ಕಳೆದ ವಾರ ದೇಶದ ಉದಾರವಾದಿಗಳು ಮತ್ತು ಸಂವಿಧಾನಪರರ ಪಾಲಿಗೆ ದೆಹಲಿಯ ಭೀಕರ ಹಿಂಸಾಚಾರಕ್ಕಿಂತ ದೊಡ್ಡ ಆಘಾತ ತಂದಿದ್ದು ಆಮ್ ಆದ್ಮಿ ಪಕ್ಷ ಮತ್ತು ಅದರ ನಾಯಕ ಅರವಿಂದ ಕೇಜ್ರಿವಾಲ್ ಎಂಬ ಹೊಸ ಭರವಸೆ ದಿಢೀರನೇ ಕರಾಳ ದುಃಸ್ವಪ್ನವಾಗಿ ಬದಲಾಗಿದ್ದು!
ಹೌದು, ಬಿಜೆಪಿಯ ಕೋಮುವಾದ, ಹಿಂದುತ್ವವಾದ, ಹಿಂಸಾ ರಾಜಕಾರಣಗಳ ವಿರುದ್ಧ ಚುನಾವಣಾ ಕಣದಲ್ಲಿ ಸೆಣೆಸಿ, ಅದನ್ನು ಮಣಿಸಿ ಮಣ್ಣುಮುಕ್ಕಿಸಿದ ಕೇಜ್ರಿವಾಲ್, ವಿಧಾನಸಭಾ ಗೆಲುವು ಇಡೀ ದೇಶದ ಪ್ರಜಾಪ್ರಭುತ್ವದ, ಉದಾರವಾದಿ ನಂಬಿಕೆಯ, ನೈಜ ಅಭಿವೃದ್ಧಿ ಪರ ರಾಜಕಾರಣದ ಗೆಲುವು ಎಂದೇ ಉದಾರವಾದಿಗಳು- ಸಂವಿಧಾನಪರರು ಸಂಭ್ರಮಿಸಿದ್ದರು. ಜೊತೆಗೆ ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಪ್ರತಿಯಾಗಿ ಹೊಸ ಪರ್ಯಾಯ ರಾಜಕಾರಣದ ಆಯ್ಕೆ ದೇಶದ ಜನರಿಗೆ ಸಿಕ್ಕಿತು ಎಂದೂ ವಿಶ್ಲೇಷಿಸಲಾಗಿತ್ತು.
ದೆಹಲಿಯ ವಿಧಾನಸಭಾ ಚುನಾವಣೆ ಫಲಿತಾಂಶಗಳು ಬಂದು, ಉದಾರವಾದಿಗಳು ಇನ್ನೂ ಸಂಭ್ರಮದಲ್ಲಿರುವಾಗಲೇ ದೊಡ್ಡ ಆಘಾತ ಎರಗಿತು. ಚುನಾವಣೆಯ ಫಲಿತಾಂಶ ಹುಟ್ಟಿಸಿದ ಪರ್ಯಾಯ ರಾಜಕಾರಣದ ಕನಸು, ಕೇವಲ ತಮ್ಮ ಪಾಲಿನ ಹಗಲುಗನಸು ಎಂಬುದು ಅರಿವಾಗಲು ಹೆಚ್ಚು ಸಮಯ ಹಿಡಿಯೇ ಇಲ್ಲ!
ಚುನಾವಣೆ ಫಲಿತಾಂಶದ ಬೆನ್ನಲ್ಲೇ ಭುಗಿಲೆದ್ದ ದೆಹಲಿ ಹಿಂಸಾಚಾರ ಎಎಪಿಯ ಪ್ರಜಾಪ್ರಭುತ್ವವಾದಿ, ಉದಾರವಾದಿ ಮುಖವಾಡವನ್ನು ಬಹಳ ಬೇಗನೇ ಕಳಚಿಹಾಕಿತು. ಸ್ವಾತಂತ್ರ್ಯ ನಂತರದ ಅತ್ಯಂತ ಭೀಕರ ಹಿಂದೂ-ಮುಸ್ಲಿಂ ಹಿಂಸಾಚಾರ ಎಂದೇ ಬಣ್ಣಿಸಲಾದ ಸಂಘರ್ಷಕ್ಕೆ ಆಡಳಿತಾರೂಢ ಎಎಪಿ ಸರ್ಕಾರ ಮತ್ತು ಅದರ ಚುಕ್ಕಾಣಿ ಹಿಡಿದ ಅರವಿಂದ್ ಕೇಜ್ರಿವಾಲ್ ಸ್ಪಂದಿಸಿದ ರೀತಿ, ಉದಾರವಾದಿಗಳ ಪಾಲಿಗಷ್ಟೇ ಅಲ್ಲ; ಸ್ವತಃ ಗಲಭೆಗೆ ಕುಮ್ಮಕ್ಕು ನೀಡಿದ ಹಿಂದುತ್ವವಾದಿಗಳಿಗೂ ಆಘಾತ ನೀಡಿತು.
ಸತತ ಮೂರು ದಿನಗಳ ಕಾಲ ಅವ್ಯಾಹತವಾಗಿ ಯಾವ ಅಡೆತಡೆ ಇಲ್ಲದೆ ನಡೆದ ಹಿಂಸಾಚಾರದಲ್ಲಿ ಬರೋಬ್ಬರಿ 48 ಜೀವಗಳು ಬಲಿಯಾದರೂ, ಸ್ವತಃ ಪೊಲೀಸರೇ ಹಿಂಸಾಚಾರದಲ್ಲಿ ಒಂದು ಸಮುದಾಯದ ಪರ ನಿಂತು ದಾಳಿಗೆ ಬೆಂಬಲ ನೀಡಿದರೂ, ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಹೊತ್ತಿದ್ದ ಕೇಂದ್ರ ಗೃಹ ಸಚಿವರು ಮತ್ತು ಸರ್ಕಾರ ಕಣ್ಣುಮುಚ್ಚಿಕೊಂಡಿತ್ತು. ಬಿಜೆಪಿಯ ಕೋಮುವಾದಿ ಅಜೆಂಡಾದ ಹಿನ್ನೆಲೆಯಲ್ಲಿ ಅಂತಹ ವರ್ತನೆ ನಿರೀಕ್ಷಿತವೇ ಆಗಿತ್ತು. ಆದರೆ, ಉದಾರವಾದಿಗಳ ನಿರೀಕ್ಷೆಯಾಗಿದ್ದ ಎಎಪಿ ಸರ್ಕಾರ ಕೂಡ ಆ ಬಗ್ಗೆ ಕಣ್ಣು ಬಿಡಲಿಲ್ಲ, ಅದರಲ್ಲೂ ಮುಸ್ಲಿಂ ಮತಗಳ ಬೆಂಬಲದೊಂದಿಗೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ವಿರುದ್ಧ ಜಯಭೇರಿ ಭಾರಿಸಿದ ಆ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಕೂಡ ಕೇಂದ್ರದ ಧೋರಣೆಯ ಬಗ್ಗೆ ಆಕ್ಷೇಪವೆತ್ತಲಿಲ್ಲ ಮತ್ತು ಕನಿಷ್ಠ ಗಲಭೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಕಡೆಯಿಂದ ಯಾವ ಪ್ರಯತ್ನವನ್ನೂ ನಡೆಸಲೇ ಇಲ್ಲ. ಕೇವಲ ಕೇಂದ್ರ ಗೃಹ ಸಚಿವರಿಗೆ ಗಲಭೆ ಹತೋಟಿಗೆ ಮನವಿ ಸಲ್ಲಿಸಲಷ್ಟೇ ಕೇಜ್ರಿವಾಲರ ಪ್ರಜಾಪ್ರಭುತ್ವದ ಕಾಳಜಿ ಸೀಮಿತವಾಯಿತು!
ತಮ್ಮ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿದ ಕೇಜ್ರಿವಾಲರ ಈ ನಿರ್ಲಿಪ್ತ ಧೋರಣೆ, ಜಾಣ ಕುರುಡುತನ ಸಹಜವಾಗೇ ಅವರನ್ನೇ ಭವಿಷ್ಯದ ರಾಜಕಾರಣದ ಬೆಳಕು ಎಂದುಕೊಂಡಿದ್ದವರಿಗೆ ಮೊದಲ ಆಘಾತ ನೀಡಿತು. ಆ ಆಘಾತ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವಾಗಿ, ಅಸಹನೆಯಾಗಿ ಹೊರಬಿತ್ತು.
ಆದರೆ, ಅದಕ್ಕಿಂತ ದೊಡ್ಡ ಆಘಾತ ಮುಂದೆ ಕಾದಿದೆ ಎಂಬ ಸಣ್ಣ ಸುಳಿವು ಕೂಡ ಅವರಿಗೆ ಇರಲಿಲ್ಲ!
ದೆಹಲಿ ಗಲಭೆಗಳು ತಣ್ಣಗಾಗುವ ಹೊತ್ತಿಗೆ, ಗಲಭೆ ಸಂತ್ರಸ್ತರಿಗೆ ಒಂದಿಷ್ಟು ಪರಿಹಾರ ನೀಡಿ, ಗಲಭೆಕೋರರ ಬಗ್ಗೆಯಾಗಲೀ, ಗಲಭೆಗೆ ಕುಮ್ಮಕ್ಕು ನೀಡಿದವರ ಬಗ್ಗೆಯಾಗಲೂ ಒಂದೇ ಒಂದು ಮಾತನ್ನೂ ಆಡದೆ ‘ಅದೇನೋ ವಿಧಿಯಾಟ’ ಎಂಬಂತೆ ಮುಗುಮ್ಮಾಗಿದ್ದ ಎಎಪಿ, ಉದಾರವಾದಿಗಳಿಗೆ ಮತ್ತೊಂದು ಆಘಾತಕಾರಿ ಸುದ್ದಿ ನೀಡಿತು! ಅದು ಉದಾರವಾದಿಗಳ ದೊಡ್ಡ ಆಶಾಕಿರಣ ಕನ್ಹಯ್ಯ ಕುಮಾರ್ ಮತ್ತು ಅವರ ಗೆಳೆಯರ ವಿರುದ್ಧದ ‘ದೇಶದ್ರೋಹ’ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಕೈಗೊಳ್ಳಲು ಹಸಿರು ನಿಶಾನೆ ತೋರಿದ್ದು!
ಸುಮಾರು ಒಂದು ವರ್ಷದಿಂದ ಈ ಪ್ರಕರಣದಲ್ಲಿ ಪೊಲೀಸರು ಸರ್ಕಾರಕ್ಕೆ ಮನವಿ ಮಾಡಿದ್ದರೂ, ಕನ್ಹಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ದೆಹಲಿ ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ, ಇದೀಗ ಚುನಾವಣೆ ಗೆದ್ದು ಮರಳಿ ಅಧಿಕಾರಕ್ಕೆ ಎರಡೇ ವಾರದಲ್ಲಿ ಅನುಮತಿ ನೀಡುವ ಮೂಲಕ ಎಎಪಿ, ತಾನು ಉದಾರವಾದಿಗಳು ಅಂದುಕೊಂಡಂತೆ ಬಿಜೆಪಿಗಿಂತ ಭಿನ್ನವಲ್ಲ ಎಂಬುದನ್ನು ಜಗಜ್ಜಾಹೀರುಗೊಳಿಸಿತು. ಸಹಜವಾಗೇ ಕೇಜ್ರಿವಾಲರ ಈ ನಡೆಯಂತೂ ಉದಾರವಾದಿಗಳನ್ನು ರೊಚ್ಚಿಗೇಳಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧ ವಾಗ್ದಾಳಿಗಳು ಭುಗಿಲೆದ್ದವು. ಕೇಜ್ರಿವಾಲ್ ಆರ್ ಎಸ್ ಎಸ್ ನ ಮತ್ತೊಂದು ಮುಖ ಎಂಬ ಟೀಕೆಗಳು, ವ್ಯಂಗ್ಯಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೊಳಗಾದವು.
ದೆಹಲಿ ಗಲಭೆಯ ವಿಷಯದಲ್ಲಿ ಅದಾಗಲೇ ಭ್ರಮನಿರನಗೊಂಡಿದ್ದ ಉದಾರವಾದಿಗಳು, ಕನ್ಹಯ್ಯಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ದೆಹಲಿ ಪೊಲೀಸರಿಗೆ ಅನುಮತಿ ನೀಡುತ್ತಲೇ ಕೇಜ್ರಿವಾಲ್ ಬಿಜೆಪಿಗಿಂತ ಅಪಾಯಕಾರಿ, ಸಮಯಸಾಧಕ, ಮೃದು ಹಿಂದುತ್ವವಾದಿ ಎಂಬ ನಿಲುವಿಗೆ ಬಂದರು.
ಆದರೆ, ವಾಸ್ತವವಾಗಿ ಕೇಜ್ರಿವಾಲ್ ಮತ್ತು ಅವರ ಎಎಪಿ ಈ ಮೊದಲು ನೈಜ ಉದಾರವಾದಿ ಪ್ರಜಾತಾಂತ್ರಿಕ ನಡವಳಿಕೆಯನ್ನು ಹೊಂದಿತ್ತೇ? ಅವರು ಯಾವಾಗ ಪ್ರಗತಿಪರ, ಜಾತ್ಯತೀತ ರಾಜಕಾರಣವನ್ನು ಮಾಡಿದ್ದರು? ಯಾವಾಗ ತತ್ವ ಮತ್ತು ಸಿದ್ಧಾಂತದ ವಿಷಯದಲ್ಲಾಗಲೀ, ಆರ್ಥಿಕ ನೀತಿಗಳ ವಿಷಯದಲ್ಲಾಗಲೀ, ಸಾಮಾಜಿಕ ಬದ್ಧತೆಯ ವಿಷಯದಲ್ಲಾಗಲೀ ಸ್ಪಷ್ಟ ನಿಲುವು ಮತ್ತು ನೀತಿಗಳನ್ನು ಹೊಂದಿದ್ದರು? ಎಂಬ ಪ್ರಶ್ನೆಗಳನ್ನು ಕೇಳಿಕೊಂಡರೆ, ವಾಸ್ತವಾಂಶ ಅರಿವಿಗೆ ಬರದೇ ಇರದು. ಎಎಪಿ ಪಕ್ಷ ಹುಟ್ಟಿದ್ದೇ ಭ್ರಷ್ಟಾಚಾರ ವಿರೋಧಿ- ಲೋಕಪಾಲ್ ಪರ ಚಳವಳಿಯ ಭಾಗವಾಗಿ., ಹಾಗಾಗಿ ಅದಕ್ಕೆ ಸರ್ಕಾರಿ ವ್ಯವಸ್ಥೆಯ ಭ್ರಷ್ಟಾಚಾರದ ಬಗ್ಗೆ ಮಾತ್ರ ಸ್ಪಷ್ಟತೆ ಇತ್ತೇ ವಿನಃ, ಅದನ್ನು ಹೊರತುಪಡಿಸಿ ಸಾಮಾಜಿಕವಾಗಿ, ಆರ್ಥಿಕವಾಗಿಯಾಗಲೀ, ರಾಜಕೀಯದ ಎಡ-ಬಲದ ಸೈದ್ಧಾಂತಿಕ ನೀತಿ-ನಿಲುವಿನ ಬಗ್ಗೆಯಾಗಲೀ ಯಾವುದೇ ನಿಖರತೆ ಇರಲಿಲ್ಲ ಮತ್ತು ಆ ಬಗ್ಗೆ ಮಾತನಾಡಲೂ ಇಲ್ಲ.
ಇನ್ನು ಹಿಂದುತ್ವದ ವಿಷಯದಲ್ಲಿ ಕೂಡ ಕೇಜ್ರಿವಾಲ್ ಎಂದೂ ತಮ್ಮ ಸ್ಪಷ್ಟ ನಿಲುವು ವ್ಯಕ್ತಪಡಿಸಿರಲಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ತಾವೂ ಶ್ರದ್ಧಾವಂತ ಹಿಂದೂ, ತಾವೂ ಮನೆಯಲ್ಲಿ ನಿತ್ಯ ಹನುಮಾನ್ ಚಾಲೀಸ್ ಪಠಿಸುತ್ತೇನೆ, ಮಂದಿರಗಳಿಗೆ ಭೇಟಿ ನೀಡುತ್ತೇನೆ ಎನ್ನುವ ಮೂಲಕ ಹಿಂದೂ ಮತದಾರರಲ್ಲಿ ಒಬ್ಬನಾಗುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗೇ ಮಾಡಿದರು ಮತ್ತು ಅಂತಹ ಪ್ರಯತ್ನ ಅವರಿಗೆ ನಿರೀಕ್ಷಿತ ಫಲವನ್ನೂ ಕೊಟ್ಟಿತು. ಅದಾದ ಬಳಿಕ ದೆಹಲಿ ಹಿಂಸಾಚಾರದ ಸಂದರ್ಭದಲ್ಲಿ ತಮ್ಮ ಹಿಂದುತ್ವ ಎಷ್ಟು ಉಗ್ರ ಸ್ವರೂಪದ್ದು ಎಂಬುದನ್ನೂ ಅವರು ಸಾಬೀತು ಮಾಡಿದರು. ಹಾಗಿದ್ದಾಗಲೂ ಅವರನ್ನು ಮೃದು ಹಿಂದುತ್ವವಾದಿ ಎಂದು ಜರೆಯುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಉದಾರವಾದಿಗಳು ಕೇಳಿಕೊಳ್ಳಬೇಕಾಗಿದೆ.
ಹಾಗೇ ಕೇಂದ್ರ ಸರ್ಕಾರದ ಜೊತೆಗಿನ ಕಳೆದ ಐದು ವರ್ಷಗಳ ಅವಧಿಯ ಅವರ ಸಂಘರ್ಷ ಕೂಡ ಎಂದೂ ಸೈದ್ಧಾಂತಿಕ ನಿಲುವಿನ ಸಂಘರ್ಷವಾಗಿರಲಿಲ್ಲ. ಬದಲಾಗಿ ಅದೊಂದು ಅಧಿಕಾರ ಹಂಚಿಕೆಯ ಹಗ್ಗಜಗ್ಗಾಟವಾಗಿತ್ತು ಎಂಬ ಸಂಗತಿಯನ್ನು ಕೂಡ ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಉದಾರವಾದಿಗಳ ಮಂದದೃಷ್ಟಿಯ ಸೋಲಿದೆ.
ಹಾಗಾಗಿ ಕೇಜ್ರಿವಾಲರ ಚಾಣಾಕ್ಷ ರಾಜಕೀಯ ನಡೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಉದಾರವಾದಿಗಳು ಸೋತ್ತಿದ್ದೇ ಅವರ ಭ್ರಮನಿರಸನಕ್ಕೆ ಕಾರಣ. ಅದರಲ್ಲೂ ಈ ಬಾರಿಯ ಚುನಾವಣೆಯಲ್ಲಿ ಕೇಜ್ರಿವಾಲ್ ನಡೆ ಪಕ್ಕಾ ಲೆಕ್ಕಾಚಾರದ ರಾಜಕಾರಣವಾಗಿತ್ತು. ಬಿಜೆಪಿಯ ಹಿಂದುತ್ವದ ಬಗ್ಗೆಯಾಗಲೀ, ಅದರ ಹಿಂದುತ್ವವಾದಿ ಅಜೆಂಡಾದ ಭಾಗವಾದ ಸಿಎಎ ಬಗ್ಗೆಯಾಗಲೀ, ಸಿಎಎ ವಿರೋಧೀ ಉದಾರವಾದಿಗಳು ಪ್ರತಿಭಟನೆಯ ಹೆಗ್ಗುರುತಾದ ಶಾಹೀನ್ ಭಾಗ್ ಬಗ್ಗೆಯಾಗಲೀ ಅವರು ತುಟಿಬಿಚ್ಚಲಿಲ್ಲ. ಶಾಲೆ, ಆಸ್ಪತ್ರೆ, ಉಚಿತ ವಿದ್ಯುತ್, ಬಸ್ ಸೌಕರ್ಯ, ಸ್ವಚ್ಛತೆಯಂತಹ ವಿಷಯಗಳ ಬಗ್ಗೆ ಮಾತನಾಡಿದರೇ ವಿನಃ ಸಾಮಾಜಿಕ ನ್ಯಾಯದ ಬಗ್ಗೆಯಾಗಲೀ, ಸಮಾನತೆಯ ಬಗ್ಗೆಯಾಗಲೀ ಮಾತನಾಡಲಿಲ್ಲ. ಇನ್ನು ಆರ್ಥಿಕ ನೀತಿಯ ವಿಷಯದಲ್ಲೂ ಅವರು ತಮ್ಮ ನಿಲುವನ್ನೂ ಅಪ್ಪಿತಪ್ಪಿಯೂ ಹೇಳಲಿಲ್ಲ.
ಹಾಗೆ ಒಂದು ರಾಜಕೀಯ ಪಕ್ಷವಾಗಿ ಸ್ಪಷ್ಟತೆ ಹೊಂದಿರಲೇಬೇಕಾದ ವಿಷಯಗಳಲ್ಲಿ ಎಎಪಿ ಮೌನ ವಹಿಸಿತ್ತು. ಆ ಮೂಲಕ ಬಿಜೆಪಿಯ ಹಿಂದುತ್ವವಾದಿ ರಾಜಕಾರಣದ ಪ್ರವಾಹದಲ್ಲಿ ತಾನೂ ಆದಷ್ಟು ದೂರ ಅನಾಯಾಸವಾಗಿ ತೇಲಿ ದಡ ಸೇರುವ ಲೆಕ್ಕಾಚಾರ ಅದರದ್ದಾಗಿತ್ತು. ಅಂದರೆ, ಉದಾರವಾದಿಗಳ ಗ್ರಹಿಕೆಯಂತೆ ಬಿಜೆಪಿಯ ಉಗ್ರ ಹಿಂದುತ್ವವಾದಿ ರಾಜಕಾರಣಕ್ಕೆ ಪ್ರತಿಯಾಗಿ ‘ಪರ್ಯಾಯ ರಾಜಕಾರಣ’ವನ್ನು ಜನರ ಮುಂದಿಡುವ ಬದಲಾಗಿ, ಹಿಂದುತ್ವವಾದಿ ಬಹುಸಂಖ್ಯಾತರಿಗೆ ರಾಜಕೀಯವಾಗಿ ಬಿಜೆಪಿಯೊಂದಿಗೆ ಮತ್ತೊಂದು ಪರ್ಯಾಯವಾಗಿ ಹೊರಹೊಮ್ಮಲು ಎಎಪಿ ತಂತ್ರಗಾರಿಕೆ ಹೆಣೆದಿತ್ತು. ಆ ತಂತ್ರಗಾರಿಕೆಯನ್ನು ಮುಸ್ಲಿಂ ಮತದಾರರು ಗಣನೀಯ ಪ್ರಮಾಣದಲ್ಲಿರುವ ದೆಹಲಿ ಚುನಾವಣೆಯ ವೇಳೆ ರಾಜಾರೋಷವಾಗಿ ಜನರ ಮುಂದಿಡಲು ಹಿಂಜರಿದಿತ್ತು. ಆದರೆ, ಚುಣಾವಣೆ ಮುಗಿಯುತ್ತಲೇ ದೆಹಲಿ ಹಿಂಸಾಚಾರ ಸಂದರ್ಭ ಎಎಪಿಗೆ ಒದಗಿಬಂದಿತು. ತಾನೆಷ್ಟು ಹಿಂದುತ್ವವಾದಿ ಎಂಬುದನ್ನು ತನ್ನ ಜಾಣಕುರುಡು ವರಸೆಯ ಮೂಲಕ ಅದು ತೋರಿಸಿಕೊಟ್ಟಿತು.
ಅದರ ಬೆನ್ನಲ್ಲೇ ಕನ್ಹಯ್ಯಕುಮಾರ್ ವಿಷಯದಲ್ಲಿ ತನ್ನ ನಿರ್ಧಾರ ಪ್ರಕಟಿಸುವ ಮೂಲಕ ಬಿಜೆಪಿಯ ಮತದಾರರಿಗೆ ತಾನೇ ಸದ್ಯಕ್ಕೆ ಸರಿಯಾದ ‘ರಾಜಕೀಯ ಪರ್ಯಾಯ’ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿತು. ಆ ಮೂಲಕ ದೆಹಲಿಯ ಆಚೆಯ ರಾಜಕಾರಣದಲ್ಲಿ ಭವಿಷ್ಯದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ದೇಶದ ಮುಂದೆ ತನ್ನ ಚಹರೆಯನ್ನು ಪ್ರದರ್ಶಿಸಿದೆ. ಆದರೆ, ಈ ಚಹರೆಯನ್ನು ಅರಿಯುವಲ್ಲಿ ವಿಫಲರಾದ ಉದಾರವಾದಿಗಳು, ನಂಬಿ ಮೋಸಹೋದ ಸಂಕಟದಲ್ಲಿ ಈಗ ಗೊಣಗತೊಡಗಿದ್ದಾರೆ! ‘ಪರ್ಯಾಯ ರಾಜಕಾರಣ’ ಮತ್ತು ‘ರಾಜಕೀಯ ಪರ್ಯಾಯ’ ನಡುವಿನ ವ್ಯತ್ಯಾಸ ಅರಿಯದೇ ಎಎಪಿಯ ದೆಹಲಿ ಚುನಾವಣಾ ಗೆಲುವನ್ನು ಸಂಭ್ರಮಿಸಿ ಹೊಸ ರಾಜಕೀಯ ಆಯ್ಕೆ ತಮ್ಮ ಮುಂದಿದೆ ಎಂದುಕೊಂಡದ್ದು ನಿಜಕ್ಕೂ ಅವರ ಮಿತಿ ಅಷ್ಟೇ!