ಕೇರಳ ಪ್ರತೀ ಬಾರಿಯೂ ಒಂದಲ್ಲ ಒಂದು ವಿಶಿಷ್ಟ ಯೋಜನೆಗಳಿಗೆ ಸುದ್ದಿಯಾಗುತ್ತಲೇ ಇರುತ್ತದೆ. ಕೋವಿಡ್ ಸಂದರ್ಭದಲ್ಲಿ ಉತ್ತಮ ನಿರ್ವಹಣೆ ತೋರಿದ ಕಾರಣಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದ ಕೇರಳ ಸರ್ಕಾರ ಈಗ ಮತ್ತೊಂದು ಯೋಜನೆಗೆ ದೇಶದಲ್ಲಿ ಸುದ್ದಿಯಾಗುತ್ತಿದೆ.
ಜೈಲಿನಲ್ಲಿರುವ ಖೈದಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ. 15 ಲಕ್ಷವನ್ನು ಮೀಸಲಿಡಲು ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಪ್ರಾಥಮಿಕ ಶಿಕ್ಷಣಕ್ಕಾಗಿ 15 ಲಕ್ಷ ಹಾಗೂ ವೃತ್ತಿಪರ ಶಿಕ್ಷಣಕ್ಕಾಗಿ 5 ಲಕ್ಷ ರೂಪಾಯಿಗಳನ್ನು ಮೀಸಲಿಡುವುದಾಗಿ ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವೆ ಕೆ ಕೆ ಶೈಲಜಾ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಐದು ವರ್ಷ ಕೆಳಗಿನ ಮಕ್ಕಳಿಗೆ ಹಾಗೂ ಒಂದನೇ ತರಗತಿಯಿಂದ ಐದನೇ ತರಗತಿಯವರೆಗಿನ ಮಕ್ಕಳಿಗೆ ರೂ. 300 ಪ್ರತೀ ತಿಂಗಳು, 6ರಿಂದ 10ನೇ ತರಗತಿವರೆಗೆ ರೂ. 500, ಹೈಸ್ಕೂಲ್ ವಿದ್ಯಾರ್ಥಿಗಳಿಗೆ ರೂ. 750 ಹಾಗೂ ಪದವಿ ಮತ್ತು ಇತರ ವೃತ್ತಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ ರೂ. 1000 ಪ್ರತೀ ತಿಂಗಲು ನೀಡುವುದಾಗಿ ಶೈಲಜಾ ಅವರು ತಿಳಿಸಿದ್ದಾರೆ.
ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಖೈದಿಗಳ ಮಕ್ಕಳ ವೃತ್ತಿಪರ ಕೋರ್ಸುಗಳಿಗೆ ಸಹಾಯಧನ ನೀಡಲಾಗುವುದು. ಪ್ರತೀ ಕೋರ್ಸುಗಳಿಗೂ ಸಹಾಯಧನದ ಮೊತ್ತದಲ್ಲಿ ಬದಲಾವಣೆಯಾಗಲಿದ್ದು, ಅತೀ ಹೆಚ್ಚು ಎಂದರೆ ರೂ. 1 ಲಕ್ಷ ಸಹಾಯ ಧನವನ್ನು ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ.
Also Read: ಉತ್ತಮ ಆಡಳಿತ ಪಟ್ಟಿಯಲ್ಲಿ ಕೇರಳ ಪ್ರಥಮ, ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ
“ಮನೆಯಲ್ಲಿ ದುಡಿದು ತರುವ ವ್ಯಕ್ತಿಯು ಕಾರಣಾಂತರಗಳಿಂದ ಜೈಲಿನಲ್ಲಿದ್ದರೆ, ಅವರ ಮಕ್ಕಳ ವಿದ್ಯಾಭ್ಯಾಸವು ಮೊಟಕುಗೊಳ್ಳುತ್ತದೆ. ಯಾವುದೇ ಮಕ್ಕಳ ವಿದ್ಯಾಭ್ಯಾಸವು ಅರ್ಧದಲ್ಲಿ ನಿಲ್ಲಬಾರದು ಎಂಬ ಕಾರಣಕ್ಕೆ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ,” ಎಂದು ಶೈಲಜಾ ಅವರು ತಿಳಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿದ್ಯಾರ್ಥಿಗಳು ಈ ಯೊಜನೆಯ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ. ಆದರೆ, ಮಕ್ಕಳ ಹೆತ್ತವರಿಬ್ಬರೂ ಜೈಲಿನಲ್ಲಿದ್ದು, ಸಂಬಂಧಿಕರ ಮನೆಯಲ್ಲಿದ್ದುಕೊಂಡು ಓದುವ ಮಕ್ಕಳ ಕುಟುಂಬವು ಬಡತನ ರೇಖೆಗಿಂತ ಮೇಲಿದ್ದರೂ, ಅವರು ಈ ಯೋಜನೆಗೆ ಅರ್ಹರು.
Also Read: ʼಮೋದಿ ಜೊತೆಗಿನ ಸಂವಾದ ವ್ಯರ್ಥ ಅನ್ನೋ ಕೇರಳ ಗೆದ್ದಿದೆʼ ಬಿಜೆಪಿಗೆ ಶಿವಸೇನೆ ತಿರುಗೇಟು
ಜೈಲಿನ ಅಧಿಕಾರಿಗಳ ಮೂಲಕ ಈ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು. ಸದ್ಯಕ್ಕೆ ಕೇರಳದ 54 ಜೈಲುಗಳಲ್ಲಿರುವ 6000 ಖೈದಿಗಳ ಮಕ್ಕಳಿಗೆ ಈ ಯೋಜನೆಯು ವರದಾನವಾಗಿ ಪರಿಣಮಿಸುವುದು.










