ಬೆಂಗಳೂರಿನ ಕಾವಲ್ ಭೈರಸಂದ್ರ, ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ಘರ್ಷಣೆ ವಿಚಾರವಾಗಿ ರಾಜ್ಯ ಸರ್ಕಾರ ಇಲ್ಲೀವರೆಗೂ 42 ಎಫ್ಐಆರ್ ದಾಖಲು ಮಾಡಿದ್ದು, 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದೆ. ಫೇಸ್ಬುಕ್ನಲ್ಲಿ ವಿವಾದಿತ ಪೋಸ್ಟ್ ಮಾಡಿದ್ದ ನವೀನ್ ಎಂಬಾತನನ್ನೂ ಕೂಡ ಅರೆಸ್ಟ್ ಮಾಡಲಾಗಿದ್ದು, ವಿಚಾರಣೆ ವೇಳೆ ನಾನೇ ಪೋಸ್ಟ್ ಹಾಕಿದ್ದು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎನ್ನುವ ಮಾಹಿತಿ ಪೊಲೀಸ್ ಇಲಾಖೆಯಿಂದ ಸಿಕ್ಕಿದೆ. ಇನ್ನೂ ಕಳೆದು ಹೋಗಿದೆ ಎಂದಿದ್ದ ಮೊಬೈಲ್ ಫೋನ್ ಕೂಡ ಪೊಲೀಸರ ವಶದಲ್ಲಿದೆ. ಈ ನಡುವೆ ಬಿಜೆಪಿ ಸಪೋರ್ಟ್ ಪಡೆದು ಕಾರ್ಪೊರೇಟರ್ ಆಗುವ ಕನಸು ಕಂಡಿದ್ದ ನವೀನ್ ಅನಾಥನಾಗುತ್ತಿದ್ದಾನೆಯೇ..? ಎನ್ನುವ ಅನುಮಾನ ಮೂಡುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗೃಹಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಡಿಕೆ ಶಿವಕುಮಾರ್ ಗುಡುಗು..!
ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾವಲ ಭೈರಸಂದ್ರ ಗಲಭೆ ವಿಚಾರವಾಗಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗಲಭೆಗೆ ಕಾಂಗ್ರೆಸ್ನಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಎಂದಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಡಿಕೆ ಶಿವಕುಮಾರ್ ಗುಡುಗಿದ್ದಾರೆ. ಬಸವರಾಜ ಬೊಮ್ಮಾಯಿ ಯಾರು ಆ ಮಾತು ಹೇಳಲು..? ಅವನು ಅಥಾರಿಟೀನಾ..? ಸಬ್ ಇನ್ಸ್ಪೆಕ್ಟರ್ ಹಾ..? ಇಲ್ಲಾ ಯಾವುದಾದರೂ ಆಯೋಗನಾ..? ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಕಾರ್ಪೊರೇಟರ್ಗಳಿಗೆ ನೋಟಿಸ್ ಕೊಟ್ಟು ಬ್ಲಾಕ್ ಮೇಲ್ ಮಾಡುವ ಕೆಲಸ ಆಗ್ತಿದೆ. ಏನ್ ನಡೀತಿದೆ ರಾಜ್ಯದಲ್ಲಿ..? ನಾವೇನು ಸುಮ್ನೆ ಕೂತಿದ್ದೀವಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನೂ ಗಲಭೆ ಸೃಷ್ಟಿಯಾಗಲು ಕಾರಣ ಅವರ ಕಾರ್ಯಕರ್ತ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದ ಪೋಸ್ಟ್. ಅಂದಿನ ಗಲಭೆ ನಿಯಂತ್ರಣ ಮಾಡಲು ಹೋಮ್ ಮಿನಿಸ್ಟರ್ ಬಸವರಾಜ ಬೊಮ್ಮಾಯಿ ಸಂಪೂರ್ಣ ವಿಫಲರಾಗಿದ್ದಾರೆ. ಮೂರು ಗಂಟೆ ಅವಧಿಯಲ್ಲಿ ಗಲಭೆ ನಿಯಂತ್ರಿಸಲಿಲ್ಲ. ಗಲಾಟೆ ಮಾಡಲು ಬಿಟ್ಬಿಟ್ಟು, ಈಗ ಜಾತಿ ಬಣ್ಣ ಬಳೀತಿದ್ದಾರೆ ಇವರು. ಅಖಂಡ ಶ್ರೀನಿವಾಸ್ ಮೂರ್ತಿ ನಮ್ಮ ಶಾಸಕ, ನಮ್ಮ ಶಾಸಕನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆ. ನಮ್ಮ ಶಾಸಕನ ಮನೆ ಮೇಲಿನ ದಾಳಿಯನ್ನ ನಾವು ಕಟುವಾಗಿ ಖಂಡಿಸಿದ್ದೇವೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ ತಗೊಳ್ಳಿ, ಇದಕ್ಕೆ ನಮ್ಮ ಬೆಂಬಲವೂ ಇದೆ. ಅದನ್ನು ಬಿಟ್ಟು ಕಾಂಗ್ರೆಸ್ನಲ್ಲಿ ಒಳ ಜಗಳ ಇದೆ ಅಂತ ಹೇಳಲು ಬೊಮ್ಮಾಯಿ ಯಾರು..? ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯವಿಲ್ಲ, ಬಿಜೆಪಿಯೊಳಗೆ ಸಾಕಷ್ಟು ಆಂತರಿಕ ಕಚ್ಚಾಟ ಇದೆ. ಬಿಜೆಪಿಯವರ ಒಳ ತಂತ್ರದಿಂದಲೇ ಗಲಭೆ ನಡೆದಿದ್ದು, ನಮ್ಮವರು ಘಟನೆ ಬಗ್ಗೆ ಆಂತರಿಕ ತನಿಖೆ ಮಾಡ್ತಿದೀವಿ, ಆದ್ರೆ ಬಿಜೆಪಿಯವ್ರು ನಮ್ಮ ಕಾರ್ಪೊರೇಟರ್ ಗಳನ್ನು ಪೊಲೀಸರಿಂದ ಹೆದರಿಸ್ತಿದ್ದಾರೆ ಎಂದು ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಒತ್ತಡ ಹಾಕ್ತಿದ್ದಾರೆ. ಇದೇ ಹೇಳಿಕೆ ಕೊಡಬೇಕು ಎಂದು ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಒತ್ತಡ ಹಾಕಿದ್ದಾರೆ. ಅದೆಲ್ಲಾ ನಮಗೆ ಗೊತ್ತಿದೆ. ನಾವು ಇದನ್ನು ಸಹಿಸಲ್ಲ. ಏನೇನ್ ನಡೀತಿದೆ ಎಂದು ನಮಗೆ ಗೊತ್ತಿದೆ. ಇವರು ಅಧಿಕಾರಕ್ಕೆ ಬಂದಾಗಲೆಲ್ಲಾ ಕೋಮು ಗಲಭೆ ನಡೆಯುತ್ತೆ. ಈ ಸರ್ಕಾರದಲ್ಲಿ ಒಬ್ಬ ಸಚಿವ, ಶಾಸಕನನ್ನು ನಿಯಂತ್ರಿಸಲು ಅವರಿಂದಲೇ ಸಾಧ್ಯವಾಗ್ತಿಲ್ಲ. ಗಲಭೆಗೆ ಸರ್ಕಾರವೇ ಕಾರಣ. ನವೀನ್ ಬಿಜೆಪಿಯವನು ಎನ್ನುವ ಕಾರಣಕ್ಕಾಗಿಯೇ ಅವನ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಗಲಭೆ ಆಗೋಕೆ ಇದೇ ಕಾರಣ ಎಂದಿದ್ದಾರೆ.
ಕಾಂಗ್ರೆಸ್ ಮೇಲೆ ಆರೋಪದಲ್ಲಿ ನಿರತರಾದ ಬಿಜೆಪಿ ನಾಯಕರು
ಈ ಕುರಿತು ಹಾವೇರಿಯಲ್ಲಿ ತಿರುಗೇಟು ಕೊಟ್ಟಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾವಲ ಭೈರಸಂದ್ರ ಗಲಭೆ ವಿಚಾರದಲ್ಲಿ ಬಿಜೆಪಿ ವಿರುದ್ಧ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿದ್ದಾರೆ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗುವಷ್ಟು ಹೋಗಿದೆ. ಸುವ್ಯವಸ್ಥೆ ಸರಿ ಮಾಡುವದು, ನನ್ನ ಇಲಾಖೆ, ನಮ್ಮ ಸಬ್ ಇನ್ಸ್ಪೆಕ್ಟರ್ ನಮ್ಮ ಕರ್ತವ್ಯ. ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ನನಗೆ ಸಂಬಂಧವಿಲ್ಲ, ಆಂತರಿಕ ವಿಚಾರ ಕಾನೂನು ಸುವ್ಯವಸ್ಥೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕು ಎನ್ನುವ ಮೂಲಕ ಮತ್ತೆ ಗಲಭೆಗೆ ಕಾಂಗ್ರೆಸ್ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇತ್ತ ಚಿಕ್ಕಮಗಳೂರಲ್ಲಿ ಮಾತನಾಡಿದ ಸಚಿವ ಸಿ ಟಿ ರವಿ ಬುದ್ಧಿ ಜೀವಿಗಳು ಈಗ ಲದ್ದಿ ತಿನ್ನುತ್ತಿದ್ದಾರೆಯೇ..? ದಲಿತ ಶಾಸಕನ ಮನೆ ಮೇಲಿನ ದೌರ್ಜನ್ಯಕ್ಕೆ ಯಾಕೆ ಸುಮ್ಮನಿದ್ದಾರೆ..? ಎಲ್ಲಿದೆ ಅಹಿಂದಾ ಪ್ರೇಮ..? ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ಅತ್ತ ರಾಯಚೂರಿನಲ್ಲಿ ಮಾತನಾಡಿರುವ ಡಿಸಿಎಂ ಲಕ್ಷ್ಮಣ ಸವದಿ, ಬಂಧಿತನಾಗಿರುವ ನವೀನ್ಗೂ ನಮ್ಮ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಡಿಕೆ ಶಿವಕುಮಾರ್ ನಮ್ಮ ಬಾಸ್ ಎಂದಿರುವ ಸಾಕ್ಷಿ ನಮ್ಮ ಗೃಹ ಇಲಾಖೆ ಬಳಿ ಇದೆ. ಆತ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ ಎಂದು ತಳ್ಳಿ ಹಾಕಿದ್ದಾರೆ. ಒಟ್ಟಾರೆ ಕಾಂಗ್ರೆಸ್, ಬಿಜೆಪಿ ಜಟಾಪಟಿಯಲ್ಲಿ ನವೀನ್ ಅನಾಥನಾಗುವ ಎಲ್ಲಾ ಲಕ್ಷಗಳು ಕಾಣಿಸುತ್ತಿವೆ. ರಾಜಕೀಯ ಲಾಭಕ್ಕಾಗಿ ಪೋಸ್ಟ್ ಮಾಡಿ ಸಿಕ್ಕಿಬಿದ್ದಿರುವ ನವೀನ್ ಕನಸು ಭಗ್ನವಾಗುವ ಎಲ್ಲಾ ಸಾಧ್ಯತೆಗಳೂ ಇವೆ.