ಕರೋನಾ ಸೋಂಕಿನಿಂದ ಬಳಲುತ್ತಿರುವ ರಾಜ್ಯ ಸರ್ಕಾರಕ್ಕೆ ಸಮನ್ವಯ ಸೂತ್ರಗಳನ್ನು ಕಾಂಗ್ರೆಸ್ ನೀಡಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜೊತೆಗಿನ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರದ ಹುಳುಕು ಎತ್ತಿ ತೋರಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಿದ್ಧಪಡಿಸಿದ್ದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದಾರೆ. ಆ ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡರು, ಕರೋನಾ ಸೋಂಕು ಹೋಗಲಾಡಿಸಲು ಒಗ್ಗಟ್ಟಿನ ಹೋರಾಟ ಅನಿವಾರ್ಯ. ನಾವು ಕಾಂಗ್ರೆಸ್ ಪಕ್ಷದವರಾದರೂ ರಾಜಕೀಯ ಮಾಡುವುದಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಮನ್ವಯತೆ ಇಲ್ಲದಂತಾಗಿದೆ. ಸಮನ್ವಯತೆ ಸಾಧಿಸಿ ಹೋರಾಟ ಮಾಡುವಂತೆ ಸಲಹೆ ನೀಡಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷ ನೀಡಿರುವ ಸಲಹೆಯನ್ನು ರಾಜ್ಯ ಸರ್ಕಾರ ಪಾಲಿಸುತ್ತಾ ಎನ್ನುವುದೇ ಇದೀಗ ಎದುರಾಗಿರುವ ಕೌತುಕ.ಕಾಂಗ್ರೆಸ್ ಕೊಟ್ಟ ವರದಿಯಲ್ಲಿ ಏನೇನಿದೆ..?
ಕರೋನಾ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ
ಆರ್ಥಿಕ ಸಹಾಯ ನೀಡಲು ಕೇಂದ್ರಕ್ಕೆ ಒತ್ತಾಯಿಸಿ
ಪ್ರತಿ 10 ಲಕ್ಷ ಜನರಲ್ಲಿ 10 ಸಾವಿರ ಜನರಿಗೆ ಟೆಸ್ಟ್
ಪ್ರತಿ ಜಿಲ್ಲೆಗೊಂದರಂತೆ ಟೆಸ್ಟಿಂಗ್ ಲ್ಯಾಬ್ ನೀಡಿ
ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ವೈದ್ಯರಿಗೆ ಒದಗಿಸಿ
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಕೊಡಿ
ರೆಡ್ ಜೋನ್‌ಗಳಲ್ಲಿ ಸೀಲ್‌ಡೌನ್ ಕಟ್ಟುನಿಟ್ಟಾಗಲಿ
ಕರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ವಿಮೆ ಶ್ಲಾಘನೀಯ
ಕರೋನಾ ವಿಚಾರದಲ್ಲಿ ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಾ ಇದೆ
ನಿಮ್ಮ ಪಕ್ಷದ ಮುಖಂಡರ ಅಪಪ್ರಚಾರಕ್ಕೆ ಬ್ರೇಕ್ ಹಾಕಿ
ಸೋಶಿಯಲ್ ಮೀಡಿಯಾ ಪ್ರಚೋದನೆ ವಿರುದ್ಧ ಕ್ರಮ ಅಗತ್ಯ
ಪ್ರಚೋದನೆ ಆರೋಪಿ ವಿರುದ್ಧ ಕ್ರಮಕೈಗೊಂಡ ಅಧಿಕಾರಿಗೆ ರಜೆ ಕೊಟ್ಟಿದ್ದು ತಪ್ಪು
ಸರ್ಕಾರದ ಆಹಾರದ ಕಿಟ್ ಮೇಲೆ ತಮ್ಮ ಲೇಬಲ್ ಹಾಕಿದ್ದು ತಪ್ಪು
ಸರ್ಕಾರದ ಅನುದಾನದಲ್ಲಿ ತಾರತಮ್ಯ ಆಗುತ್ತಿದೆ ಸರಿಪಡಿಸಿ
ನರೇಗಾ ಯೋಜನೆಯಡಿಲ್ಲಿ ಕಾರ್ಮಿಕರಿಗೆ ಕೆಲಸ ಕಲ್ಪಿಸಿ
ಅಸಂಘಟಿತ ವಲಯ ಕಾರ್ಮಿಕರಿಗೆ ಮಾಸಿಕ ₹10,000 ಸಹಾಯ ಧನ ನೀಡಿ
ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು, ರೋಗ ಹರಡುವಿಕೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಏರುಮುಖವಾಗಿದೆಯೇ ಹೊರತು ನಿಯಂತ್ರಣಕ್ಕೆ ಬರುತ್ತಿರುವ ಲಕ್ಷಣ ಕಾಣಿಸುತ್ತಿಲ್ಲ. WHO ನೀಡಿರುವ ಮಾರ್ಗಸೂಚಿ ಪ್ರಕಾರ ಕರೋನಾ ರೋಗ ನಿಯಂತ್ರಣಕ್ಕೆ 10 ಲಕ್ಷ ಜನಸಂಖ್ಯೆಗೆ 10 ಸಾವಿರ ಜನರನ್ನು ಪರೀಕ್ಷೆ ಮಾಡಬೇಕು. ಆದರೆ ನಮ್ಮ ರಾಜ್ಯದಲ್ಲಿ ಪ್ರತಿ 10 ಲಕ್ಷ ಜನರಿಗೆ ಕೇವಲ 152 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕರೋನಾ ರೋಗ ಪರೀಕ್ಷೆಗೆ ರ‍್ಯಾಪಿಡ್ ಟೆಸ್ಟ್ ಕಿಟ್‍ಗಳು ಹಾಗೂ ಪಿ.ಸಿ.ಆರ್. ಮೆಷಿನ್‍ಗಳ ಕೊರತೆಯಾಗಿವೆ. ಮತ್ತೊಂದು ಕಡೆ ವೈದ್ಯರ, ನರ್ಸ್ ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳಿಗೆ ಅತ್ಯವಶ್ಯಕವಾಗಿರುವ ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್, PPE ಕಿಟ್‌ಗಳ ಕೊರತೆಯಾಗಿದೆ. ರಾಜ್ಯಕ್ಕೆ ಒಟ್ಟು 12 ಲಕ್ಷ ಕಿಟ್‍ಗಳ ಅಗತ್ಯವಿದ್ದು ರಾಜ್ಯದಲ್ಲಿ 2,27,000 ಕಿಟ್‍ಗಳು ಮಾತ್ರ ಲಭ್ಯವಿವೆ. ಎನ್-95 ಮಾಸ್ಕ್ಗಳು ಕೇವಲ 5,46,721 ಮಾತ್ರ ಲಭ್ಯವಿವೆ. ಹೈಡ್ರಾಕ್ಸಿ ಕ್ಲೋರಾಕ್ಸಿನ್ ಮಾತ್ರೆಗಳು ಕೇವಲ 2,79,999 ರಷ್ಟು ಲಭ್ಯವಿವೆ. ಇವೆಲ್ಲವನ್ನೂ ಸರ್ಕಾರ ಸೂಕ್ತವಾಗಿ ನಿಭಾಯಿಸಬೇಕು ಎಂದು ಎಚ್ಚರಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಗ್ಯಕ್ಕೆ ಸಂಬಂಧಪಟ್ಟಂತೆ, ರೈತರು, ಅಲ್ಪಸಂಖ್ಯಾತರಿಗೆ ಆಗುತ್ತಿರೋ ನೋವಿನ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆದಿದ್ದೇವೆ. ಮಕ್ಕಳ ವಿದ್ಯಾಭ್ಯಾಸ, ಅನುದಾನ ತಾರತಮ್ಯ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಹಕಾರ ನೀಡುತ್ತೇವೆ. ಬ್ಯಾಂಕರ್ಸ್ ಜೊತೆಯೂ ಸಭೆಗೆ ಮನವಿ ಮಾಡಿದ್ದೇವೆ. ಸಿಎಂ ನಮ್ಮ ಮನವಿ ಆಲಿಸಿ, ಸಲಹೆ ಸ್ವೀಕರಿಸಿದ್ದಾರೆ. ಸರ್ಕಾರ ಹೇಗೆ ಮುನ್ನಡೆಯುತ್ತೋ ನೋಡೋಣ. ಈ ಸಮಯದಲ್ಲಿ ಸರ್ಕಾರ ರಾಜಕಾರಣ ಮಾಡುತ್ತಿದೆ. ಆದ್ರೆ ನಾವು ರಾಜಕಾರಣ ಮಾಡಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರದ ಸಚಿವರಲ್ಲಿ ಸಾಕಷ್ಟು ಗೊಂದಲಗಳಿವೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳ್ತಿದ್ದಾರೆ. ಇದು ಗೊಂದಲ ಉಂಟು ಮಾಡಿದೆ. ಆರೋಗ್ಯ ಸಚಿವರು ಒಂದು ಹೇಳ್ತಾರೆ. ಮತ್ತೊಬ್ಬರು ಮತ್ತೊಂದು ರೀತಿ ಹೇಳ್ತಾರೆ ಎಂದು ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.ವ್ಯಾಪಾರಸ್ಥರು, ಕುಶಲ ಕರ್ಮಿಗಳು, ಅರ್ಚಕರು, ಹಮಾಲಿಗಳು, ಅಡುಗೆ ಕೆಲಸದವರು, ಆಟೋ ಡ್ರೈವರ್‌ಗಳು ಸೇರಿದಂತೆ ಬಡವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ಸಲಕರಣೆಗಳನ್ನು ಒದಗಿಸಬೇಕು. ಅದಕ್ಕಿಂತ ಮುಖ್ಯವಾಗಿ ರಾಜ್ಯ ಸರ್ಕಾರದ ಮಂತ್ರಿಗಳು ಕರೋನಾ ವಿಚಾರದಲ್ಲಿ ಕಚ್ಚಾಟ ನಡೆಸುತ್ತಿದ್ದು, ಕರೋನಾ ನಿಯಂತ್ರಣಕ್ಕೆ ಸರ್ಕಾರ ನಡೆಸುತ್ತಿರುವ ಹೋರಾಟ ಫಲಪ್ರದವಾಗುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದೆಲ್ಲಾ ಸಲಹೆ ನೀಡಿದ್ದಾರೆ, ಇದೀಗ ರಾಜ್ಯ ಸರ್ಕಾರ ಕಾಂಗ್ರೆಸ್ ಕೊಟ್ಟ ಸಲಹೆಗಳನ್ನು ಯಾವ ರೀತಿ ಸ್ವೀಕಾರ ಮಾಡುತ್ತೆ ಎನ್ನುವುದನ್ನು ಕಾದು ನೋಡ್ಬೇಕು.