ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಗಸ್ಟ್ 24ರಂದು ನಡೆಸಲಾಗುವ ಪೂರ್ವಭಾವಿ ಪರೀಕ್ಷೆಯ ಕುರಿತಾಗಿ ಸಾಕಷ್ಟು ಗೊಂದಲಗಳು ಏರ್ಪಟ್ಟಿವೆ. ಘೋಷಿಸಿದ ದಿನಾಂಕದಂದೇ ಪರಿಕ್ಷೆ ನಡೆಸಿಯೇ ಸಿದ್ದ ಎಂಬ ಕೆಪಿಎಸ್ಸಿಯ ಹಠ ನೂರಾರು ಪರಿಕ್ಷಾರ್ಥಿಗಳ ಆಸೆಗೆ ತಣ್ಣೀರೆರಚಲಿದೆಯೇ ಎಂಬ ಚಿಂತೆ ಅಭ್ಯರ್ಥಿಗಳನ್ನು ಕಾಡುತ್ತಿದೆ.
106 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳನ್ನು ಭರ್ತಿ ಮಾಡಲು ನಡೆಸಲಾಗುವ ಪರೀಕ್ಷೆಯ ಮೇಲೆ, ಕರೋನಾ ಸೋಂಕು ತನ್ನ ಕರಿ ನೆರಳನ್ನು ಬೀರಿದೆ. ಲಾಕ್ಡೌನ್, ಸೀಲ್ಡೌನ್ ಮತ್ತು ಸೋಂಕು ಹರಡುವ ಭಯದ ನಡುವೆ ಸಾಕಷ್ಟು ಜನ ಕೋವಿಡ್ ವಾರಿಯರ್ಗಳಾಗಿ ಕೂಡಾ ಸೇವೆ ಸಲ್ಲಿಸುತ್ತಿದ್ದು, ಇವರೆಲ್ಲರೂ ಈ ಬಾರಿಯ ಪರೀಕ್ಷೆಯಿಂದ ವಂಚಿತರಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿದೆ.
ಈ ಕುರಿತು ಅಭ್ಯರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದು ಸಾಕಷ್ಟು ಗೊಂದಲದಲ್ಲಿದ್ದಾರೆ. ಆದರೆ, ಈ ಯಾವುದೇ ಗೊಂದಲಗಳನ್ನು ನಿವಾರಿಸುವ ಗೋಜಿಗೆ ಹೋಗದ ಕೆಪಿಎಸ್ಸಿ ಪರೀಕ್ಷೆ ನಿಗದಿ ಪಡಿಸಿದ ದಿನದಂದೇ ನಡೆಯುವುದು ಎಂಬ ಹಠಕ್ಕೆ ಬಿದ್ದಿದೆ.
ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿರುವ ಹಲವು ಅಭ್ಯರ್ಥಿಗಳು, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಭ್ಯರ್ಥಿಗಳ ಪ್ರಮುಖ ಗೊಂದಲಗಳೇನೆಂದರೆ,
ಪರೀಕ್ಷಾ ಕೇಂದ್ರಗಳ ಕುರಿತು ಇನ್ನೂ ಸರಿಯಾದ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ ಎಂದಿದ್ದಾರೆ ಅಭ್ಯರ್ಥಿಗಳು. ಕೆಪಿಎಸ್ಸಿ ಪ್ರಕಾರ ಬೆಂಗಳೂರು. ಮೈಸೂರು, ಶಿವಮೊಗ್ಗ, ಧಾರವಾಡ ಮತ್ತು ಬೆಳಗಾವಿ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯುತ್ತಿದ್ದು, ಇತರ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳು ಕೋವಿಡ್ ಭಯದಿಂದ ಪರೀಕ್ಷೆಯಿಂದ ದೂರ ಉಳಿಯುವ ಸಾಧ್ಯತೆಯಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಯಾವುದೇ ಅಡಚನೆ ಇಲ್ಲದಂತೆ ನಡೆಸಲಾಯಿತು, ಹಾಗಾಗಿ ಕೆಪಿಎಸ್ಸಿ ಪರೀಕ್ಷೆಯನ್ನೂ ನಡೆಸಲಾಗುವುದು ಎಂಬ ವಾದ ಕೂಡಾ ಕೇಳಿ ಬರುತ್ತಿದೆ. ಈ ವಾದ ಮಾಡುವವರು ಗಮನಿಸಬೇಕಾದ ಸಾಮಾನ್ಯ ಸಂಗತಿಯೇನೆಂದರೆ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸುವಾಗ, ರಾಜ್ಯಾದ್ಯಂತ ನೂರಾರು ಪರೀಕ್ಷಾ ಕೇಂದ್ರಗಳಿದ್ದವು. ವಿದ್ಯಾರ್ಥಿಗಳು ತಮ್ಮ ತಾಲೂಕು ಬಿಟ್ಟು ಬೇರೆಡೆಗೆ ತೆರಳುವ ಅಗತ್ಯವಿರಲಿಲ್ಲ. ಹೀಗಾಗಿ ಈ ವಾದ ಸಂಪೂರ್ಣ ಅಸಮಂಜಸವೆಂಬುದು ಅಭ್ಯರ್ಥಿಗಳ ಅಂಬೋಣ.
ಇದರೊಂದಿಗೆ ಲಾಕ್ಡೌನ್ ಸಂದರ್ಭದಲ್ಲಿ ಬೆಂಗಳೂರು ಅಥವಾ ಇತರ ಪರೀಕ್ಷಾ ಕೇಂದ್ರಗಳಿರುವ ಪ್ರದೇಶದಿಂದ ತಮ್ಮ ತಮ್ಮ ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳು, ಯಾವ ರೀತಿ ಪರೀಕ್ಷಾ ಕೇಂದ್ರಕ್ಕೆ ತಲುಪುತ್ತಾರೆ, ಇದಕ್ಕೆ ಕೆಪಿಎಸ್ಸಿ ಯಾವ ರೀತಿಯ ವ್ಯವಸ್ಥೆಯನ್ನು ಮಾಡುತ್ತದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ಇದಕ್ಕಿಂತಲೂ ಮುಖ್ಯವಾದ ಇನ್ನೊಂದು ವಿಚಾರವೇನೆಂದರೆ, ಸರ್ಕಾರಿ ನೌಕರಿಯಿದ್ದುಕೊಂಡು ಕೋವಿಡ್ ಕರ್ತವ್ಯದಲ್ಲಿದ್ದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ಕೋವಿಡ್ ವಾರಿಯರ್ಸ್ಗಳಾಗಿದ್ದವರಿಗೆ ಪರೀಕ್ಷೆಗೆ ಸರಿಯಾದ ಪೂರ್ವ ತಯಾರಿಯನ್ನು ಮಾಡಿಕೊಳ್ಳಲೂ ಸಮಯವಿರಲಿಲ್ಲ. ಈವರೆಗೆ ಅರ್ಜಿಸಲ್ಲಿಸಿದವರ ಪೈಕಿ 20%ದಷ್ಟು ಅಭ್ಯರ್ಥಿಗಳು ಈಗಾಗಲೇ ಸರ್ಕಾರಿ ನೌಕರಿಯಲ್ಲಿರುವವರು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಕೋವಿಡ್ ಕರ್ತವ್ಯದಲ್ಲಿ ಮುಂಚೂಣಿಯಲ್ಲಿರುವ ಇತರ ಇಲಾಖೆಗಳಿಂದಲೂ ಅಭ್ಯರ್ಥಿಗಳು ಈ ಬಾರಿಯ ಕೆಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ಬಯಸಿದ್ದಾರೆ. ಒಂದು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಲು ಇರುವ ಸರ್ಕಾರಿ ಆದೇಶ, ಇನ್ನೊಂದು ಪರೀಕ್ಷೆ ಬರೆಯಲು ಅನುಮತಿ ನೀಡಿದರೂ ಸರಿಯಾದ ತಯಾರಿಯಿಲ್ಲದೇ ಹೇಗೆ ಪರೀಕ್ಷೆ ಬರೆಯುವುದು ಎಂಬ ಗೊಂದಲ ಸರ್ಕಾರಿ ನೌಕರರನ್ನು ಕಾಡುತ್ತಿದೆ.
ಇನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ಇತರ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಈಗಿನ ಕ್ವಾರಂಟೈನ್ ನಿಯಮದ ಪ್ರಕಾರ ಪರೀಕ್ಷೆ ಬರೆಯುವ ಮೊದಲು 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕಾದ ಅವಶ್ಯಕತೆಯಿದೆ. ಒಟ್ಟು 15 ದಿನಗಳ ರಜೆಯನ್ನು ಮಂಜೂರು ಮಾಡಲು ಸಾಧ್ಯವೇ ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.
ಇನ್ನು ಸಾಕಷ್ಟು ಜನ ಅಭ್ಯರ್ಥಿಗಳು ಕೋವಿಡ್ ಸೋಂಕಿತರಾಗಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವಾರು ಜನರ ಮನೆಗಳು ಹಾಗೂ ಅವರು ವಾಸಿಸುವ ಪ್ರದೇಶ ಸೀಲ್ಡೌನ್ ಆಗಿದೆ. ಈ ಎಲ್ಲಾ ವಿಚಾರಗಳ ಕುರಿತಾಗಿ ಕೆಪಿಎಸ್ಸಿ ಸ್ಪಷ್ಟನೆ ನೀಡಬೇಕಿದೆ.
ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ವಯೋಮಿತಿಯೂ ಪ್ರಮುಖ ಪಾತ್ರ ವಹಿಸುತ್ತದೆ. 21ರಿಂದ 35ರವರೆಗಿನವರು ಮಾತ್ರ ಕೆಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ಅರ್ಹರು. ಈ ವಿಚಾರ ಕೂಡಾ ಹಲವು ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಈ ಎಲ್ಲಾ ವಿಚಾರಗಳ ಕುರಿತಾಗಿ ಕೆಪಿಎಸ್ಸಿ ಸಭೆಯು ಈಗ ನಡೆಯುತ್ತಿದ್ದು, ಸಂಜೆಯ ವೇಳೆಗೆ ಪರೀಕ್ಷೆಗಳು ನಡೆಯುವುದೋ ಇಲ್ಲವೋ ಎಂಬುದರ ಕುರಿತು ಮಾಹಿತಿ ಲಭಿಸಿಲಿದೆ, ಎಂದು ಕೆಪಿಎಸ್ಸಿ ಮೂಲಗಳು ತಿಳಿಸಿವೆ.
ಒಟ್ಟಿನಲ್ಲಿ ನೂರಾರು ಅಭ್ಯರ್ಥಿಗಳ ಭವಿಷ್ಯ ಕೆಪಿಎಸ್ಸಿ ತೀರ್ಮಾನದ ಮೇಲೆ ನಿರ್ಧಾರವಾಗಲಿದೆ. ಕೋವಿಡ್ನಂತಹ ಸಂಕಷ್ಟದ ಸಮಯದಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ನ್ಯಾಯವಾದ ಅವಕಾಶವನ್ನು ಕೆಪಿಎಸ್ಸಿ ನೀಡಬೇಕು ಎಂಬುದು ಎಲ್ಲಾ ಪರೀಕ್ಷಾರ್ಥಿಗಳ ಆಶಯ. ಅಭ್ಯರ್ಥಿಗಳ ಸಮಸ್ಯೆಗಳನ್ನು ಆಲಿಸದೇ, ಕೇವಲ ತಮ್ಮ ಹಠವನ್ನು ಕೆಪಿಎಸ್ಸಿ ಸಾಧಿಸಲು ಹೊರಟರೆ, ಸರ್ಕಾರಿ ನೌಕರಿ ಪಡೆಯಲು ಹಾತೊರೆಯುತ್ತಿರುವ ಹಲವಾರು ಜನರಿಗೆ ಇದು ಮಾರಕವಾಗಿ ಪರಿಣಮಿಸಲಿದೆ.