ರಾಜ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ಇತರ ರೈತ ಸಂಘಟನೆಗಳ ಆಶ್ರಯದಲ್ಲಿ ಬೆಂಗಳೂರಿನ ಕೆ ಆರ್ ಮಾರುಕಟ್ಟೆ ಮುಂಬಾಗ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಕರೋನಾ ಸೋಂಕಿನ ಕಾರಣ ನೀಡಿ ಇನ್ನೂ ಸೀಲ್ಡೌನ್ ಮಾಡಲಾಗಿರುವ ಕೆಆರ್ ಮಾರ್ಕೆಟ್ ಅನ್ನು ಮತ್ತೆ ತೆರೆಯಬೇಕು ಎಂಬ ಆಗ್ರಹದೊಂದಿಗೆ ನಡೆದ ಪ್ರತಿಭಟನೆಯಲ್ಲಿ ನೂರಾರು ಜನ ರೈತರು ಹಾಗೂ ವ್ಯಾಪರಸ್ಥರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೃಷ್ಣರಾಜ ಮಾರುಕಟ್ಟೆ ತೆರೆಯುವವರೆಗೂ ಇಲ್ಲಿಂದ ಕದಲುವ ಪ್ರಶ್ನೆಯೇ ಇಲ್ಲ. ಬಿಬಿಎಂಪಿ ಆಯುಕ್ತರು ಮತ್ತು ಮೇಯರ್ ಖುದ್ದಾಗಿ ಹಾಜರಾಗಿ ಇಂದೇ ಮಾರುಕಟ್ಟೆಯನ್ನು ತೆರೆದು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಮಾರುಕಟ್ಟೆ ತೆರೆಯದಿದ್ದಲ್ಲಿ ಪ್ರತಿಯೊಬ್ಬರಿಗೆ ತಲಾ ಐದು ಸಾವಿರ ರೂಪಾಯಿಯಂತೆ ಪ್ರತೀ ತಿಂಗಳು ಸರ್ಕಾರ ನೀಡಬೇಕು. ಇಲ್ಲವಾದರೆ, ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಬಿಬಿಎಂಪಿಯ ವಿಶೇಷ ಅಧಿಕಾರಿಗಳು ರೈತ ಮುಖಂಡರ ಮನವೊಲಿಸಲು ಪ್ರಯತ್ನಿಸಿದ್ದಾರೆ, ಆದರೆ ಅದು ಯಶಸ್ವಿಯಾಗಲಿಲ್ಲ. ತಮ್ಮ ಪಟ್ಟು ಸಡಿಲಿಸಲು ಒಪ್ಪದ ರೈತ ಮತ್ತು ವ್ಯಾಪಾರಿ ಮುಖಂಡರು, ಮಾರುಕಟ್ಟೆಯನ್ನ ತಕ್ಷಣದಿಂದ ತೆರೆಯಲು ಅವಕಾಶ ನೀಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಳಿಕ, ರೈತರ ಮನವೊಲಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಿದ್ದಾರೆ, ಅದು ಕೂಡಾ ಸಫಲವಾಗಲಿಲ್ಲ. ಪೊಲೀಸರು ಬಂಧಿಸುವುದಾದರೆ ಬಂಧಿಸಲಿ ಮಾರ್ಕೆಟ್ ತೆರೆಯುವವರೆಗೂ ನಾವು ಜೈಲಿನಲ್ಲಿ ಇರಲು ಸಿದ್ದ ಎಂದು ರೈತ ಮುಖಂಡರು ಒಕ್ಕೊರಳಿನಿಂದ ಹೇಳಿದ್ಗಾರೆ.
ಬಿಬಿಎಂಪಿ ಆಯುಕ್ತರು ರೈತ ಮುಖಂಡರನ್ನು ಭೇಟಿಯಾಗಲು ಒಪ್ಪಿದ ಕಾರಣಕ್ಕೆ, ಸುಮಾರು ಹತ್ತು ಜನ ರೈತ ಮತ್ತು ವ್ಯಾಪಾರಸ್ಥರ ಸಂಘಗಳ ಪ್ರತಿನಿಧಿಗಳು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರನ್ನು ಭೇಟಿಯಾಗಲು ಪೊಲೀಸ್ ವಾಹನಗಳ ಮೂಲಕ ಹೊರಟಿದ್ದಾರೆ. ಸಭೆಯ ನಂತರ ಪ್ರತಿಧ್ವನಿಗೆ ಮಾಹಿತಿ ನೀಡಿದ ಕೋಡಿಹಳ್ಳಿ ಚಂದ್ರಶೇಖರ್ ಸೆಪ್ಟೆಂಬರ್ ಒಂದನೇ ತಾರೀಕಿನ ವರೆಗೆ ಬಿಬಿಎಂಪಿಯವರು ಸಮಯ ಕೇಳಿದ್ದಾರೆ. ಸ್ಯಾನಿಟೈಸೇಷನ್, ಮಾರ್ಷಲ್ಗಳ ನಿಯೋಜನೆ ಮಾಡಲು ಕಾಲಾವಕಾಶ ಕೇಳಿದ್ದಾರೆ. ನಾವು ಕೂಡಾ ಒಪ್ಪಿಕೊಂಡಿದ್ದೇವೆ. ಒಂದು ವೇಳೆ ಒಂದನೇ ತಾರೀಕಿನಂದು ಕೆ ಆರ್ ಮಾರ್ಕೆಟ್ ತೆರೆಯದಿದ್ದಲ್ಲಿ, ಎರಡನೇ ತಾರೀಕು ಬೆಳಿಗ್ಗೆ ನಾವು ಖುದ್ದಾಗಿ ಹೋಗಿ ಮಾರ್ಕೆಟ್ ತೆರೆಯುವ ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಸಂಪೂರ್ಣ ಬೆಂಗಳೂರು ಸೀಲ್‌ಡೌನ್ ಮತ್ತು ಲಾಕ್‌ಡೌನ್‌ನಿಂದ ಹೊರ ಬಂದಿದ್ದರೂ, ಇನ್ನೂ ಅದೇ ಕೂಪದಲ್ಲಿ ನರಳುತ್ತಿರುವ ಕೆ ಆರ್ ಮಾರುಕಟ್ಟೆ ತೆರೆಯುತ್ತದೆಯೋ ಇಲ್ಲವೋ ಎಂಬುದಕ್ಕೆ ಸೆಪ್ಟೆಂಬರ್ ಒಂದರ ವರೆಗೆ ಕಾಯಬೇಕಾಗಿದೆ.