ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಪೊಲೀಸರ ಹತ್ಯಾಕಾಂಡ ನಮ್ಮಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟಿ ಹಾಕುವುದಷ್ಟೇ ಅಲ್ಲದೇ ಭವಿಷ್ಯಕ್ಕೆ ದಾರಿಯನ್ನು ತೋರಿಸುತ್ತವೆ. ಎಂಟು ಜನರ ಪೊಲೀಸರು ತಮ್ಮ ಕರ್ತವ್ಯದ ವೇಳೆ ಭೀಕರವಾಗಿ ಓರ್ವ ಕ್ರಿಮಿನಲ್‌ನ ಗ್ಯಾಂಗ್‌ನಿಂದ ಕೊಲ್ಲಲ್ಪಟ್ಟರು. ಇಷ್ಟೊಂದು ಆಧುನಿಕ ತಂತ್ರಜ್ಞಾನ, ಮಾಹಿತಿಧಾರರಿದ್ದರೂ ಯಾವುದೇ ಪೂರ್ವ ಮಾಹಿತಿ ಇಲ್ಲದಂತೆ ಒಂದು ಯೋಜಿತ ದಾಳಿಗೆ ಪೊಲೀಸರು ಬಲಿಯಾಗಿರುವುದು ಸಾಕಷ್ಟು ಪ್ರಶ್ನೆಗಳನ್ನು ಉಂಟು ಮಾಡುತ್ತದೆ.
ಅಂದ ಹಾಗೆ ಉತ್ತರ ಪ್ರದೇಶದ ಕುಖ್ಯಾತ ಗೂಂಡಾ ವಿಕಾಸ್ ದುಬೆ ಇದೇ ಮೊದಲ ಬಾರಿಗೆ ಯಾವುದೇ ಹತ್ಯಾಕಾಂಡದಲ್ಲಿ ಪಾಲ್ಗೊಳ್ಳುತ್ತಿರುವುದಲ್ಲ. ಇದಕ್ಕೂ ಹಿಂದೆ ಹಲವಾರು ಕೊಲೆಗಳನ್ನು ಮಾಡಿದರೂ ಕಾನೂನಿನ ಮುಷ್ಟಿಯಿಂದ ತಪ್ಪಿಸಿಕೊಂಡು ಹೊರಗಿದ್ದ. ಅಂತಹ ಕೊಲೆಗಡುಕನಿಗೆ ರಾಜಕೀಯ ವ್ಯವಸ್ತೆಯ ಆಯಕಟ್ಟಿನ ಜಾಗೆಗಳಲ್ಲಿ ಉತ್ತಮ ಸಂಬಂಧ ಇರಲಾರದೇ? ಇಲ್ಲವಾದಲ್ಲಿ ಇದಕ್ಕೂ ಹಿಂದೆಯೇ ದುಬೆಗೆ ಸೆರೆವಾಸ ಖಾಯಂ ಆಗುತ್ತಿತ್ತು.
ಮಾಧ್ಯಮಗಳ ವರದಿಯ ಆಧಾರದ ಪ್ರಕಾರ, ವಿಕಾಸ್ ದುಬೆಯನ್ನು ಬಂಧಿಸಲು ಹೊರಟ ಪೊಲೀಸರ ತಂಡದಲ್ಲಿ ಯಾರ ಬಳಿಯೂ ಬುಲೆಟ್ಪ್ರೋಫ್ ಜಾಕೆಟ್ ಇರಲಿಲ್ಲ. ಅಂತಹ ಖತರ್ನಾಕ್ ಕೊಲೆಗಡುಕನ ಬಂಧನಕ್ಕೆ ಹೊರಟ ಪೊಲೀಸರು ಸ್ವಲ್ಪವೂ ಮುನ್ನೆಚ್ಚರಿಕೆ ಇಲ್ಲದೇ ಹೊರಟಿದ್ದಲ್ಲಿ ಅದು ಅವರ ಅತ್ಯಂತ ದೊಡ್ಡ ತಪ್ಪು. ಆದರೆ, ಇದು ತಪ್ಪು ಸರಿಗಳನ್ನು ಹುಡುಕುವ ಸಮಯವಲ್ಲ. ಆಗಿರುವ ತಪ್ಪುಗಳನ್ನು ಸರಿಪಡಿಸುವ ಕುರಿತು ಯೋಚಿಸಬೇಕಾದ ಸಮಯ.
ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬರುವುದು ದುಬೆಗೆ ಮುಂಚೆಯೇ ತಿಳಿದಿತ್ತು. ಇದಕ್ಕೆ ಸ್ಪಷ್ಟ ಆಧಾರ ಏನೆಂದರೆ, ಹತ್ಯಾಕಾಂಡ ನಡೆದ ರೀತಿ. ಯಾವುದೇ ಪೂರ್ವ ವ್ಯವಸ್ಥೆ ಇಲ್ಲದೇ ಇಷ್ಟೊಂದು ವ್ಯವಸ್ಥಿತವಾಗಿ ಯಾವುದೇ ದಾಳಿಯನ್ನು ಸಂಘಟಿಸಲಾಗುವುದಿಲ್ಲ. ಅಮರ್ ಉಜಾಲ ಎಂಬ ಹಿಂದಿ ಪತ್ರಿಕೆ ನೀಡಿರುವ ವರದಿಯ ಪ್ರಕಾರ ಡಿವೈಎಸ್ಪಿ ದೇವೇಂದ್ರ ಮಿಶ್ರಾ ಅವರ ದೇಹವು ಒಂದು ಮನೆಯ ಒಳಗಡೆ ದೊರಕಿತ್ತು. ಅವರ ಹಣೆಯ ಮೇಲೆ ಗುಂಡು ತಗುಲಿತ್ತು ಹಾಗೂ ಅವರ ದೇಹವನ್ನು ಚೂಪಾದ ಆಯುಧದಿಂದ ಇರಿಯಲಾಗಿತ್ತು.
ಅವರಲ್ಲಿದ್ದ ಆಯುಧಗಳನ್ನು ಕಸಿದುಕೊಳ್ಳಲಾಗಿತ್ತು. ಒಂದು AK-47, INSAS, ಮತ್ತು ಎರಡು ಪಿಸ್ತೂಲ್ಗಳನ್ನು ಪೊಲೀಸರಿಂದ ರೌಡಿಗಳು ವಶಪಡಿಸಿಕೊಂಡರೆಂದು ವರದಿಗಳು ಹೇಳಿತ್ತಿವೆ.
ಮೂಲಗಳ ಪ್ರಕಾರ ದೇವೆಂದ್ರ ಮಿಶ್ರಾ ಹಾಗೂ ಇತರ ಐದು ಪೊಲೀಸ್ ಅಧಿಕಾರಿಗಳ ದೇಹ ದೊರೆತ ಮನೆಯು ವಿಕಾಸ್ ದುಬೆ ಅವರ ಸಂಬಂಧಿಕರದ್ದು. ಅಂದರೆ, ದಾಳಿಯ ಸಮಯದಲ್ಲಿ ವಿಕಾಸ್ ದುಬೆಯ ಸಹಚರರು ಕೇವಲ ಮಹಡಿಯ ಮೇಲೆ ಮಾತ್ರ ಅಲ್ಲ, ಎಲ್ಲಾ ದಿಕ್ಕುಗಳಿಂದಲೂ ಪೊಲೀಸರ ಮೇಲೆ ಎರಗಿದ್ದರು ಎಂಬ ಸಂದೇಹವನ್ನೂ ಉಂಟು ಮಾಡುತ್ತದೆ. ಈ ವ್ಯವಸ್ಥಿತ ದಾಳಿಯ ಹಿಂದಿನ ಸತ್ಯವನ್ನು ತನಿಖೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ.
ಎನ್ಕೌಂಟರ್ ಸಂಸ್ಕೃತಿ ಈ ದಾಳಿಗೆ ಕಾರಣವೇ?
ಇನ್ನು ಕೇವಲ ಬಂಧಿಸಲು ಬರುತ್ತಿದ್ದ ಅಧಿಕಾರಿಗಳ ಮೇಲೆ ಇಂತಹ ಮಾರಣಾಂತಿಕ ದಾಳಿ ನಡೆಸುವ ಅಗತ್ಯವಿರಲಿಲ್ಲ. ಸಾಮಾನ್ಯವಾಗಿ ಪೊಲೀಸರ ಮೇಲೆ ದಾಳಿ ನಡೆಸುವ ಮುಂಚೆ ಪಾತಕಿಗಳು ಹತ್ತು ಬಾರಿ ಯೋಚಿಸುತ್ತಾರೆ. ಏಕೆಂದರೆ, ಒಂದು ಬಾರಿ ದಾಳಿ ನಡೆಸಿದಲ್ಲಿ ಪೊಲೀಸರ ಪ್ರತಿ ದಾಳಿ ಯಾವ ರೀತಿ ಇರುತ್ತದೆ ಎಂಬ ಅಂದಾಜು ಸಾಮಾನ್ಯವಾಗಿ ಎಲ್ಲಾ ಕ್ರಿಮಿನಲ್‌ಗಳಲ್ಲೂ ಇರುತ್ತದೆ.
ಆದರೆ, ಈ ಪ್ರಕರಣದಲ್ಲಿ ಎನ್ಕೌಂಟರ್ ಮಾಡಲು ಬಂದಿದ್ದೇ ದಾಳಿಗೆ ಕಾರಣವಾಯ್ತೇ ಎಂಬ ಸಂಶಯ ಮೂಡುತ್ತಿದೆ. ಏಕೆಂದರೆ, ಈಗಾಗಲೇ ಬಂಧಿತನಾಗಿರುವ ವಿಕಾಸ್ ದುಬೆಯ ಆಪ್ತ ಹೇಳಿರುವ ಪ್ರಕಾರ ಪೊಲೀಸ್ ಇಲಾಖೆಯಿಂದಲೇ ಸ್ಪಷ್ಟವಾದ ಮಾಹಿತಿ ದುಬೆಗೆ ದೊರಕಿತ್ತು ಹಾಗಾಗಿ ಆತ ದಾಳಿ ನಡೆಸಲು ಸಜ್ಜಾಗಿದ್ದ. ಇಲಾಖೆಯ ಒಳಗಿಂದ ಬಂದಿರುವ ಮಾಹಿತಿ ಎನ್ಕೌಂಟರ್ನದ್ದೇ ಎಂಬ ಸಂಶಯ ಈಗ ದಟ್ಟವಾಗುತ್ತಿದೆ. ಈ ಹತ್ಯಾಕಾಂಡದ ತನಿಖೆಯನ್ನು ಬಗೆದಷ್ಟು ಪೊಲೀಸ್ ಇಲಾಖೆಯ ಕಾನ್ಸ್ಸ್ಟೇಬಲ್ಗಳಿಂದ ಹಿಡಿದು ಮೇಲಧಿಕಾರಿಗಳವರೆಗೆ ಎಲ್ಲರೂ ಬೆತ್ತಲಾಗುತ್ತಿದ್ದಾರೆ.
ಪಾತಕಿಗಳ ಬಳಿ ಎಕೆ-47ನಂತಹ ಸುಧಾರಿತ ಶಸ್ತ್ರಾಗಳಿದ್ದರೂ ಅದರ ಮಾಹಿತಿ ಪೊಲೀಸ್ ಗುಪ್ತಚರರ ಬಳಿ ಇರಲಿಲ್ಲವೆಂದರೆ ಅದು ವಿಪರ್ಯಾಸ. ಏಕೆಂದರೆ, ರಾಜ್ಯದ ಪ್ರಮುಖ ಪಾತಕಿಗಳ ಮೇಲೆ ಯಾವಾಗಲೂ ಕಣ್ಗಾವಲು ಇಡಬೇಕಿದ್ದ ಗುಪ್ತಚರ ಇಲಾಖೆ ಇಲ್ಲಿ ಎಡವಿತೇ ಅಥವಾ ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ಬಹಿರಂಗಪಡಿಸದೇ ಮುಗಮ್ಮಾಗಿ ಕುಳಿತುಬಿಟ್ಟಿತೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಭವಿಷ್ಯದ ಕಾರ್ಯಾಚರಣೆಗಳಿಗೆ ಪಾಠವಾಗಲಿ
ಪೊಲೀಸ್ ಇಲಾಖೆ ಎಂದಿಗೂ ಸಮಾಜದ ಒಳಿತಿಗಾಗಿ ಇರುತ್ತದೆ ಎಂಬುದು ನಮ್ಮೆಲ್ಲರ ನಂಬಿಕೆ. ನಾವು ಪ್ರತಿ ದಿನ ಧೈರ್ಯವಾಗಿ ಮಲಗಲು ಗಡಿಯ ಸೈನಿಕರು ಎಷ್ಟು ಕಾರಣರೋ ಅಷ್ಟೇ ನಮ್ಮ ದೇಶದಲ್ಲಿರುವ ಪೊಲೀಸರು ಕೂಡಾ. ನಮ್ಮ ರಕ್ಷಣೆಗೆ ಅವರು ಯಾವಾಗಲೂ ಸಿದ್ದರು ಎಂಬ ನಂಬಿಕೆಯಲ್ಲಿ ನಾವೆಲ್ಲರೂ ಬದುಕಿದ್ದೇವೆ ಎನ್ನುವುದು ನೂರಕ್ಕೆ ನೂರು ಸತ್ಯ. ಆದರೆ, ಅಂತಹ ಪೊಲೀಸರು ಅಪರಾಧಿಗಳನ್ನು ಬಂಧಿಸಲು ಹೊರಟಾಗ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸಾಲದು ಎಂಬುದು ಕಾನ್ಪುರ್ ಹತ್ಯಾಕಾಂಡ ಆಧಾರ ಸಹಿತ ನಿರೂಪಿಸಿದೆ.
ಅದರಲ್ಲೂ ನಗರ ಪ್ರದೇಶಗಳಲ್ಲಿ ನಡೆಯುವ ಕಾರ್ಯಾಚರಣೆಗಳಿಗೆ ಪೊಲೀಸ್ ಪಡೆಯ ಜಾಗರೂಕತೆ ಇನ್ನಷ್ಟು ಹೆಚ್ಚಾಗಬೇಕಿದೆ. ಹೊಸ ತಂತ್ರಗಾರಿಕೆಯನ್ನು ತಮ್ಮ ಬತ್ತಳಿಕೆಗೆ ಸೇರಿಸಬೇಕಿದೆ. ಉತ್ತಮ ರೀತಿಯ ತರಬೇತಿ ಪೊಲೀಸ್ ಪಡೆಗಳಿಗೆ ಅಗತ್ಯವಾಗಿ ನೀಡಬೇಕಿದೆ. ಅದರಲ್ಲೂ ಶಸ್ತ್ರಾಸ್ತ್ರಗಳ ಉಪಯೋಗ ಹಾಗೂ ಸಣ್ಣ ಪ್ರದೇಶಗಳಲ್ಲಿ ಮುಖಾಮುಖಿಯಾಗುವ ಸಂದರ್ಭದಲ್ಲಿ ನಡೆಯುವ ಚಕಮಕಿಗೆ ಪೊಲೀಸರನ್ನು ಸಜ್ಜುಗೊಳಿಸಬೇಕಾದ ಅಗತ್ಯತೆ ಎದ್ದು ತೋರುತ್ತಿದೆ.