ಸಾಕಷ್ಟು ಗೊಂದಲಗಳಿಗೆ ಕಾರಣವಾಗಿರುವ ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡುವ ಭರವಸೆಯನ್ನು ಅಭ್ಯರ್ಥಿಗಳು ಹೊಂದಿದ್ದರು. ಆದರೆ, ಈ ಭರವಸೆ ಹುಸಿಯಾಗುವ ಸಂಭವಗಳು ಹೆಚ್ಚಾಗಿವೆ. ನಿಗದಿ ಪಡಿಸಿದ ದಿನಾಂಕದಂದೇ ಪರೀಕ್ಷೆಯನ್ನು ನಡೆಸುವ ನಿರ್ಧಾರಕ್ಕೆ ಕೆಪಿಎಸ್ಸಿ ಬದ್ದವಾಗಿದೆ.ಕೆಪಿಎಸ್ಸಿ
Also Read: ಕೆಪಿಎಸ್ಸಿ ಪರೀಕ್ಷೆ: ಸಂಜೆಯ ವೇಳೆಗೆ ದೂರವಾಗುವುದೇ ಅಭ್ಯರ್ಥಿಗಳ ಚಿಂತೆ?
ಈಗಾಗಲೇ ಪರೀಕ್ಷೆಯನ್ನು ಮುಂದೂಡಬೇಕೆಂದು ಹಲವಾರು ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಈ ಕುರಿತಾಗಿ ಪ್ರತಿಧ್ವನಿ ವಿಶೇಷವಾದ ವರದಿಯನ್ನು ಪ್ರಕಟಿಸಿತ್ತು ಕೂಡಾ. ಕರೋನಾ ಸೋಂಕು, ಕ್ವಾರೆಂಟೈನ್ ನಿಯಮಗಳ ಕಾರಣದಿಂದ ಹಾಗೂ ಕರ್ತವ್ಯ ನಿರತ ಸರ್ಕಾರಿ ನೌಕರರು ಈ ಬಾರಿಯ ಕೆಪಿಎಸ್ಸಿ ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆಗಳಿವೆ. ಹೀಗಾಗಿ ಈ ಬಾರಿಯ ಪರೀಕ್ಷೆಗಳನ್ನು ಕನಿಷ್ಟ ಪಕ್ಷ ಡಿಸೆಂಬರ್ ವರೆಗಾದರೂ ಮುಂದೂಡಬೇಕು ಎಂಬ ಕುರಿತು ಆಗ್ರಹಗಳು ಕೇಳಿ ಬಂದಿದ್ದವು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಈಗ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂಬ ಮಾಹಿತಿ ಕೆಪಿಎಸ್ಸಿ ಕಚೇರಿಯ ಮೂಲಗಳಿಂದ ತಿಳಿದು ಬಂದಿದೆ. ಇಂದು ನಡೆದ ಸಭೆಯಲ್ಲಿ ಈ ಕುರಿತಾಗಿ ಚರ್ಚೆ ನಡೆಸಿದ್ದು, ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂಬ ನಿರ್ಧಾರವನ್ನು ತಾಳಲಾಗಿದೆ.
ಇನ್ನು ಸಿಇಟಿ ಪರೀಕ್ಷೆಯ ಸಮಯದಲ್ಲಿ ಕ್ವಾರಂಟೈನ್ ನಿಯಮಗಳನ್ನು ಸಡಿಲಿಸಲಾಗಿತ್ತು. ಅಂತರಾಜ್ಯ ವಿದ್ಯಾರ್ಥಿಗಳು ಯಾವುದೇ ತೊಂದರೆ ಇಲ್ಲದಂತೆ ಬಂದು ಪರೀಕ್ಷೆಯನ್ನು ಬರೆದಿದ್ದರು. ಕೆಪಿಎಸ್ಸಿ ಪರೀಕ್ಷೆ ಸಮಯದಲ್ಲಿಯೂ, ಅಭ್ಯರ್ಥಿಗಳಿಗೆ ಇದೇ ರೀತಿ ಸಡಿಲಿಕೆ ಮಾಡುವ ಸಂಭವವಿದೆ. ಆದರೆ, ಈ ಕುರಿತಾಗಿ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಎಂದು ಮೂಲಗಳು ತಿಳಿಸಿವೆ.
ಕೆಪಿಎಸ್ಸಿ ಪರೀಕ್ಷೆಯನ್ನು ಈ ಮೊದಲು ಮೇ 17ರಂದು ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ತದನಂತರ ಲಾಕ್ಡೌನ್ ಕಾರಣದಿಂದ ಆಗಸ್ಟ್ 24ಕ್ಕೆ ಮುಂದೂಡಲಾಗಿದೆ. ಆದರೆ, ಈ ಬಾರಿ ಮತ್ತೆ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆಗಳು ತೀರಾ ಕಡಿಮೆ ಎಂದು ತಿಳಿದು ಬಂದಿದೆ.
ಇನ್ನು ಕ್ವಾರೆಂಟೈನ್ ನಿಯಮಗಳ ಕುರಿತಾಗಿ ಮಾತನಾಡಿರುವ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಪ್ರಸಾದ್ ಅವರು, ಅಂತರ್ರಾಜ್ಯ ಅಭ್ಯರ್ಥಿಗಳಿಗೆ ಕರ್ನಾಟಕದ ಕ್ವಾರೆಂಟೈನ್ ನಿಯಮಗಳು ಅಡ್ಡಿಯಾಗುವುದಿಲ್ಲ. ಅವರು ಬಿಜಿನೆಸ್ ವಿಸಿಟ್ ರೀತಿ, ಒಂದು ವಾರದ ಮಟ್ಟಿಗೆ ಅಭ್ಯರ್ಥಿಗಳು ಬಂದು ವಾಪಾಸ್ಸು ತೆರಳಬಹುದು. ಆದರೆ, ಅವರಲ್ಲಿ ರಿಟರ್ನ್ ಟಿಕೆಟ್ ಕೂಡಾ ಇರಬೇಕು. ಹಾಗಿದ್ದಲ್ಲಿ ಮಾತ್ರ ಕ್ವಾರೆಂಟೈನ್ ನಿಯಮಗಳು ಅನ್ವಯವಾಗುವುದಿಲ್ಲ, ಎಂದು ಪ್ರತಿಧ್ವನಿಗೆ ತಿಳಿಸಿದ್ದಾರೆ.