ದೇಶದ ಅತ್ಯಂತ ಹೆಚ್ಚು ಪ್ರಯಾಣಿಕರು ಬಂದು ಹೋಗುವ ವಿಮಾನನಿಲ್ದಾಣಗಳಲ್ಲಿ ಒಂದಾಗಿರುವ ಸಿಲಿಕಾನ್ ಸಿಟಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. 2019 ರ ಡಿಸೆಂಬರ್ 6 ರ ಸಂಜೆ 4.37 ಕ್ಕೆ ಈ ವಿಮಾನನಿಲ್ದಾಣ ಹೊಸದಾದ ಮೈಲಿಗಲ್ಲನ್ನು ಸ್ಥಾಪಿಸಿದೆ.
ಇಲ್ಲಿನ ದಕ್ಷಿಣ ಭಾಗಕ್ಕಿರುವ ಎರಡನೇ ರನ್ ವೇ ಕಾರ್ಯಾರಂಭ ಮಾಡುವ ಮೂಲಕ ಈ ಹೊಸ ಮೈಲಿಗಲ್ಲನ್ನು ಸ್ಥಾಪಿಸಿತು. 4000 ಮೀಟರ್ ಉದ್ದ ಮತ್ತು 45 ಮೀಟರ್ ಗಳಷ್ಟು ಅಗಲವಿರುವ ಈ ಹೊಸ ಏರ್ ಸ್ಟ್ರಿಪ್ ನಿಂದ ಮೊದಲ ವಿಮಾನ ಸಂಜೆ 4.37 ಕ್ಕೆ ಟೇಕಾಫ್ ಆಗುವ ಮೂಲಕ ದೇಶದಲ್ಲಿ ಪರ್ಯಾಯ ರನ್ ವೇಗಳನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡುವ ಮೊದಲ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಈ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.
ಇದರ ಮತ್ತೊಂದು ವಿಶೇಷವೆಂದರೆ ಮುಂಬೈ ವಿಮಾನ ನಿಲ್ದಾಣವನ್ನು ಹಿಂದೆ ಸರಿಸಿ ದೇಶದ ಎರಡನೇ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿದ ವಿಮಾನ ನಿಲ್ದಾಣವಾಗುವತ್ತ ಹೆಜ್ಜೆ ಇಟ್ಟಿದೆ. ಇದುವರೆಗೆ ಒಂದೇ ರನ್ ವೇಯಲ್ಲಿ ಅತಿ ಹೆಚ್ಚು ವಿಮಾನಗಳ ಹಾರಾಟ ಮತ್ತು ಇಳಿಯುವ ಚಟುವಟಿಕೆಗಳನ್ನು ನಿರ್ವಹಣೆ ಮಾಡುತ್ತಿದ್ದ ಏಕೈಕ ವಿಮಾನನಿಲ್ದಾಣ ಎಂಬ ಖ್ಯಾತಿಯನ್ನು ಪಡೆದಿತ್ತು.
ಇದೀಗ ಎರಡನೇ ರನ್ ವೇ ಕಾರ್ಯಾರಂಭ ಮಾಡಿರುವುದರಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಹಿಂದೆ ಸರಿಸಲಿದೆ. ಈ ಮೂಲಕ ಮುಂಬೈ ವಿಮಾನ ನಿಲ್ದಾಣವನ್ನು ಹಿಂದಕ್ಕೆ ಹಾಕಿ ಎರಡನೇ ಸ್ಥಾನವನ್ನು ಅಲಂಕರಿಸಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಇನ್ನೂ ಹೆಚ್ಚು ವಿಮಾನಗಳು ಕಾರ್ಯ ನಿರ್ವಹಿಸಲಿವೆ. ಅಂದಹಾಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿ ಹೆಚ್ಚು ದಟ್ಟಣೆ ಇರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದೆ.
ಇದುವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರತಿದಿನ 731 ವಿಮಾನಗಳನ್ನು ನಿರ್ವಹಣೆ ಮಾಡುತ್ತಿತ್ತು. ಹೆಚ್ಚಿನ ಒತ್ತಡವಿದ್ದರೂ ಅವುಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿತ್ತು. ಆದಾಗ್ಯೂ, ಇದ್ದ ಒಂದೇ ರನ್ ವೇಯಲ್ಲಿಯೇ ಇಷ್ಟೊಂದು ಪ್ರಮಾಣದ ವಿಮಾನಗಳನ್ನು ನಿಯಂತ್ರಣ ಮಾಡುವ ಮೂಲಕ ವಿಶ್ವದ ಅತ್ಯಂತ ದಟ್ಟಣೆ ಇರುವ ರನ್ ವೇ ಎಂಬ ಹೆಗ್ಗಳಿಕೆಯನ್ನೂ ಹೊಂದಿತ್ತು.
ಈ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಾರ್ಷಿಕ ಅಭಿವೃದ್ಧಿ ದರವು ಶೇ.22 ರಷ್ಟಿದ್ದು, ಹಾಲಿ ಇರುವ ರನ್ ವೇ ಮೂಲಕ ಪ್ರತಿ ಗಂಟೆಗೆ 34 ವಿಮಾನಗಳ ಹಾರಾಟ ಮತ್ತು ಇಳಿಯುವಿಕೆ ಚಟುವಟಿಕೆಗಳಿಗೆ ಅವಕಾಶವಿತ್ತು. ಇದೀಗ ಎರಡನೇ ರನ್ ವೇ ಕಾರ್ಯಾರಂಭ ಮಾಡಿರುವುದರಿಂದ ವಿಮಾನಗಳ ಹಾರಾಟ ಮತ್ತು ಇಳಿಯುವಿಕೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆಗಳಿವೆ.
ಇನ್ನು ಪ್ರಯಾಣಿಕ ಸಂಖ್ಯೆಯನ್ನು ಗಮನಿಸುವುದಾದರೆ 2016 ರಲ್ಲಿ ಈ ವಿಮಾನ ನಿಲ್ದಾಣದ ಮೂಲಕ 2.2 ಕೋಟಿ ಪ್ರಯಾಣಿಕರು ಪ್ರಯಾಣ ನಡೆಸಿದ್ದಾರೆ. ಈ ಪೈಕಿ ದೇಶಿ ಪ್ರಯಾಣಿಕರ ಸಂಖ್ಯೆಯೇ ಅಧಿಕವಾಗಿದೆ. ಅಂದರೆ, 1.85 ಕೋಟಿ ದೇಶಿ ಪ್ರಯಾಣಿಕರು ಇಲ್ಲಿಂದ ಪ್ರಯಾಣ ನಡೆಸಿದ್ದರೆ, 3.56 ಲಕ್ಷ ಮಂದಿ ವಿದೇಶಿ ಪ್ರಯಾಣಿಕರಾಗಿದ್ದಾರೆ. ಒಟ್ಟಾರೆ ಈ ವಿಮಾನನಿಲ್ದಾಣದಿಂದ ಪ್ರತಿದಿನ ಸರಾಸರಿ 60 ಸಾವಿರ ಪ್ರಯಾಣೀಕರು ಪ್ರಯಾಣಿಸುತ್ತಿದ್ದಾರೆ.
ಈಗ ಎರಡೂ ರನ್ ವೇಗಳು ಕಾರ್ಯಾಚರಣೆ ನಡೆಸುತ್ತಿರುವುದರಿಂದ ವಾರ್ಷಿಕವಾಗಿ ಸುಮಾರು 6 ಕೋಟಿಯಷ್ಟು ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಅಂದಾಜಿಸಲಾಗಿದೆ.