ರಾಜ್ಯದಲ್ಲಿ ಕರೋನಾ ಸೋಂಕಿನ ಪ್ರಭಾವದ ಕುರಿತು ಅಧ್ಯಯನ ಮಾಡಲು ಕೇಂದ್ರದ ಅಧಿಕಾರಿಗಳ ತಂಡವೊಂದು ರಾಜ್ಯಕ್ಕೆ ಆಗಮಿಸಿದೆ. ಕೇಂದ್ರದಿಂದ ಬಂದಿರುವ ತಂಡ ರಾಜ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆಗೆ ಸಭೆ ನಡೆಸಿ ಬಳಿಕ ಕಂಟೈನ್‌ಮೆಂಟ್ ಝೋನ್‌ಗಳಿಗೆ ಭೇಟಿ ನೀಡಿ ಕಂಟೈನ್‌ಮೆಂಟ್ ಝೋನ್‌ನ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲಿದೆ.
ಕರೋನಾ ಎದುರಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ರಾಜ್ಯ ಸರ್ಕಾರದಿಂದ ಮಾಹಿತಿ ಪಡೆಯಲಿದೆ. ರಾಜ್ಯದಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳ ಅಂಕಿಸಂಖ್ಯೆ, ಯಾವ ಹಂತದಲ್ಲಿ ಹೇಗೆ ಸೋಂಕು ಹರಡಿದೆ, ಲಾಕ್ ಡೌನ್ ನಂತರ ಮತ್ತು ಲಾಕ್ ಡೌನ್ ಸಡಿಲಿಕೆಯ ಬಳಿಕ ಕರೋನಾ ಸೋಂಕು ಹೇಗೆ ಹರಡಿದೆ, ಸಾವಿನ ಪ್ರಮಾಣ ಎಷ್ಟು, ಯಾವ ಜಿಲ್ಲೆಯಲ್ಲಿ ಹೆಚ್ಚು ಮರಣ ಪ್ರಮಾಣವಿದೆ, ಕೋವಿಡ್ ಕೇರ್ ಸೆಂಟರ್, ಕಂಟೈನ್‌ಮೆಂಟ್ ಝೋನ್ ಎಷ್ಟಿದೆ ಮುಂತಾದ ಅಂಕಿಅಂಶಗಳನ್ನು ತಂಡ ಕಲೆ ಹಾಕಲಿದೆ. ರಾಜ್ಯದಲ್ಲಿ ಕ್ವಾರಂಟೈನ್ ನಿಯಮಗಳು ಹೇಗಿದೆ, ಹೆಚ್ಚು ಪ್ರಕರಣಗಳಿರುವ ಪ್ರದೇಶದಲ್ಲಿ ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂಬುವುದನ್ನೂ ಅಧಿಕಾರಿಗಳ ತಂಡ ಗಮನಿಸಲಿದೆ.

ಕೇಂದ್ರದ ಅಧಿಕಾರಿಗಳ ತಂಡದೊಂದಿಗೆ ಭೇಟಿಗೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಚರ್ಚೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ, ಆರೋಗ್ಯ ಸಚಿವ ಶ್ರೀರಾಮುಲು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಭಾಗಿ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. ಚರ್ಚೆಯಲ್ಲಿ ಕೊವೀಡ್ ತಡೆಗೆ ಕೈಗೊಂಡ ಕ್ರಮ ಗಳ ಬಗ್ಗೆ, ಕೇಂದ್ರದ ಅಧಿಕಾರಿಗಳ ಮುಂದೆ ಮಂಡಿಸಬೇಕಾದ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತು.
ಐದು ಅಧಿಕಾರಿಗಳ ನೇತೃತ್ವದ ತಂಡ ಮಧ್ಯಾಹ್ನ 12:30 ಕ್ಕೆ ಸಿಎಂ ಗೃಹ ಕಛೇರಿ ಕೃಷ್ಣಾಗೆ ಆಗಮಿಸಿದ್ದು, ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿದೆ. ಆರೋಗ್ಯ ಸಚಿವ ಶ್ರೀರಾಮುಲು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಭಾಗಿಯಾಗಿದ್ದು, ಸಭೆಯಲ್ಲಿ ಕೊವೀಡ್ ವಿರುದ್ಧ ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದರ ಕುರಿತು ವಿಜಯ್ ಭಾಸ್ಕರ್ ವಿಷಯ ಮಂಡನೆ ಮಾಡಿದ್ದಾರೆ.
ಅಧ್ಯಯನ ನಡೆಸಲು ಎರಡು ದಿನಗಳ ಕಾಲ ರಾಜ್ಯದಲ್ಲೇ ಉಳಿಯುವ ಕೇಂದ್ರದ ಅಧಿಕಾರಿಗಳ ತಂಡ ಕೋವಿಡ್ ಕೇರ್ ಸೆಂಟರ್, ಕಂಟೈನ್‌ಮೆಂಟ್ ಝೋನ್‌ಗಳಿಗೆ ನೇರವಾಗಿ ತೆರಳಿ ಅಧ್ಯಯನ ನಡೆಸಲಿದ್ದಾರೆ.