ಲಾಕ್‌ಡೌನ್ ಘೋಷಿಸಿ ಸುಮಾರು ಒಂದು ತಿಂಗಳೇ ಕಳೆದರೂ ಕರೋನಾ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಇದುವರೆಗೂ ಸಾಧ್ಯವಾಗಿಲ್ಲ. ಎಪ್ರಿಲ್ 28ರ ಸಂಜೆ 5 ಗಂಟೆಯಿಂದ ಎಪ್ರಿಲ್ 29ರ ಸಂಜೆ 5 ಗಂಟೆಯವರೆಗೆ ಹೊಸ 11 ಕರೋನಾ ಪ್ರಕರಣಗಳನ್ನು ಧೃಡೀಕರಿಸಲಾಗಿದೆ.
ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 534 ಕೋವಿಡ್-19 ಪ್ರಕರಣ ಪತ್ತೆಯಾಗಿದ್ದು ಇಂದು 9 ಮಂದಿ ಸೇರಿ ಒಟ್ಟು 216 ಸೋಂಕಿತರಲ್ಲಿ ಚೇತರಿಕೆ ಕಂಡುಬಂದು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ, 20 ಮಂದಿ ಕರೋನಾ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆಂದು ಆರೋಗ್ಯ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಿದೆ.

ಪೂರ್ಣ ಪ್ರಮಾಣದಲ್ಲಿ ಚೇತರಿಕೆಯಾಗದ 297 ರೋಗಿಗಳಲ್ಲಿ 290 ರೋಗಿಗಳಿಗೆ ಗೊತ್ತುಪಡಿಸಿದ ಆಸ್ಪತ್ರೆಗಳ ವಿವಿಧ ವಾರ್ಡ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಆರೋಗ್ಯ ಸ್ಥಿರವಾಗಿದ್ದು ಉಳಿದ ಏಳು ಮಂದಿ ರೋಗಿಗಳ ಆರೋಗ್ಯವು ತೀವ್ರ ಹದಗೆಟ್ಟಿದ್ದು ಅವರನ್ನು ICUನಲ್ಲಿ ಇರಿಸಲಾಗಿದೆ.
ಎಪ್ರಿಲ್ 29 ರಂದು ಪತ್ತೆಯಾದ ಹನ್ನೊಂದು ಪ್ರಕರಣಗಳಲ್ಲಿ 8 ಪ್ರಕರಣಗಳು ಕಲಬುರಗಿ ಒಂದೇ ಜಿಲ್ಲೆಯಲ್ಲಿ ಕಂಡು ಬಂದಿದ್ದು ಉಳಿದಂತೆ ದಾವಣಗೆರೆ, ಬೆಳಗಾವಿ ಮತ್ತು ಮೈಸೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಕಂಡುಬಂದಿದೆ.