ಕಟ್ಟರ್ ಕಮ್ಯೂನಿಸ್ಟ್ ನಾಡು ಕೇರಳದಲ್ಲಿ ಹಲವು ವರ್ಷಗಳಿಂದ ಬಿಜೆಪಿ ತನ್ನ ನೆಲೆಗಳನ್ನ ಸ್ಥಾಪಿಸಲು ಯತ್ನಿಸುತ್ತಿದೆ. ಹೌದು, ಆದರೆ ನಿರೀಕ್ಷಿತ ಮಟ್ಟದಲ್ಲಿ ದೇವರ ನಾಡಲ್ಲಿ ಕಮಲ ಅರಳಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಶಬರಿಮಲೆ ಅಯ್ಯಪ್ಪ ವಿವಾದವನ್ನೂ ಕೆದಕುವ ಮೂಲಕ ಇಲ್ಲಿ ನೆಲೆ ಕಂಡುಕೊಳ್ಳಲು ನೋಡಿತ್ತು. ಅದಕ್ಕಾಗಿಯೇ ಸುಪ್ರೀಂಕೋರ್ಟ್ ಆಜ್ಞೆಯನ್ನೂ ಧಿಕ್ಕರಿಸಿ ಅಯ್ಯಪ್ಪ ಭಕ್ತರು ನಡೆಸಿದ ಹೋರಾಟಕ್ಕೆ ಬಿಜೆಪಿ ಸಕ್ರಿಯವಾಗಿ ಕೈಜೋಡಿಸಿತ್ತು. ಬಿಜೆಪಿಯ ಮಾತೃ ಸಂಘಟನೆ ಆರ್ಎಸ್ಎಸ್ ಸುಪ್ರೀಮ್ ಕೋರ್ಟ್ ತೀರ್ಪನ್ನ ಸ್ವಾಗತಿಸಿತ್ತಾದರೂ ಕೇರಳ ಘಟಕದ ಬಿಜೆಪಿ ಮಾತ್ರ ರಾಜಕೀಯ ಮಾಡಿತ್ತು. ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿ ಅಯ್ಯಪ್ಪ ಭಕ್ತರು ತೀವ್ರ ಹೋರಾಟ ಮಾಡಲು ಬಿಜೆಪಿಯೇ ಕಾರಣವೆಂದರೂ ಯಾವುದೇ ಅಚ್ಚರಿ ಪಡಬೇಕಿಲ್ಲ.
ಕಾಂಗ್ರೆಸ್, ಕಮ್ಯೂನಿಸ್ಟ್, ಮುಸ್ಲಿಮ್ ಲೀಗ್ ಪಕ್ಷಗಳ ಅಡ್ಡೆಯಾದ ಕೇರಳದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಹರಸಾಹಸವನ್ನೇ ಮಾಡುತ್ತಾ ಬರುತ್ತಿದೆ. ಇದಕ್ಕಾಗಿ ಕಮ್ಯೂನಿಸ್ಟ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕೇರಳದ ಹಲವೆಡೆ ಹಲವು ಆರ್ಎಸ್ಎಸ್ ಕಾರ್ಯಕರ್ತರನ್ನು ಹತ್ಯೆಗೈಯುತ್ತಿದ್ದಾರೆ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡಿದ್ದೂ ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗೆ ಬರುವ ಅನುಕಂಪದ ಮೇಲಾದರೂ ಹಿಂದೂಗಳ ಮತಗಳನ್ನು ಕ್ರೋಢೀಕರಿಸಲು ಬಿಜೆಪಿ ಯತ್ನಿಸುತ್ತಿದೆ. ಇಂತಹ ಬಿಜೆಪಿಗೆ ಈಗ ಸೂಪರ್ ಸ್ಟಾರ್ ಮೋಹನ್ ಲಾಲ್ ಆಪತ್ಬಾಂಧವರಂತೆ ಕಾಣುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಈ ಹಿಂದೆಯೇ ಮೋಹನ್ ಲಾಲ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಫೋಟೋವೊಂದು ಭಾರೀ ವೈರಲ್ ಆಗಿತ್ತು. ಈ ಫೋಟೋ ಕೆಲ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನವುಂಟು ಮಾಡಿತ್ತು. ಮುಂಬರುವ ದಿನಗಳಲ್ಲಿ ಸೂಪರ್ಸ್ಟಾರ್ ಮೋಹನ್ ಲಾಲ್ ಬಿಜೆಪಿ ಸೇರುತ್ತಿದ್ದಾರೆ ಎಂಬ ಕೂಗು ಅಂದೇ ಗಟ್ಟಿಯಾಗಿ ಕೇಳಿಬಂದಿತ್ತು. ಈಗ ಇದೇ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಮೂಲಗಳ ಪ್ರಕಾರ ಮೋಹನ್ ಲಾಲ್ ಅವರನ್ನ ಬಿಜೆಪಿಗೆ ಕರೆತರುವುದು ಆರ್ಎಸ್ಎಸ್ ಮಾಸ್ಟರ್ ಪ್ಲಾನ್. ಇದಕ್ಕಾಗಿ ಮೋಹನ್ ಲಾಲ್ ಅವರೊಂದಿಗೆ ಆರ್ಎಸ್ಎಸ್ ಸಂಪರ್ಕ ಸಾಧಿಸುತ್ತಿದೆ.
ಮೋಹನ್ ಲಾಲ್ ಅವರು ಆರ್ಎಸ್ಎಸ್ ಬೆಂಬಲಿಗರೇನಲ್ಲ. ಆದರೆ, ಅವರಿಗೂ ಆರ್ಎಸ್ಎಸ್ಗೂ ಪರೋಕ್ಷ ನಂಟಂತೂ ಇದೆ. ಇದಕ್ಕೆ ಕಾರಣ ತಮ್ಮ ತಂದೆ ವಿಶ್ವನಾಥನ್ ನಾಯರ್ ನೆನಪಿಗಾಗಿ ಮೋಹನ್ ಲಾಲ್ ಸ್ಥಾಪಿಸಿರುವ ವಿಶ್ವಶಾಂತಿ ಫೌಂಡೇಶನ್. ಈ ಫೌಂಡೇಶನ್ ಆರ್ಎಸ್ಎಸ್ ಸೇವಾ ಭಾರತಿ ಜತೆ ನಿಕಟವಾಗಿ ಕೆಲಸ ಮಾಡುತ್ತಿದೆ. ಕೇರಳದ ಪ್ರವಾಹ ಸಂದರ್ಭದಲ್ಲಿ ನಟನ ಫೌಂಡೇಶನ್ ಜೊತೆ ಸೇವಾಭಾರತಿಯೂ ಕೈಜೋಡಿಸಿತ್ತು. ವಿಶ್ವಶಾಂತಿ ಫೌಂಡೇಶನ್ನ ಆಡಳಿತದಲ್ಲಿ ಆರ್ಎಸ್ಎಸ್ನವರು ಇದ್ದಾರೆ. ಹಾಗಾಗಿ ಹೇಗಾದರೂ ಸರಿ ಮೋಹನ್ ಲಾಲ್ ಅವರನ್ನು ಬಿಜೆಪಿಗೆ ಕರೆತರಬೇಕು ಎನ್ನುವುದು ಆರ್ಎಸ್ಎಸ್ನವರ ಪ್ಲಾನ್.
ಕೇರಳದಲ್ಲಿ ಚುನಾವಣೆ ಗೆಲ್ಲಲು ಸಿನಿಮಾ ಜನಪ್ರಿಯತೆ ಮಾತ್ರ ಸಾಕಾಗಲ್ಲ. ಹೀಗಾಗಿ ಮೋಹನ್ ಲಾಲ್ ಅವರ ಪಬ್ಲಿಕ್ ಇಮೇಜ್ ಬಳಸಿಕೊಳ್ಳಲು ಆರ್ಎಸ್ಎಸ್ ಪ್ರಯತ್ನ ಮಾಡುತ್ತಿರುವುದು ಸತ್ಯ. ಮುಂದಿನ ವಿಧಾನಸಭಾ ಚುನಾವಣೆಯಷ್ಟರಲ್ಲಿ ಮೋಹನ್ ಲಾಲ್ ಬಿಜೆಪಿ ಸೇರುವ ಸಾಧ್ಯತೆ ಇದೆ. ಇದರಿಂದ ಕೇರಳದಲ್ಲಿ ಬಿಜೆಪಿ ಎಷ್ಟರಮಟ್ಟಿಗೆ ರಾಜಕೀಯವಾಗಿ ಬೆಳೆಯಲಿದೆ ಎಂಬುದೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಮೋಹನ್ ಲಾಲ್ ಬಿಜೆಪಿಗೆ ಹೋದರೆ ಕೇರಳದಲ್ಲಿ ಕಮಲ ಪಾಳಯ ನೆಲೆಯೂರಲು ಹೊಸ ಸಾಧ್ಯತೆ ತೆರೆದುಕೊಂಡಿರುವುದಂತೂ ವಾಸ್ತವ.