ಚೀನಾ-ಭಾರತ ನಡುವಿನ ಗಡಿ ಮುಖಾಮುಖಿಯಿಂದ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಸೇನಾಧಿಕಾರಿಗಳು ಪ್ರಯತ್ನಪಡುತ್ತಲೇ ಇದ್ದಾರೆ. ಜೊತೆಗೆ ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಕೂಡಾ ಎರಡು ದೇಶಗಳ ಸೇನಾ ಕಮಾಂಡರ್ ಗಳ ಜೊತೆಗೂ ಮಾತುಕತೆ ನಡೆಸಿದ್ದಾರೆ. ಆದರೆ ನಿರೀಕ್ಷಿತ ಫಲಿತಾಂಶ ಕಾಣುವಂತಾಗಿಲ್ಲ. ಅದಕ್ಕೊಂದು ಕಾರಣ, ಪಾಂಗಾಂಗ್ ತ್ಸೊ ಸರೋವರದ ದಂಡೆಯ ಮೇಲಿನ ʼಫಿಂಗರ್-4ʼ ನಲ್ಲಿ ಚೀನಾ ನಿರ್ಮಿಸಿರುವ ಬಂಕರ್ ಕೆಡವಲು ನಿರಾಕರಿಸಿದ್ದು, ಇನ್ನೊಂದೆಡೆ ಭಾರತ ತನ್ನ ಗಾಲ್ವಾನ್ ಕಣಿವೆಯ ಗಡಿ ನಿಯಂತ್ರಣ ರೇಖೆಯೊಳಗೆ ನಿರ್ಮಿಸಲು ಹೊರಟಿರುವ ಸೇತುವೆಯನ್ನ ಸ್ಥಗಿತಗೊಳಿಸಲು ಚೀನಾ ಇಟ್ಟಿರುವ ಬೇಡಿಕೆಯನ್ನು ಭಾರತವೂ ನಿರಾಕರಿಸಿದೆ. ಮಾತ್ರವಲ್ಲದೇ ಅದ್ಯಾವಾಗ ಗಡಿಯಲ್ಲಿ ಚೀನಿ ಸೈನಿಕರು ಜಮಾಯಿಸಿ ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರೋ, ಅಂದಿನಿಂದ ಭಾರತ ಸೇತುವೆ ನಿರ್ಮಾಣ ಕಾಮಗಾರಿಗೆ ವೇಗವನ್ನ ನೀಡಿದೆ. ಇದು ಚೀನಾದ ಸೈನಿಕರನ್ನ ಕಂಗೆಡಿಸಿದೆ. ಆದರೆ ಭಾರತ ತಾನು ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಎಲ್ಲಿಯೂ ಗಡಿ ನಿಯಂತ್ರಣ ರೇಖೆಯನ್ನ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ವರದಿಯೊಂದರ ಪ್ರಕಾರ ಮೇ 10 ರಂದು ಗಲ್ವಾನ್ ಕಣಿವೆ ಬಳಿ ಜಮಾಯಿಸಿದ್ದ ಚೀನಾ ಸೈನಿಕರು ಸೇತುವೆಗೆ ಚಕಾರ ಎತ್ತಿದ್ದರು. ಆನಂತರ ಭಾರತ ಅದೆಲ್ಲಕ್ಕೂ ಸೊಪ್ಪು ಹಾಕದೇ ವೇಗ ನೀಡಿದ್ದು, ಚೀನಾ ಸೈನಿಕರಿಗೆ ಸಹಿಸಿಕೊಳ್ಳಲಾಗಿಲ್ಲ. ಮುಂದುವರಿದು, ಚೀನಿ ಸೈನಿಕರು ಭಾರತದ ಗಡಿ ಪ್ರವೇಶಿಸಿ ಪೆಟ್ರೋಲಿಂಗ್ ಆರಂಭಿಸಿದ್ದರು. ಇದು ಕಳೆದ ಒಂದೂವರೆ ತಿಂಗಳಿನಿಂದ ಚೀನಾ-ಭಾರತ ಸೈನಿಕರ ನಡುವಿನ ಗಡಿ ಪ್ರದೇಶದಲ್ಲಿನ ಚಕಮಕಿಗೆ ಕಾರಣವಾಗಿದೆ. ಭಾರತವು ದರ್ಬುಕ್ ನಿಂದ ದೌಲತ್ಬೇಗ್ ಓಲ್ಡಿವರೆಗೆ 255 ಕಿಮೀ ಉದ್ದದ ಸೇತುವೆಯನ್ನ ನಿರ್ಮಿಸುತ್ತಿದೆ. ಮಾತ್ರವಲ್ಲದೇ ಇದೀಗ ಅದಕ್ಕೆ ವೇಗವನ್ನೂ ನೀಡುತ್ತಿದೆ. ಇದು ಪ್ರಮುಖವಾಗಿ ಶೈಲೋಕ್ ಹಾಗೂ ದೌಲತ್ಬೇಗ್ ಓಲ್ಡಿ ಸಂಪರ್ಕಿಸಲು ಪ್ರಮುಖ ರಸ್ತೆಯಾಗಲಿದೆ ಅಂತಾ ಕಳೆದ ವರುಷ ರಕ್ಷಣಾ ಸಚಿವರೇ ತಿಳಿಸಿದ್ದರು.
ಆದರೆ ಚೀನಾ ನಿಜವಾಗಿಯೂ ಸೇತುವೆ ನಿರ್ಮಾಣಕ್ಕೇ ವಿರೋಧಿಸಿ ಗಡಿಯಲ್ಲಿ ಜಮಾವಣೆಗೊಂಡಿದೆಯೋ ಅಥವಾ ಕರೋನಾದಂತಹ ರೋಗವನ್ನ ಜಗತ್ತಿಗೆಲ್ಲ ಬಿತ್ತಿದ ಆರೋಪದಿಂದ ಮುಕ್ತವಾಗಲು ಈ ರೀತಿ ಜಾಗತಿಕ ಹೈಡ್ರಾಮಾಕ್ಕೆ ಇಳಿದಿದೆಯೋ ಗೊತ್ತಾಗುತ್ತಿಲ್ಲ. ಕಾರಣ, ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಅದು ಗಡಿಯಿಂದ ಸುಮಾರು 9 ರಿಂದ 10 ಕಿಲೋ ಮೀಟರ್ ದೂರದಲ್ಲಿದೆ ಅಂತಾ ಸೇನೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಆದರೆ ಲಡಾಖ್ ಪ್ರಾಂತ್ಯದ ಗಾಲ್ವಾನ್ ಕಣಿವೆಯಲ್ಲಿ ಭಾರತ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯವನ್ನ ವಿಭಜಿಸಿದ ಬಳಿಕ ನಡೆಸುತ್ತಿರುವ ಚಟುವಟಿಕೆ ಬಗ್ಗೆ ಚೀನಾ ಕಂಗೆಟ್ಟಂತಿದೆ. ಏಕೆಂದರೆ ಈಗಾಗಲೇ ಕೇಂದ್ರ ಸರಕಾರ ಲಡಾಖ್ ಪ್ರಾಂತ್ಯವನ್ನ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ. ಮುಂದುವರಿದು ಅಕ್ಸಾಯ್ ಚಿನ್ ಪ್ರಾಂತ್ಯದ ಬಗ್ಗೆಯೂ ಭಾರತ ಮುಂದುವರೆಯುವ ಆತಂಕವೂ ಚೀನಾವನ್ನೂ ಕಾಡದೇ ಇಲ್ಲ.
ಸಾಮಾನ್ಯವಾಗಿ ಗಡಿಗಳಲ್ಲಿ ಮೂಲಭೂತ ಸುಧಾರಣೆ ನಡೆಸೋದು ಮಾಮೂಲು. ಅಂತೆಯೇ ಚೀನಾ ಕೂಡಾ ಭಾರೀ ಪ್ರಮಾಣದಲ್ಲಿ ಗಡಿಯಲ್ಲಿ ಒಂದಿಷ್ಟು ಮೂಲಭೂತ ಸೌಕರ್ಯಗಳನ್ನ ಹೆಚ್ಚಿಸಿಕೊಂಡಿದೆ. ಆದರೆ ಭಾರತ ಅದನ್ನೆಂದಿಗೂ ಗಂಭೀರವಾಗಿ ಆಗಲೀ, ಇಲ್ಲವೇ ವಿರೋಧಿಸಿದ್ದಾಗಲೀ ಇಲ್ಲ. ಆದರೆ ಚೀನಾ ಮಾತ್ರ ದಶಕಗಳಿಂದ ಗಡಿ ಭದ್ರತೆ ಹೆಚ್ಚಿಸುತ್ತಿದ್ದಂತೆ ಒಂದಲ್ಲ ಒಂದು ರೀತಿಯ ಕ್ಯಾತೆ ತೆಗೆಯುತ್ತಲೇ ಇದೆ.
ಆದರೆ ಗಡಿ ಬಳಿ ಮೊಕ್ಕಾಂ ಹೂಡಿರುವ ಚೀನಿ ಸೈನಿಕರು ತಮ್ಮ ಪೆಟ್ರೋಲಿಂಗ್ ಪಾಯಿಂಟ್ ಎಂದು ಗುರುತಿಸಿಕೊಂಡ ಜಾಗಕ್ಕೆ ಅತಿಕ್ರಮಿಸಲು ಆಗಿಲ್ಲ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಎರಡೂ ಕಡೆ ಸೇನಾಧಿಕಾರಿಗಳು ಗಡಿ ನಿಯಂತ್ರಣ ರೇಖೆಯ ಬಳಿಯೇ ಇದ್ದು, ಗಾಲ್ವಾನ್ ನಲ್ಲಿ ಚೀನಾ-ಭಾರತ ಗುರುತಿಸಿರುವ ನಿಯಂತ್ರಣ ರೇಖೆಯು ಒಂದೇ ಆಗಿದೆ ಅಂತಾನೂ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮೂಲವೊಂದರ ಪ್ರಕಾರ, ಚೀನಾ ಸೈನಿಕರು 3 ಕಿಲೋ ಮೀಟರ್ ನಷ್ಟು ಭಾರತೀಯ ಪ್ರದೇಶವನ್ನ ಅತಿಕ್ರಮಿಸಿದ್ದಾರೆ ಎಂದು ʼದಿ ಪ್ರಿಂಟ್ʼ ವರದಿ ಮಾಡಿದೆ. ಗೋಗ್ರಾ ಪೋಸ್ಟ್ ಎಂದು ಕರೆಸಿಕೊಳ್ಳುವ ಪ್ರಾಂತ್ಯದ ಪೆಟ್ರೋಲಿಂಗ್ ಪಾಯಿಂಟ್ 15 ಮತ್ತು 17 ರಲ್ಲಿ ಈ ರೀತಿಯಾಗಿ ಚೀನಾ ನಡೆದುಕೊಂಡಿದ್ದಾಗಿಯೂ ಅದು ತಿಳಿಸಿದೆ.
ಆದರೆ ಆನಂತರ ನಡೆದ ಸೇನಾಧಿಕಾರಿಗಳ ಮಾತುಕತೆಗಳ ಬಳಿಕ ಚೀನಿ ಸೈನಿಕರು ಈ ಎರಡೂ ಪೆಟ್ರೋಲಿಂಗ್ ಪಾಯಿಂಟ್ ಗಳಿಂದ ಸ್ವಲ್ಪ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇನ್ನು ಪಾಂಗ್ವಾಂಗ್ ಸರೋವರ ಬಳಿಯೂ ಇಂತಹದ್ದೇ ವಿಷಮ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ರಾಜತಾಂತ್ರಿಕ ಸಂಬಂಧಗಳಿಗೆ ಬೆಲೆಯೇ ನೀಡದೆ ಚೀನಾ ಮುಂದುಚರೆಯುತ್ತಿರುವ ರೀತಿ ನೋಡಿದರೆ ಅನಗತ್ಯವಾಗಿ ಭಾರತವನ್ನ ಕೆಣಕಿ ಸಿಟ್ಟಿಗೇಳಿಸುವ ಆತುರತೆಯಲ್ಲಿದೆ. ಆದರೆ ಜಾಗತಿಕವಾಗಿ ಶಾಂತಿ ಬಯಸುವ ಭಾರತ ಚೀನಾದ ವಿರುದ್ಧ ಗಟ್ಟಿ ನಿರ್ಧಾರ ತಳೆಯುವ ಅಗತ್ಯತೆ ಹೆಚ್ಚಾಗಿ ಕಾಣಿಸುತ್ತಿದೆ.