ಕೃಷಿ ಮಾರುಕಟ್ಟೆಗಳಲ್ಲಿ ಸುಧಾರಣೆ, ಅಗತ್ಯ ಸರಕುಗಳ ಕಾಯ್ದೆ ದುರ್ಬಲಗೊಳಿಸುವಿಕೆ ಮತ್ತು ಗುತ್ತಿಗೆ ಕೃಷಿಯನ್ನು ಸಜೀವಗೊಳಿಸಲು ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಮೂರು ಸುಗ್ರೀವಾಜ್ಞೆಗಳನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಇಂಧನ ಬೆಲೆ ಕಡಿಮೆ ಮಾಡಬೇಕು ಎಂದು ಬೇಡಿಕೆಯಿಟ್ಟು ರೈತರು ಪ್ರತಿಭಟನೆ ಮಾಡಿದ್ದಾರೆ. ಹರಿಯಾಣ ಮತ್ತು ಪಂಜಾಬ್ನ ಬಹುತೇಕ ಎಲ್ಲ ಜಿಲ್ಲೆಗಳ ರೈತರು ಮತ್ತು ರಾಜಸ್ಥಾನದ ಶ್ರೀ ಗಂಗನಗರದ ರೈತರು ತಮ್ಮ ಟ್ರಾಕ್ಟರುಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗಳನ್ನು ಜಿಲ್ಲಾ ಕಚೇರಿಗೆ ಸಲ್ಲಿಸಿದ್ದಾರೆ.
ಸರ್ಕಾರ ಹೊರಡಿಸಿರುವ ಈ ಸುಗ್ರೀವಾಜ್ಞೆಗಳು ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ಬಂಡವಾಳಶಾಹಿ ಕಂಪನಿಗಳಿಗೆ ಮಾತ್ರ ಲಾಭವಾಗುವಂತೆ ಅದನ್ನು ತರಲಾಗಿದೆ. ರೈತ ದೊಡ್ಡ ಕಂಪನಿಗಳ ದಯೆಯಲ್ಲಿ ಇರಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ. ಅದು ಈಗ ಇರುವದಕ್ಕಿಂತ ಕೆಟ್ಟದಾಗಿರುತ್ತವೆ. ಇದರಿಂದ ರೈತರು ಅಸಂತುಷ್ಟಗೊಂಡಿದ್ದಾರೆ. ಹಾಗಾಗಿ ಈ ಬೃಹತ್ ಪ್ರತಿಭಟನೆ ನಡೆದಿದೆ. ಹರಿಯಾಣದಲ್ಲೇ 15 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆಂದು ಹರಿಯಾಣದ ಭಾರತೀಯ ಕಿಸಾನ್ ಯೂನಿಯನ್ನ ರಾಜ್ಯ ಸಂಘಟಕರಲ್ಲಿ ಒಬ್ಬರಾದ ಗುರ್ನಮ್ ಸಿಂಗ್ ಹೇಳಿದ್ದಾರೆ.
ನಾವು ನಮ್ಮ ಟ್ರಾಕ್ಟರುಗಳನ್ನು ತೆಗೆದುಕೊಂಡು ರಸ್ತೆಗಳ ಬದಿಯಲ್ಲಿ ಕೆಲವು ಗಂಟೆಗಳ ಕಾಲ ನಿಲುಗಡೆ ಮಾಡಿ ಪ್ರತಿಭಟನೆ ನಡೆಸಿದ್ದೇವೆ. ಕರೋನಾದ ವಿರುದ್ಧ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಸಾಮಾಜಿಕ ದೂರವನ್ನು ಕಾಪಾಡಿಕೊಂಡಿದ್ದೇವೆ, ಮಾಸ್ಕ್ಗಳನ್ನು ಧರಿಸಿದ್ದೇವೆ ಎಂದು ಗುರ್ನಮ್ ಸಿಂಗ್ ತಿಳಿಸಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕನಿಷ್ಠ ಬೆಂಬಲ ಬೆಲೆಯನ್ನು ರೈತರ ಕಾನೂನುಬದ್ಧ ಹಕ್ಕನ್ನಾಗಿ ಮಾಡಬೇಕೆಂದು ಒತ್ತಾಯಿಸಿರುವ ಪ್ರತಿಭಟನಾಕಾರರು, ಸರ್ಕಾರವು ಈಗ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕೆಡವಬಹುದೆಂಬ ಭಯವಿದೆ. ಹಾಗಾಗಲು ನಾವು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ತಿಳಿಸಲು ನಾವು ಬಯಸುತ್ತೇವೆ. ಬದಲಾಗಿ, ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ನಮ್ಮ ಕಾನೂನುಬದ್ಧ ಹಕ್ಕನ್ನಾಗಿ ಮಾಡಬೇಕಾಗಿದೆ. ಹಾಗೆ ಮಾಡುವುದರಿಂದ ಯಾರೂ ಆ ಬೆಲೆಗಿಂತ ಕಡಿಮೆ ಖರೀದಿಸಲು ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಅಲ್ಲದೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಿದರೆ, ಸರ್ಕಾರ ಹೊರಡಿಸಿರುವ ಮೂರು ಸುಗ್ರೀವಾಜ್ಞೆಗಳ ಬಗ್ಗೆ ತಮ್ಮ ನಿಲುವನ್ನು ಮೃದುಗೊಳಿಸಲು ಸಿದ್ಧರಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ರೈತರ ಬೇಡಿಕೆಗಳನ್ನು ಬೆಂಬಲಿಸಿರುವ ಹರಿಯಾಣ ಕಾಂಗ್ರೆಸ್ ಮುಖ್ಯಸ್ಥೆ ಸೆಲ್ಜ ಕುಮಾರಿ ಸರ್ಕಾರ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯನ್ನು ರದ್ದುಗೊಳಿಸುವತ್ತ ಸಾಗುತ್ತಿದೆ. ದೇಶದ ಎಂಭತ್ತೈದು ಪ್ರತಿಶತದಷ್ಟು ರೈತರು ಸಣ್ಣ ಪ್ರಮಾಣದವರಾಗಿದ್ದಾರೆ, ಸರ್ಕಾರದ ಈ ಕ್ರಮವು ಅವರನ್ನು ಇನ್ನಷ್ಟು ಶೋಷಣೆಗೆ ತಳ್ಳುತ್ತದೆ. ರಾಜ್ಯ ಸರ್ಕಾರವು ಕಠಿಣ ನಿಲುವನ್ನು ತೆಗೆದುಕೊಳ್ಳಬೇಕು ಮತ್ತು ಸುಗ್ರೀವಾಜ್ಞೆಗಳನ್ನು ಹಿಂದಕ್ಕೆ ತರಲು ಕೇಂದ್ರವನ್ನು ಒತ್ತಾಯಿಸಬೇಕು, ಎಂದು ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡಾ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ ಆದರೆ COVID-19 ನಿಂದ ಬೆದರಿಕೆ ಇರುವುದರಿಂದ ಪ್ರತಿಭಟನೆಯನ್ನು ಮುಂದೂಡಬೇಕೆಂದು ರೈತರಿಗೆ ಸೂಚಿಸಿದ್ದಾರೆ.
ಮಹಾರಾಷ್ಟ್ರದ ಕೆಲವು ಭಾಗದಲ್ಲೂ ಕೂಡಾ ಪ್ರತಿಭಟನೆ ನಡೆದಿದೆ. ಹೈನುಗಾರರು ಕೂಡಾ ರಾಜ್ಯದಲ್ಲಿ ಬೀದಿಗಳಲ್ಲಿ ಹಾಲು ಚೆಲ್ಲುವ ಮೂಲಕ ಪ್ರತಿಭಟಿಸಿದ್ದಾರೆ. ಲಾಕ್ಡೌನ್ಗೆ ಮುನ್ನ ಲೀಟರ್ಗೆ 30 ರೂ ಇದ್ದ ಹಾಲಿನ ಬೆಲೆ ಈಗ ಸುಮಾರು 16 ರೂ.ಗೆ ಇಳಿದಿದೆ, ಏಕೆಂದರೆ ಡೈರಿಗಳು ಹಾಲಿನ ಪುಡಿಯಾಗಿ ಪರಿವರ್ತಿಸಲು ಅಗ್ಗದ ದರದಲ್ಲಿ ಹಾಲನ್ನು ಖರೀದಿಸುತ್ತಿವೆ ಎಂದು ಹೈನುಗಾರರು ಆರೋಪಿಸಿದ್ದಾರೆ.