ರಾಜ್ಯ ಬಿಜೆಪಿ ಸರ್ಕಾರ ಸ್ವಲ್ಪ ಜಾಗೃತರಾಗಿದ್ದರೆ ನಿನ್ನೆಯ ಗಲಾಟೆಯನ್ನು ತಪ್ಪಿಸಬಹುದಿತ್ತು. ಸಣ್ಣ ಪ್ರಕರಣ ದೊಡ್ಡದಾಗಲು ಬಿಟ್ಟು, ಆ ಬಳಿಕ ಗೋಲಿಬಾರ್ ಮಾಡಿದ್ದು ಸರ್ಕಾರಕ್ಕೆ ಕಪ್ಪು ಚುಕ್ಕೆಯೇ ಸರಿ. ಸಂಜೆ ದೂರು ಬಂದಾಗಲೇ ಎಫ್‌ಐಆರ್ ಅಥವಾ ಎನ್‌ಸಿಆರ್ ದಾಖಲು ಮಾಡಿ, ಆರೋಪಿಯನ್ನು ಕರೆದುಕೊಂಡು ಬಂದು ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕಿತ್ತು. ಇಲ್ಲದಿದ್ದರೆ ರಾತ್ರಿ ಕಳೆಯಲಿ ನಾಳೆ ಬೆಳಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎನ್ನುವ ಭರವಸೆಯನ್ನಾದರೂ ನೀಡಬೇಕಿತ್ತು. ಯಾವುದನ್ನೂ ಮಾಡದೆ ಕಾಲ ಕಳೆದಿದ್ದು, ಪೊಲೀಸರ ತಪ್ಪು. ಠಾಣೆ ಎದುರು ಜನ ಜಮಾವಣೆ ಆಗುತ್ತಿದ್ದಾರೆ ಎಂದ ಕೂಡಲೇ ಹಿರಿಯ ಅಧಿಕಾರಿಗಳು ಭದ್ರತೆಯನ್ನು ಹೆಚ್ಚು ಮಾಡಲು ನಿರ್ಧಾರ ಮಾಡಬೇಕಿತ್ತು. ಜನರು ಗುಂಪುಗೂಡದಂತೆ ತಡೆಯುವ ಕೆಲಸ ಆಗಬೇಕಿತ್ತು. ಆದರೆ ಅದ್ಯಾವುದು ಮಾಡದೆ ಕೈಕಟ್ಟಿ ಕುಳಿತಿದ್ದ ಸರ್ಕಾರ ಆ ಬಳಿಕ ಗೋಲಿಬಾರ್ ಮಾಡಿ ರಾಜಕೀಯ ಶುರು ಮಾಡಿದೆ.
ಕಾವಲ್ ಭೈರಸಂದ್ರದ ಪುಂಡಾಟದ ಬಗ್ಗೆ ಬಿ.ಎಸ್ ಯಡಿಯೂರಪ್ಪ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದು, ಘಟನೆಯನ್ನು ನಿಯಂತ್ರಣ ಮಾಡದೆ ಇರುವುದಕ್ಕೆ ಪೊಲೀಸರ ವಿರುದ್ಧ ಗರಂ ಆಗಿದ್ದಾರೆ. ಪೊಲೀಸರಿಗೆ ಸಂಪೂರ್ಣ ಅಧಿಕಾರ ಕೊಡಲಾಗಿದೆ, ಕೆಎಸ್ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಕಮಿಷನರ್ ಸ್ಥಳದಲ್ಲೇ ಇದ್ದಾರೆ. ಇನ್ನೂ ಹೆಚ್ಚುವರಿ ತುಕಡಿ ಕಳುಹಿಸಲಾಗುವುದು. ಪರಿಸ್ಥಿತಿ ತಹಬದಿಗೆ ತರಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಗೃಹ ಸಚಿವರು ವಿವರಣೆ ಕೊಟ್ಟಿದ್ದಾರೆ. ಗೃಹ ಸಚಿವರ ವಿವರಣೆ ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು. ಪರಿಸ್ಥಿತಿ ಕೂಡಲೇ ಹತೋಟಿಗೆ ಬರಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಪುಂಡಾಟಿಕೆ ನಡೆಸಿದವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಆಗದಂತೆ ನೋಡಿಕೊಳ್ಳುವಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ.
Also Read: ಬೆಂಗಳೂರು ಮಿಡ್‌ನೈಟ್ ಗೋಲಿಬಾರ್‌ಗೆ ನಿಖರ ಕಾರಣ ಏನು..?
ಡಿಸಿಪಿ ಭೀಮಾಶಂಕರ್ ಗುಳೇದ್ ಕಾರು ಹಾಗೂ KSRP ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಕೆ.ಜಿ ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿದ ಸಾವಿರಾರು ದುಷ್ಕರ್ಮಿಗಳು ಠಾಣೆಯನ್ನು ಧ್ವಂಸ ಮಾಡಲು ಯತ್ನ ಮಾಡಿದ್ದಾರೆ.. ಈ ವೇಳೆ ಕಲ್ಲು ತೂರಾಟ ಮಾಡಿ ಸುಮಾರು 10ಕ್ಕೂಅಧಿಕ ಪೊಲೀಸರನ್ನು ಗಾಯಗೊಳಿಸಿದ್ದಾರೆ. ಪೊಲೀಸ್ ಠಾಣೆಯ ಮುಂಭಾಗ ನಿಲ್ಲಿಸಿದ್ದ ಪೊಲೀಸರ ವಾಹನಗಳಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇಷ್ಟು ಮಾತ್ರವಲ್ಲದೆ ಸಾರ್ವಜನಿಕರ ವಾಹನಗಳು ಸೇರಿ ಒಟ್ಟು 20ಕ್ಕೂ ಹೆಚ್ಚು ವಾಹನಗಳನ್ನು ಬೆಂಕಿಗೆ ಆಹುತಿ ಕೊಟ್ಟಿದ್ದಾರೆ. ಇಷ್ಟೆಲ್ಲಾ ಆದರೂ ಪೊಲೀಸರು ಸುಮ್ಮನಿದ್ದರು ಎನ್ನುವ ವಿಚಾರ ಮಾತ್ರ ನಾಗರಿಕರಲ್ಲಿ ದಿಗಿಲು ಮೂಡಿಸುತ್ತಿದೆ. ಪರಿಸ್ಥಿತಿ ಹತೋಟಿಗೆ ಬರದೇ ಹೋದಾಗ ಕಣ್ಣೀರು ಹಾಕಿಕೊಂಡು ಪೊಲೀಸರೊಬ್ಬರು ಮೇಲಧಿಕಾರಿ ಜೊತೆಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಆ ನಂತರವೇ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿ ಎಂದು ಆದೇಶ ಕೊಡಲಾಗಿದೆ.
ಇದೀಗ ಗಲಭೆ ನಡೆದ ಸ್ಥಳಲ್ಲಿ ಕರ್ಫ್ಯೂ ಜಾರಿ ಮಾಡಿದ್ದು, ಹತ್ತಕ್ಕು ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿದೆ. ನೂರಾರು ಜನರನ್ನು ಬಂಧಿಸುವ ಕೆಲಸ ಮಾಡಲಾಗ್ತಿದೆ. ಆದರೆ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದ ಆರಕ್ಕೂ ಹೆಚ್ಚು ಮಂದಿ ಕಿಡಿಗೇಡಿಗಳು ಆಸ್ಪತ್ರೆಯಿಂದ ಪರಾರಿ ಆಗಿದ್ದಾರೆ ಎನ್ನುವ ಮಾಹಿತಿಗಳು ಸಿಗುತ್ತಿದೆ. ಅಂದರೆ ರಾಜ್ಯ ಸರ್ಕಾರ ಏನು ಮಾಡುತ್ತಿದೆ. ಗಲಭೆಕೋರರನ್ನು ಬಂಧಿಸುವ ಶಕ್ತಿಯನ್ನೂ ಕಳೆದುಕೊಂಡಿತೇ ಎನ್ನುವ ಅನುಮಾನ ಮೂಡುತ್ತಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ಗಲಭೆಯಿಂದ ಹಾನಿಯಾದ ಬಗ್ಗೆ ವಿವರ ಪಡೆದಿದ್ದಾರೆ. ಡಿಜೆ ಹಳ್ಳಿ ಗಲಭೆ ಸಂಬಂಧ ಹಿರಿಯ ಆಧಿಕಾರಿಗಳ ನೇತೃತ್ವದಲ್ಲಿ ತನಿಖೆ ಶುರುವಾಗಿದೆ.
ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಓರ್ವ ಡಿಸಿಪಿ ನೇತೃತ್ವದಲ್ಲಿ ಸಭೆ ಮಾಡಲಾಗಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೌಮೇಂದು ಮುಖರ್ಜಿ, ಹೇಮಂತ್ ನಿಂಬಾಳ್ಕರ್, ಡಿಸಿಪಿ ರಾಹುಲ್ ಶಾಪುರವಾಡ್ ಭಾಗಿಯಾಗಿದ್ದಾರೆ. ಗಲಭೆ ಹಿಂದೆ ಯಾವ ಸಂಘಟನೆ ಹಾಗೂ ಯಾರ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಹೇಮಂತ್ ನಿಂಬಾಳ್ಕರ್ ಹಾಗೂ ಪೂರ್ವ ವಿಭಾಗ ಡಿಸಿಪಿಯಾಗಿದ್ದ ರಾಹುಲ್ ಕೂಡ ಸಭೆಯಲ್ಲಿ ಭಾಗಿಯಾಗಿ ಕೆಲವು ರೌಡಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ನಾಲ್ಕಾರು ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಶಾಸಕ ಅಖಂಡ ಶ್ರೀನಿವಾಸ ಅವರ ಮನೆ ಹಾಗೂ ಪೋಲೀಸ್ ಠಾಣೆ ಮೇಲೆ ದಾಳಿ, ಗಲಭೆ ನಡೆಸಿರುವುದು ಖಂಡನೀಯ. ಈಗಾಗಲೇ ದುಷ್ಕರ್ಮಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಸರ್ಕಾರ ದಾಂಧಲೆ ಹತ್ತಿಕ್ಕಲು ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ನಿನ್ನೆ ರಾತ್ರಿ ನಡೆದ ಗಲಭೆಯಲ್ಲಿ ಪತ್ರಕರ್ತರು, ಪೋಲೀಸರು, ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ. ಇಂತಹ ಪ್ರಚೋದನೆ, ಪುಂಡಾಟಗಳನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಜನರು ಈ ಸಂದರ್ಭದಲ್ಲಿ ಆವೇಶಕ್ಕೆ ಒಳಗಾಗದೆ ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ರಾಜ್ಯ ಕೇಂದ್ರ ಸ್ಥಾನ, ಬೆಂಗಳೂರಿನಲ್ಲೇ ಕಾನೂನು ಸುವ್ಯವಸ್ಥೆ ಸರಿದಾರಿಗೆ ತರುವಲ್ಲಿ ಸರ್ಕಾರ ವಿಫಲವಾಗುತ್ತದೆ ಎಂದರೆ ಏನರ್ಥ. ಕಾಂಗ್ರೆಸ್ ಪಕ್ಷದ ಶಾಸಕನ ಮನೆ ಮೇಲೆಯೇ ದಾಳಿ ನಡೆದಿದ್ದರೂ ಕಾಂಗ್ರೆಸ್ ಶಾಂತಿ ಕಾಪಾಡುವಂತೆ ಒಂದು ಮನವಿ ಮಾಡಿ ಸುಮ್ಮನಾಗಿದೆ. ಇದೀಗ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಘಟನೆ ಬಗ್ಗೆ ಯಾವ ನಿಲುವು ತೆಗೆದುಕೊಳ್ಳಲಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಇನ್ನೂ ಮತ್ತೊಂದು ಕಡೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೂಡ ಟ್ವೀಟ್ ಮಾಡಿ ಬೇಸರ ಹೊರ ಹಾಕಿದ್ದಾರೆ. ಆದರೆ ಸರ್ಕಾರ ಏನು ಮಾಡುತ್ತಿದೆ..? ಇಷ್ಟೊಂದು ದೊಡ್ಡ ಪ್ರಮಾಣದ ಘಟನೆ ಆಗಿದ್ದಾದರೂ ಹೇಗೆ ಎನ್ನುವ ಪ್ರಶ್ನೆಯನ್ನೂ ಇಲ್ಲೀವರೆಗೂ ಯಾರೂ ಮಾಡಿಲ್ಲ.
ವಿಶೇಷ ಎಂದರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಬಿಜೆಪಿ ಸರ್ಕಾರ ವಿಫಲವಾಗಿದೆ. ಆದರೆ, ಬಿಜೆಪಿ ಸಚಿವರು ಶಾಸಕರೇ ವಿರೋಧ ಪಕ್ಷಗಳ ವಿರುದ್ಧ ತಿರುಗಿ ಬಿದ್ದಿದ್ದು ವಾಗ್ದಾಳಿ ಮಾಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದುಕೊಂಡು ವಿರೋಧ ಪಕ್ಷವನ್ನು ದೂರುವುದು ತರವೇ ಎನ್ನುವುದನ್ನು ಅರಿತು ಕೊಳ್ಳಬೇಕಿದೆ. ಕಾನೂನು ಎಲ್ಲರಿಗೂ ಒಂದೇ ಆರೋಪಿಗಳನ್ನು ಬಗ್ಗುಬಡಿಯುವ ಕೆಲಸ ಆಗಬೇಕಿದೆ. ರಾಜಕೀಯ ಮಾಡುವುದನ್ನು ಬಿಟ್ಟು ಆರೋಪಿಗಳನ್ನು ಸದೆಬಡಿಯುವ ಕೆಲಸ ಆಗಬೇಕಿದೆ. ಎಲ್ಲದ್ದರಲ್ಲೂ ರಾಜಕೀಯ ಮಾಡಿದರೆ ಜನರೇ ಬುದ್ಧಿಕಲಿಸುವ ಸಮಯವೂ ಬರಲಿದೆ.