ಪೌರತ್ವ ತಿದ್ದುಪಡಿ ಕಾನೂನು ಈಗ ಕೇರಳದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಪ್ರಕಟಿಸುವ ಕಾನೂನುಗಳನ್ನು ರಾಜ್ಯ ಸರ್ಕಾರಗಳು ಜಾರಿಗೆ ತರುವುದು ವಾಡಿಕೆ. ಆದರೆ, ಈ ಸಿಎಎ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಲವಾರು ರಾಜ್ಯ ಸರ್ಕಾರಗಳು ಸೆಡ್ಡು ಹೊಡೆದು ನಿಂತಿವೆ. ಯಾವುದೇ ಕಾರಣಕ್ಕೂ ಕಾನೂನನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೆ ತರುವುದಿಲ್ಲ ಎಂಬ ಘೋಷಣೆಯನ್ನು ಮಾಡಿರುವ ರಾಜ್ಯ ಸರ್ಕಾರಗಳು ಇದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿವೆ. ಇದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮತ್ತು ಸಿಎಎಯನ್ನು ಜಾರಿಗೆ ತರಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿಗೆ ಇರುಸುಮುರುಸು ಉಂಟುಮಾಡುತ್ತಿದೆ.
ರಾಜ್ಯ ಸರ್ಕಾರಗಳ ಅಸಹಕಾರದಿಂದ ಕೆರಳಿರುವ ಕೇಂದ್ರ ಸರ್ಕಾರ ಕೆಲವೆಡೆ ಸೇನೆಯನ್ನು ಬಿಟ್ಟು ಪ್ರತಿಭಟನೆಯನ್ನು ಹತ್ತಿಕ್ಕು ಪ್ರಯತ್ನವನ್ನೂ ಮಾಡುತ್ತಿದೆ.
ಈ ಮಧ್ಯೆ, ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಿಎಎ ವಿರುದ್ಧದ ನಿರ್ಣಯವನ್ನು ತೆಗೆದುಕೊಂಡಿದೆ. ಇದಕ್ಕೆ ವಿಧಾನಸಭೆಯ ಅನುಮೋದನೆಯನ್ನೂ ಪಡೆದುಕೊಂಡಿದೆ.
ಸಿಎಎ ವಿರುದ್ಧ ಪಶ್ಚಿಮ ಬಂಗಾಳ ಸೇರಿದಂತೆ ಪ್ರಮುಖವಾಗಿ ಪ್ರತಿಭಟನೆಗಳು ನಡೆಯುತ್ತಿರುವುದು ಕೇರಳದಲ್ಲಿ. ಇಲ್ಲಿ ಪಿಣರಾಯಿ ಸರ್ಕಾರ ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆಯಲ್ಲದೇ, ಸಿಎಎಯನ್ನು ರಾಜ್ಯದಲ್ಲಿ ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಘೋಷಿಸಿದ್ದಾರೆ. ಇಲ್ಲಿ ಪ್ರತಿಪಕ್ಷ ಯುಡಿಎಫ್ ಜತೆ ಸೇರಿ ಪಿಣರಾಯಿ ನೇತೃತ್ವದ ಎಲ್ ಡಿಎಫ್ ಜಂಟಿ ಪ್ರತಿಭಟನೆಯನ್ನೂ ನಡೆಸಿದ್ದವು.
ಈ ಪ್ರತಿಭಟನೆಗೆ ಪೂರಕವಾಗಿ ಕೇರಳ ಸರ್ಕಾರ ಇದೀಗ ಸಿಎಎಯನ್ನು ವಿರೋಧಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದುಕೊಳ್ಳುವ ಮೂಲಕ ಇಂತಹ ನಿರ್ಣಯ ತೆಗೆದುಕೊಂಡ ದೇಶದ ಮೊದಲ ರಾಜ್ಯ ಸರ್ಕಾರ ಎನಿಸಿದೆ.
ಈ ಬಗ್ಗೆ ಇದೀಗ ರಾಜ್ಯಪಾಲರಾದ ಆರಿಫ್ ಮೊಹ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ನಡುವೆ ಜಟಾಪಟಿ ಆರಂಭವಾಗಿದೆ. ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಸಂವಿಧಾನ ವಿರೋಧಿಯದ್ದಾಗಿದೆ. ಈ ನಿರ್ಣಯಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಧ್ವನಿಗೂಡಿಸಿದ್ದ ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ರವಿಶಂಕರ್ ಪ್ರಸಾದ್ ಅವರು, ಪೌರತ್ವಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯ ಅಥವಾ ಕಾನೂನನ್ನು ಜಾರಿಗೊಳಿಸುವ ಅಧಿಕಾರ ಸಂಸತ್ತಿಗೆ ಮಾತ್ರವಿದೆಯೇ ಹೊರತು ರಾಜ್ಯಗಳಿಗೂ ಇಲ್ಲ, ವಿಧಾನಸಭೆಗಳಿಗೂ ಇಲ್ಲ ಎಂದು ಹೇಳಿದ್ದರು.
ಇಷ್ಟೇ ಅಲ್ಲ, ಈ ಕುರಿತು ಕಾನೂನು ತಜ್ಞರ ಸಲಹೆಯನ್ನು ಪಡೆಯಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಸಲಹೆ ನೀಡಿದ್ದರು.
ಇನ್ನು ರಾಜ್ಯಸಭೆಯ ಬಿಜೆಪಿ ಸಂಸದ ಜಿ.ವಿ.ಎಲ್ ನರಸಿಂಹ ರಾವ್ ಅವರು ಸಂಸತ್ತಿನ ನಿರ್ಣಯವನ್ನು ಧಿಕ್ಕರಿಸುವ ನಿರ್ಣಯವನ್ನು ತೆಗೆದುಕೊಂಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಿಚಾರಣೆಯನ್ನು ಆರಂಭಿಸಬೇಕೆಂದು ಆಗ್ರಹಿಸಿದ್ದರು.
ಈ ಬಗ್ಗೆ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದ ನರಸಿಂಹರಾವ್ ಅವರು, ಪಿಣರಾಯಿಯವರು
ಸಂಸತ್ತಿನ ಹಕ್ಕುಗಳು ಹಾಗೂ ಕಲಾಪಗಳನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿಚಾರಣೆ ಆರಂಭಿಸಬೇಕು ಎಂದು ಮನವಿ ಮಾಡಿದ್ದರು.
ಇದಕ್ಕೆ ಮಾರುತ್ತರ ನೀಡಿರುವ ಪಿಣರಾಯಿ, ಯಾವುದೇ ಒಂದು ಜನವಿರೋಧಿ ನೀತಿ ವಿರುದ್ಧ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಮತ್ತು ಹಕ್ಕು ರಾಜ್ಯಗಳ ವಿಧಾನಸಭೆಗಳಿಗಿರುತ್ತದೆ. ಆ ಹಕ್ಕನ್ನು ಬಳಸಿಕೊಂಡು ನಮ್ಮ ರಾಜ್ಯದಲ್ಲಿ ಸಿಎಎ ವಿರುದ್ಧ ನಿರ್ಣಯ ಕೈಗೊಂಡಿದ್ದೇವೆ ಎಂದು ರಾಜ್ಯಪಾಲ ಮತ್ತು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಕಂದಕ ಮತ್ತಷ್ಟು ಆಳವಾಗುವಂತೆ ಮಾಡಿದ್ದಾರೆ.
ಇನ್ನು ರಾಜ್ಯಸಭೆಯಲ್ಲಿ ತಮ್ಮ ವಿರುದ್ಧ ವಿಚಾರಣೆ ಆರಂಭಿಸಬೇಕೆಂಬ ಒತ್ತಡಗಳು ಕೇಳಿ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪಿಣರಾಯಿ ವಿಜಯನ್, ಇದುವರೆಗೆ ಇಂತಹ ವಿಚಾರಣೆ ಬಗ್ಗೆ ನಾನು ಕೇಳಿರಲಿಲ್ಲ. ಆದರೆ, ಕೇಂದ್ರ ಸರ್ಕಾರದ ಈಗಿನ ಮನಸ್ಥಿತಿಯನ್ನು ಗಮನಿಸಿದರೆ ವಿಚಾರಣೆ ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ದೇಶದಲ್ಲಿ ಹಿಂದೆಂದೂ ಕಂಡರಿಯದಂತಹ ಬೆಳವಣಿಗೆಗಳು ಆಗುತ್ತಿವೆ. ಹೀಗಾಗಿ ನಾನು ವಿಚಾರಣೆ ಎದುರಿಸಿದರೂ ಆಶ್ಚರ್ಯವಿಲ್ಲ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಈ ವಿಚಾರ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಬಲ್ಲದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದ್ದಾರೆ.
ರಾಜಕಾರಣಿಯಾದರೇ ರಾಜ್ಯಪಾಲರು?
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಒಂದು ರಾಜ್ಯಪಾಲರಾದವರು ಪಕ್ಷಾತೀತವಾಗಿರಬೇಕು. ಅವರು ರಾಜ್ಯಪಾಲರಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ ಸಂದರ್ಭದಿಂದಲೇ ತಾವು ಪ್ರತಿನಿಧಿಸುತ್ತಿದ್ದ ರಾಜಕೀಯ ಪಕ್ಷ ಮತ್ತು ರಾಜಕೀಯ ಚಟುವಟಿಕೆಗಳಿಂದ ದೂರವಿರಬೇಕು. ಆದರೆ, ಕೇರಳದಲ್ಲಿ ರಾಜ್ಯಪಾಲ ಆರಿಫ್ ಮೊಹ್ಮದ್ ಖಾನ್ ಪಕ್ಕಾ ರಾಜಕಾರಣಿಯಂತೆ ಹೇಳಿಕೆಗಳನ್ನು ಕೊಡಲು ಆರಂಭಿಸಿದ್ದಾರೆ.
ಅತ್ತ ರಾಜ್ಯ ಸರ್ಕಾರದ ನಿರ್ಣಯವನ್ನು ಟೀಕಿಸಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಣಯಕ್ಕೆ ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಹೇಳಿ ರಾಜ್ಯ ಸರ್ಕಾರದ ಮೇಲೆ ಸವಾರಿ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಸಿಎಎಯನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿರುವುದನ್ನೂ ಒಂದು ಪಕ್ಷದ ವಕ್ತಾರರ ರೀತಿಯಲ್ಲಿ ರಾಜ್ಯಪಾಲರು ಟೀಕಿಸಿದ್ದಾರೆ.
ಕಾಂಗ್ರೆಸ್ ಮಾಡಿರುವ ಶಿಫಾರಸು ಅಥವಾ ಸಲಹೆಗಳು ಕಾನೂನುಬಾಹಿರವಾಗಿವೆ ಮತ್ತು ಕ್ರಿಮಿನಲ್ ಅಪರಾಧಕ್ಕೆ ಸಮಾನವಾಗಿವೆ ಎಂದು ಹೇಳಿಕೆ ನೀಡುವ ಮೂಲಕ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಕ್ತಾರರಂತೆ ವರ್ತಿಸಿದ್ದಾರೆ.
ಒಂದು ವೇಳೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಣಯ ಸಂವಿಧಾನ ವಿರೋಧಿಯಾಗಿದ್ದರೆ ಅದನ್ನು ತಿರಸ್ಕರಿಸುವ ಸಂವಿಧಾನಬದ್ಧವಾದ ಅಧಿಕಾರ ರಾಜ್ಯಪಾಲರಿಗಿದೆ. ಆದರೆ, ಆ ಕೆಲಸ ಮಾಡುವುದನ್ನು ಬಿಟ್ಟು ರಾಜ್ಯಪಾಲರು ಕೇಂದ್ರ ಸರ್ಕಾರದ ವಕ್ತಾರಿಕೆಯಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎನಿಸಿದೆ.
ಒಂದು ವೇಳೆ ಅವರಿಗೆ ರಾಜಕಾರಣದ ಬಗ್ಗೆ ಮಾತನಾಡಬೇಕೆನಿಸಿದರೆ ರಾಜ್ಯಪಾಲರ ಹುದ್ದೆಯನ್ನು ತೊರೆಯಬೇಕು. ಆ ಬಳಿಕ ತಮಗೆ ಒಲವಿರುವ ಪಕ್ಷದ ಪರವಾದ ವಕ್ತಾರಿಕೆಯನ್ನು ಮಾಡಲು ಯಾವುದೇ ಅಡ್ಡಿ ಇರುವುದಿಲ್ಲ.