ವಿಶ್ವಾದ್ಯಂತ ಕೋವಿಡ್-19 ಮಾರಕ ಸೋಂಕಿಗೆ 34 ಸಾವಿರಕ್ಕೂ ಅಧಿಕ ಮಂದಿ ಮೃತರಾಗಿದ್ದು ದೇಶದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಪ್ರಿಸನ್ಸ್ ಫೊರಮ್ ಅಫ್ ಕರ್ನಾಟಕ ಎಂಬ ಸ್ವಯಂ ಸೇವಾ ಸಂಸ್ಥೆಯು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಕ್ಕೂ ಸುದೀರ್ಘ ಪತ್ರವನ್ನು ಬರೆದಿದ್ದು ಜೈಲುಗಳ ಸ್ಥಿತಿ ಗತಿ ಸುಧಾರಣೆ ಮತ್ತು ಬಹು ಮುಖ್ಯವಾಗಿ ಕೈದಿಗಳ ಬಿಡುಗಡೆಗೆ ಆಗ್ರಹಿಸಿದೆ. ಈ ಪತ್ರದಲ್ಲಿ ತಿಳಿಸಿರುವಂತೆ ಫೋರಮ್ 2017 ರಲ್ಲಿ ಸ್ಥಾಪಿತವಾಗಿದ್ದು ಇದರಲ್ಲಿ ಸಮಾನ ಮನಸ್ಕ ವಕೀಲರು, ಪತ್ರಕರ್ತರು, ಪ್ರೊಫೆಸರ್ ಗಳು ಇದ್ದು ಕೈದಿಗಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ, ಹಕ್ಕುಗಳಿಗೆ ಹೋರಾಡುವ ಮತ್ತು ಜೈಲುಗಳ ಸ್ಥಿತಿ ಗತಿ ಸುಧಾರಣೆಗಾಗಿ ಹೋರಾಡುತ್ತಿದೆ.
ರಿಟ್ ಅರ್ಜಿ ಸಂಖ್ಯೆ 406 /2013 ರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ಕೈದಿಗಳ ಸ್ಥಿತಿ ಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಸಂಬಂಧಪಟ್ಟ ಸರ್ಕಾರಗಳು ಈ ದಿಸೆಯಲ್ಲಿ ಜೈಲುಗಳ ಸುಧಾರಣೆಗೆ ಮುಂದಾಗಬೇಕೆಂದು ಆದೇಶಿಸಿದೆ. ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜೈಲುಗಳಿಗೂ ಹರಡುವ ಸಾಧ್ಯತೆ ಇರುವುದರಿಂದ ಕೈದಿಗಳ ಹಾಗೂ ಜೈಲು ಸಿಬ್ಬಂದಿಗಳ ಆರೋಗ್ಯ ರಕ್ಷಣೆ ತುರ್ತಾಗಿ ಆಗಬೇಕಿದೆ ಎಂದು ಫೋರಮ್ ಪತ್ರದಲ್ಲಿ ತಿಳಿಸಿದೆ.
ಈಗ ರಾಜ್ಯದಲ್ಲಿ ಒಟ್ಟು 105 ಜೈಲುಗಳಿದ್ದು ಇದರಲ್ಲಿ 9 ಕೇಂದ್ರ ಬಂದೀಖಾನೆಗಳು, 20 ಜಿಲ್ಲಾ ಮತ್ತು 30 ತಾಲ್ಲೂಕು ನ್ಯಾಯಾಲಯಗಳು ,ಒಂದು ತೆರೆದ ಜೈಲು , ಒಂದು ಮಹಿಳಾ ಜೈಲು ಹಾಗೂ ೪೪ ಸಬ್ ಜೈಲುಗಳಿವೆ. 2018 ರ ಜೂನ್ 18 ರಂದು ಕರ್ನಾಟಕ ಬಂದೀಖಾನೆ ಇಲಾಖೆಯ ಅಡಿಷನಲ್ ಡೈರೆಕ್ಟರ್ ಜನರಲ್ ಅವರು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿ 14,206 ಕೈದಿಗಳಿದ್ದು ಒಟ್ಟು ಸಾಮರ್ಥ್ಯ 13,800 ಆಗಿದೆ ಎಂದು ತಿಳಿಸಿದ್ದಾರೆ.
ವಿಜಯಪುರ ಕೇಂದ್ರ ಬಂದೀಖಾನೆಯಲ್ಲಿ ಒಟ್ಟು 320 ಕೈದಿಗಳ ಸಾಮರ್ಥ್ಯ ಇದ್ದು 615 ಕೈದಿಗಳನ್ನು ಬಂಧಿಸಿಡಲಾಗಿದೆ. ಕೊಪ್ಪಳ ಬಂದೀಖಾನೆಯಲ್ಲಿ 110 ಕೈದಿಗಳನ್ನು ಇಡಬೇಕಾದ ಸ್ಥಳದಲ್ಲಿ ಒಟ್ಟು 220 ಕೈದಿಗಳನ್ನು ತುಂಬಿಸಲಾಗಿದೆ. ಹಾವೇರಿ ಜೈಲಿನಲ್ಲಿ 110 ಕೈದಿಗಳಿಗೆ ಅವಕಾಶ ಇದ್ದರೆ ಒಟ್ಟು 211 ಕೈದಿಗಳನ್ನು ಇಡಲಾಗಿದೆ, ಬೀದರ್ ಜಿಲ್ಲಾ ಕಾರಾಗೃಹದಲ್ಲೂ 120 ಕೈದಿಗಳಿರಬೇಕಾದ ಸ್ಥಳದಲ್ಲಿ 222 ಕೈದಿಗಳನ್ನು ತುಂಬಲಾಗಿದೆ.
ಸುಪ್ರೀಂ ಕೋರ್ಟ್ ರಿಟ್ ಅರ್ಜಿ ವಿಚಾರಣೆ ನಂತರ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಶೇಕಡಾ 150 ಕ್ಕಿಂತ ಅಧಿಕ ಕೈದಿಗಳನ್ನು ಇಟ್ಟಿರುವ ಜೈಲುಗಳಲ್ಲಿ ಕೈದಿಗಳ ಮಾನವ ಹಕ್ಕು ಉಲ್ಲಂಘನೆ ಅಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಎಲ್ಲ ರಾಜ್ಯಗಳ ಮುಖ್ಯ ನ್ಯಾಯ ಮೂರ್ತಿಗಳಿಗೂ ನಿರ್ದೇಶನ ನೀಡಿ ಹೆಚ್ಚಿನ ಕೈದಿಗಳನ್ನು ತುಂಬಿಸಿಡಲಾಗಿರುವ ಜೈಲುಗಳಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗದಂತೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಲು ಸೂಚಿಸಿದೆ.
1973 ರ ಕ್ರಿಮಿನಲ್ ಪ್ರೋಸೀಜರ್ ಕೋಡ್ 436 ರ ಅನ್ವಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷೆಗೊಳಗಾದ ಕೈದಿಯ ಸಂಪೂರ್ಣ ಶಿಕ್ಷೆಯನ್ನು ಮನ್ನ ಮಾಡಿ ಬಿಡುಗಡೆ ಮಾಡಬಹುದಾಗಿದೆ ಅಥವಾ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಬಹುದಾಗಿದೆ. ಈ ರೀತಿ ಯಾವುದೇ ಕೈದಿಗೆ ಶಿಕ್ಷೆ ಕಡಿತಗೊಳಿಸಲು ಸಂಬಂಧಪಟ್ಟ ಜೈಲು ಅಧಿಕಾರಿಯ ಮೂಲಕ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿಯನ್ನು ರಾಜ್ಯ ಸರ್ಕಾರವು ತನ್ನ ಅಭಿಪ್ರಾಯದೊಂದಿಗೆ ಸೂಕ್ತ ನ್ಯಾಯಾಲಯದ ಗಮನಕ್ಕೆ ತಂದು ಬಿಡುಗಡೆ ಕುರಿತು ಕ್ರಮವನ್ನು ಕೈಗೊಳ್ಳಬಹುದಾಗಿದೆ. ಒಂದು ವೇಳೆ ಬಿಡುಗಡೆಗೊಂಡ ಕೈದಿಯು ಬಿಡುಗಡೆಯ ಷರತ್ತುಗಳನ್ನು ಉಲ್ಲಂಘಿಸಿದರೆ ರಾಜ್ಯ ಸರ್ಕಾರವು ಯಾವುದೇ ವಾರಂಟ್ ಇಲ್ಲದೆ ಅಥವಾ ನೋಟೀಸ್ ನೀಡದೆ ಪುನಃ ಕೈದಿಯನ್ನು ಬಂಧಿಸಬಹುದಾಗಿದೆ. ಅಲ್ಲದೆ ಈ ಹಿಂದಿನ ಬಿಡುಗಡೆ ಅದೇಶವನ್ನು ರದ್ದು ಮಾಡಿ ಪುನಃ ಪೂರ್ಣಾವಧಿ ಜೈಲು ಶಿಕ್ಷೆ ನೀಡಬಹುದಾಗಿದೆ.
ಕೋವಿಡ್ 19 ಭೀತಿ ತೀವ್ರವಾಗಿರುವ ಈ ಹಿನ್ನೆಲೆಯಲ್ಲಿ ದಿನಾಂಕ 20-02-2020 ರಂದು ಸುಪ್ರೀಂ ಕೋರ್ಟ್ ಅಧೀನ ನ್ಯಾಯಾಲಯಗಳಿಗೆ ಸೂಚನೆ ನೀಡಿ ಬಾಂಡ್ ಇಲ್ಲದೆಯೂ ಕೈದಿಗಳ ಬಿಡುಗಡೆ ಮಾಡುವ ಕುರಿತು ಕ್ರಮ ವಹಿಸುವಂತೆ ಕೋರಿದೆ. ಪಂಜಾಬ್ ರಾಜ್ಯ ಸರ್ಕಾರವು ಕೋವಿಡ್ ಹಿನ್ನೆಲೆಯಲ್ಲಿ ಮೂರು ಸಾವಿರ ಕೈದಿಗಳ ಬಿಡುಗಡೆಗೆ ಕ್ರಮವನ್ನು ಕೈಗೊಂಡಿದೆ. ದಿನಾಂಕ 21-03-2020 ರಂದು ಕೋಲ್ಕತಾ ಬಂದೀಖಾನೆಯಲ್ಲಿ ಕೈದಿಗಳ ಸಂದರ್ಶಕರಿಗೆ ನಿರ್ಬಂಧ ಹೇರಿದಾಗ ಕೈದಿಗಳು ಜೈಲು ಸಿಬ್ಬಂದಿ ಮೇಲೆಯೇ ದಾಳಿಗೆ ಮುಂದಾದದ್ದನ್ನೂ ಕೂಡ ಪತ್ರದಲ್ಲಿ ವಿವರಿಸಲಾಗಿದೆ. ವಿವಿಧ ದೇಶಗಳೂ ಕೂಡ ಜೈಲುಗಳಲ್ಲಿ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈದಿಗಳ ಬಿಡುಗಡೆ ಮಾಡಲು ಮುಂದಾಗಿವೆ. ಇರಾನ್ ನಲ್ಲಿ ಈಗಾಗಲೇ ೭೦ ಸಾವಿರ ಕೈದಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇನ್ನೂ 54 ಸಾವಿರ ಕೈದಿಗಳನ್ನು ಗೃಹ ಬಂಧನದಲ್ಲಿರಿಸಲಾಗಿದೆ.
ಈ ಎಲ್ಲಾ ಅಂಶಗಳನ್ನೂ ಪತ್ರದಲ್ಲಿ ಉಲ್ಲೇಖಿಸಿರುವ ಫೋರಮ್ ಜೈಲುಗಳ ಸಿಬ್ಬಂದಿಗಳು ಮತ್ತು ಕೈದಿಗಳಿಗೆ ಮಾಸ್ಕ್ ಗಳು ಮತ್ತು ಸ್ಯಾನಿಟೈಸರ್ ಗಳನ್ನು ಸರಬರಾಜು ಮಾಡುವಂತೆ ಕೋರಿದೆ. ಜೈಲುಗಳಲ್ಲಿ ಕಡಿಮೆ ಅವಧಿಯ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು, ವೃದ್ದರನ್ನು , ಗರ್ಭಿಣಿ ಮಹಿಳೆಯರನ್ನು ,ಮಕ್ಕಳನ್ನೂ ಕೂಡಲೇ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಿದೆ. ಜೈಲಿನಲ್ಲಿರುವ ಕೈದಿಗಳಿಗೆ ಮನೆಗಳಿಗೆ ಉಚಿತ ವೀಡಿಯೋ ಕಾಲ್ ಸಂಪರ್ಕ ಕಲ್ಪಿಸಿ ಕೊಡುವಂತಯೂ ಆಗ್ರಹಿಸಿದೆ.
ಈ ಮದ್ಯೆ ಮಹಾರಾಷ್ಟ್ರ ರಾಜ್ಯ ಸರ್ಕಾರವು 11 ಸಾವಿರ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ಅದೇಶಿಸಿದೆ. ಗೃಹ ಸಚಿವ ಅನಿಲ್ ದೇಶ ಮುಖ್ ಅವರು ಇದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಪ್ರಕಟಿಸಿದ್ದಾರೆ.