ಇಂದಿನ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜಗತ್ತೇ ಎದುರು ನೋಡುತ್ತಿರುವ ಅತ್ಯಂತ ದೊಡ್ಡ ವಿಚಾರವೆಂದರೆ ಕೋವಿಡ್ ವ್ಯಾಕ್ಸಿನ್. ಕೋವಿಡ್‌ಗೆ ಯಾವುದೇ ಚಿಕಿತ್ಸೆ ಈಗ ಲಭ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಲಸಿಕೆ ಕಂಡುಹಿಡಿದಲ್ಲಿ ಕೊವಿಡ್ ಅನ್ನು ಮಟ್ಟಹಾಕಲು ಸಾಧ್ಯ ಎಂಬುದು ಎಲ್ಲಾ ತಜ್ಞರ ಅಭಿಪ್ರಾಯ. ಕೋವಿಡ್‌ಗೆ ಲಸಿಕೆ ಕಂಡು ಹುಡುಕುವ ಪ್ರಯತ್ನದಲ್ಲಿರುವ ವಿಜ್ಞಾನಿಗಳು ಕೂಡಾ, ಆದಷ್ಟು ಶೀಘ್ರದಲ್ಲಿ ಈ ಪ್ರಯತ್ನದಲ್ಲಿ ಸಫಲರಾಗುವ ಇಚ್ಚೆ ಹೊಂದಿದ್ದರೂ, ಲಸಿಕೆ ಕುರಿತಾಗಿ ಸಾಕಷ್ಟು ಊಹಾಪೋಹಗಳು ಈಗಾಗಲೇ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಡಾ. ಆಂಟನಿ ಫೌಚಿ ಎಂಬ ಅಮೇರಿಕಾ ಮೂಲದ ವಿಜ್ಞಾನಿ ಹಾಗೂ ಅಮೇರಿಕಾದ ಅಲರ್ಜಿ ಮತ್ತು ಸೋಂಕು ಅಧ್ಯಯನ ಕೇಂದ್ರದ ನಿರ್ದೇಶಕ ಹೇಳಿವ ಪ್ರಕಾರ, ಈ ಕರೋನಾ ಸೋಂಕು ಹೆಚ್‌ಐವಿಗಿಂತಲೂ ಸಂಕೀರ್ಣವಾದದ್ದು. ಈವರೆಗೆ HIV ಅನ್ನು ಸಂಕೀರ್ಣವಾದ ವೈರಸ್ ಎಂದು ಕೊಂಡಿದ್ದೆವು, ಆದರೆ, ಈಗ ಅದಕ್ಕಿಂತಲೂ ಸಂಕೀರ್ಣವಾದ ವೈರಸ್ ನಮ್ಮ ಮಧ್ಯದಲ್ಲಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
1984ರಲ್ಲಿ ಅಮೇರಿಕಾದ ಆರೋಗ್ಯ ಮತ್ತು ಮಾನವ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿದ್ದ ಮಾರ್ಗರೆಟ್ ಹೆಕ್ಲರ್ ಅವರು, ಇನ್ನು ಕೇವಲ 2 ವರ್ಷಗಳಲ್ಲಿ HIVಗೆ ಮದ್ದು ಕಂಡುಹುಡುಕುವ ಭರವಸೆಯನ್ನು ನೀಡಿದ್ದರು. ಈಗ ಸುಮಾರು ನಾಲ್ಕು ದಶಕಗಳು ಕಳೆದರೂ HIVಗೆ ಯಾವುದೇ ರೀತಿಯ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ, ಎಂಬ ಕಟು ಸತ್ಯ ನಮ್ಮ ಮುಂದಿದೆ ಎಂದಿದ್ದಾರೆ ಫೌಚಿ.
ಸದ್ಯಕ್ಕೆ ಪ್ರತಿಯೊಬ್ಬರು, ಕೋವಿಡ್ ಲಸಿಕೆಯನ್ನು ಅತೀ ಶೀಘ್ರದಲ್ಲಿ ಕಂಡುಹಿಡಿಯುವ ಹಪಾಹಪಿಯಲ್ಲಿದ್ದಾರೆ. ಆದರೆ, ವಿಜ್ಞಾನಿಗಳು ಹೇಳುವ ಪ್ರಕಾರ ಕರೋನಾ ವೈರಸ್‌ನ ಕುರಿತು ಅರಿಯುವ ಮೊದಲ ಹಂತದಲ್ಲಿದ್ದಾರೆಯೇ ಹೊರತು, ಅದನ್ನು ಮಟ್ಟಹಾಕಲು ಬೇಕಾಗುವಷ್ಟು ಅಧ್ಯಯನ ಇನ್ನೂ ನಡೆದಿಲ್ಲ. ಆತುರದಲ್ಲಿ ಆಗುವ ಅಧ್ಯಯನಗಳು ಯಾವತ್ತೂ ಫಲ ನೀಡುವುದಿಲ್ಲ, ಅದಕ್ಕೂ ಹೆಚ್ಚಾಗಿ ಇದರಿಂದ ಆಗುವ ಅನಾಹುತಗಳೇ ಹೆಚ್ಚು, ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಫೌಚಿ ಹೇಳುವ ಪ್ರಕಾರ, ಈಗ ಲಸಿಕೆ ಲಭ್ಯವಾದರೂ ಯಾರಿಗೆ ಎಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ನೀಡಬೇಕು ಎಂಬುದು ಯಾರಿಗೂ ತಿಳಿದಿಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ ಅಪಾಯವಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ದರವರೆಗೂ ಅತೀ ಹೆಚ್ಚಿನ ಪ್ರಮಾಣದ ರೋಗ ನಿರೋಧಕ ಶಕ್ತಿ ಅಂಗಾಂಗ ವೈಫಲ್ಯಕ್ಕೂ ಕಾರಣವಾಗಬಹುದು.
ಇನ್ನು ಫಾರ್ಮಾ ಕಂಪೆನಿಗಳು ನಾ ಮುಂದು ತಾ ಮುಂದು ಎಂದು ಹೇಳಿ ಕೋವಿಡ್ ಲಸಿಕೆಯ ಪ್ರತಿಷ್ಟೆಯನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಆಘಾತಕಾರಿ. ಅಂತಾರಾಷ್ಟ್ರೀಯ ಕಂಪೆನಿಯೊಂದು ಮೇ ತಿಂಗಳ ಮಧ್ಯಭಾಗದಲ್ಲಿ ತಾವು ತಯಾರಿಸಿದ ಲಸಿಕೆ ಕೋವಿಡ್ ವಿರುದ್ದ ಹೋರಾಡುವಲ್ಲಿ ಸಫಲವಾಗಿದೆ ಎಂದು ಹೇಳಿತ್ತು. ಇನ್ನು ಜೂನ್ ತಿಂಗಳಲ್ಲಿ ಈ ಕುರಿತಾಗಿ ʼದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ʼನಲ್ಲಿ ಲೇಖನವನ್ನು ಕೂಡಾ ಪ್ರಕಟ ಮಾಡಿತ್ತು. ಇದು ಕೇವಲ ಆರಂಭಿಕ ಗೆಲುವಷ್ಟೇ ಹೊರತಾಗಿ ಇದೇ ಯುದ್ದದ ಕೊನೆಯಾಗಿರಲಿಲ್ಲ. ಆ ಕಂಪೆನಿಯು ಮಾನವ ಪ್ರಯೋಗ ನಡೆಸಿದ ವ್ಯಕ್ತಿಗಳಲ್ಲಿ ಲಸಿಕೆಯ ಸೈಡ್ ಎಫೆಕ್ಟ್ಸ್ ಕೂಡಾ ಕಂಡು ಬಂದಿತ್ತು. ಹೀಗಾಗೀ ಆ ಕಂಪೆನಿಯ ಕಲಸಿಕೆಯ ಕುರಿತಾಗಿ ಹಲವು ವಿಜ್ಞಾನಿಗಳು ಎಚ್ಚರಿಕೆಯನ್ನು ನೀಡಿದ್ದರು ಕೂಡಾ.
ಈ ರೀತಿಯ ಹಪಾಹಪಿಯ ಕಾರಣದಿಂದಾಗಿ ಕೋವಿಡ್ ಲಸಿಕೆಯ ಕುರಿತಾದ ಅಧ್ಯಯನಗಳು ಸಾಕಷ್ಟು ತುರಾತುರಿಯಲ್ಲಿ ನಡೆಯುತ್ತಿವೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಭಾರತದ ಸಾಕಷ್ಟು ಫಾರ್ಮಾ ಕಂಪೆನಿಗಳು ಕೂಡಾ ಕೋವಿಡ್ ಲಸಿಕೆ ತಯಾರಿಸುವುದರಲ್ಲಿ ನಿರತವಾಗಿವೆ. ಭಾರತದ ಏಳು ಫಾರ್ಮಾ ಕಂಪೆನಿಗಳು ಕೋವಿಡ್ ಲಸಿಕೆ ತಯಾರಿಸುವ ರೇಸ್‌ನಲ್ಲಿವೆ. ಸಾಮಾನ್ಯವಾಗಿ ಲಸಿಕೆಯನ್ನು ಕಂಡುಹಿಡಿಯಲು ವರ್ಷಗಳೇ ಬೇಕಾಗುತ್ತವೆ. ಆದರೆ, ಈ ಬಾರಿ ಕೆಲವೇ ತಿಂಗಳುಗಳಲ್ಲಿ ಲಸಿಕೆಯನ್ನು ಕಂಡುಹಿಡಿಯುವ ಭರವಸೆಯನ್ನು ವಿಜ್ಞಾನಿಗಳು ನೀಡಿದ್ದಾರೆ.

ಭಾರತ್ ಬಯೋಟೆಕ್ ಎಂಬ ಫಾರ್ಮಾ ಕಂಪೆನಿಯು ತಮ್ಮ ಲಸಿಕೆ ʼಕೊವಾಕ್ಸಿನ್ʼನ ಕ್ಲಿನಿಕಲ್ ಟೆಸ್ಟ್‌ಗಾಗಿ ಈಗಾಗಲೇ ಅನುಮತಿಯನ್ನು ಪಡೆದುಕೊಂಡಿದ್ದು, ಶೀಘ್ರದಲ್ಲಿಯೇ ಭಾರತದಲ್ಲಿ ಕೋವಿಡ್ ಲಸಿಕೆಯನ್ನು ಬಿಡುಗಡೆಗೊಳಿಸುವ ಆಶಾಭಾವನೆಯನ್ನು ಮೂಡಿಸಿದೆ.
ಲಸಿಕೆಯನ್ನು ತಯಾರಿಸಿದ ನಂತರ ಅದರ ಸಾಮರ್ಥ್ಯ ಹಾಗೂ ಅದರಿಂದಾಗುವ ದುಷ್ಪರಿಣಾಮಗಳನ್ನು ಪರೀಕ್ಷಿಸಲು ನಾಲ್ಕು ಹಂತಗಳಲ್ಲಿ ಟೆಸ್ಟ್‌ಗಳು ನಡೆಯುತ್ತವೆ. ಮೊದಲನೇಯದು Pre-Clinical Test. ಇದರಲ್ಲಿ ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ ಲಸಿಕೆಯ ಅಧ್ಯಯನವನ್ನು ನಡೆಸಲಾಗುತ್ತದೆ. ಇದಾದ ನಂತರ ಮಾನವನ ಮೇಲೆ ಮೂರು ಹಂತಗಳಲ್ಲಿ ಪ್ರಯೋಗ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಸಣ್ಣ ಗುಂಪಿನ ಮೇಲೆ ಪ್ರಯೋಗ ನಡೆಸಿ ಅಧ್ಯಯನ ನಡೆಸಿದರೆ, ಇದರ ಫಲಿತಾಂಶದ ಮೇಲೆ ಅವಲಂಬಿತವಾಗಿ ಹಾಗೂ ಹೆಚ್ಚಿನ ಸುರಕ್ಷಾ ಕ್ರಮಗಳನ್ನು ಕೈಗೊಂಡು ಎರಡನೇ ಹಂತವನ್ನು ಆರಂಭಿಸಲಾಗುತ್ತದೆ. ಈ ಎರಡೂ ಹಂತಗಳಲ್ಲಿ ಲಸಿಕೆಯಿಂದ ಯಾವುದೇ ತೊಂದರೆ ಉಂಟಾಗದಲ್ಲಿ ಮೂರನೇ ಹಾಗೂ ಕೊನೇಯ ಹಂತದ ಪರೀಕ್ಷೆಯಾಗಿ ನೂರಾರು ಜನರಿಗೆ ಈ ಲಸಿಕೆಯನ್ನು ನೀಡಲಾಗುತ್ತದೆ. ಇದರಲ್ಲೂ ಯಶಸ್ಸನ್ನು ಕಂಡರೆ ಮಾತ್ರ ಆ ಲಸಿಕೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಬಿಡುಗಡೆಗೊಳಿಸಬಹುದು.
ಡಾ. ಫೌಚಿ ಹೇಳುವ ಪ್ರಕಾರ ಈ ವರ್ಷದ ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಮೊತ್ತ ಮೊದಲ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ.
ಈ ಎಲ್ಲಾ ಅಂಶಗಳನ್ನು ಗಮದಲ್ಲಿಟ್ಟುಕೊಂಡು ನೋಡಿದಾಗ ಕೋವಿಡ್ ಲಸಿಕೆ ಅತೀ ಶೀಘ್ರದಲ್ಲಿ ನಮಗೆ ತಲುಪುವುದು ಅಸಾಧ್ಯವೆಂದು ಅನಿಸುತ್ತದೆ. ಇದಕ್ಕೂ ಮಿಗಿಲಾಗಿ, ಅತೀ ಶೀಘ್ರದಲ್ಲಿ ಕೋವಿಡ್ ಲಸಿಕೆ ದೊರಕಬೇಕು ಎಂಬ ತುರಾತುರಿ ಬೇರೆ ಇನ್ನಾವುದಾದರೂ ಅವಘಡಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.
ಹಾಗಾಗಿ, ಈ ಕೋವಿಡ್ ಲಸಿಕೆ ಎಂಬ ಚದುರಂಗದಾಟದಲ್ಲಿ ಅವಸರದ ಹಾಗೂ ಆತುರದ ನಿರ್ಣಯ ಅಥವಾ ನಡೆ ನಿಜಕ್ಕೂ ಮಾರಕವಾಗಿ ಪರಿಣಮಿಸಬಹುದು. ಕೋವಿಡ್ ಕುರಿತಾಗಿ ಸಾಕಷ್ಟು ಭಯಭೀತರಾಗಿರುವ ಜನರು, ಲಸಿಕೆಯ ಮೇಲೆ ತಮ್ಮ ಸಂಪೂರ್ಣವಾದ ನಂಬಿಕೆಯನ್ನು ಇರಿಸಿಕೊಂಡಿದ್ದಾರೆ. ಈ ನಂಬಿಕೆ ನಿಜವಾಗುವುದು ಖಂಡಿತ ಆದರೆ ಎಂದು ನಿಜವಾಗುವುದು ಎಂಬುದನ್ನು ಕಾದು ನೋಡಬೇಕಷ್ಟೇ.