ಕೋವಿಡ್ ರೋಗಿಗಳಿಗೆ ಹಾಸಿಗೆ ನೀಡದ ಆರೋಪದಲ್ಲಿ ಬೆಂಗಳೂರಿನ ಎರಡು ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್ ಮುಚ್ಚಿಸಿದ್ದಾರೆ. 48 ಗಂಟೆಗಳ ಕಾಲ ಹೊರರೋಗಿ ವಿಭಾಗವನ್ನು ಮುಚ್ಚಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಸರ್ಕಾರ ಶಿಫಾರಸ್ಸು ಮಾಡಿರುವಂತೆ ಹಾಸಿಗೆಗಳನ್ನು ನೀಡಬೇಕೆಂದು ಸೂಚಿಸಿದ್ದಾರೆ.
ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳು 50 ಶೇಕಡಾ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ನೀಡಬೇಕು. ಸರ್ಕಾರ ಶಿಫಾರಸ್ಸು ಮಾಡಿರುವ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ವಿಕ್ರಂ ಆಸ್ಪತ್ರೆ ಹಾಗೂ ಜಯನಗರದ ಅಪೋಲೋ ಆಸ್ಪತ್ರೆಯ ಹೊರರೋಗಿ ವಿಭಾಗವನ್ನು ಮುಂದಿನ 48 ಗಂಟೆಗಳ ಕಾಲ ಮುಚ್ಚಿಸಲಾಗಿದೆ.
ಕೋವಿಡ್ ರೋಗಿಗಳಿಗೆ ದಾಖಲಾತಿ ಹಾಗೂ ಚಿಕಿತ್ಸೆಯನ್ನು ನೀಡುತ್ತಿಲ್ಲವೆಂದು ಕಂಡುಬಂದಿದ್ದು, ಇದರಿಂದಾಗಿ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆ(1897) ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ (2005) KPME ಕಾಯ್ದೆಗಳ ಉಲ್ಲಂಘನೆಯಾಗಿದೆ. ಹಾಗಾಗಿ ಸಂಸ್ಥೆಯ ಪರವಾನಗಿಯನ್ನು ರದ್ದುಗೊಳಿಸುವುದು ಹಾಗೂ ಕಾಯ್ದೆಯನ್ವಯ ಶಿಸ್ತುಕ್ರಮ ಯಾಕೆ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ನೋಟೀಸ್ ಕಳುಹಿಸಲಾಗಿತ್ತು. ಒಂದು ದಿನದೊಳಗೆ ಉತ್ತರ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ನೋಟಿಸಿನಲ್ಲಿ ಸೂಚಿಸಲಾಗಿತ್ತು.
ಆದರೆ ಆಸ್ಪತ್ರೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆಯಲ್ಲಿ 48 ಗಂಟೆಗಳ ಕಾಲ ಹೊರರೋಗಿಗಳ ಚಿಕಿತ್ಸೆ ಸೇವೆಯನ್ನು ನಿಲ್ಲಿಸಲು ಆದೇಶಿಸಲಾಗಿದೆ. ಇದು ತಪ್ಪಿದ್ದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆ(1897) ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ (2005) KPME ಕಾಯ್ದೆ ಉಲ್ಲಂಘನೆ ಮಾಡಲಾಗಿದೆಯೆಂದು KPME ಪರವಾಣಿಗೆಯನ್ನು ರದ್ದು ಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

			
                                
                                
                                
