ಇಡೀ ವಿಶ್ವವನ್ನೇ ನಡುಗಿಸಿರುವ ಕೋವಿಡ್-19 ಪರೀಕ್ಷೆಗಳನ್ನು ಉಚಿತವಾಗಿ ನಡೆಸುವಂತೆ ಸುಪ್ರೀಂ ಕೋರ್ಟು ಆದೇಶಿಸಿದ ಬೆನ್ನಲ್ಲೇ ಖಾಸಗಿ ವೈದ್ಯರೊಬ್ಬರು ಈ ಆದೇಶಕ್ಕೆ ಮಾರ್ಪಾಡು ಮಾಡಬೇಕೆಂದು ಪುನಃ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ದೆಹಲಿ ಮೂಲದ ವೈದ್ಯ ಕೌಶಲ್ ಕಾಂತ್ ಮಿಶ್ರಾ ಅವರು ತಮ್ಮ ಅರ್ಜಿಯಲ್ಲಿ ಕೋವಿಡ್-19 ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ನಿಗ್ರಹಿಸಲು ದೇಶವು ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕಿರುವ ಈ ಅಗತ್ಯ ಸಮಯದಲ್ಲಿ ಈ ಉಚಿತ ಪರೀಕ್ಷೆಗಳಿಂದ ಖಾಸಗಿ ಲ್ಯಾಬ್ಗಳ ಮೇಲೆ ಅನ್ಯಾಯದ ಹೊರೆ ಹೇರಿದಂತಾಗಿದೆ ಎಂದು ವಾದಿಸಿದ್ದಾರೆ.
ಕಳೆದ ಮಾರ್ಚ್ 17ರಂದು ICMR ಖಾಸಗಿ ಲ್ಯಾಬ್ ಗಳಿಗೆ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡುವ ಸಲಹೆಯನ್ನು ನೀಡಿತ್ತು ಮತ್ತು ಕೋವಿಡ್-19 ಪರೀಕ್ಷಾ ಶುಲ್ಕವನ್ನು 4,500ರೂಪಾಯಿಗಳಿಗೆ ನಿಗದಿ ಪಡಿಸಿದ್ದು ಇದರ ಜತೆಗೇ ಖಾಸಗಿ ಲ್ಯಾಬ್ಗಳು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಉಚಿತವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಸರ್ಕಾರವು ತಿಳಿಸಿದೆ. ಅದಾಗ್ಯೂ, ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್ ಈ ಬೆಲೆ ಭಾರತೀಯ ಬಹುಪಾಲು ಜನತೆಗೆ ದುಬಾರಿಯೇ ಆಗಿದ್ದು ಮತ್ತು ವ್ಯಕ್ತಿಯ ಹಣಕಾಸಿನ ಸಾಮರ್ಥ್ಯವನ್ನು ಲೆಕ್ಕಿಸದೆ, ಪರೀಕ್ಷೆಗಳನ್ನು ಉಚಿತವಾಗಿಯೇ ಮಾಡಬೇಕು ಎಂದು ಅಭಿಪ್ರಾಯಪಟ್ಟಿದೆ.
ಮಿಶ್ರಾ ಅವರ ಪರ ವಾದಿಸುತ್ತಿರುವ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಮತ್ತು ವಕೀಲ ಪೂಜಾ ಧಾರ್ ಅವರು, ಪರೀಕ್ಷೆಗಳನ್ನು ನಡೆಸಲು ICMR ಶುಲ್ಕ ವಿಧಿಸಲು ನ್ಯಾಯಾಲಯವು ಅನುಮತಿಸಬೇಕೆಂದು ಕೋರಿದ್ದಾರೆ. ಈ ಪರೀಕ್ಷಾ ಶುಲ್ಕವನ್ನು ಲ್ಯಾಬ್ ಗಳು ಮರಳಿ ಪಡೆಯುವುದು ಹೇಗೆಂದು ಸರ್ಕಾರ ಇನ್ನೂ ಸ್ಪಷ್ಟಪಡಿಸದ ಕಾರಣದಿಂದ ಲ್ಯಾಬ್ ಗಳು ಕೋವಿಡ್-19 ಪರೀಕ್ಷೆಯನ್ನೇ ನಿಲ್ಲಿಸುವ ಸಾಧ್ಯತೆ ಇದೆ. ಇದರಿಂದಾಗಿ, ರೋಗವು ಅತ್ಯಂತ ವೇಗವಾಗಿ ಹರಡುವ ಅಪಾಯವಿದೆ ಎಂದು ವಾದಿಸಿದ್ದಾರೆ.
ದೇಶದಲ್ಲಿ ಕರೋನಾ ವೈರಸ್ ಸೋಂಕಿತ ವ್ಯಕ್ತಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು ಸೋಂಕು ದೃಢಪಟ್ಟಿರುವ ಪ್ರಕರಣಗಳೇ ಏಪ್ರಿಲ್ 13ರಂದು 10ಸಾವಿರಕ್ಕೆ ಏರಿಕೆಯಾಗಿವೆ. 358 ಜನರು ಈವರೆಗೆ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಖಾಸಗಿ ಲ್ಯಾಬೊರೇಟರಿಗಳು ಹೆಚ್ಚುತ್ತಿರುವ ಪರೀಕ್ಷಣಾ ವೆಚ್ಚವನ್ನು ಪಡೆದುಕೊಳ್ಳಲು ಸರ್ಕಾರದ ನೆರವಿಗಾಗಿ ಕಾಯುತ್ತಿವೆ. ಸರ್ಕಾರ ಈ ದಿಸೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದನ್ನೂ ಅವು ಕಾಯುತ್ತಿವೆ. ಇತ್ತೀಚಿನ ಸುಪ್ರೀಂ ಕೋರ್ಟ್ನ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಖಾಸಗಿ ಲ್ಯಾಬ್ ವೊಂದರ ಮುಖ್ಯಸ್ಥ ಅರ್ಜುನ ಡಂಗ್ ಅವರು ಎಲ್ಲ ವರ್ಗದ ಜನತೆಗೂ ಉಚಿತ ಪರೀಕ್ಷೆಗೆ ಆದೇಶಿಸಿರುವ ಕೋರ್ಟಿನ ತೀರ್ಪನ್ನು ಒಪ್ಪಿದ್ದಾರೆ. ಈಗಲೂ ಖಾಸಗಿ ಲ್ಯಾಬ್ ಗಳು ಉಚಿತವಾಗಿಯೇ ಕೋವಿಡ್-19 ಪರೀಕ್ಷೆಗಳನ್ನು ಮಾಡುತಿದ್ದು ಸರ್ಕಾರ ಈ ಕುರಿತು ಹೆಚ್ಚಿನ ಸ್ಪಷ್ಟತೆ ನೀಡಬೇಕಿದೆ ಎಂದಿದ್ದಾರೆ. ಖಾಸಗಿ ಲ್ಯಾಬ್ ಗಳು ಮಾನವ ಸಂಪನ್ಮೂಲ, ನಿರ್ವಹಣೆ, ಮೂಲ ಸೌಕರ್ಯ ವ್ಯವಸ್ಥೆಗಳಿಗೆ ಅಪಾರ ಹಣ ವೆಚ್ಚ ಮಾಡುತಿದ್ದು ಈ ಆದೇಶದಿಂದಾಗಿ ಸಂಕಷ್ಟದಲ್ಲಿವೆ ಎಂದು ಅವರು ವಾದಿಸಿದ್ದಾರೆ. ಈ ಕ್ಲಿಷ್ಟಕರ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದರೆ ಸರ್ಕಾರವು ಪ್ರಯೋಗಾಲಯಗಳನ್ನು ಸುಸಜ್ಜಿತವಾಗಿರಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ದೇಶದ ಖಾಸಗಿ ಪ್ರಯೋಗಾಲಯಗಳು ತಮ್ಮ ಅಂತಸ್ಥಿಗೆ ತಕ್ಕಂತೆ ವಿವಿಧ ಪರೀಕ್ಷೆಗಳಿಗೆ ಥರಹೇವಾರಿ ದರ ನಿಗೆದಿ ಮಾಡಿಕೊಂಡಿವೆ. ಒಟ್ಟಿನಲ್ಲಿ ಇದೊಂದು ಲಾಭದಾಯಕ ಉದ್ಯಮವಾಗಿದ್ದು, ಇಲ್ಲಿ ವೈದ್ಯಕೀಯ ಸೇವೆಯೇನೂ ಮೊದಲಿನ ಆದ್ಯತೆ ಅಗಿಲ್ಲ ಎಂದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಸರ್ಕಾರವೇ ಈಗ ಕೋವಿಡ್-19 ಪರೀಕ್ಷೆಗಳಿಗೆ 4500ರೂಪಾಯಿಗಳನ್ನು ನಿಗದಿಪಡಿಸಿರುವುದರಿಂದಲೂ ಜತೆಗೇ ಪರೀಕ್ಷೆಗೊಳಪಡಬೇಕಾದ ಜನರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಖಾಸಗಿಯವರಿಗೆ ಇದೊಂದು ನುಂಗಲಾರದ ತುತ್ತಾಗಿದೆ. ಜತೆಗೇ ಸುಪ್ರೀಂ ಕೋರ್ಟು ಕೂಡ ಉಚಿತವಾಗಿಯೇ ಪರೀಕ್ಷೆ ಮಾಡಬೇಕೆಂದೂ ತೀರ್ಪು ನೀಡಿರುವುದು ಮರ್ಮಾಘಾತವಾದಂತಾಗಿದೆ. ಏಕೆಂದರೆ, ಎಂತಹ ದುರಂತ ಸಮಯದಲ್ಲೂ ಖಾಸಗಿ ವೈದ್ಯಕೀಯ ಸೇವೆಗೆ ದರ ಕಡಿಮೆಯೇನೂ ಆಗಿರುವುದಿಲ್ಲ ಬದಲಿಗೆ ಹೆಚ್ಚೇ ಆಗಿರುತ್ತದೆ ಎಂಬುದನ್ನೂ ಗಮನಿಸಿ.
ದೇಶದಲ್ಲಿ ಸ್ಯಾನಿಟೈಸರ್ ,ಮುಖಗವಸುಗಳ ಬೆಲೆ ಈಗ ಮಾರುಕಟ್ಟೆಯಲ್ಲಿ ಮೂರು ನಾಲ್ಕು ಪಟ್ಟು ಏರಿಕೆ ದಾಖಲಿಸಿರುವುದನ್ನು ನಾವು ನೋಡಿದ್ದೇವೆ. ಇಂತಹ ಸಂಧಿಗ್ಧ ಸಮಯದಲ್ಲಿಯೂ ಸಾದ್ಯವಾದಷ್ಟೂ ದೋಚೋಣ ಎಂಬುದೇ ಈ ಖಾಸಗಿ ವೈದ್ಯಕೀಯ ಸೇವೆಗಳ ಗುರಿ ಆಗಿದೆ. ಆದರೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂತಹ ಲಾಭಕೋರರ ದಂಧೆಗೆ ಕಡಿವಾಣ ಹಾಕಬಹುದಾಗಿದೆ. ಸರ್ಕಾರ ಈ ಖಾಸಗಿ ಲಾಬಿಗೆ ಮಣಿಯದೆ ಕೂಡಲೇ ಆ ಕ್ರಮಕ್ಕೆ ಮುಂದಾಗಲಿ.