ರಾಜ್ಯದಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಮಡಿಕೇರಿ, ಮಲೆನಾಡು, ಕರಾವಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿಯಾಗಿ ಮಳೆ ಸುರಿಯುತ್ತಿದೆ. ಮಡಿಕೇರಿ, ಚಿಕ್ಕಮಗಳೂರು ಭಾಗದಲ್ಲಿ ಗುಡ್ಡ ಕುಸಿತ ಉಂಟಾಗುತ್ತಿವೆ. ಕರಾವಳಿಯಲ್ಲಿ ಕಡಲ್ಕೊರೆತ ತಲೆಬಿಸಿ ತಂದಿದೆ. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು ಜನರಿಗೆ ಸಂಕಷ್ಟ ಎದುರಾಗುವ ಎಲ್ಲಾ ಸಾಧ್ಯತೆಗಳು ಇದೆ. ಈ ನಡುವೆ ಇಡೀ ರಾಜ್ಯಾದ್ಯಂತ ಹಲವೆಡೆ ಮನೆಗಳು ಧ್ವಂಸವಾಗಿವೆ.
ಕರೋನಾ ಸೋಂಕಿಗೆ ತುತ್ತಾಗಿರುವ ಸಿಎಂ ಬಿ.ಎಸ್ ಯಡಿಯೂರಪ್ಪ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಕರೋನಾ ಸೋಂಕಿನ ನಡುವೆಯೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಜ್ಯದ ಜನರ ಹಿತಕ್ಕಾಗಿ ಕೂಡಲೇ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರು ಧಾವಿಸಿ, ಅಲ್ಲಿನ ಸಮಸ್ಯೆ ಬಗ್ಗೆ ಕೂಡಲೇ ಕ್ರಮಕೈಗೊಳ್ಳಿ ಎಂದು ಸೂಚಿಸಿದ್ದರು. ಮಡಿಕೇರಿಯಲ್ಲಿ ಗುರುವಾರ ಗುಡ್ಡ ಕುಸಿತ ಉಂಟಾಗಿದ್ದರೂ ಶನಿವಾರ ತೆರಳುತ್ತೇನೆ ಎಂದು ಹೇಳಿಕೆ ನೀಡಿದ್ದ ಸಚಿವ ಸೋಮಣ್ಣಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಕಾಲಿಗೆ ಬುದ್ಧಿ ಹೇಳಿದ್ದರು.
ಉಡುಪಿ, ಮಂಗಳೂರಿಗೆ ಕಂದಾಯ ಸಚಿವ ಆರ್ ಅಶೋಕ್ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರೆ, ಸಚಿವ ಸೋಮಣ್ಣ ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ಬ್ರಹ್ಮಗಿರಿ ಪರ್ವತ ಎಂದು ಸುತ್ತಾಡುತ್ತಿದ್ದಾರೆ. ಮಳೆಯಿಂದ ಆಗಿರುವ ಅನಾಹುತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಸಿಎಂ ಸೂಚನೆಯನ್ನೇ ಉಲ್ಲಂಘಿಸಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳಿದ್ದಾರೆ. ಸಚಿವರು ನಮ್ಮ ಕಷ್ಟ ಕೇಳುತ್ತಾರೆ ಎಂದುಕೊಂಡಿದ್ದ ಮಲೆನಾಡಿನ ಜನರಿಗೆ ಶಾಕ್ ಕಾದಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾತ್ರಿ ಬಂದ ಬಳಿಕ ಬೆಳಗ್ಗೆ ಎದ್ದು ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳದ ಸಚಿವ ಸಿ.ಟಿ ರವಿ, ಚಿಕ್ಕಮಗಳೂರಿನ ಅಯ್ಯನಕೆರೆಯಲ್ಲಿ ಜಲಕ್ರೀಡೆ ಉದ್ಘಾಟನೆಗೆ ತೆರಳಿದ್ದರು. ಚಿಕ್ಕಮಗಳೂರು ಉಸ್ತುವಾರಿ ಹೊಣೆ ಬಗ್ಗೆ ತಲೆ ಕೆಡಿಸಿಕೊಳ್ಳದ ಸಚಿವ ರವಿ, ತಮ್ಮ ಸ್ವಂತ ಜಿಲ್ಲೆ ಬಗ್ಗೆ ಕಾಳಜಿ ತೋರಿಸದೆ ಜಲಕ್ರೀಡೆಯಲ್ಲಿ ನಿರತರಾಗಿದ್ದರು. ಮಳೆಹಾನಿ ಬಗ್ಗೆ ಪರಿಶೀಲನೆ ಮಾಡುತ್ತಿಲ್ಲ, ಬೆಳೆನಷ್ಟ, ಕುಸಿದ ಗುಡ್ಡ, ಮನೆಗಳಿಗೆ ಹಾನಿ ಏನೆಲ್ಲಾ ಆದರೂ ಸಚಿವ ಸಿ.ಟಿ ರವಿ ಕಿಂಚಿತ್ತು ಕಾಳಜಿ ತೋರಿಸದೆ ಜಲಕ್ರೀಡೆ ಉದ್ಘಾಟನೆಗೆ ತೆರಳಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಸಚಿವ ಸಿ.ಟಿ ರವಿ ಅವರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತು ತುಚ್ಛವೆಂದು ಅನ್ನಿಸಲು ಶುರುವಾಗಿದೆಯೇ ಎಂದು ಭಾಸವಾಗುತ್ತಿದೆ. ಚಿಕ್ಕಮಗಳೂರಿಗೆ ಭೇಟಿ ಕೊಟ್ಟರೂ ಜನರ ಸಂಕಷ್ಟ ಆಲಿಸುತ್ತಿಲ್ಲ ಎನ್ನುವುದು ಸಾಬೀತಾಗಿದೆ.
ಚಿಕ್ಕಮಗಳೂರಿನ ಸಮಸ್ಯೆ ಏನು..?
ಚಿಕ್ಕಮಗಳೂರಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಕೊಪ್ಪ ತಾಲೂಕಿನ ಭಂಡಿಗಡಿ ಸಮೀಪದ ಹರಕ್ಕನಮಕ್ಕಿ ಗ್ರಾಮದ ತುಂಗಾ ನದಿ ಪಕ್ಕದಲ್ಲಿರುವ ಎಂಟು ಮನೆಗಳು ಜಲಾವೃತ ಆಗಿವೆ. ಜನರು ಗ್ರಾಮವನ್ನು ತೊರೆದು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಇನ್ನೂ ಹೆಮ್ಮಕ್ಕಿ ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ರಸ್ತೆಗೆ ಬಿದ್ದ ಮಣ್ಣು ಬಿದ್ದಿರುವ ಪರಿಣಾಮ ಐದಾರು ಗ್ರಾಮದ ಸಂಪರ್ಕ ಬಂದ್ ಆಗಿದೆ. ಇತ್ತ ಮೂಡಿಗೆರೆಯಲ್ಲಿ ಮಳೆ-ಗಾಳಿ ಅಬ್ಬರಕ್ಕೆ ಕಳೆದ ವರ್ಷ ಅಷ್ಟೇ ಕಟ್ಟಿದ ಮನೆ ಬೀಳುವ ಸ್ಥಿತಿ ಉಂಟಾಗಿದೆ. ಮನೆಯ ಅಡಿಪಾಯವೇ ಕೊಚ್ಚಿ ಹೋಗಿರುವ ಘಟನೆ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ನಡೆದಿದೆ. ಇನ್ನು ಶೃಂಗೇರಿ ತಾಲೂಕಿನ ಗಿಣಿಕಲ್ ಗ್ರಾಮದಲ್ಲಿ ನೋಡ ನೋಡುತ್ತಿದ್ದಂತೇ ಭೂ ಕುಸಿತ ಉಂಟಾಗಿದ್ದು, ಮನೆಯ ಪಕ್ಕದಲ್ಲಿ ಕಟ್ಟಿದ್ದ ಬಾತ್ ರೂಂ ಕೊಚ್ಚಿ ಹೋಗಿದೆ. ಶೃಂಗೇರಿ ನದಿ ತಟದ ಮನೆಗಳಿಗೆ ನೀರು ನುಗ್ಗಿದ್ದು, ಕಳೆದ ರಾತ್ರಿಯಿಂದಲೇ ಸಂಧ್ಯಾವಂದನೆ ಮಂಟಪ ಮುಳುಗಡೆ ಆಗಿದೆ. ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿದ್ದು, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 12ರ ತನಕ ಸಂಚಾರ ನಿಷೇಧ ಮಾಡಲಾಗಿದೆ. ಕೊಪ್ಪ ತಾಲೂಕಿನ ಜಲದುರ್ಗ ಬಳಿ ರಸ್ತೆ ಕುಸಿತ ಉಂಟಾಗಿದ್ದು, ಚಿಕ್ಕಮಗಳೂರು-ಶೃಂಗೇರಿ-ಕೊಪ್ಪ ಹಾಗೂ ಕೊಪ್ಪ, ಶೃಂಗೇರಿ, ಎನ್ಆರ್ ಪುರ, ಸೇರಿದಂತೆ ಮೂಡಿಗೆರೆ ಭಾಗದ ಬಹುತೇಕ ರಸ್ತೆಗಳು ಬಂದ್ ಆಗಿದೆ. ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು ತುಂಗಾ ನದಿ ಉಕ್ಕಿ ಹರಿಯುತ್ತಿದೆ. ರಸ್ತೆಯಲ್ಲಿದ್ದ ಕಾರು ಮುಳುಗಡೆ ಆಗಿದೆ. ಬಾಳೆಹೊನ್ನೂರು ಪಟ್ಟಣದಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಸಂತೆ ಮೈದಾನದ ಕಟ್ಟಡ, ಮಳಿಗೆಗಳು ಜಲಾವೃತ ಆಗಿವೆ. N.R. ಪುರ ಬಾಳೆಹೊನ್ನೂರು, ಬಾಳೆಹೊನ್ನೂರು-ಕಳಸ ಸಂಪರ್ಕ ಕಡಿತವಾಗಿದೆ. ಭಾರೀ ಮಳೆಯಿಂದ ಮಲೆನಾಡಿನ ಬಹುತೇಕ ಜನತೆ ಹೈರಾಣಾಗಿರುವ ಸಮಯದಲ್ಲಿ ಸಚಿವ ಜಲಕ್ರೀಡೆ ಜನರಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ.
ತರಾಟೆ ಭಯದಲ್ಲಿ ಸುಮ್ಮನಿದ್ದಾರಾ ಮಿನಿಸ್ಟರ್..?
ಮಳೆಯಿಂದ ಆಗಿರುವ ಅನಾಹುತದ ಬಗ್ಗೆ ಪರಿಶೀಲನೆಗೆ ಬಂದಿದ್ದ ಸಂಸದರು, ಶಾಸಕರಿಗೆ ಬಂಕೇನಹಳ್ಳಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎಂ.ಪಿ ಕುಮಾರಸ್ವಾಮಿ ಭೇಟಿ ನೀಡಿದ್ದ ವೇಳೆ ಬಂಕೇನಹಳ್ಳಿ ಗ್ರಾಮಸ್ಥರು, ವರ್ಷ ಕಳೆದರೂ ಸೇತುವೆ ನಿರ್ಮಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ವರ್ಷದ ಪ್ರವಾಹದಲ್ಲಿ ಕೊಚ್ಚಿ ಹೋದ ಸೇತುವೆಯಿಂದ ಸಮಸ್ಯೆ ಆಗಿದ್ದು, ಸೇತುವೆ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ. ಇದೇ ರೀತಿ ಸಚಿವರು ಸ್ಥಳಕ್ಕೆ ತೆರಳಿದರೆ ಆಕ್ರೋಶಗೊಂಡಿರುವ ಜನರು ತರಾಟೆಗೆ ತೆಗೆದುಕೊಳ್ಳುವುದು ಶತಸಿದ್ಧ ಎನ್ನಲಾಗಿದ್ದು ಅದೇ ಕಾರಣಕ್ಕಾಗಿ ಸಚಿವರು ಚಿಕ್ಕಮಗಳೂರಲ್ಲೇ ಉಳಿದಿದ್ದಾರೆ ಎನ್ನಲಾಗ್ತಿದೆ. ಇನ್ನಾದರು ಭೇಟಿ ಕೊಟ್ಟು ಜನರ ಸಮಸ್ಯೆ ಆಲಿಸ್ತಾರಾ..? ಕಾದು ನೋಡ್ಬೇಕು.