರಡುವಿಕೆ ಇನ್ನಿಲ್ಲವಾದ ಬಳಿಕವೂ ಲಾಕ್‌ಡೌನ್‌ನಿಂದ ಆಗಲ್ಪಡುವ ದುಷ್ಪರಿಣಾಮಗಳಿಗೆ ಮುಖಾಮುಖಿಯಾಗಲು ಅಣಿಯಾಗಬೇಕಿರುವುದು ಇನ್ನೊಂದು ಆಯಾಮ. ಉದಾಹರಣೆಗೆ ಉತ್ಪಾದಕನಿಂದ ಗ್ರಾಹಕನವರೆಗಿನ ಸರಪಳಿಯಲ್ಲಿ ಆಗುವ ಅಸಮತೋಲನ, ಉತ್ಪಾದನೆ ಮತ್ತು ಬೇಡಿಕೆಯಲ್ಲಿ ಉಂಟಾಗುವ ಅಸಮತೋಲನ, ಔದ್ಯೋಗಿಕ ಕ್ಷೇತ್ರದಲ್ಲಿ ಆಗುವ ಕುಸಿತಗಳೆಲ್ಲವನ್ನೂ ನಿಭಾಯಿಸಬೇಕು. ಲಾಕ್‌ಡೌನ್ ಅನ್ನು ಮುಂದುವರೆಸಿದಷ್ಟೂ ಈ ಎಲ್ಲಾ ಸಂಕಷ್ಟಗಳು ದುಪ್ಪಟ್ಟಾಗುತ್ತಲೇ ಇರುತ್ತವೆ.
ಇಂಥ ಜಿಜ್ಞಾಸೆಯಲ್ಲಿರುವ ಕೇಂದ್ರ ಸರ್ಕಾರ ಕಡೆಗೂ ಸಂಪನ್ಮೂಲ ಹೊಂದಿಸಿಕೊಳ್ಳಲು ವಿಧಿಯಿಲ್ಲದೆ ಸಂಸದರ ನಿಧಿಯನ್ನು ನುಂಗಿಹಾಕಲು ಹೊರಟಿದೆ. ಓರ್ವ ಸಂಸದನಿಗೆ ವರ್ಷಕ್ಕೆ 5 ಕೋಟಿ ರೂಪಾಯಿ ಸಂಸದರ ಅನುದಾನ ಇರುತ್ತದೆ. ಲೋಕಸಭೆಯ 543 ಮತ್ತು ರಾಜ್ಯಸಭೆಯ 245 ಸದಸ್ಯರೆಂದರೆ ಒಟ್ಟು 788 ಸಂಸದರು. ಇವರೆಲ್ಲರಿಂದ ವರ್ಷಕ್ಕೆ 3,940 ಕೋಟಿ ರೂಪಾಯಿ ಅನುದಾನ ಇರುತ್ತದೆ. 2 ವರ್ಷಕ್ಕೆ 7,880 ಕೋಟಿ ರೂಪಾಯಿ ಅನುದಾನ ಇರುತ್ತದೆ. ಈ ಬೃಹತ್ ಹಣಕ್ಕೆ ಹೋಲಿಸಿಕೊಂಡರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿಗಳ ಸಂಬಳ, ಸಂಸದರ ಸಂಬಳದಲ್ಲಿ ಶೇಕಡ 30ರಷ್ಟು ಹಾಗೂ ಮಾಜಿ ಸಂಸದರ ನಿವೃತ್ತಿ ವೇತನದಲ್ಲಿ ಶೇಕಡ 30ರಷ್ಟು ಕಡಿಮೆ ಮಾಡುವುದು ದೊಡ್ಡ ಮೊತ್ತವಾಗುವುದಿಲ್ಲ.
ದೇಶದ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯಲು ವಿತ್ತೀಯ ಕೊರತೆಯಲ್ಲಾಗುವ ವ್ಯತ್ಯಾಸಗಳೇ ಪ್ರಮುಖ ಮಾನದಂಡ. ಸದ್ಯ ಭಾರತದ ವಿತ್ತೀಯ ಕೊರತೆ ಏರುಮುಖವಾಗಿದೆ. ಇದರಿಂದ ದೇಶದ ಹಣಕಾಸಿನ ಪರಿಸ್ಥಿತಿ ಪಾತಾಳಮುಖಿಯಾಗಿದೆ ಎಂಬುದು ನಿಖರವಾಗಿ ಗೋಚರಿಸುತ್ತಿದೆ. ಆದರೂ ಕೇಂದ್ರ ಸರ್ಕಾರ ಅತಾರ್ಥ್ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿರಲಿಲ್ಲ. ಕರೋನಾವನ್ನು ಮೂರನೇ ಮಹಾಯುದ್ದವೆಂದು ಬಣ್ಣಿಸಿದ ಸಂದರ್ಭದಲ್ಲೂ ಮೋದಿ ವಿಶೇಷ ಪ್ಯಾಕೇಜ್ ಘೋಷಿಸುವ ಧೈರ್ಯ ತೋರಿರಲಿಲ್ಲ. ಕಡೆಗೆ ಅನಿವಾರ್ಯವಾಗಿ ಅಳೆದು-ತೂಗಿ 1.7 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಇದೊಂಥರ ಹಾಲಿ ಯೋಜನೆಗಳಿಗೆ, ಹಣ ಪಾವತಿ ಮಾಡದೇ ಇದ್ದ ಯೋಜನೆಗಳಿಗೆ, ಹಣ ಕೊಡಲೇಬೇಕಿರುವ ಯೋಜನೆಗಳಿಗೆ ಒಂದೇ ಬಾರಿಗೆ ಹಣ ಕೊಟ್ಟು ಕೈತೊಳೆದುಕೊಳ್ಳುವ ವಿಶೇಷ ಪ್ಯಾಕೇಜ್. ಹೀಗೆ ಮಾಡುವ ಮೂಲಕ ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಬುದ್ದಿವಂತಿಕೆಯನ್ನು ಮಾತ್ರ ಪ್ರದರ್ಶಿಸಿರಲಿಲ್ಲ. ಪರೋಕ್ಷವಾಗಿ ತಮ್ಮ ಸರ್ಕಾರದ ಹಣಕಾಸಿನ ಸ್ಥಿತಿ ದೈನೇಸಿಯಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದರು. ಈಗ ಸಂಸದರ ನಿಧಿಯನ್ನು ನುಂಗುವ ಮೂಲಕ ಪ್ರತ್ಯಕ್ಷವಾಗಿಯೇ ಒಪ್ಪಿಕೊಂಡಿದ್ದಾರೆ. ಅಥವಾ ಆ ಕೆಲಸವನ್ನು ಹಂತಹಂತವಾಗಿ ಮಾಡಿದ್ದಾರೆ.
ಹೌದು, ಕರೋನಾ ಎಂಬ ಕಡುಕಷ್ಟದ ವಿರುದ್ಧ ಹೋರಾಡಿ ಜಯಿಸಲು ಕೆಲವು ತ್ಯಾಗಗಳು ಅಗತ್ಯ. ಆದರೆ ಈಗಾಗಲೇ ಹೇಳಿದಂತೆ ತಮ್ಮ
ಕ್ಷೇತ್ರಗಳಲ್ಲಿ ಕರೋನೋತ್ತರವಾಗಿ ಉದ್ಭವಿಸುವ ಸಮಸ್ಯೆಗಳನ್ನು ಸಂಸದರಾದವರು ಖಾಲಿ ಕೈ ಇಟ್ಟುಕೊಂಡು ನಿರ್ವಹಿಸುವುದಾದರೂ ಹೇಗೆ? ರಾಜ್ಯಸಭಾ ಸದಸ್ಯರನ್ನು ಬಿಡಿ, ಲೋಕಸಭಾ ಸದಸ್ಯರಿಗೆ ಇದು ನಿಜಕ್ಕೂ ಭರಿಸಲಾರದ ಹೊರೆಯಾಗಲಿದೆ. ಕೇಂದ್ರ ಸರ್ಕಾರ ಕರೋನಾಗೆ ಘೋಷಿಸಿರುವುದು 1.7 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್. ಹಾಗೆಂದ ಮಾತ್ರಕ್ಕೆ ಕರೋನಾ ಎಂಬ ಜಾಗತಿಕ ಪಿಡುಗಿನ ಹುಟ್ಟಡಗಿಸಲು ಅಷ್ಟು ಮಾತ್ರದ ಮೊತ್ತ ಸಾಕು ಎಂದಲ್ಲ. ಅದಲ್ಲದೆ ಪರೋಕ್ಷಾಗಿ ಬರುವ ಖರ್ಚುಗಳನ್ನು ತುಂಬಿಕೊಳ್ಳಲು ಮತ್ತು ದುಷ್ಪರಿಣಾಮಗಳನ್ನು ನಿಭಾಯಿಸಲು ಮತ್ತೊಂದಷ್ಟು ಲಕ್ಷ ಕೋಟಿ ರೂಪಾಯಿಗಳನ್ನು ಸುರಿಯಬೇಕಾಗುತ್ತದೆ. ಇದೇ ರೀತಿಯಲ್ಲಿ ಸಂಸದರಾದವರು ತಮ್ಮ ಸಂಸದರ ನಿಧಿಯಿಂದ ಮಾತ್ರವಲ್ಲದೆ, ಕೇಂದ್ರ ಸರ್ಕಾರದ ಬೇರೆ ಬೇರೆ ಯೋಜನೆಗಳನ್ನು ತಮ್ಮ ಕ್ಷೇತ್ರಗಳಿಗೆ ಕೊಂಡೊಯ್ಯಬೇಕು. ಆಗ ಮಾತ್ರ ಅವರು ಕೂಡ ಕ್ಷೇತ್ರಾಭಿವೃದ್ಧಿ ಮಾಡಲು ಸಾಧ್ಯ.
ಆದರೀಗ ಒಂದು ಅರ್ಥದಲ್ಲಿ ಸಂಸದರ ಮೂಲಭೂತ ಹಕ್ಕಾದ ಕ್ಷೇತ್ರಾಭಿವೃದ್ಧಿಯ ಅನುದಾನವನ್ನೇ ಅಪೋಶನ ತೆಗೆದುಕೊಳ್ಳಲಾಗಿದೆ. ಕರೋನೋತ್ತರ ಸಂಕಷ್ಟಗಳು ನೇರವಾಗಿ ಕೇಂದ್ರ ಸರ್ಕಾರವನ್ನು ಮಾತ್ರ ಬಾಧಿಸುವುದಿಲ್ಲ. ಸಂಸದರಿಗೂ ಆ ಬಿಸಿ ತಟ್ಟಲಿದೆ. ಖಾಲಿ ಕೈ ಇಟ್ಟುಕೊಂಡು ಯಾವ ರೀತಿ ಕ್ಷೇತ್ರಾಭಿವೃದ್ಧಿ ಮಾಡಬೇಕು? ಕರೋನಾದಿಂದ ಹೊರತಾದ ಸಮಸ್ಯೆಗಳನ್ನು ಯಾವ ರೀತಿ ಪರಿಹರಿಸಬೇಕು? ಎಂದು ಅಣಿಯಾಗುವುದೇ ಸದ್ಯ ಸಂಸದರ ಮುಂದಿರುವ ದೊಡ್ಡ ಸವಾಲು.