ಕೇರಳ ಹಾಗೂ ಕರ್ನಾಟಕ ಗಡಿಯನ್ನು ಬಂದ್ ಮಾಡಿದ್ದ ಕರ್ನಾಟಕದ ನಿರ್ಧಾರವನ್ನು ಕೇರಳ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದ ಕೇರಳ ಯಶಸ್ಸು ಸಾಧಿಸಿತ್ತು. ಗಡಿಯನ್ನು ತೆರಯುವಂತೆ ಕರ್ನಾಟಕ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಸೂಚನೆ ಕೊಟ್ಟಿತ್ತು. ಆದರೆ ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಯಾವುದೇ ಕಾರಣಕ್ಕೂ ರಾಷ್ಟ್ರೀಯ ಸಂಚಾರವನ್ನು ಸದ್ಯಕ್ಕೆ ತೆರೆಯಲು ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್ ಎದುರು ವಾದಿಸಿತ್ತು. ಕೇರಳದಲ್ಲಿ ಕೋವಿಡ್ – 19 ಸೋಂಕಿನ ಪ್ರಮಾಣ ಮಿತಿ ಮೀರಿದ್ದು, ಕರ್ನಾಟಕದಲ್ಲಿ ಸೋಂಕು ಹರಡದಂತೆ ತಡೆಯಲು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲಾ ಗಡಿಗಳನ್ನು ಬಂದ್ ಮಾಡುವುದು ಅನಿವಾರ್ಯ ಎಂದು ವಾದಿಸಿತ್ತು. ಈ ವಿಚಾರದಲ್ಲಿ ಯಾವುದೇ ತೀರ್ಪು ನೀಡದ ಸುಪ್ರೀಂಕೋರ್ಟ್ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಕರ್ನಾಟಕ ಹಾಗೂ ಕೇರಳ ಸರ್ಕಾರಗಳಿಗೆ ಸೂಚನೆ ಕೊಟ್ಟಿತ್ತು. ಅಂತಿಮವಾಗಿ ಕರ್ನಾಟಕ ಎದುರು ಕೇರಳ ಗೆಲುವಿನ ಹುಸಿನಗೆ ಬೀರಿದೆ.
ಕೇರಳ ಸರ್ಕಾರ ಕೂಡ ಸುಪ್ರೀಂಕೋರ್ಟ್ ಎದುರು ಬಲವಾದ ವಾದ ಮಂಡಿಸಿತ್ತು. ಕೋವಿಡ್-19 ವಿರುದ್ಧ ಹೋರಾಟ ಮಾಡಬೇಕಾದರು ಒಗ್ಗಟ್ಟು ಅನಿವಾರ್ಯ. ಈಗಾಗಲೇ ನಾವು ಕೋವಿಡ್-19 ಸೋಂಕಿನಿಂದ ಜರ್ಜರಿತವಾಗಿದ್ದೇವೆ. ಕಾಯಿಲೆ ನಮ್ಮ ಕೈಮೀರಿ ಹೋಗುತ್ತಿದೆ. ಕಾಸಗೋಡು ಸೇರಿದಂತೆ ಗಡಿ ಭಾಗದ ಜನರು ವೈದ್ಯಕೀಯ ಸೇವೆ ಪಡೆಯುವುದು ಅನಿವಾರ್ಯು. ನಮ್ಮದೇ ರಾಜ್ಯದಲ್ಲಿ ಚಿಕಿತ್ಸೆ ಪಡೆಯಲು ಸಾಕಷ್ಟು ದೂರ ಬರಬೇಕಾದರ ಅನಿವಾರ್ಯವಿದೆ. ಒಂದು ವೇಳೆ ವೈದ್ಯಕೀಯ ಸೇವೆ ಸಿಗದೆ ಯಾರೊಬ್ಬರು ಸಾಯುವಂತಹ ಪರಿಸ್ಥಿತಿ ಬರಬಾರದು. ನಾವೆಲ್ಲರೂ ಭಾರತ ಒಕ್ಕೂಟ ವ್ಯವಸ್ಥೆ ಅಡಿ ಇದ್ದೇವೆ ಎನ್ನುವುದನ್ನು ಸುಪ್ರೀಂಕೋರ್ಟ್ ಎದುರು ಗಮನ ಸೆಳೆಯುವ ಕೆಲಸ ಮಾಡಿತ್ತು. ಕರ್ನಾಟಕದ ವಾದದ ಜೊತೆ ಕೇರಳ ವಾದವನ್ನೂ ಮಾನ್ಯ ಮಾಡಿದ್ದ ಸುಪ್ರೀಂಕೋರ್ಟ್, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿತ್ತು. ಅದರಂತೆ ಇಂದು ಸಭೆ ನಡೆಸಿದ್ದು ಕೇರಳಕ್ಕೆ ಸಹಕಾರಿ ಆಗುವ ನಿರ್ಧಾರ ಹೊರಬಿದ್ದಿದೆ.
ಕರ್ನಾಟಕ – ಕೇರಳ ಗಡಿ ನಿರ್ಬಂದ ತೆರವು ಮಾಡುವಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು. ಆದರೆ ಹೆಚ್.ಡಿ ದೇವೇಗೌಡರ ಪತ್ರಕ್ಕೆ ಪ್ರತ್ಯುತ್ತರ ಬರೆದಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯಕ್ಕೆ ಕರೋನಾ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ಗೌರವ ಇದೆ. ಆದರೆ ನಿಮ್ಮ ಒತ್ತಾಯ ಜಾರಿ ಮಾಡುವುದು ಸದ್ಯಕ್ಕೆ ಕಷ್ಟ. ಇದು ರಾಜ್ಯದ ಜನರ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರ ಎಂದಿದ್ದರು. ಅದಾದ ಬಳಿಕ ಕೇರಳ ಸಿಎಂ ಪಿಣರಾಯ್ ವಿಜಯನ್ ಗೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾಸರಗೋಡಿನಿಂದ ಮಂಗಳೂರಿಗೆ ಆಂಬುಲೆನ್ಸ್ ಮತ್ತು ಅಗತ್ಯ ಸಾಮಗ್ರಿಗಳ ಸಾಗಾಟ ಬಂದ್ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಿಎಂಗೆ ಪತ್ರ ಬರೆದಿದ್ದೆ. ಕಾಸರಗೋಡಿನಲ್ಲಿ ಅನೇಕರು ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದಾರೆ. ತುರ್ತು ಸನ್ನಿವೇಶದಲ್ಲಿ ರಾಜ್ಯ ಪ್ರವೇಶಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದೆ. ಆದರೆ ಕರ್ನಾಟಕ ಸರ್ಕಾರ ಮನವಿಯನ್ನು ನಿರಾಕರಿಸಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸುತ್ತೇನೆ. ಲಾಕ್‌ಡೌನ್ ಗೂ ಮೊದಲು ಪ್ರಧಾನಿಗಳೇ ಆಶ್ವಾಸನೆ ನೀಡಿದ್ದರು. ಆಸ್ಪತ್ರೆ ಮತ್ತು ಅಗತ್ಯ ವಸ್ತುಗಳಿಗೆ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಅದೇ ಅಗತ್ಯ ವಸ್ತುಗಳಿಗೆ ವ್ಯತ್ಯಯವಾಗುತ್ತಿದೆ. ಕಾಸರಗೋಡು ಹಾಗೂ ಮಂಗಳೂರು ಗಡಿ ವಿಚಾರದ ಬಗ್ಗೆ ಪ್ರಧಾನಿಗಳ ಗಮನ ಸೆಳೆಯುತ್ತೇನೆ ಎಂದಿದ್ದರು. ಅದರಂತೆ ಪ್ರಧಾನಿಗೂ ಪತ್ರ ಬರೆದಿದ್ದರು.
ಇದೀಗ ಅಂತಿಮವಾಗಿ ಸುಪ್ರೀಂಕೋರ್ಟ್ ಸೂಚನೆಯಂತೆ ಮಾತುಕತೆ ಮೂಲಕ ಬಗೆಹರಿದಿದ್ದು, ಕರ್ನಾಟಕ – ಕೇರಳ ಹೆದ್ದಾರಿ ಬಂದ್ ಗೊಂದಲಕ್ಕೆ ಪರಿಹಾರ ಸಿಕ್ಕಿದೆ. ಹೆದ್ದಾರಿ ಬಂದ್ ತೆರವುಗೊಳಿಸಲಾಗಿದೆ. ಅಗತ್ಯ ವಸ್ತಗಳು, ಆಂಬ್ಯುಲೆನ್ಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇನ್ನೆಂದು ಮತ್ತೆ ವಿವಾದ ಸೃಷ್ಟಿಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ನಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾಹಿತಿ ನೀಡಿದ್ದು, ಅರ್ಜಿ ಇತ್ಯರ್ಥ ಮಾಡುವಂತೆ ಮನವಿ ಮಾಡಲಾಗಿದೆ. ಗಡಿ ಸಮಸ್ಯೆ ಇತ್ಯರ್ಥಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡ ತುರ್ತು ಮಾನದಂಡ ರೂಪಿಸಿದೆ. ತುರ್ತು ಚಿಕಿತ್ಸೆ ಮತ್ತು ಅಪಘಾತ ಚಿಕಿತ್ಸೆಗೆ ಸರ್ಕಾರಿ ಅಂಬ್ಯುಲೆನ್ಸ್ ನಲ್ಲಿ ಕರೆತರಬೇಕು. ಕಾಸರಗೋಡಿನ ಸರ್ಕಾರಿ ವೈದ್ಯಾಧಿಕಾರಿಯಿಂದ (non covid) ಕೋವಿಡ್-19 ಸೋಂಕಿತರು ಅಲ್ಲ ಎನ್ನುವ ಪ್ರಮಾಣ ಪತ್ರ ತೆಗೆದುಕೊಂಡು ಬರಬೇಕು. ಜೊತೆಗೆ ಕಾಸರಗೋಡಿನಲ್ಲಿ ಸದರಿ ಚಿಕಿತ್ಸೆ ಲಭ್ಯವಿಲ್ಲ ಎಂಬ ಪತ್ರವೂ ಬೇಕು. ರೋಗಿಯನ್ನು ಕರೆತರುವ ಆಂಬ್ಯುಲೆನ್ಸ್ ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು. ರೋಗಿಯ ಜೊತೆ ಚಾಲಕ, ಸಹಾಯಕ ಮತ್ತಿತರ ಪ್ಯಾರಾಮೆಡಿಕ್ಸ್ ಸಿಬ್ಬಂದಿ ಕರೆತರಲು ಅವಕಾಶವಿದೆ. ತಲಪಾಡಿ ಗಡಿಯಲ್ಲಿ ವೈದ್ಯಕೀಯ ತಂಡ ಪರಿಶೀಲನೆ ಬಳಿಕವಷ್ಟೇ ಜಿಲ್ಲೆ ಪ್ರವೇಶಕ್ಕೆ ಅನುಮತಿ ಎಂದಿದ್ದಾರೆ. ಒಟ್ಟಾರೆ, ಅಂತಿಮವಾಗಿ ಕರ್ನಾಟಕ ಕೇರಳದ ಎದುರು ಕಾನೂನು ಹೋರಾಟದಲ್ಲಿ ಅಥವಾ ಸಂಧಾನದಲ್ಲಿ ಹಿನ್ನಡೆ ಅನುಭವಿಸಬೇಕಾಯಿತು.