ಕರೋನಾ ಸೋಂಕು ಹರಡುತ್ತಿದ್ದಂತೆ ರಾಜ್ಯ ಸರ್ಕಾರ ಸೇರಿ ಭಾರತ ಸರ್ಕಾರವೂ ಏರಿಯಾಗಳನ್ನೇ ಸೀಲ್ಡೌನ್ ಮಾಡುವ ನಿರ್ಧಾರ ಮಾಡಿತ್ತು. ಇದೀಗ ಕರೋನಾ ಸೋಂಕು ಮಿತಿ ಮೀರಿ ಹೋಗುತ್ತಿದೆ. ಆದರೆ ಇದೀಗ ಸೀಲ್‌ಡೌನ್ ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ಕಂಟೈನ್ಮೆಂಟ್ ವ್ಯಾಖ್ಯಾನ ಬದಲಿಸಿದ್ದೇವೆ ಎಂದು ವೈದ್ಯಕೀಯ ಸಚಿವ ಸುಧಾಕರ್ ಹೇಳಿದ್ದಾರೆ. ಮೊದಲು ಸೋಂಕು ಕಾಣಿಸಿಕೊಂಡ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೀಲ್ಡೌನ್ ಮಾಡಲಾಗ್ತಿತ್ತು. ಈಗ 100 ಮೀಟರ್ ಮಾತ್ರ ಕಂಟೈನ್ಮೆಂಟ್ ಝೋನ್ ಮಾಡಿದ್ದೆವು. ನಂತರ ಸೋಂಕಿತರ ಮನೆಯ ಬೀದಿ ಕಂಟೈನ್ಮೆಂಟ್ ಮಾಡ್ತಿದ್ದು, ಇದೀಗ ಅಂತಿಮವಾಗಿ ಸೋಂಕಿತನ ಮನೆಯನ್ನಷ್ಟೇ ಸೀಲ್ಡೌನ್ ಮಾಡುವ ಪ್ರಸ್ತಾವವಿದೆ ಎಂದಿದ್ದಾರೆ. ಸೋಂಕು ಬಂದ ವ್ಯಕ್ತಿಯ ಮನೆಯನ್ನಷ್ಟೇ ಸೀಲ್ ಮಾಡಿ, ಆ ಮನೆಗೆ ಅಗತ್ಯ ವಸ್ತುಗಳನ್ನು ಸರ್ಕಾರವೇ ಒದಗಿಸುತ್ತೆ ಎಂದಿದ್ದಾರೆ. ಇದು ಸರಿಯಾದ ಕ್ರಮವೇ ಆಗಿದ್ದರೂ ಸರ್ಕಾರ ಇದೇ ಕೆಲಸವನ್ನು ಮೊದಲೂ ಮಾಡಬಹುದಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
Also Read: ಸಚಿವರ ಮಧ್ಯೆ ಭಿನ್ನಮತಕ್ಕೆ ಕಾರಣವಾದ ಕರೋನಾ ಸೋಂಕು!
ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಜನರನ್ನು ಕ್ವಾರಂಟೈನ್ ಮಾಡಲಾಗುತ್ತಿತ್ತು. ಆ ಬಳಿಕ ಬೇರೆ ರಾಜ್ಯದಿಂದ ಬಂದವರನ್ನು ಮಾತ್ರ ಕ್ವಾರಂಟೈನ್ ಮಾಡುವ ನಿರ್ಧಾರ ಮಾಡಲಾಯ್ತು. ಇದೀಗ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಯಾರನ್ನೂ ಕ್ವಾರಂಟೈನ್ ಮಾಡಲು ಅವಕಾಶವಿಲ್ಲ. ಆದರೂ ಮಹಾರಾಷ್ಟ್ರದಿಂದ ಆಗಮಿಸಿದ ಜನರನ್ನು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡಲು ರಾಜ್ಯ ನಿರ್ಧಾರ ಮಾಡಿದೆ. ಈ ನಡುವೆ ವಿಮಾನ ಹಾಗೂ ರೈಲುಗಳಲ್ಲಿ ಮುಂಬೈನಿಂದ ಬರುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಆದರೆ ರಸ್ತೆ ಮಾರ್ಗದಲ್ಲಿ ಬರುವುದಕ್ಕೆ ಸರ್ಕಾರ ಅವಕಾಶ ಕೊಡುವುದಿಲ್ಲ ಎನ್ನುತ್ತಿದೆ. ಆದರೆ ಜನರು ಮಹಾರಾಷ್ಟ್ರದಿಂದ ದೆಹಲಿ ಅಥವಾ ಬೇರೆ ಜಿಲ್ಲೆಗಳಿಗೆ ತೆರಳಿ, ಅಲ್ಲಿಂದ ಕರ್ನಾಟಕಕ್ಕೆ ಬಂದರೆ ಹೇಗೆ ಕ್ವಾರಂಟೈನ್ ಮಾಡುತ್ತಾರೆ ಅಲ್ಲವೇ..? ಕೇವಲ ನಾವು ಕರೋನಾ ತಡೆಯುವುದಕ್ಕೆ ಏನೆಲ್ಲಾ ಬೇಕು ಅದನ್ನು ನಿಷ್ಠೆಯಿಂದ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆಯೇ..? ಎನ್ನುವ ಅನುಮಾನ ಮೂಡುತ್ತಿದೆ. ಸರ್ಕಾರ ಮಹಾರಾಷ್ಟ್ರದಿಂದ ಬರುವ ಜನರಿಗೆ ಕಡ್ಡಾಯ ಕ್ವಾರಂಟೈನ್ ಮಾಡಬೇಕು ಎಂದರೂ ಇಂದು ಮುಂಬೈನಿಂದ ಬಂದ ರೈಲಿನ ಪ್ರಯಾಣಿಕರನ್ನು ಕ್ವಾರಂಟೈನ್ ಗೆ ಕಳುಹಿಸಲು ಯಾವುದೇ ಅಧಿಕಾರಿಯೂ ಬಂದಿರಲಿಲ್ಲ. ಸ್ವತಃ ತಾವೇ ಠಾಣೆಗೆ ತೆರಳಿ ಮಾಹಿತಿ ಕೊಟ್ಟು ಮನೆಗೆ ತೆರಳಿದ್ದಾರೆ. ಈ ಗೊಂದಲದ ಬಗ್ಗೆ ಸರ್ಕಾರವೇ ಉತ್ತರಿಸಬೇಕಿದೆ.
ಬೆಂಗಳೂರಲ್ಲೂ ಕ್ವಾರಂಟೈನ್ ಎಡವಟ್ಟು..!
ರಾಜ್ಯ ಸರ್ಕಾರ ಮೊದಲು 14 ದಿನಗಳ ಕಾಲ ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಿತ್ತು. ಆ ಬಳಿಕ 1 ತಿಂಗಳ ನಂತರವೂ ಕರೋನಾ ಸೋಂಕು ಬರುತ್ತಿದೆ ಎನ್ನುವ ಕಾರಣಕ್ಕೆ 28 ದಿನಗಳ ಕಾಲ ಕ್ವಾರಂಟೈನ್ ಮಾಡುಲು ಶುರು ಮಾಡಿತ್ತು. ಆದರೆ ಜನಸಂಚಾರ ಹೆಚ್ಚಾದಂತೆ ಕ್ವಾರಂಟೈನ್ ತಲೆನೋವು ಬೇಡ ಕರೋನಾ ಬಂದರೂ ಪರವಾಗಿಲ್ಲ ಎನ್ನುವ ನಿರ್ಧಾರಕ್ಕೆ ಬಂದ ಅಧಿಕಾರಿಗಳು 7 ದಿನಕ್ಕೆ ಕ್ವಾರಂಟೈನ್ ಸಮಯವನ್ನು ಬದಲಾವಣೆ ಮಾಡಿದ್ದರು. ಇದೀಗ ದೇಶದ ಒಳಗೆ ಓಡಾಡಿದ್ರೆ ಕ್ವಾರಂಟೈನ್ ಅಗತ್ಯವಿಲ್ಲ. ಆದರೆ ಮಹಾರಾಷ್ಟ್ರಕ್ಕೆ ಮಾತ್ರ ರಾಜ್ಯ ಸರ್ಕಾರ ಕೆಲವೊಂದು ಕಡೆ ಕ್ವಾರಂಟೈನ್ ಮಾಡುತ್ತಿದೆ. ಇನ್ನೂ ಕೆಲವು ಕಡೆ ಕ್ವಾರಂಟೈನ್ ಮಾಡುವುದನ್ನು ಈಗಾಗಲೇ ನಿಲ್ಲಿಸಲಾಗಿದೆ. ಆದರೆ, ದೆಹಲಿಯಿಂದ ಬಂದಿದ್ದ ತಾಯಿ ಹಾಗೂ ಮಗನನ್ನು 7 ದಿನಗಳ ಕಾಲ ಕ್ವಾರಂಟೈನ್ ಮಾಡಿ ಬಿಡುಗಡೆ ಮಾಡಿದ ಬಳಿಕ ಇದೀಗ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದು ಮುಂಬೈನ ಧಾರಾವಿ ಕಥೆಯಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಅಧಿಕಾರಿಗಳ ಎಡವಟ್ಟು ಘಟನೆ ವಿವರ ಏನು..?
ರಾಜ್ಯ ಸರ್ಕಾರ 7 ದಿನದ ಕ್ವಾರಂಟೈನ್ ನಿರ್ಧಾರ ಮಾಡಿತ್ತು. ಅದರಂತೆ ದೆಹಲಿಯಿಂದ ಬಂದಿದ್ದ ಬೆಂಗಳೂರಿನ ಜೆಪಿ ನಗರದ ರಾಗಿಗುಡ್ಡ ಸ್ಲಂ ನಿವಾಸಿಗಳಾದ ತಾಯಿ ಹಾಗೂ ಮಗನನ್ನು ಮನೆಗೆ ಕಳಹಿಸಲಾಗಿತ್ತು. ಇದೀಗ ಆ ತಾಯಿ ಮತ್ತು ಮಗನಿಗೆ ಕರೋನಾ ಪಾಸಿಟಿವ್ ಬಂದಿದೆ. ದೆಹಲಿಯಿಂದ ರೈಲಿನಲ್ಲಿ ಬಂದಿದ್ದ ತಾಯಿ ಮತ್ತು ಮಗ ಹೆಬ್ಬಾಳ ಬಳಿಯ ಬಿಸಿಎಂ ಹಾಸ್ಟೆಲ್‌ನಲ್ಲಿ 7 ದಿನ ಕ್ವಾರಂಟೈನ್ ಮುಗಿಸಿ ತೆರಳಿದ್ದರು.7 ದಿನದ ಕ್ವಾರಂಟೈನ್ ಮುಗಿಸಿ ಮನೆಗೆ ಕಳುಹಿಸುವಾಗ ಅಧಿಕಾರಿಗಳು ಗಂಟಲ ಸ್ವಾಬ್ ತೆಗೆದು ರಿಪೋರ್ಟ್ ಬರುವ ಮುನ್ನವೇ ಮನೆಗೆ ಕಳುಹಿಸಿದ್ದರು ಎನ್ನಲಾಗಿದೆ. ಕ್ವಾರಂಟೈನ್ ಮುಗಿಸಿ ರಾಗಿಗುಡ್ಡ ಸ್ಲಂಗೆ ಹೋದ ತಾಯಿ ಮತ್ತು ಮಗ ಮನೆಯ ಎದುರಿನ ಪುಟ್ಟ ಪುಟ್ಟ ಮಕ್ಕಳನ್ನ ಎತ್ತಿಕೊಂಡು ಮುದ್ದಾಡಿದ್ದಾರೆ, ಸ್ಲಂನ ಬಹುತೇಕ ಕಡೆ ಓಡಾಡಿದ್ದಾರೆ. ಇದೀಗ ಓಡೋಡಿ ಬಂದಿರುವ ಆರೋಗ್ಯ ಅಧಿಕಾರಿಗಳು ರಾಗಿಗುಡ್ಡ ಸ್ಲಂ ಸೀಲ್‌ಡೌನ್ ಮಾಡಿದ್ದಾರೆ.
ಕ್ವಾರಂಟೈನ್ ಸಾಕಾ..? ಸೀಲ್‌ಡೌನ್ ಬೇಕಾ..?
ಇದೀಗ ದೇಶದಲ್ಲಿ ಕ್ವಾರಂಟೈನ್ ಪದ್ದತಿ ಸಂಪೂರ್ಣವಾಗಿ ಕೈಬಿಟ್ಟು ಕರೋನಾ ಬಂದು ಸತ್ತವರ ಸಂಖ್ಯೆ ಎಣಿಕೆ ಮಾಡಿ ಎಂದು ಕೇಂದ್ರ ಸರ್ಕಾರ ಪರೋಕ್ಷವಾಗಿ ರಾಜ್ಯಗಳಿಗೆ ಸಂದೇಶ ರವಾನೆ ಮಾಡಿರುವಂತಿದೆ. ಮಹಾರಾಷ್ಟ್ರದಿಂದ ಬಂದವರನ್ನು ಮಾತ್ರ ರಾಜ್ರಯಸರ್ಕಾರ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸುತ್ತಿದೆ. ಅದೂ ಕೂಡ 7 ದಿನಗಳು ಮಾತ್ರ. ಒಂದು ವೇಳೆ ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ಮಾತ್ರ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತದೆ. ಇಲ್ಲದಿದ್ದರೆ, ಇನ್ಮುಂದೆ ಕರೋನಾ ತಪಾಸಣೆಯನ್ನೂ ಮಾಡದಿರಲು ನಿರ್ಧಾರವಾಗಿದೆ. ಒಂದು ವೇಳೆ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕ ಬುದ್ಧಿವಂತನಾಗಿದ್ದರೆ, ಬೇರೆ ರಾಜ್ಯಕ್ಕೆ ಹೋಗಿ ಅಲ್ಲಿಂದ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಗಾದರೂ ಸ್ವಚ್ಛಂದವಾಗಿ ಹೋಗಬಹುದಾಗಿದೆ. ಇನ್ನೂ ಸೀಲ್‌ಡೌನ್ ಮಾಡುವ ಸರ್ಕಾರದ ನಿರ್ಧಾರವೇ ಗೊಂದಲಮಯವಾಗಿದೆ. ದೇಶದ ಯಾವುದೇ ನಗರದಿಂದ ಬಂದವನಿಗೆ ಕರೋನಾ ಸೋಂಕು ಬಂದರೆ ಇಡೀ ದೇಶವನ್ನು ಮತ್ತೆ ಸೀಲ್‌ಡೌನ್ ಮಾಡಲು ಸಾಧ್ಯವೇ..? ಸಾಧ್ಯವಿಲ್ಲ. ಇದು ಸರ್ಕಾರಕ್ಕೂ ಗೊತ್ತು. ಅಂದಮೇಲೆ ಕರೋನಾ ನಿಯಂತ್ರಣ ಮಾಡುತ್ತಿದ್ದೇವೆ. ಭಯಬೇಡ ಎಂಬ ಹೇಳಿಕೆ ಕೊಡುವುದನ್ನು ಬಿಟ್ಟು ಸೋಂಕು ಲಕ್ಷಾಂತರ ಜನರಿಗೆ ಬಂದೇ ಬರುತ್ತದೆ. ವಯಸ್ಸಾದವರು, ಮಕ್ಕಳು ಮನೆಯಿಂದ ಹೊರಬಂದು ಸಾವನ್ನಪ್ಪುದನ್ನು ತಡೆಯಿರಿ ಎಂದು ಜಾಗೃತಿ ಮೂಡಿಸುವ ಕೆಲಸವನ್ನಾದರೂ ಯಾಕೆ ಮಾಡಬಾರದು..? ಯುವಕರು ಮಹಿಳೆಯರು ಅನಿವಾರ್ಯ ಕಾರಣದಿಂದ ಹೊರ ಬಂದರೂ ನಿಮ್ಮ ಎಚ್ಚರಿಕೆಯಿಂದ ನೀವು ಇದ್ದರೆ ಮನೆಯಲ್ಲಿರುವ ವಯೋವೃದ್ಧರನ್ನು ಉಳಿಸಿಕೊಳ್ಳಬಹುದು ಎಂದು ಕರೆ ಕೊಟ್ಟು ಸುಮ್ಮನಾಗಬೇಕು.