ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದ ನಂತರ ದೇಶಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ದೇಶ-ವಿದೇಶಗಳ ಪ್ರತಿಷ್ಠಿತ ವ್ಯಕ್ತಿಗಳು ಸಿಎಎಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಾದ್ಯಂತ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯಾಗಿ ಬಿಜೆಪಿ ನಾಯಕತ್ವದ ತಲೆಕೆಡಿಸಿವೆ ಎಂಬುದಕ್ಕೆ ಅವರು ನೀಡುತ್ತಿರುವ ಹತಾಶೆ ಹಾಗೂ ಅಸೂಕ್ಷ್ಮ ಹೇಳಿಕೆಗಳೇ ಸಾಕ್ಷಿಯಾಗಿವೆ. ಪ್ರತಿಭಟನೆ ಜನರಿಗೆ ಸಂವಿಧಾನ ನೀಡಿರುವ ಹಕ್ಕು ಎಂಬುದನ್ನು ಮರೆತಿರುವ ಮೋದಿ ಸೇರಿದಂತೆ ಬಿಜೆಪಿ ನಾಯಕರು ಧರಣಿನಿರತರನ್ನು ಗುರಿಯಾಗಿಸಿ ನೀಡುತ್ತಿರುವ ಹೇಳಿಕೆಗಳು ಅತ್ಯಂತ ಕಳಕಳಕಾರಿಯಾಗಿವೆ.
“ದಾಂದಲೆ ಎಬ್ಬಿಸುತ್ತಿರುವವರು ಧರಿಸಿರುವ ದಿರಿಸಿನಿಂದಲೇ ಅವರು ಯಾರು ಎಂಬುದನ್ನು ಪತ್ತೆ ಹಚ್ಚಬಹುದು” ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ನರೇಂದ್ರ ಮೋದಿಯವರು ಬಿಜೆಪಿ ನಾಯಕರ ಹರಕು ಬಾಯಿಗಳಿಗೆ ಅಧಿಕೃತ ಚಾಲನೆ ನೀಡಿದ್ದರು. ಈ ಚರ್ಚೆಯ ಕಾವನ್ನು ವಿಪರೀತಕ್ಕೆ ಕೊಂಡೊಯ್ದಿದ್ದು ಎರಡನೇ ಬಾರಿಗೆ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರಾಗಿರುವ ದಿಲೀಪ್ ಘೋಷ್.
“ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪ್ರತಿಭಟನಾಕಾರರನ್ನು ನಾಯಿಗಳನ್ನು ಹೊಡೆದ ಹಾಗೆ ಹೊಡೆದು ಉರುಳಿಸಲಾಗಿದೆ” ಎನ್ನುವ ಮೂಲಕ ಬಿಜೆಪಿಯ ಚುನಾಯಿತ ಸರ್ಕಾರಗಳ ಕ್ರೌರ್ಯವನ್ನು ಎದೆತಟ್ಟಿ ಹೇಳಿದ್ದರು. ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ 16, ಅಸ್ಸಾಂನಲ್ಲಿ 5, ಕರ್ನಾಟಕದಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಸಾವನ್ನಪ್ಪಿದವವರ ಕುಟುಂಬಕ್ಕೆ ಘೋಷಿಸಿದ್ದ ಪರಿಹಾರವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಉತ್ತರ ಪ್ರದೇಶದ ಸರ್ಕಾರದ ಸಚಿವರು ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ಹಿಂದೂ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಮುಸ್ಲಿಂ ಸಂತ್ರಸ್ತರ ಮನೆಗೆ ಹೋಗುವುದಿಲ್ಲ ಎಂದು ಹೇಳುವ ಮೂಲಕ ಅಮಾನವೀಯ ಕೃತ್ಯವೆಸಗಿದ್ದರು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ವಿರೋಧ ಪಕ್ಷದ ನಾಯಕರು ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಲು ನಿರ್ಬಂಧ ವಿಧಿಸಲಾಗಿತ್ತು ಎಂಬುದನ್ನು ಇಲ್ಲಿ ನೆನೆಯಬಹುದು.
ಉತ್ತರ ಪ್ರದೇಶ ಸರ್ಕಾರದ ಸಚಿವ ರಘುರಾಜ್ ಸಿಂಗ್ ಎಂಬಾತ ಸಿಎಎ ಪ್ರತಿಭಟನೆಯ ಸಂದರ್ಭದಲ್ಲಿ “ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗುವವರನ್ನು ಜೀವಂತವಾಗಿ ಸುಡಲಾಗುವುದು” ಎಂದು ಹೇಳಿದ್ದರು. ಪ್ರತಿಭಟನೆಯ ಭಾಗವಾಗಿ ಆಡಳಿತಗಾರರ ವಿರುದ್ಧ ಘೋಷಣೆ ಹಾಕುವವರನ್ನು ಜೀವಂತವಾಗಿ ಸುಡಲಾಗುವುದು ಎಂದು ಸಂವಿಧಾನದ ಮೇಲೆ ಪ್ರಮಾಣ ಸ್ವೀಕರಿಸಿದ ಸಚಿವನೊಬ್ಬ ಸಾರ್ವಜನಿಕವಾಗಿ ಹೀಗೆ ಹೇಳುವುದನ್ನು ಅರಗಿಸಿಕೊಳ್ಳುವುದಾದರೂ ಹೇಗೆ?
ಉತ್ತರ ಪ್ರದೇಶದ ಶಾಸಕನೊಬ್ಬ ಸಿಎಎ ಥರದ ಕಾನೂನನ್ನು ಪಾಕಿಸ್ತಾನ ಜಾರಿಗೊಳಿಸುವ ಮೂಲಕ ಭಾರತದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಮುಸ್ಲಿಮರನ್ನು ವಾಪಸ್ ಪಡೆಯಲು ಎನ್ನುವ ಸಲಹೆ ನೀಡಿದ್ದಾರೆ. ಇದಕ್ಕೂ ಮುನ್ನ ನಮ್ಮದೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿವಾದಾತ್ಮಕ ಸಂಸದ ತೇಜಸ್ವಿ ಸೂರ್ಯ ಅವರು ನಿರ್ದಿಷ್ಟ ಸಮುದಾಯವನ್ನು ಅವರು ಹೊಟ್ಟೆಪಾಡಿಗೆ ಮಾಡುವ ಉದ್ಯೋಗವನ್ನು ಗುರಿಯಾಗಿಸಿ ಅವಮಾನಿಸಿದ್ದರು. “ಎದೆ ಸೀಳಿದರೆ ಎರಡು ಅಕ್ಷರ ಗೊತ್ತಿಲ್ಲದವರು ಸಿಎಎ ವಿರುದ್ಧ ಪ್ರತಿಭಟಿಸುತ್ತಾರೆ” ಎನ್ನುವ ಮೂಲಕ ತಮ್ಮೊಳಗಿನ ಮತಾಂಧತೆ, ಕೋಮು ದ್ವೇಷವನ್ನು ಜಾಹೀರು ಮಾಡಿದ್ದರು.
ಇದಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ಅವರು ಪ್ರತಿಭಟನಾಕಾರರನ್ನು ಬೆದರಿಸಲು ಮೋದಿ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ನಡೆದಿದ್ದ ಕೋಮುಗಲಭೆಯನ್ನು ನೆನಪಿಸಿದ್ದರು. “ಪ್ರತಿಭಟನಾಕಾರರು ಸಾಬರಮತಿ ಎಕ್ಸ್ಪ್ರೆಸ್ ನ ನಿರ್ದಿಷ್ಟ ಬೋಗಿಗಳಿಗೆ ಬೆಂಕಿ ಬಿದ್ದ ನಂತರ ಏನಾಗಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು” ಎನ್ನುವ ಮೂಲಕ ಮೂಲಕ ಧರಣಿನಿರತರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಕೇಂದ್ರ ರೈಲ್ವೆ ಖಾರೆ ರಾಜ್ಯ ಸಚಿವ ಹಾಗೂ ರಾಜ್ಯದ ಬೆಳಗಾವಿ ಸಂಸದ ಸುರೇಶ್ ಅಂಗಡಿಯವರು ದಾಂದಲೆ ನಿರತ ಪ್ರತಿಭಟನಾಕಾರರಿಗೆ ಗುಂಡಿಕ್ಕಲು ಪೊಲೀಸರಿಗೆ ಜಿಲ್ಲಾಧಿಕಾರಿ ಸೂಚಿಸಬೇಕು ಎನ್ನುವ ಆತಂಕಕಾರಿ ಸಲಹೆ ನೀಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಂತು ಬಿಜೆಪಿ ಬೆಂಬಲಿಗರು ಸಿಎಎ ವಿರೋಧಿಗಳನ್ನು ಅತ್ಯಂತ ತುಚ್ಛ ಭಾಷೆ ಬಳಸಿ ನಿಂಧಿಸುವುದು, ಬೆದರಿಕೆ ಹಾಕುವುದು ಸಾಮಾನ್ಯವಾಗಿದೆ. ಮಂಗಳೂರಿನಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಗುರಿಯಾಗಿಸಿ “ಗುಂಡು ಹೊಡೆದರೂ ಯಾರೂ ಸಾಯಲಿಲ್ಲವಲ್ಲ” ಎಂಬ ಸಂಭಾಷಣೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಉತ್ತರ ಪ್ರದೇಶದಲ್ಲಿ ಪೊಲೀಸರು ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಹೊರಡುವಂತೆ ಫರ್ಮಾನು ಹೊರಡಿಸಿದ ಘಟನೆಯೂ ನಡೆದಿದೆ. ಆದರೆ, ಇಂಥ ಅಸಂವಿಧಾನಿಕ ನಡೆಯನ್ನು ಬಿಜೆಪಿ ನಾಯಕತ್ವ ಟೀಕಿಸುವುದಾಗಲಿ, ಅಂಥವರ ವಿರುದ್ಧ ಕ್ರಮಕೈಗೊಳ್ಳುವುದಾಗಲಿ ಮಾಡಿಲ್ಲ.
ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಹಾಗೂ ಉತ್ತರ ಪ್ರದೇಶದ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಪೊಲೀಸರು ನಡೆಸಿದ ಅಟ್ಟಹಾಸವೂ ಆಡಳಿತ ಪಕ್ಷದ ಸೂಚನೆಯ ಮೇರೆಗೆ ನಡೆದಿದೆ ಎಂಬುದನ್ನು ಹಲವು ಅನುಮಾನಗಳ ದೃಢಪಡಿಸುತ್ತವೆ. ಹೀಗೆ ಹಿಂಸೆ, ದ್ವೇಷ, ತಾರತಮ್ಯವನ್ನು ಚುನಾಯಿತ ಸರ್ಕಾರ ಸಮರ್ಥಿಸುವುದರ ಜೊತೆಗೆ ಅವುಗಳನ್ನು ಸಮಾಜದಲ್ಲಿ ಸಾಮಾನ್ಯವಾಗಿಸುವುದು ಹೊಸ ವಿದ್ಯಮಾನವಾಗಿ ಬಿಟ್ಟಿದೆ. ಅಧಿಕಾರದ ಮದದಲ್ಲಿ ಆಳುವ ಸರ್ಕಾರ ಸೃಷ್ಟಿಸುತ್ತಿರುವ ಸಾಮಾಜಿಕ ವಿಭಜನೆ ಒಡ್ಡಬಹುದಾದ ಸವಾಲು ಸುಲಭದ್ದಲ್ಲ. ಅಧಿಕಾರವೇ ಅಂತಿಮ ಎಂದು ತಿಳಿದ ಮತಾಂಧರಿಗೆ ಜನಸಾಮಾನ್ಯ ಶಾಂತಿಯುತ ಪ್ರತಿಭಟನೆಯ ಮೂಲಕ ತನ್ನ ಪ್ರೌಢತೆ ಪ್ರದರ್ಶನಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆ.