ಇಡೀ ವಿಶ್ವವನ್ನೇ ಬಾಧಿಸುತ್ತಿರುವ ಕೋವಿಡ್-19 ಸೋಂಕು ಭಾರತದಲ್ಲೂ ತನ್ನ ಪ್ರತಾಪವನ್ನು ತೋರುತ್ತಿದೆ. ದೇಶವು ಕೋವಿಡ್ ಸೋಂಕಿನ ಪಟ್ಟಿಯಲ್ಲಿ ದಿನೇ ದಿನೇ ಮೊದಲ ಸ್ಥಾನದತ್ತ ಮುನ್ನುಗ್ಗುತಿದ್ದು, ಮುಂದಿನ ತಿಂಗಳುಗಳಲ್ಲಿ ಮೊದಲ ಸ್ಥಾನಕ್ಕೇರಿದರೂ ಅದರಲ್ಲೇನೂ ಆಶ್ಚರ್ಯವಿಲ್ಲ. ದೇಶದಲ್ಲಿ ವರದಿಯಾಗಿರುವ ಅರ್ಧದಷ್ಟು ಕೋವಿಡ್ ಸೋಂಕು ಪ್ರಕರಣಗಳು ಮಹಾರಾಷ್ಟ್ರದಿಂದಲೇ ವರದಿ ಆಗಿವೆ. ಇತರ ರಾಜ್ಯಗಳಿಗೂ ಮಹಾರಾಷ್ಟ್ರದಿಂದಲೇ ಹಬ್ಬುತ್ತಿದೆ. ಸರ್ಕಾರ ಜನರ ಪ್ರಯಾಣಕ್ಕೆ ಎಷ್ಟೇ ನಿರ್ಬಂಧ ಹೇರಿದರೂ ರಾಜ್ಯಗಳ ಗಡಿಗಳಲ್ಲಿರುವ ಕಳ್ಳ ದಾರಿಗಳಿಂದ ಜನರು ಒಳ ನುಸುಳುತ್ತಲೇ ಇದ್ದಾರೆ. ಮೊದಲಿಗೆ 15 ದಿನಗಳ ಸಂಪರ್ಕ ತಡೆ ಮಾಡಿದ್ದ ಸರ್ಕಾರ ಅದನ್ನು ಈಗ 7 ದಿನಗಳಿಗೆ ಇಳಿಸಿದೆ. ಇದು ಸೋಂಕು ಹರಡುವ ಸಾಧ್ಯತೆ ಹೆಚ್ಚಿಸಿದೆ ಎಂದು ತಜ್ಞರ ಅಭಿಮತವಾಗಿದೆ. ಆದರೆ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಕೈಗೊಂಡಿರುವ ಕ್ರಮಗಳು ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ಯಶಸ್ವಿ ಆಗುವುದು ಸಾಧ್ಯವೇ ಇಲ್ಲ ಎನ್ನುವುದೂ ಸಾಬೀತಾಗಿದೆ.
ಅದೇನೇ ಇರಲಿ ಕೋವಿಡ್-19 ಸೋಂಕು ದೇಶದ ಆರ್ಥಿಕತೆಗೆ ಬಿರುಗಾಳಿ ಎಬ್ಬಿಸಿರುವುದಂತೂ ಸುಳ್ಳಲ್ಲ. ಆದರೆ ದೇಶವು ಈ ಮೊದಲೇ ಈ ರೀತಿಯ ಆರ್ಥಿಕ ಬಿರುಗಾಳಿಯನ್ನೂ ಎದುರಿಸಿದ ಅನುಭವವನ್ನೂ ಹೊಂದಿದೆ. 1997 ರ ಏಷ್ಯಾ ಹಣಕಾಸು ಬಿಕ್ಕಟ್ಟು , ಪೋಖ್ರಾನ್ ಪರೀಕ್ಷೆಯ ನಂತರ ವಿಧಿಸಿದ ಆರ್ಥಿಕ ನಿರ್ಬಂಧಗಳು ಮತ್ತು 2008 ರ ಜಾಗತಿಕ ಆರ್ಥಿಕ ಹಿಂಜರಿತದಲ್ಲಿ ದೇಶವು ಯಶಸ್ವಿಯಾಗಿ ನಿವಾರಿಸಿಕೊಂಡು ಪ್ರಗತಿ ಪಥದತ್ತ ಸಾಗಿ ಬಂದಿದೆ. ಆಗೆಲ್ಲ ಕೇಂದ್ರ ಸರ್ಕಾರದ ಉನ್ನತ ಸ್ಥಾನದಲ್ಲಿ ಅತ್ಯುತ್ತಮ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರೇ ಇದ್ದರು. ಆದರೆ ಈಗ ಆರ್ಥಿಕ ತಜ್ಞರ ಕೊರತೆ ಇದೆ. ಬರೇ ಪ್ರಚಾರಕ್ಕಾಗಿ ಹಪಹಪಿಸುವ ರಾಜಕಾರಣಿಗಳ ದಂಡೇ ಕೇಂದ್ರದಲ್ಲಿದೆ.
ಕೋವಿಡ್ ಸೋಂಕು ಮೊದಲ ಪ್ರಕರಣ ವರದಿ ಆಗುವುದಕ್ಕೂ ಮೊದಲೇ ದೇಶ ಆರ್ಥಿಕ ಹಿಂಜರಿತವನ್ನು ಎದುರಿಸುತಿತ್ತು. ಕಳೆದ ಮೂರು ಹಣಕಾಸು ವರ್ಷಗಳಲ್ಲೂ ಜಿಡಿಪಿ ದರ ಬೆಳವಣಿಗೆ ಕಡಿಮೆಯೇ ಇದೆ. ಆದರೆ ಕೋವಿಡ್ 19 ಕಾರಣದಿಂದಾಗಿರುವ ಹಿಂಜರಿತ 1930 ರ ಜಾಗತಿಕ ಆರ್ಥಿಕ ಹಿಂಜರಿತಕ್ಕಿಂತಲೂ ಭೀಕರವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. IMF ನ ಪ್ರಕಾರ ಜಾಗತಿಕ ಆರ್ಥಿಕತೆ 9 ಟ್ರಿಲಿಯನ್ ಡಾಲರ್ ಗಳಷ್ಟು ಉತ್ಪಾದನೆ ನಷ್ಟವಾಗಲಿದೆ. ಅದರಲ್ಲೂ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಈ ಹಿಂಜರಿತ ಉದ್ಯಮಗಳನ್ನೂ ,ಜೀವಗಳನ್ನೂ ಬಲಿ ತೆಗೆದುಕೊಳ್ಳಲಿದೆ ಎನ್ನಲಾಗಿದೆ.
ಪ್ರಪಂಚದಾದ್ಯಂತ ಉದ್ಯೋಗ ನಷ್ಟವು ದಿಗ್ಭ್ರಮೆಗೊಳಿಸುವ ಮಟ್ಟದಲ್ಲಿದೆ. ನಿರುದ್ಯೋಗ ದರವು ಈಗಾಗಲೇ ಶೇಕಡಾ 20 ರಷ್ಟಿರುವ ಅಮೇರಿಕಾವು 40 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಂಡಿದೆ; ಇಂಗ್ಲೆಂಡ್ ನಲ್ಲಿ ನಿರುದ್ಯೋಗ ದರವು ಶೇಕಡಾ 10 ಕ್ಕೆ ತಲುಪುವ ಸಾಧ್ಯತೆಯಿದೆ; ಯುರೋಪಿಯನ್ ಯೂನಿಯನ್ ದೇಶಗಳಲ್ಲಿ, ಉದ್ಯೋಗ ಬೆಂಬಲ ಕಾರ್ಯಕ್ರಮಗಳಿಂದಾಗಿ ನಿರುದ್ಯೋಗ ಕಡಿಮೆ ಇದೆ. ಆದರೆ ಇದರ ಫಲಿತಾಂಶವೆಂದರೆ ಪ್ರಸ್ತುತ 30 ದಶಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಸರ್ಕಾರಿ ವೇತನ ಬೆಂಬಲ ಕಾರ್ಯಕ್ರಮಗಳ ಮೂಲಕ ಸಂಬಳ ನೀಡಲಾಗುತ್ತಿದೆ.
ಕೋವಿಡ್ ಸಾಂಕ್ರಾಮಿಕ ಭೀತಿಯು ಉದ್ಯೋಗಗಳನ್ನೇ ಕಸಿದುಕೊಳ್ಳುತ್ತಿದೆ. ವಿದೇಶಗಳಲ್ಲಿ ವಿಮಾನ ನಿಲ್ದಾಣಗಳು ಮತ್ತು ಆಸ್ಪತ್ರೆಗಳನ್ನು ಸ್ವಚ್ಚಗೊಳಿಸಲು ಈಗ ರೋಬೋಟ್‌ಗಳನ್ನು ವಾಡಿಕೆಯಂತೆ ಬಳಸಲಾಗುತ್ತಿದ್ದು, ಶೀಘ್ರದಲ್ಲೇ ಭಾರತಕ್ಕೂ ಬರಲಿದೆ. ದಿನಸಿ ವಸ್ತುಗಳನ್ನು ಬಿಲ್ ಮಾಡಲು, ಆಸ್ಪತ್ರೆಗಳಲ್ಲಿ ರೋಗಿಗಳನ್ನು ಸ್ವಾಗತಿಸಲು ಮತ್ತು ವೃದ್ಧರಿಗೆ ಆರೈಕೆ ನೀಡಲು ಸಹ ಅವುಗಳನ್ನು ಬಳಸಲಾಗುತ್ತಿದೆ.
ಈ ಜಾಗತಿಕ ಉದ್ಯೋಗ ನಷ್ಟವು ವರ್ಷಗಳ ಬೇಡಿಕೆಯನ್ನು ಕುಂಠಿತಗೊಳಿಸುತ್ತದೆ. ಇದು ಉಳಿತಾಯದ ಕೊರತೆ, ಕಡಿಮೆ ಹೂಡಿಕೆಗಳು ಮತ್ತು ನಿಧಾನಗತಿಯ ಜಾಗತಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಸಾಂಕ್ರಾಮಿಕ ರೋಗವು ಸಂಭವಿಸುವ ಮೊದಲೇ ಪ್ರಾರಂಭವಾದ ಅಮೇರಿಕಾ ಮತ್ತು ಚೀನಾ ನಡುವಿನ ಹೊಸ ಶೀತಲ ಸಮರವು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಜಾಗತೀಕರಣವು ಹಿಮ್ಮೆಟ್ಟುವಿಕೆಯೊಂದಿಗೆ ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಪರಿಣಾಮವು ತೀವ್ರವಾಗಿರುತ್ತದೆ. ಕಂಪನಿಗಳು ಉತ್ಪಾದನೆಯನ್ನು ಚೀನಾದಿಂದ ಹೊರಹಾಕಲು ಪ್ರಾರಂಭಿಸಿದಾಗ ಸರಬರಾಜು ಸರಪಳಿಗಳು ತುಂಡಾಗಲು ಪ್ರಾರಂಭಿಸಿವೆ. ಅಮೇರಿಕಾ ಈಗಾಗಲೇ ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ಯನ್ನು ಹೆಚ್ಚು ನಿಷ್ಕ್ರಿಯಗೊಳಿಸಿದೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಗಳಿಲ್ಲ.
ಈ ಕೋವಿಡ್ 19 ಜಾಗತಿಕ ಚಂಡಮಾರುತ ಭಾರತ ಪ್ರವೇಶಿಸಿದೆ. ಪ್ರಬಲವಾದ ಜನಸಂಖ್ಯೆಯಿಂದಾಗಿ ನಮಗೆ ಕರೋನಾ ವೈರಸ್ ರೋಗದ ಹೊರೆ ಕಡಿಮೆ ಇರುತ್ತದೆ. ನಮ್ಮ ಮಧ್ಯಮ ಆದಾಯದ ವರ್ಗ ನಮ್ಮ ಪ್ರತಿಸ್ಪರ್ಧಿಗಳಾದ ಮೆಕ್ಸಿಕೊ, ಇಂಡೋನೇಷ್ಯಾ ಮತ್ತು ಬ್ರೆಜಿಲ್ ಗಿಂತ ನಮ್ಮ ಆರ್ಥಿಕ ಪರಿಸ್ಥಿತಿ ಹೆಚ್ಚು ಸ್ಥಿರವಾಗಿದೆ. ನಮ್ಮ ತಾಂತ್ರಿಕ ಪರಾಕ್ರಮ ಮತ್ತು ಸುಧಾರಿತ ಐಟಿ ಕೌಶಲ್ಯಗಳ ದೃಷ್ಟಿಯಿಂದ ನಾವು ಉತ್ತಮ ಸ್ಥಾನದಲ್ಲಿದ್ದೇವೆ.
ಅದೇನೇ ಇದ್ದರೂ, ಜಾಗತಿಕ ಆರ್ಥಿಕ ಚಂಡಮಾರುತವು ನಮ್ಮ ಬೆಳವಣಿಗೆಗೆ ತೀವ್ರವಾದ ತಡೆಗಳನ್ನು ಸೃಷ್ಟಿಸುತ್ತದೆ. ಮೊದಲನೆಯದಾಗಿ, ಸರಕು ರಫ್ತುಗಳಲ್ಲಿ ನಾವು ಗಮನಾರ್ಹ ಕುಸಿತವನ್ನು ಕಾಣುವ ಸಾಧ್ಯತೆಯಿದೆ. ಅದು 2018 ರಲ್ಲಿ ಸುಮಾರು 320 ಬಿಲಿಯನ್ ಡಾಲರ್ ಆಗಿತ್ತು. ಈಗಾಗಲೇ ಮಾರ್ಚ್ ನಲ್ಲಿ ಭಾರತದ ಸರಕು ವ್ಯಾಪಾರವು ವರ್ಷದಿಂದ ವರ್ಷಕ್ಕೆ ಶೇ 34.6 ರಷ್ಟು ಕುಸಿತವನ್ನು ವರದಿ ಮಾಡಿದೆ. ನಾವು ದೇಶದ ದೊಡ್ಡ ಪ್ರಮಾಣದ ರಫ್ತು ಸರಕುಗಳಾದ ಪೆಟ್ರೋಲಿಯಂ ಉತ್ಪನ್ನಗಳು, ರತ್ನಗಳು, ಜವಳಿ ಮತ್ತು ವಾಹನ ಸರಕುಗಳು ಎಲ್ಲವೂ ಪ್ರಪಂಚದಾದ್ಯಂತ ಬೇಡಿಕೆಯ ಕುಸಿತವನ್ನು ಎದುರಿಸುತ್ತಿದೆ. ನಮ್ಮ ಸೇವೆಗಳ ರಫ್ತುಗಳನ್ನು ಐಟಿ / ಬಿಪಿಓ ಸೇವೆಗಳು ಮುನ್ನಡೆಸುತ್ತವೆ ಮತ್ತು ಅವು ಕೂಡ ಈಗಾಗಲೇ ಗಮನಾರ್ಹ ಬೆಲೆ ಮತ್ತು ಪರಿಮಾಣದ ಒತ್ತಡಗಳನ್ನು ಅನುಭವಿಸಲು ಪ್ರಾರಂಭಿಸಿವೆ.
ನಮ್ಮ ದೇಶಕ್ಕೆ ಅನಿವಾಸಿ ಭಾರತೀಯರು ನೀಡುತ್ತಿರುವ ಕೊಡುಗೆ ಸಣ್ಣದೇನಲ್ಲ. ವಿದೇಶಗಳಲ್ಲಿ ಉದ್ಯೋಗಸ್ಥ ಭಾರತೀಯರು ದೇಶಕ್ಕೆ ವಾರ್ಷಿಕ ಸುಮಾರು 83 ಬಿಲಿಯನ್ ಡಾಲರ್ ಗಳಷ್ಟು ಹಣ ಕಳಿಸುತ್ತಾರೆ. ವಿದೇಶದಲ್ಲಿರುವ ಲಕ್ಷಾಂತರ ಭಾರತೀಯರು ಈಗಾಗಲೇ ಸ್ವದೇಶಕ್ಕೆ ಮರಳುತಿದ್ದು ಈ ರವಾನೆ ಗಣನೀಯವಾಗಿ ಕುಸಿಯುತ್ತದೆ. ಇಷ್ಟು ಸವಾಲುಗಳು ನಮ್ಮ ಮುಂದಿರುವಾಗ ಕೇಂದ್ರ ಸರ್ಕಾರ ಬರೀ ಘೋಷಣೆಗಳ, ಪ್ರಚಾರಗಳ ಮೂಲಕ ಆರ್ಥಿಕತೆಯನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ. ಇದಕ್ಕೆ ರಚನಾತ್ಮಕ ಪರಿಣಾಮಕಾರಿ ಉತ್ತೇಜನ ಪ್ಯಾಕೇಜ್ ಮತ್ತು ನೀತಿ ರೂಪಿಸಬೇಕಿದೆ. ಇದು ಕೇಂದ್ರ ಸರ್ಕಾರಕ್ಕಿರುವ ಸವಾಲು ಮತ್ತು ಅದರ ಜವಾಬ್ದಾರಿ ಕೂಡ.