ಪುಟ್ಟ ಜಿಲ್ಲೆ ಕೊಡಗು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣೀಯಲ್ಲಿದ್ದು ಅಗಾಧ ಹಸಿರು ಸಂಪತ್ತನ್ನು ಹೊಂದಿರುವ ಪ್ರದೇಶವಾಗಿದೆ. ಅಗಣಿತ ಅರಣ್ಯ ಸಂಪತ್ತು ಇರುವುದರಿಂದ ಜಿಲ್ಲೆಯ ಹವಾಮಾನ ತಂಪಾಗಿಯೇ ಇದೆ. ಆದರೆ ಈ ಪ್ರಕೃತಿ ಸಂಪತ್ತಿನ ನಡುವೆ ಜನರೂ ಕೂಡ ಬದುಕಲೇ ಬೇಕಲ್ಲವೆ? ಬದುಕಬೇಕಾದರೆ ಮೂಲ ಸೌಕರ್ಯಗಳೂ ಬೇಕಲ್ಲವೆ? ಪುಟ್ಟ ಜಿಲ್ಲೆ ಕೊಡಗಿಗೆ ಇಂದಿಗೂ ರೈಲ್ವೇ ಸಂಪರ್ಕವಿಲ್ಲ. ಜನತೆ ಅಗ್ಗದ ದರದ ಪ್ರಯಾಣದಿಂದ ವಂಚಿತವಾಗಿರುವ ರಾಜ್ಯದ ಏಕೈಕ ಜಿಲ್ಲೆ ಇದಾಗಿದೆ. ಇವತ್ತಿಗೂ ಕೊಡಗಿನಲ್ಲಿ ಜನತೆ ಮೂರು ತಿಂಗಳ ಮಳೆಗಾಲದ ಅವ್ಯವಸ್ಥೆ ತೊಂದರೆಗಳನ್ನು ಅನುಭವಿಸಬೇಕಾಗಿದೆ. ಹಾಗೆ ಅನುಭವಿಸಿದರೂ ಕೊಡಗಿನಲ್ಲಿ ಉತ್ಪತ್ತಿಯಾಗುವ ಮಳೆ ನೀರು ಬಹುತೇಕ ಕೊಡಗಿಗೆ ಅವಶ್ಯಕತೆ ಇಲ್ಲ. ಕೊಡಗಿನಲ್ಲಿ ಉತ್ಪತ್ತಿ ಆಗುವ ನೀರು ಕೆಅರ್‌ಎಸ್ ಸೇರಿ ರಾಜ್ಯ ಮತ್ತು ತಮಿಳುನಾಡಿನ ಲಕ್ಷಾಂತರ ರೈತರ ಬಾಳನ್ನು ಹಸನುಗೊಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜಿಲ್ಲೆಯಲ್ಲಿ ಒಟ್ಟು 4.10 ಲಕ್ಷ ಹೆಕ್ಟೇರ್ ಭೂಮಿ ಇದ್ದರೆ ಅದರಲ್ಲಿ 1.35 ಲಕ್ಷ ಹೆಕ್ಟೇರ್ ಗಳಷ್ಟು ದಟ್ಟಾರಣ್ಯ ಇದೆ. ಈ ಅರಣ್ಯ ಇರುವುದರಿಂದ ಕಾಡಿನ ಮದ್ಯೆ ವಿದ್ಯುತ್ ಲೈನ್, ರಸ್ತೆ, ರೈಲು ಸೇತುವೆ ಇನ್ಯಾವುದೇ ರೀತಿಯ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಅವಕಾಶವೇ ಇಲ್ಲ ಹಾಗಾಗಿ ಜನತೆ ಮೂಲ ಸೌಕರ್ಯಗಳಿಂದ ವಂಚಿತವಾಗಿ ಶ್ರಮ, ಹಣ ಹಾಗೂ ಸಮಯವನ್ನೂ ಹೆಚ್ಚಾಗಿ ವ್ಯಯಿಸಬೇಕಾಗಿದೆ. ಇದಲ್ಲದೆ ಅರಣ್ಯದೊಳಗೇ ವಾಸಿಸುತ್ತಿರುವ ಬುಡಕಟ್ಟು ಮತ್ತು ಆದಿವಾಸಿ ಸಮುದಾಯಗಳು ಇಂದಿಗೂ ಮೂಲ ಸೌಕರ್ಯ ದಿಂದ ವಂಚಿತರಾಗಿದ್ದಾರೆ. ಕೊಡಗು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಬಯಲು ಸೀಮೆಯಂತೆ ಮನೆಗಳು ಗುಂಪು ಗುಂಪಾಗಿ ಇರುವುದಿಲ್ಲ. ದೂರಕ್ಕೆ ಅಲ್ಲೊಂದು ಇಲ್ಲೊಂದು ಇರುತ್ತವೆ. ಇಲ್ಲಿ ಬಸ್ ಸೌಕರ್ಯ ಕೂಡ ಸರಿಯಾಗಿ ಇರುವುದಿಲ್ಲ. ಬಹುತೇಕರು ಖಾಸಗೀ ವಾಹನಗಳನ್ನೆ ಹೊಂದಿರುತ್ತಾರೆ. ಅರಣ್ಯ ಜಾಸ್ತಿ ಇರುವುದರಿಂದ ಇಲ್ಲಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಗಳ ಕಾಟ ಇದ್ದೇ ಇದೆ. ಇನ್ನು ಮನೆಗೆ ಹತ್ತಿರವಾಗುವ ರಸ್ತೆಗಳ ನಿರ್ಮಾಣಕ್ಕೆ ಅರಣ್ಯ ಕಾಯ್ದೆಗಳು ಅಡ್ಡಿಯಾಗಿವೆ. ಹೀಗಾಗಿ ಜನತೆ ಇಂದಿಗೂ ಸೂಕ್ತ ಸೌಕರ್ಯಗಳಿಲ್ಲದೆ ಹೈರಾಣಾಗಿದ್ದಾರೆ. ಅಂತಹ ಸೌಕರ್ಯ ವಂಚಿತ ಗ್ರಾಮವೊಂದರ ಕ(ವ್ಯ)ಥೆ ಇದಾಗಿದೆ.

ದಕ್ಷಿಣ ಕೊಡಗಿನ ವೀರಾಜಪೇಟೆ ತಾಲೂಕಿನ ಕೇರಳ ಗಡಿ ಪ್ರದೇಶವಾದ ಬಿರುನಾಣಿ ಗ್ರಾಮಕ್ಕೆ ಬಿಟ್ಟಂಗಾಲ ಕೂಟಿಯಾಲ ಮಾರ್ಗವಾಗಿ ರಸ್ತೆ ಸಂಪರ್ಕ ಕಲ್ಪಿಸುವ ಉತ್ತಮ ಯೋಜನೆಯೊಂದು ನೆನೆಗುದಿಗೆ ಬಿದ್ದಿದ್ದು, ಇದೀಗ ಸುಮಾರು 20 ವರ್ಷಗಳೇ ಕಳೆದು ಹೋಗಿವೆ. ಬಿ.ಶೆಟ್ಟಿಗೇರಿ – ಬಾಡಗರಕೇರಿ ಗ್ರಾಮದ ನಡುವೆ ಹರಿಯುವ ಬರಪೊಳೆಗೆ ಕೂಟಿಯಾಲ ಎಂಬಲ್ಲಿ ಸೇತುವೆಯನ್ನು ನಿರ್ಮಿಸಿ ರಸ್ತೆ ಸಂಪರ್ಕ ಕಲ್ಪಿಸಿದಲ್ಲಿ ಆ ವಿಭಾಗದ ಜನತೆಗೆ ಹೆಚ್ಚಿನ ಅನುಕೂಲ ಆಗುತಿತ್ತು. ಏಕೆಂದರೆ ಬಿರುನಾಣಿಯಿಂದ ವೀರಾಜಪೇಟೆ ತಾಲ್ಲೂಕು ಕೇಂದ್ರಕ್ಕೆ ಬರಲು ಜನರು 65 ಕಿಲೋಮೀಟರ್ ಪ್ರಯಾಣ ಮಾಡಬೇಕಾಗಿದೆ. ಈ ಉದ್ದೇಶಿತ ರಸ್ತೆ ನಿರ್ಮಾಣ ಅಗಿದ್ದಲ್ಲಿ ಅಂತರ 20 ಕಿಲೋಮೀಟರ್ ಗಳಷ್ಟು ಕಡಿಮೆ ಆಗುತಿತ್ತು. ಜನರು ಈಗ ರಸ್ತೆ ಇಲ್ಲದ ಕಾರಣಕ್ಕೆ 20 ಕಿಲೋಮೀಟರ್ ಹೆಚ್ಚಾಗಿ ಪ್ರಯಾಣ ಮಾಡಬೇಕಾಗಿದೆ.

ಜನರ ಒತ್ತಾಯದ ಮೇರೆಗೆ ಯಂ.ಸಿ.ನಾಣಯ್ಯ ಅವರು ಸಚಿವರಾಗಿದ್ದ ಸಂದರ್ಭ 1996ರಲ್ಲಿ ನಬಾರ್ಡ್ ಮೂಲಕ ಈ ರಸ್ತೆ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸೇತುವೆ ನಿರ್ಮಾಣಕ್ಕೆ ರೂ. 69.55 ಲಕ್ಷ ಅನುದಾನ ಮಂಜೂರಾಗಿದ್ದು, ಬೃಹತ್ ಸೇತುವೆ ಕೆಲಸ 2000ನೇ ಇಸವಿ ವೇಳೆಗೆ ಬಹುತೇಕ ಪೂರ್ಣಗೊಂಡಿದೆ. ಈಗಲೂ ಪೂರ್ಣ ಗೊಂಡಿರುವ ಈ ಸೇತುವೆ ಬರಪೊಳೆಯ ನಡುವೆ ಯಾವ ಪ್ರಯೋಜನಕ್ಕೂ ಇಲ್ಲದಂತೆ ನಿಂತಿರುವದನ್ನು ಕಾಣಬಹುದು. 69.55 ಲಕ್ಷ ವೆಚ್ಚದಲ್ಲಿ ಈ ಸೇತುವೆಯೇನೋ ನಿರ್ಮಾಣಗೊಂಡಿತಾದರೂ, ಎದುರಾಗಿದ್ದು ರಸ್ತೆಯ ವಿವಾದ. ಬಿ. ಶೆಟ್ಟಿಗೇರಿ ಕಡೆಯಿಂದ ಸೇತುವೆ ತನಕ ಸಮಸ್ಯೆ ಇಲ್ಲವಾದರೂ ಬಾಡಗರಕೇರಿ ಕಡೆಯಿಂದ ಬರುವ ಮಾರ್ಗ ಸುಮಾರು 600 ಮೀಟರ್ನಷ್ಟು ದೂರ ವನ್ಯಜೀವಿ ತಾಣದ ನಡುವೆ ಬರಲಿದೆ ಎಂಬ ಕಾರಣಕ್ಕಾಗಿ ಇದಕ್ಕೆ ತಡೆಯುಂಟಾಗಿತ್ತು. ಈ ಬಗ್ಗೆ ಸೂಕ್ತ ನಿಯಮ ಪಾಲಿಸಿಲ್ಲ ಎಂಬ ಕಾರಣವನ್ನು ಮುಂದಿಟ್ಟು ಕೆಲವು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು.

ಇದೇ ಸಂದರ್ಭದಲ್ಲಿ ಮಡಿಕೇರಿಯಿಂದ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಕಡಮಕಲ್ಲು ರಸ್ತೆ ವಿವಾದ, ದಬ್ಬಡ್ಕ ರಸ್ತೆ ವಿವಾದವೂ ಇದಕ್ಕೆ ಸೇರಿಕೊಂಡಿತ್ತು. ಪರಿಸರವಾದಿ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಹಾಗೂ ಇತರರು ಅರಣ್ಯದೊಳಗೆ ರಸ್ತೆ ನಿರ್ಮಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ಪ್ರಶ್ನಿಸಿದ್ದರು. ನಂತರ ಕೂಟಿಯಾಲ ರಸ್ತೆ ಕೆಲಸಕ್ಕೆ ಅಡಚಣೆಯಾಗಿ ಕೆಲಸ ಸ್ಥಗಿತಗೊಂಡಿದೆ. ಸೇತುವೆ ನಿರ್ಮಾಣದ ಬಳಿಕ ರಸ್ತೆ ಸಂಪರ್ಕಕ್ಕೆಂದು ಬಿ.ಶೆಟ್ಟಿಗೇರಿ ಕಡೆಯಿಂದ ರೂ. 1 ಕೋಟಿ ಹಣ ಮಂಜೂರಾಗಿ ಇದರಲ್ಲಿ ಸೇತುವೆ ತನಕ ಸುಮಾರು 18 ಲಕ್ಷದಲ್ಲಿ ಕಚ್ಚಾ ರಸ್ತೆಯೂ ನಿರ್ಮಾಣವಾಗಿದೆ. ಬಿರುನಾಣಿ ಕಡೆಯಿಂದ ರೂ. 1.17 ಕೋಟಿ ಅನುದಾನ ಮಂಜೂರಾತಿಯಾಗಿದ್ದರೂ ಅರಣ್ಯ ಪ್ರದೇಶದ ವಿವಾದದಿಂದಾಗಿ ಇದು ಟೆಂಡರ್ ಪ್ರಕ್ರಿಯೆಗಷ್ಟೇ ಸೀಮಿತವಾಗಿ ಯಾವದೇ ಕೆಲಸ ಮುಂದುವರಿಯಲಿಲ್ಲ.

ಲೋಕೋಪಯೋಗಿ ಇಲಾಖೆ ಮೂಲಕ ಒಡಂಬಡಿಕೆ (ಎಂಓಯು)ಯಂತೆ ಕೆಲಸ ಪ್ರಾರಂಭಿಸಲಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ಅರಣ್ಯ ಪ್ರದೇಶದ ನಡುವೆ ರಸ್ತೆ ನಿರ್ಮಾಣಕ್ಕೆ ಅನುಸರಿಸಬೇಕಾಗಿದ್ದ ಸೂಕ್ತ ನಿಯಮವನ್ನು ಪಾಲಿಸಿಲ್ಲ ಎಂಬದು ವಿವಾದ ಆರಂಭವಾಗಲು ಕಾರಣವಾಗಿತ್ತು. ವಿವಾದದ ಬಳಿಕ ಆ ವ್ಯಾಪ್ತಿಯ ಸಾರ್ವಜನಿಕರು, ಜನಪ್ರತಿನಿಧಿಗಳು, ಇನ್ನಿತರ ಪ್ರಮುಖರು ಯೋಜನೆ ಕಾರ್ಯಗತಕ್ಕೆ ಸಾಕಷ್ಟು ಪ್ರಯತ್ನ ನಡೆಸಿದರಾದರೂ ಫಲಸಿಗಲಿಲ್ಲ. ಈ ವಿಚಾರ ವಿಧಾನಸಭೆ – ವಿಧಾನಪರಿಷತ್ ನಲ್ಲೂ ಪ್ರಸ್ತಾಪಗೊಂಡಿದೆ. ಹಲವು ಭರವಸೆಗಳು, ಸಲಹೆಗಳು ಬಂದಿವೆಯೇ ವಿನಹ ಸುಮಾರು 20 ಕಿ.ಮೀ. ಅಂತರ ಕಡಿಮೆ ಮಾಡುವ ಅಥವಾ ಈಗಾಗಲೇ ವೆಚ್ಚವಾಗಿ ಹೋಗಿರುವ ಸುಮಾರು 1 ಕೋಟಿ ಹಣದ ಕೆಲಸವನ್ನು ಸದ್ಭಳಕೆ ಮಾಡಿಕೊಳ್ಳುವ ಕುರಿತು ಜನಪ್ರತಿನಿಧಿಗಳು ಮೊನ್ನೆ ಮೊನ್ನೆಯ ತನಕ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರು.
ಈಗಿನ ಈ ಕ್ಷೇತ್ರದ ಜಿ.ಪಂ. ಸದಸ್ಯೆ ಭವ್ಯ, ವೀರಾಜಪೇಟೆ ತಾ.ಪಂ. ಉಪಾಧ್ಯಕ್ಷ, ಬಿರುನಾಣಿಯವರೇ ಆಗಿರುವ ನೆಲ್ಲೀರ ಚಲನ್ . ವೀರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಎಂಎಲ್ಸಿ ವೀಣಾ ಅಚ್ಚಯ್ಯ ಅವರು ಈ ಬಗ್ಗೆ ಜನತೆಯ ಬೇಡಿಕೆಗೆ ಸಹಮತದೊಂದಿಗೆ ನಡೆಸಿದ ಕೆಲವು ಪ್ರಯತ್ನವೂ ಪ್ರಯೋಜನ ಕಂಡಿಲ್ಲ. ಚುನಾಯಿತ ಪ್ರತಿನಿಧಿಗಳು ಪಕ್ಷ ಬೇಧ ಮರೆತು ರಾಜಕೀಯ ಇಚ್ಚಾ ಶಕ್ತಿ ಪ್ರದರ್ಶಿಸಿ ಒಮ್ಮತದಿಂದ ರಸ್ತೆ ನಿರ್ಮಾಣಕ್ಕೆ ಶ್ರಮಿಸುತಿದ್ದರೂ ಕಾನೂನಿನ ತೊಡಕಿನಿಂದಾಗಿ ಜನರು ರಸ್ತೆ ಸೌಲಭ್ಯದಿಂದ ವಂಚಿತರಾಗಬೇಕಾಗಿರುವುದು ನಿಜಕ್ಕೂ ವಿಷಾದನೀಯ.