ಕೋವಿಡ್ ಇಡೀ ಜಗತ್ತನ್ನು ಹೈರಾಣಾಗಿಸಿದೆ. ಮಹಾಮಾರಿಯಿಂದ ಎಲ್ಲಾ ವರ್ಗಗಳ ಜನರ ಬದುಕಿನಲ್ಲಿ ಅಲ್ಲೋಲಕಲ್ಲೋಲವಾಗಿದೆ. ವಿಶೇಷವಾಗಿ ವಲಸೆ ಕಾರ್ಮಿಕರು, ಕೃಷಿಕರ ಬದುಕಿಗೆ ಅಪಾರ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಂಭೀರವಾದ ನೋಟ ಬೀರುವ ಮೂಲಕ ಆಡಳಿತಗಾರ ಕಿವಿ ಹಿಂಡಬೇಕಾದ ದೇಶದ ಅತ್ಯುನ್ನತವಾದ ಸುಪ್ರೀಂ ಕೋರ್ಟ್, ವಕೀಲರೊಬ್ಬರು ನ್ಯಾಯಮೂರ್ತಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅಭಿಪ್ರಾಯವನ್ನು ಆಧರಿಸಿ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ನೋಟಿಸ್ ಜಾರಿಗೊಳಿಸಿದೆ ಎನ್ನುವ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿದೆ. ಸುಪ್ರೀಂ ಕೋರ್ಟ್ ಗಹನವಾದ ವಿಚಾರಗಳ ಬಗ್ಗೆ ಮೌನ ಪ್ರತಿಕ್ರಿಯೆ ನೀಡುತ್ತಿದೆ. ಟೀಕೆಯನ್ನು ಮುಕ್ತವಾಗಿ ಸ್ವೀಕರಿಸಿ ಉದಾರತೆ ಮೆರೆಯಬೇಕಾದಲ್ಲಿ ಎಡವುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ದೇಶದ ಅತ್ಯುನ್ನತ ನ್ಯಾಯಾಲಯದ ಕಾರ್ಯವೈಖರಿಯನ್ನು ಹಲವು ಕಾನೂನು ತಜ್ಞರು, ಚಿಂತಕರು ನೇರಾನೇರವಾಗಿ ಖಂಡಿಸಿದ್ದಾರೆ. ಟೀಕೆ ಸಹಿಸಿದೇ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಸುಪ್ರೀಂ ಕೋರ್ಟ್ ತಪ್ಪಾದ ನಡೆಯಿಟ್ಟಿದೆ. ಇದು ಮುಂದಿನ ದಿನಗಳಲ್ಲಿ ಹಲವು ರೀತಿಯ ಸಮಸ್ಯೆಗಳಿಗೆ ನಾಂದಿ ಹಾಡಬಹುದು. ಅಂತಿಮವಾಗಿ ಸುಪ್ರೀಂ ಕೋರ್ಟಿನ ವರ್ಚಸ್ಸಿಗೆ ಧಕ್ಕೆಯಾಗಬಹುದು ಎಂದೂ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಅಲೆ ಎಬ್ಬಿಸಿದ ಎರಡನೇ ತಲೆಮಾರಿನ ತರಂಗಾಂತರ ಹಂಚಿಕೆ ಹಗರಣ (2ಜಿ ಸ್ಪೆಕ್ಟ್ರಂ), ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ರಫೇಲ್ ಯುದ್ಧ ವಿಮಾನ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹೆಸರಾಂತ ವಕೀಲ ಪ್ರಶಾಂತ್ ಭೂಷಣ್ ಅವರೇ ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿರುವವರು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೂನ್ 27 ಹಾಗೂ ಜೂನ್ 29ರಂದು ಪ್ರಶಾಂತ್ ಭೂಷಣ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಎರಡು ಟ್ವೀಟ್ ಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ. ಭೂಷಣ್ ಅವರು ಜೂನ್ 27ರಂದು ನರೇಂದ್ರ ಮೋದಿಯವರು 2014ರಲ್ಲಿ ಅಧಿಕಾರ ಹಿಡಿಯುತ್ತಲೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಶಿಥಿಲಗೊಳ್ಳಲಾರಂಭಿಸಿತು. ಈ ಅವಧಿಯಲ್ಲಿ ಸುಪ್ರೀಂಕೋರ್ಟ್ ನೇತೃತ್ವವಹಿಸಿದ್ದ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಆಡಳಿತಾವಧಿಯ ಬಗ್ಗೆ ಯಾವ ರೀತಿಯ ಅಭಿಪ್ರಾಯವನ್ನು ಭವಿಷ್ಯದ ಇತಿಹಾಸಕಾರರು ವ್ಯಕ್ತಪಡಿಸಬಹುದು ಎಂದು ಟ್ವೀಟ್ ಮಾಡಿದ್ದರು. ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನದಲ್ಲಿದ್ದವರು ಜೆ ಎಸ್ ಖೇಹರ್, ದೀಪಕ್ ಮಿಶ್ರಾ, ರಂಜನ್ ಗೊಗೊಯ್ ಹಾಗೂ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ. ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಉತ್ತರ ಪ್ರದೇಶ ಮೆಡಿಕಲ್ ಕಾಲೇಜು ಹಗರಣದಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪವಿತ್ತು. ರಂಜನ್ ಗೊಗೊಯ್ ಅವರು ಸುಪ್ರೀಂಕೋರ್ಟ್ ನ ಅತ್ಯಂತ ವಿವಾದಾತ್ಮಕ ಮುಖ್ಯ ನ್ಯಾಯಮೂರ್ತಿ ಎನ್ನುವ ಅಪಕೀರ್ತಿಗೆ ಗುರಿಯಾಗಿದ್ದರು. ಬಾಹ್ಯ ಶಕ್ತಿಗಳು ಸುಪ್ರೀಂಕೋರ್ಟ್ ಮೇಲೆ ಒತ್ತಡ ಹೇರುತ್ತಿವೆ ಎಂದು ಆರೋಪಿಸಿದ್ದ ಐತಿಹಾಸಿಕ ನ್ಯಾಯಮೂರ್ತಿಗಳ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಗೊಗೊಯ್ ಅವರು ತಾವು ಅತ್ಯುನ್ನತ ಸ್ಥಾನದಲ್ಲಿದ್ದಾಗ ತಮ್ಮ ಅಧೀನ ಸಿಬ್ಬಂದಿಯ ಮೇಲೆ ಲೈಂಗಿನ ದೌರ್ಜನ್ಯ ಎಸಗಿದ್ದ ಆರೋಪಕ್ಕೆ ಗುರಿಯಾಗಿದ್ದರು, ಅತ್ಯಂತ ಸೂಕ್ಷ್ಮವಾದ ಈ ಪ್ರಕರಣವನ್ನು ತಾವೇ ವಿಚಾರಣೆ ನಡೆಸುವ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದರು. ಈ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಂಡು ಸಂತ್ರಸ್ತೆ ಸೇವೆಯಿಂದ ಅಮಾನತಾಗಿ ಮರಳಿ ಕರ್ತವ್ಯಕ್ಕೆ ಸೇರಿದ್ದಾರೆ. ರಂಜನ್ ಗೊಗೊಯ್ ಅವರು ನಿವೃತ್ತಿಯಾದ ನಂತರ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು ಇತ್ತೀಚೆಗೆ ತಮ್ಮ ತವರು ಮಹಾರಾಷ್ಟ್ರದ ನಾಗಪುರದ ರಾಜಭವನದಲ್ಲಿ ಹಾರ್ಲೆ ಡೆವಿಡ್ಸನ್ ಬೈಕಿನಲ್ಲಿ ಕುಳಿತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 50 ಲಕ್ಷ ರುಪಾಯಿ ಮೌಲ್ಯದ ಈ ಬೈಕ್ ಬಿಜೆಪಿ ಮುಖಂಡನಿಗೆ ಸೇರಿದ್ದು ಎನ್ನಲಾಗಿತ್ತು. ಸದರಿ ಚಿತ್ರದಲ್ಲಿ ನ್ಯಾ. ಬೊಬ್ಡೆ ಅವರು ಕೋವಿಡ್ ನಡುವೆಯೂ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಜನರ ಮೂಲಭೂತ ಹಕ್ಕಾದ ನ್ಯಾಯದಾನ ಪಡೆಯುವುದಕ್ಕೆ ವಿರುದ್ಧವಾಗಿ ಸುಪ್ರೀಂಕೋರ್ಟ್ ಅನ್ನು ನಿರ್ಬಂಧಿಸಿ, ಹೆಲ್ಮೆಟ್ ಹಾಗೂ ಮಾಸ್ಕ್ ತೊಡದೇ ಬಿಜೆಪಿ ಮುಖಂಡನಿಗೆ ಸೇರಿದೆ ಎನ್ನಲಾದ ದುಬಾರಿ ಬೈಕಿ ಓಡಿಸುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಪ್ರಶಾಂತ್ ಭೂಷಣ್ ಅವರ ಟ್ವೀಟ್ ಗಳು ಹಾಗೂ ಸಮಕಾಲೀನ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಒಂದಕ್ಕೊಂದು ಸಂಬಂಧವಿದೆ. ಮಿಗಿಲಾಗಿ ಸಾರ್ವಜನಿಕ ಬದುಕಿನಲ್ಲಿ ಯಾರೂ ಟೀಕಾತೀತರಲ್ಲ ಎನ್ನುವುದು ಪ್ರಶಾಂತ್ ಭೂಷಣ್ ಅವರನ್ನು ಬೆಂಬಲಿಸುವವರು ಮಂಡಿಸುವ ವಾದ. ಆದರೆ, ಅತ್ಯುಚ್ಛವಾದ ಸುಪ್ರೀಂ ಕೋರ್ಟ್ ಬಗ್ಗೆ ಮಾತನಾಡುವಾಗ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಅವರು ಸಂಯಮದಿಂದ ವರ್ತಿಸಬೇಕು. ಭೂಷಣ್ ರಂಥವರು ವ್ಯಕ್ತಪಡಿಸುವ ಅಭಿಪ್ರಾಯ ಕೋಟ್ಯಂತರ ಜನರನ್ನು ಪ್ರಭಾವಿಸುವ ಸಾಧ್ಯತೆ ಇರುತ್ತದೆ. ಇದು ಸಹಜವಾಗಿ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಅಂಗವಾದ ನ್ಯಾಯಾಂಗದ ಬಗ್ಗೆ ಕೆಟ್ಟ ಅಭಿಪ್ರಾಯಕ್ಕೆ ಎಡೆಮಾಡಿಕೊಡಬಹುದು ಎಂಬ ವಾದವನ್ನು ಸುಪ್ರೀಂ ಕೋರ್ಟ್ ನಡೆಯನ್ನು ಸಮರ್ಥಿಸುವವರು ಮುಂದಿಡುತ್ತಿದ್ದಾರೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಅವರಿಗೆ ನ್ಯಾ. ಅರುಣ್ ಮಿಶ್ರಾ, ಬಿ ಆರ್ ಗವಾಯಿ ಹಾಗೂ ಕೃಷ್ಣ ಮುರಾರಿ ನೇತೃತ್ವದ ತ್ರಿಸದಸ್ಯ ಪೀಠವು ಷೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಪ್ರಕರಣವನ್ನು ಆಗಸ್ಟ್ 5ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಟ್ವಿಟರ್ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಟ್ವಿಟರ್ ಸಂಸ್ಥೆಯ ಪರ ವಕೀಲ ಸಾಜನ್ ಪೂವಯ್ಯ ಅವರು ಕೋರ್ಟ್ ಬಯಸಿದಲ್ಲಿ ಪ್ರಶಾಂತ್ ಭೂಷಣ್ ಅವರು ಸುಪ್ರೀಂ ಕೋರ್ಟ್ ಕುರಿತಾದ ವಿವಾದಾತ್ಮಕ ಟ್ವೀಟ್ ಗಳನ್ನು ತೆಗೆದು ಹಾಕಲು ಸಿದ್ಧವಿದೆ ಎಂದು ಹೇಳಿದೆ. ಇದಕ್ಕೂ ಪ್ರತಿಕ್ರಿಯೆ ನೀಡಿರುವ ಕೋರ್ಟ್, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿರುವಾಗ ವಿಶೇಷವಾಗಿ ಟ್ವಿಟರ್ ಗೆ ಸೂಚನೆ ನೀಡುವ ಅಗತ್ಯವೇನಿದೆ. ಪ್ರಶಾಂತ್ ಭೂಷಣ್ ಅವರ ಟ್ವೀಟ್ ಅಳಿಸಿ ಹಾಕುವುದಕ್ಕೆ ಸಂಬಂಧಿಸಿದ ತೀರ್ಮಾನವನ್ನು ಟ್ವಿಟರ್ ಸಂಸ್ಥೆಯ ವಿವೇಚನಗೆ ಬಿಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಧ್ಯಪ್ರದೇಶದ ಗುನಾ ಮೂಲದ ವಕೀಲ ಮಹೇಕ್ ಮಹೇಶ್ವರಿ ಎಂಬವರು ಪ್ರಶಾಂತ್ ಭೂಷಣ್ ಅವರ ಟ್ವೀಟ್ ಗಳನ್ನು ಉಲ್ಲೇಖಿಸಿ ಟ್ವಿಟರ್ ಹಾಗೂ ಭೂಷಣ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು.