ಭಾರತದಲ್ಲಿ ಕೋವಿಡ್ ಚಿಕಿತ್ಸೆಗೆ ಪ್ರಮುಖವಾಗಿ ಬಳಕೆಯಲ್ಲಿರುವ ಮತ್ತು ಪರಿಣಾಮಕಾರಿ ಎಂದು ವೈದ್ಯಕೀಯ ವಲಯ ಭಾವಿಸಿರುವ ರೆಮಿಡೆಸಿವರ್ ಔಷಧಿ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ(WHO) ನಿಷೇಧಿಸಿದೆ.
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಮತ್ತು ಉಸಿರಾಟದ ತೊಂದರೆ ಸೇರಿದಂತೆ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ ಪ್ರಮುಖವಾಗಿ ಭಾರತದಲ್ಲಿ ಬಳಕೆಯಲ್ಲಿರುವ ಎರಡು ಔಷಧಿಗಳ ಪೈಕಿ ರೆಮಿಡೆಸಿವರ್ ಒಂದಾಗಿದ್ದು, ಸದ್ಯ ಭಾರತದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕೋವಿಡ್ ರೋಗಿಗಳ ಜೀವರಕ್ಷಕವಾಗಿ ಬಳಸಲಾಗುತ್ತಿದೆ.
ಅಮೆರಿಕದ ಗಿಲೀಡ್ ಕಂಪನಿಯ ಅಭಿವೃದ್ಧಿಪಡಿಸಿರುವ ಈ ರೆಮಿಡೆಸಿವರ್ ಔಷಧ, ಸದ್ಯ ಭಾರತದಲ್ಲಿ ಸಿಪ್ಲಾ, ಹೆಟಿರೋ, ಜುಬಿಲಿಯಂಟ್ ಮತ್ತು ಮೈಲಾನ್ ಕಂಪನಿಗಳು ಬೇರೆಬೇರೆ ಹೆಸರಿನಲ್ಲಿ ಸ್ಥಳೀಯವಾಗಿ ಉತ್ಪಾದನೆ ಮಾಡಿ ಮಾರಾಟಮಾಡುತ್ತಿವೆ. ತುರ್ತು ಸಂದರ್ಭದಲ್ಲಿ ಬಳಕೆಯಾಗುತ್ತಿದ್ದು, ಸುಮಾರು 4000 ಸಾವಿರ ರೂ.ನಿಂದ 5400 ರೂ.ವರೆಗೆ ಮಾರಾಟವಾಗುತ್ತಿದೆ. ಮುಖ್ಯವಾಗಿ ಈ ಔಷಧಿಗಳ ಬೆಲೆ ಮೇಲೆ ಸರ್ಕಾರದ ನಿರ್ಬಂಧವಿಲ್ಲದೇ ಇರುವುದರಿಂದ ಒಂದೊಂದು ಕಂಪನಿ ಒಂದೊಂದು ದರ ಮತ್ತು ಒಂದೊಂದು ಹೆಸರಿನಲ್ಲಿ ಇದನ್ನು ಮಾರಾಟ ಮಾಡುತ್ತಿವೆ ಮತ್ತು ದೇಶದ ವೈದ್ಯಕೀಯ ವಲಯ ಕೂಡ ಪ್ರಮುಖವಾಗಿ ಬಳಸುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೋವಿಡ್ ಸೋಂಕು ಆರಂಭದಲ್ಲಿ ಕಳೆದ ಮೇ ತಿಂಗಳಲ್ಲಿ ತೀರಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ರೆಮಿಡೆಸಿವರ್ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ, ಆ ಬಳಿಕ ಜೂನ್ ಮೊದಲ ವಾರ ಕೋವಿಡ್ ಚಿಕಿತ್ಸೆಯಲ್ಲಿ ಸಾಮಾನ್ಯ ಬಳಕೆಗೆ ಕೂಡ ಭಾರತೀಯ ಔಷಧ ನಿಯಂತ್ರಣಾಧಿಕಾರಿ(ಡಿಸಿಜಿಐ) ಅನುಮತಿ ನೀಡಿತ್ತು. ಆ ಬಳಿಕ ಕೋವಿಡ್ ರೋಗಿಗಳ ಜೀವರಕ್ಷಣೆಯ ನಿಟ್ಟಿನಲ್ಲಿ ಈ ಔಷಧ ಜೀವರಕ್ಷಕ ಸಂಜೀವಿನಿ. ನಿರ್ದಿಷ್ಟ ವ್ಯಾಕ್ಸಿನ್ ಅಥವಾ ಔಷಧ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಸದ್ಯಕ್ಕೆ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸುವ ಮತ್ತು ಜೀವಕ್ಕೆ ಇರುವ ಅಪಾಯವನ್ನು ಮುಂದೂಡುವ ನಿಟ್ಟಿನಲ್ಲಿ ಪರಿಣಾಮಕಾರಿ ಔಷಧವಾಗಿ ಇದು ವರದಾನ ಎಂದೇ ಹೇಳಲಾಗಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಕೋವಿಡ್ ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ರಾಮಬಾಣ ಎನ್ನುತ್ತಿದ್ದಂತೆ ಭಾರತವೂ ಸೇರಿ ವಿಶ್ವಾದ್ಯಂತ ಆ ಔಷಧದ ಬಳಕೆಗೆ ಪೈಪೋಟಿ ಏರ್ಪಟ್ಟಿತ್ತು. ಆದರೆ, ಅದಾದ ಕೆಲವೇ ದಿನಗಳಲ್ಲಿ ಸ್ವತಃ ಕೋವಿಡ್ ಸೋಂಕಿತನಾದ ಟ್ರಂಪ್ ಗೆ ಚಿಕಿತ್ಸೆ ನೀಡಲು ರೆಮಿಡೆಸಿವರ್ ಬಳಸಲಾಯಿತು. ಆ ಮಟ್ಟಿಗೆ ರೆಮಿಡೆಸಿವರ್ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಯಿತು. ಸುಮಾರು 127 ದೇಶಗಳಲ್ಲಿ ಸದ್ಯ ಕೋವಿಡ್ ಚಿಕಿತ್ಸೆಯಲ್ಲಿ ಈ ಔಷಧವನ್ನು ಬಳಸಲಾಗುತ್ತಿದೆ. ಔಷಧ ಉತ್ಪಾದನೆ ಮತ್ತು ಮಾರುಕಟ್ಟೆಯ ವಿಷಯದಲ್ಲಿ ಭಾರತ ಮತ್ತು ಬಾಂಗ್ಲಾದ ಕೆಲವು ಕಂಪನಿಗಳ ನಡುವೆ ತೀವ್ರ ಪೈಪೋಟಿ ಕೂಡ ಇತ್ತು.
ಪ್ರಮುಖವಾಗಿ ಸೋಂಕಿನ ಮೊದಲ 2ರಿಂದ 14 ದಿನಗಳ ಅವಧಿಯ ಮೊದಲ ಎರಡು ಹಂತದಲ್ಲಿ ಈ ಔಷಧ ಪರಿಣಾಮಕಾರಿ. ಇದರ ನಿಯಂತ್ರಿತ ಬಳಕೆಯಿಂದ ರೋಗ ಉಲ್ಬಣವಾಗುವ ಅವಧಿಯನ್ನು ಪರಿಣಾಮಕಾರಿಯಾಗಿ ಮುಂದೂಡಬಹುದು. ಆ ಮೂಲಕ ರೋಗಿಯಲ್ಲಿ ವೈರಾಣು ನಿರೋಧದ ಪ್ರತಿಕಾಯಗಳ ಉತ್ಪಾದನೆಗೆ ಬೇಕಾದ ಸಮಯಾವಕಾಶ ದೊರೆಯುತ್ತದೆ. ಮತ್ತು ಹೆಚ್ಚಿನ ವೈದ್ಯಕೀಯ ಮಧ್ಯಪ್ರವೇಶದ ಮೂಲಕ ಜೀವ ಉಳಿಸಲು ಕೂಡ ಸಮಯಾವಕಾಶ ಸಿಗುತ್ತದೆ. ಜೊತೆಗೆ ವೈರಾಣು ವೃದ್ಧಿಯ ಮೇಲೆ ಕೂಡ ಇದು ಕಡಿವಾಣ ಹಾಕುತ್ತದೆ ಎಂಬುದು ಪ್ರಮುಖವಾಗಿ ವೈದ್ಯಕೀಯ ವಲಯ ಈ ಔಷಧಿಯ ಬಗ್ಗೆ ಆಸಕ್ತಿ ತೋರಲು ಇದ್ದ ಕಾರಣ.
ಆದರೆ, ಇದೀಗ ವಿಶ್ವ ಆರೋಗ್ಯ ಸಂಸ್ಥೆ ಈ ಔಷಧ ಕೋವಿಡ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದು, ಕೂಡಲೇ ಇದರ ಬಳಕೆಯನ್ನು ಕೈಬಿಡಬೇಕು ಎಂದು ಶುಕ್ರವಾರ ಘೋಷಿಸಿದೆ.

ರೋಗಿಯ ಸ್ಥಿತಿ ಹೇಗಾದರೂ ಇರಲಿ; ಯಾವುದೇ ಸ್ಥಿತಿಯಲ್ಲಿದ್ದರೂ ಅವರಿಗೆ ರೆಮಿಡೆಸಿವರ್ ಕೊಡುವುದರಿಂದ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚು ಎಂಬುದಕ್ಕಾಗಲೀ, ಅಥವಾ ಅವರಿಗೆ ವೆಂಟಿಲೇಟರ್ ಅಗತ್ಯ ಬೀಳದಂತೆ ತಡೆಯುತ್ತದೆ ಎಂಬುದಕ್ಕಾಗಲೀ ಯಾವುದೇ ವೈದ್ಯಕೀಯ ಪುರಾವೆ ಇಲ್ಲ. ಆ ಹಿನ್ನೆಲೆಯಲ್ಲಿ ಕೋವಿಡ್ ರೋಗಿಗಳಿಗೆ ಯಾವುದೇ ಸಂದರ್ಭದಲ್ಲಿಯೂ ಈ ಔಷಧ ನೀಡುವುದನ್ನು ತಾನು ಶಿಫಾರಸು ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
ಈ ಔಷಧ ಕೋವಿಡ್ ರೋಗಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ನಡೆಸಲು ಸಮಿತಿ(ಸಾಲಿಡಾರಿಟಿ ಟ್ರಯಲ್) ರಚಿಸಲಾಗಿತ್ತು. ಆ ಸಮಿತಿಯ ಅಧ್ಯಯನದಲ್ಲಿ ಇದು ರೋಗಿಯ ಪರಿಸ್ಥಿತಿಯನ್ನು ಉತ್ತಮಗೊಳಿಸುವಲ್ಲಿ ಯಾವುದೇ ರೀತಿಯ ಪರಿಣಾಮ ಬೀರುವ ಬಗ್ಗೆ ಯಾವುದೇ ವೈದ್ಯಕೀಯ ಪುರಾವೆ ಸಿಕ್ಕಿಲ್ಲ. ಆ ಹಿನ್ನೆಲೆಯಲ್ಲಿ ಈ ಔಷಧದ ಬಳಕೆಯನ್ನು ಶಿಫಾರಸು ಮಾಡಲಾಗದು ಎಂದು ಹೇಳಿರುವ ಡಬ್ಲ್ಯೂಎಚ್ ಒ, ಸುಮಾರು ಏಳು ಸಾವಿರ ಮಂದಿ ಕೋವಿಡ್ ರೋಗಿಗಳ ಮೇಲೆ ನಡೆದ ಪ್ರಯೋಗದ ಮೂಲಕ ತಾನು ಈ ವಾಸ್ತವಾಂಶವನ್ನು ಕಂಡುಕೊಂಡಿದ್ದಾಗಿ ಹೇಳಿದೆ.
ಔಷಧದ ದುಬಾರಿ ದರ ಮತ್ತು ಅದನ್ನು ರೋಗಿಗೆ ನೀಡುವ ಸಂಕೀರ್ಣ ವಿಧಾನದ ಹಿನ್ನೆಲೆಯಲ್ಲಿ ಅದು ರೋಗಿಗಳ ಸಾವಿನ ಪ್ರಮಾಣ ಮತ್ತು ಅಪಾಯಕಾರಿ ಪರಿಸ್ಥಿತಿಯಿಂದ ಪಾರುಮಾಡುವ ವಿಷಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿತ್ತು. ಆದರೆ, ಈ ಪ್ರಯೋಗದಲ್ಲಿ ಅಂತಹ ಯಾವುದೇ ಗುಣಲಕ್ಷಣಗಳು ತನಗೆ ಕಂಡುಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಶಿಫಾರಸನ್ನು ಸಮರ್ಥಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ವಿಶ್ವದ ಇತರೆಡೆಯಂತೆ ಭಾರತದಲ್ಲಿ ಕೂಡ ಕೋವಿಡ್ ಚಿಕಿತ್ಸೆಯ ಮುಂದಿನ ದಾರಿಯ ಬಗ್ಗೆ ಪ್ರಶ್ನೆಗಳೆದ್ದಿವೆ. ಅದರಲ್ಲೂ ತುರ್ತು ನಿಗಾ ಘಟಕದಲ್ಲಿರುವ ಗಂಭೀರ ರೋಗಿಗಳ ಮೇಲೆ ಈ ಔಷಧ ಪ್ರಯೋಗ ಒಳ್ಳೆಯದಲ್ಲ ಎಂದು ವಿಶ್ವದ ಕೆಲವು ಪ್ರಮುಖ ವೈದ್ಯಕೀಯ ತಜ್ಞರು ಕೂಡ ಅಭಿಪ್ರಾಯ ಪಟ್ಟಿದ್ದು, ಸದ್ಯದ ಸ್ಥಿತಿಯಲ್ಲಿ ಬಹುತೇಕ ಈ ಔಷಧದ ಮೇಲೆಯೇ ಅವಲಂಬಿತವಾಗಿರುವ ಭಾರತದಂತಹ ಕಡೆ ಬದಲಿ ಪರ್ಯಾಯ ಚಿಕಿತ್ಸಾ ವಿಧಾನಗಳು ಯಾವುವು? ಎಂಬುದು ಆತಂಕ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಈ ಶಿಫಾರಸು ಭಾರತದ ಕೋವಿಡ್ ಚಿಕಿತ್ಸಾ ವಿಧಾನದ ಮೇಲೆ ಮತ್ತು ಅಂತಿಮವಾಗಿ ರೋಗಿಗಳ ಮೇಲೆ ಬೀರುವ ಪರಿಣಾಮಗಳನ್ನು ಕಾದುನೋಡಬೇಕಿದೆ.