ಕರೋನಾ ಸೋಂಕು ರಾಜ್ಯದಲ್ಲಿ 10 ದಿನಗಳಲ್ಲಿ ದ್ವಿಗುಣಗೊಳ್ಳುತ್ತಿವೆ. ಈ ಪ್ರಮಾಣ ದೇಶದಲ್ಲೇ ಎರಡನೇ ಅತಿ ಹೆಚ್ಚು. ದೇಶದಲ್ಲಿ ದ್ವಿಗುಣಗೊಳ್ಳುತ್ತಿರುವ ದರವು 20 ದಿನ. ಮಿಝೋರಾಂ ಮೊದಲನೇ ಸ್ಥಾನದಲ್ಲಿದೆ. ಅಲ್ಲಿ ಕೇವಲ 7 ದಿನಗಳಲ್ಲಿ ರೋಗ ದ್ವಿಗುಣಗೊಳ್ಳುತ್ತಿದೆ.
ಕರ್ನಾಟಕದ ಪರಿಸ್ಥಿತಿ ನಿಜಕ್ಕೂ ಬಿಗಡಾಯಿಸಿದೆ. ಗುಜರಾತ್, ಉತ್ತರ ಪ್ರದೇಶವನ್ನು ಮೀರಿ ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಚ್ಚರಿದಾಯಕ ಬೆಳವಣಿಗೆಯಲ್ಲಿ ದೆಹಲಿಯಲ್ಲಿ ದಾಖಲಾದ ಕರೋನಾ ಹೊಸ ಪ್ರಕರಣಗಳಲ್ಲಿ ಇಂದು ಭಾರೀ ಇಳಿಕೆ ಕಂಡುಬಂದಿದೆ. ಕರ್ನಾಟಕದಲ್ಲಿ 4120 ಹೊಸ ಪ್ರಕರಣಗಳು ಕಂಡುಬಂದಿರುವಾಗ, ದೆಹಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 1211 ಕ್ಕೆ ಇಳಿಕೆ ಕಂಡಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಕರ್ನಾಟಕದಲ್ಲಿ ಜುಲೈ 19 ರವರೆಗೆ 1,331 ಮಂದಿ ಕರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಅದರಲ್ಲಿ 289 ಮಂದಿ 70 ವರ್ಷಕ್ಕಿಂತ ಮೇಲ್ಪಟ್ಟವರು. 355 ಮಂದಿ 61 ರಿಂದ 70 ವರ್ಷದೊಳಗಿನವರು. 51 ರಿಂದ 60 ವರ್ಷದೊಳಗಿನ 336 ಮಂದಿ ಮೃತಪಟ್ಟಿದ್ದಾರೆ. 202 ಮಂದಿ 41 ರಿಂದ 50 ವರ್ಷ ಪ್ರಾಯದವರು. 31 ರಿಂದ 40 ವರ್ಷದೊಳಗಿನ 98 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 48 ಮಂದಿ 21 ರಿಂದ 30 ರ ಹರೆಯದವರು. 10 ರಿಂದ 20 ರೊಳಗಿನ ಇಬ್ಬರು ಮೃತಪಟ್ಟಿದ್ದಾರೆ, ಹತ್ತು ವರ್ಷಕ್ಕಿಂತ ಕೆಳಗಿನ ಒಂದು ಮಗು ಕರೋನಾ ಸೋಂಕಿಗೆ ಬಲಿಯಾಗಿದೆ.
ಇದುವರೆಗೂ ಮೃತಪಟ್ಟವರ ಒಟ್ಟು 47 ಶೇಕಡಾ ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು. 40 ಶೇಕಡಾ ಮಂದಿ 41 ವರ್ಷದಿಂದ 60 ವರ್ಷದ ಒಳಗಿನವರು. 13 ಶೇಕಡಾ ಮಂದಿ 40 ವರ್ಷ ಪ್ರಾಯಕ್ಕಿಂತ ಕಡಿಮೆ ವಯಸ್ಸಿನವರು. ಅವರಲ್ಲಿ ಬಹುತೇಕ ಮಂದಿ ಹೃದಯ ಸಂಬಂಧಿ ಅಥವಾ ಇನ್ನಿತರ ಕಾಯಿಲೆ ಬಳಲುತ್ತಿದ್ದವರು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆಂಬ ತಜ್ಞರ ಅಭಿಪ್ರಾಯಕ್ಕೆ ಪೂರಕವೆಂಬಂತೆ, ಇದುವರೆಗೂ ರಾಜ್ಯದಲ್ಲಿ 20 ವರ್ಷಕ್ಕಿಂತ ಕೆಳಗಿನವರಲ್ಲಿ ಕೇವಲ 3 ಮಂದಿ ಮಾತ್ರ ಮೃತಪಟ್ಟಿದ್ದಾರೆ.