ಭೀಕರ ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಮತ್ತು ಸೀಲ್ ಡೌನ್ ನಿಂದಾಗಿ ರಾಜ್ಯವೂ ಸೇರಿದಂತೆ ದೇಶಾದ್ಯಂತ ಎಲ್ಲರ ಬದುಕು ಅಸ್ತವ್ಯವಸ್ತವಾಗಿದೆ. ಇಡೀ ಇಡೀ ದೇಶವೇ ಕಳೆದ 35 ದಿನಗಳಿಂದ ಸ್ತಬ್ಧವಾಗಿದ್ದು, ಉದ್ಯಮ, ವ್ಯವಹಾರ ಸೇರಿದಂತೆ ಎಲ್ಲವೂ ಸ್ಥಗಿತವಾಗಿದೆ. ಕೋಟ್ಯಂತರ ಜನರ ನಿತ್ಯದ ಬದುಕು ಹೈರಾಣಾಗಿದೆ. ಹೊತ್ತಿನ ಊಟಕ್ಕೂ ಪರದಾಡುವ ಮಂದಿ ಜೀವ ಬಿಡುತ್ತಿದ್ದಾರೆ. ಈ ನಡುವೆ ಲಾಕ್ ಡೌನ್ ಮುಂದುವರಿದಲ್ಲಿ ರೋಗದಿಂದ ಸಾಯುವವರಿಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ ಎಂಬ ಆತಂಕ ಕೂಡ ವ್ಯಕ್ತವಾಗುತ್ತಿದೆ.
ಜನರ ಜೀವ ಉಳಿಸುವ ಸರ್ಕಾರದ ಕಾಳಜಿ ಮತ್ತು ಸ್ವತಃ ತಮ್ಮ ಪ್ರಾಣ ರಕ್ಷಣೆಗಾಗಿ ಜನ ಸರ್ವಸ್ವವನ್ನೂ ತ್ಯಾಗ ಮಾಡಿ ಮನೆಯಲ್ಲಿ ಕೈಕಟ್ಟಿ ಕುಳಿತಿದ್ದಾರೆ. ಆದರೆ, ಇದೆಲ್ಲದರ ನಡುವೆಯೇ ಒಂದು ಕಡೆ ಲಾಕ್ ಡೌನ್, ಸೀಲ್ ಡೌನ್ ಗಳೆಲ್ಲವನ್ನೂ ಮೀರಿ ರಾಜ್ಯ ಸರ್ಕಾರದ ಸಚಿವರು ಮತ್ತು ಶಾಸಕರು ಸೇರಿದಂತೆ ರಾಜಕೀಯ ಮುಖಂಡರ ಪ್ರಚಾರದ ಹಪಾಹಪಿಯ ಉಚಿತ ಆಹಾರ ವಿತರಣೆ, ಮಾಸ್ಕ್ ವಿತರಣೆಯ ಪ್ರದರ್ಶನಗಳು ಎಗ್ಗಿಲ್ಲದೆ ಮುಂದುವರಿದಿವೆ. ಮತ್ತೊಂದು ಕಡೆ ಸ್ವತಃ ನಾಲ್ವರು ಸಚಿವರೇ ಸಾಮಾಜಿಕ ಅಂತರದ ನಿಯಮ ಮತ್ತು ಕ್ವಾರಂಟೈನ್ ನಿಯಮ ಮೀರಿ ನಡೆದುಕೊಂಡಿರುವ ಘಟನೆ ಕೂಡ ನಡೆದಿದೆ.
ಬೆಂಗಳೂರಿನ ಖಾಸಗಿ ಟಿವಿ ವಾಹಿನಿಯೊಂದರ ಕ್ಯಾಮರಾಮನ್ ಗೆ ಕರೋನಾ ಸೋಂಕು ಇರುವುದು ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ, ಆ ಕ್ಯಾಮರಾಮನ್ ಸಂಪರ್ಕಕ್ಕೆ ಬಂದಿದ್ದ ನಾಲ್ವರು ಸಚಿವರನ್ನು ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಿತ್ತು. ಆದರೆ, ಆ ಸಚಿವರು ಮೂರ್ನಾಲ್ಕು ದಿನಗಳ ಕಾಲ ಎಂದಿನಂತೆ ತಮ್ಮ ದೈನಂದಿನ ಕಚೇರಿ ಕಾರ್ಯಗಳನ್ನು ಮತ್ತು ಜನಸಂಪರ್ಕವನ್ನು ಮುಂದುವರಿಸಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಏ.21 ಮತ್ತು 22ರಂದು ಆ ಕ್ಯಾಮರಾಮನ್ ಸಿಎಂ ಯಡಿಯೂರಪ್ಪ ಅವರ ಗೃಹ ಕಚೇರಿಗೆ ಹೋಗಿದ್ದರು. ಬಳಿಕ ಡಿಸಿಎಂ ಅಶ್ವಥನಾರಾಯಣ ಮತ್ತು ಸಚಿವ ಸಿ ಟಿ ರವಿ ಅವರನ್ನು ಮಾತನಾಡಿಸಿದ್ದರು. ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನೂ ಮಾತನಾಡಿಸಿದ್ದರು. ಮಾರನೇ ದಿನ; 22ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರ ಸಂದರ್ಶನ ಮಾಡಿದ್ದರು. ಬಳಿಕ ವಸತಿ ಸಚಿವ ವಿ ಸೋಮಣ್ಣ ಅವರನ್ನು ಮಾತನಾಡಿಸಿದ್ದರು. ನಂತರ ಮತ್ತೆ ಡಿಸಿಎಂ ಅಶ್ವಥನಾರಾಯಣ ಅವರನ್ನು ಭೇಟಿಯಾಗಿದ್ದರು ಎಂದು ರೋಗಿ ಪಿ-475 ಎಂದು ಗುರುತಿಸಲಾಗಿರುವ ಕ್ಯಾಮರಾಮನ್ ಅವರ ಪೇಷಂಟ್ ಫ್ಲೋ ಚಾರ್ಟ್ ಹೇಳುತ್ತದೆ.
ಈ ನಡುವೆ, ಪತ್ರಕರ್ತರಿಗೆ ಕರೋನಾ ಪರೀಕ್ಷೆ ನಡೆಸಬೇಕು ಎಂಬ ಸರ್ಕಾರದ ಸೂಚನೆಯಂತೆ ಏ.23ರಂದು ಆ ಕ್ಯಾಮರಾಮನ್ ಸಿ ವಿ ರಾಮನ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲುದ್ರವ ನೀಡಿದ್ದರು. ಏ.24ರಂದು ಸಂಜೆ ಹೊತ್ತಿಗೆ ಆ ಪರೀಕ್ಷೆಯ ಫಲಿತಾಂಶ ಹೊರಬಿದ್ದು, ಅವರಿಗೆ ಸೋಂಕು ದೃಢಪಟ್ಟಿತ್ತು. ಆ ಹಿನ್ನೆಲೆಯಲ್ಲಿ ನಿಯಮದಂತೆ ಅವರ ಸಂಪರ್ಕಕ್ಕೆ ಬಂದವರೆಲ್ಲರಿಗೂ, ಸಚಿವರನ್ನೂ ಸೇರಿ; 14 ದಿನಗಳ ಕ್ವಾರಂಟೈನ್ ಅನುಸರಿಸುವುದು ಕಡ್ಡಾಯ. ಹಾಗೆಂದು ಆರೋಗ್ಯ ಇಲಾಖೆ ಕೂಡ ಸಚಿವರು ಸೇರಿದಂತೆ ಎಲ್ಲರಿಗೂ ಮಾಹಿತಿ ನೀಡಿತ್ತು.
ಆದರೆ, ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ ಸಚಿವರುಗಳು ಬಹುತೇಕ ಕ್ವಾರಂಟೈನ್ ನಿಯಮ ಪಾಲನೆ ಮಾಡಿಲ್ಲ. ಡಿಸಿಎಂ, ಗೃಹ ಸಚಿವರು ಮತ್ತು ಇತರೆ ಇಬ್ಬರು ಸಚಿವರು ಏ.28ರಂದು ಸೋಂಕು ಪರೀಕ್ಷೆಗೆ ಒಳಗಾಗಿ 29ರಂದು ತಮ್ಮ ಪರೀಕ್ಷೆ ನೆಗೇಟಿವ್ ಬಂದಿದೆ ಎಂದು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ನಡುವೆ ವಸತಿ ಸಚಿವರ ಪರೀಕ್ಷೆಯ ಫಲಿತಾಂಶ ಇನ್ನೂ ಬರಬೇಕಿದೆ. ಡಿಸಿಎಂ ಅಶ್ವಥನಾರಾಯಣ, ಗೃಹ ಸಚಿವ ಬೊಮ್ಮಾಯಿ, ಸಚಿವ ಸಿ ಟಿ ರವಿ ಅವರುಗಳು ತಮ್ಮ ಪರೀಕ್ಷೆ ನೆಗೇಟಿವ್ ಬಂದಿದ್ದರೂ, ತಾವು ಸುರಕ್ಷತೆಯ ದೃಷ್ಟಿಯಿಂದ ಸ್ವಯಂ ಕ್ವಾರಂಟೈನ್ ಆಗಿರುವುದಾಗಿಯೂ, ಏಳು ದಿನಗಳ ಕಾಲ ತಮ್ಮ ಮನೆಯಲ್ಲಿಯೇ ಇರುವುದಾಗಿ ಟ್ವೀಟ್ ಮಾಡಿದ್ದಾರೆ.
ಈ ಎಲ್ಲರೂ ಏ.29ರಂದು ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದು, ಅದೇ ರೀತಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೂಡ ತಮ್ಮ ವರದಿಯೂ ನೆಗೇಟಿವ್ ಬಂದಿದ್ದು, ತಾವೂ ಸ್ವಯಂ ಕ್ಯಾರಂಟೈನ್ ಗೆ ಒಳಗಾಗಿ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್ ಪಾಲಿಸುವುದಾಗಿ ಏ.29ರಂದು ರಾತ್ರಿ 10.11 ಕ್ಕೆ ಟ್ವೀಟ್ ಮಾಡಿದ್ದಾರೆ. ಆದರೆ ಅದಕ್ಕೆ ಮುನ್ನ ಅಂದು ಸಂಜೆ 6.36ಕ್ಕೆ ಮಾಡಿರುವ ಮತ್ತೊಂದು ಟ್ವೀಟ್ ನಲ್ಲಿ ಮಂಡ್ಯದಲ್ಲಿ ಕೋವಿಡ್-19 ಸಭೆ ನಡೆಸಿರುವುದಾಗಿ ಫೋಟೋ ಸಹಿತ ಮಾಹಿತಿ ನೀಡಿದ್ಧಾರೆ! ಆ ಫೋಟೋದಲ್ಲಿ ಸ್ವತಃ ಸಚಿವರು ಸೇರಿದಂತೆ ಯಾರೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಕೂಡ!
ಸಾಮಾನ್ಯವಾಗಿ ಸದ್ಯಕ್ಕೆ ಇರುವ ವೈದ್ಯಕೀಯ ಮಾರ್ಗಸೂಚಿ ಪ್ರಕಾರ ಒಮ್ಮೆ ಒಬ್ಬರಿಗೆ ಸೋಂಕು ತಗಲಿದ ಬಳಿಕ ಅದರ ಗುಣಲಕ್ಷಣಗಳು ಬಹಿರಂಗವಾಗಿ ಕಾಣಿಸಿಕೊಳ್ಳಲು 14-21 ದಿನಗಳ ಕಾಲ ಬೇಕಾಗುತ್ತದೆ. ಹಾಗಿದ್ದರೂ ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬಂದ ಈ ಸಚಿವರು ಏ.24ರಂದೇ ಕ್ವಾರಂಟೈನ್ ನಲ್ಲಿ ಇರುವಂತೆ ಮಾಹಿತಿ ನೀಡಿದ್ದರೂ, ಅದನ್ನು ಉಲ್ಲಂಘಿಸಿ ಸಭೆ-ಸಮಾರಂಭಗಳಲ್ಲಿ ಭಾಗಹಿಸುತ್ತಿರುವುದರ ಅರ್ಥವೇನು? ಅಲ್ಲದೆ, ಕನಿಷ್ಟ 14 ದಿನ ಕೋರಂಟೈನ್ ನಲ್ಲಿ ಉಳಿಯದೆ ಸೋಂಕಿತರ ಸಂಪರ್ಕಕ್ಕೆ ಬಂದ ಸಚಿವರೆಲ್ಲರೂ ಕೇವಲ 7 ದಿನಗಳ ಸ್ವಯಂ ಕ್ವಾರಂಟೈನ್ ಬಗ್ಗೆ ಮಾತ್ರ ಮಾಹಿತಿ ನೀಡಿರುವುದು ಯಾಕೆ? ಅಲ್ಲದೆ, ಒಮ್ಮೆ ಸೋಂಕಿತರ ಸಂಪರ್ಕಕ್ಕೆ ಬಂದ ಬಳಿಕ ಪರೀಕ್ಷಾ ವರದಿ ಪಾಸಿಟಿವ್ ಬರಲಿ ಅಥವಾ ನೆಗೆಟೀವ್ ಬರಲಿ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಪಾಲನೆ ಮಾಡಬೇಕು ಎಂಬ ನಿಯಮ ಜನಸಾಮಾನ್ಯರಿಗೆ ಮಾತ್ರವೇ ಅನ್ವಯವಾಗುತ್ತದೆಯೇ? ಎಂಬ ಪ್ರಶ್ನೆಯೂ ಎದ್ದಿದೆ.
ಈ ನಡುವೆ, ಈ ವಿಷಯದಲ್ಲಿ ಆತಂಕ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ಇದೇ ಪ್ರಶ್ನೆಯನ್ನು ಮುಂದಿಟ್ಟಿದ್ದು, ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕಕ್ಕೆ ಬಂದ ಸಚಿವರುಗಳು ಸೋಂಕು ದೃಢವಾದ ಕ್ಷಣದಿಂದಲೇ ಕ್ವಾರಂಟೈನ್ ಗೆ ಒಳಗಾಗಬೇಕಿತ್ತು. ಆದರೆ, ಅವರುಗಳು ಎಂದಿನಂತೆ ಓಡಾಡಿಕೊಂಡಿದ್ದಾರೆ. ಅದರರ್ಥ ಜನತೆಗೆ ಮಾದರಿಯಾಗಬೇಕಾದ ಈ ನಾಯಕರೇ ಡಬಲ್ ಸ್ಟಾಂಡರ್ಡ್ ಪಾಲಿಸುತ್ತಿರುವುದು ಬೆಳಕಿಗೆ ಬಂದಿದೆ. ಸರ್ಕಾರ ಕೂಡ ಕೋವಿಡ್-19 ವಿಷಯದಲ್ಲಿ ಎಷ್ಟು ಗಂಭೀರವಾಗಿದೆ ಎಂಬುದಕ್ಕೂ ಇದೊಂದು ನಿದರ್ಶನ ಎಂದು ಟೀಕಿಸಿದ್ದಾರೆ.
ಈ ನಡುವೆ, ರಾಜ್ಯಾದ್ಯಂತ ಈಗಲೂ ಬಹುತೇಕ ಆಡಳಿತ ಪಕ್ಷದ ಸಚಿವರು, ಸಂಸದರು, ಶಾಸಕರುಗಳು ಲಾಕ್ ಡೌನ್ ಸಂತ್ರಸ್ತರಿಗೆ ನೆರವು ನೀಡುವ ನೆಪದಲ್ಲಿ ಆಹಾರ ಪೊಟ್ಟಣ ವಿತರಣೆ, ಮಾಸ್ಕ್ ವಿತರಣೆ, ಬೆಳೆ ನಷ್ಟ ಪರಿಶೀಲನೆ ನೆಪದಲ್ಲಿ ನೂರಾರು ಪತ್ರಕರ್ತರ ತಂಡಗಳನ್ನು ಕಟ್ಟಿಕೊಂಡು ಪ್ರಚಾರ ಪ್ರದರ್ಶನ ನಡೆಸುತ್ತಲೇ ಇದ್ದಾರೆ. ಇದರಿಂದಾಗಿ ಒಂದು ಕಡೆ ಪತ್ರಕರ್ತರ ಜೀವವೂ, ಮತ್ತೊಂದು ಕಡೆ ಸ್ವತಃ ಅಂತಹ ನಾಯಕರು ಮತ್ತು ಅವರ ಹಿಂಬಾಲಕರು, ಆಪ್ತ ಸಿಬ್ಬಂದಿಗಳ ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ.
ಒಬ್ಬ ಬಡ ರೈತ ತಾನು ಬೆಳೆದ ತರಕಾರಿ ತನ್ನ ಗಾಡಿಯಲ್ಲಿ ತಂದು ಮಂಡಿಗೋ, ಮಾರುಕಟ್ಟೆಗೋ ಹಾಕಲು ನೂರೆಂಟು ಪಾಸು, ಪರವಾನಗಿ ಕೇಳುವ, ನಗರ-ಪಟ್ಟಣ ಪ್ರವೇಶ ತಡೆಯುವ(ಸರ್ಕಾರದ ಆದೇಶದ ಹೊರತಾಗಿಯೂ ಕೆಲವು ಕಡೆ ಪೊಲೀಸರು ಈಗಲೂ ತಡೆಯುತ್ತಿರುವ ವರದಿಗಳಿವೆ!) ಪೊಲೀಸ್ ಮತ್ತು ಜಿಲ್ಲಾಡಳಿತಗಳು ಇಂತಹ ಅಪಾಯಕಾರಿ ನಡೆಗಳಿಗೆ ಯಾವ ಆಧಾರದ ಮೇಲೆ ಅವಕಾಶ ನೀಡುತ್ತಿದ್ದಾರೆ ಎಂಬ ಪ್ರಶ್ನೆ ಕೂಡ ಈಗ ಎದ್ದಿದೆ.