ಶಾಲೆಯಲ್ಲಿ ಓದುತ್ತಿದ್ದಾಗಲೇ ನಾಟಕಗಳತ್ತ ಆಕರ್ಷಿತರಾಗಿ ರಂಗಭೂಮಿಯೆಡೆ ಒಲವು ಬೆಳೆಸಿಕೊಂಡವರು ಮಹದೇವಪ್ಪ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬೆಳಕವಾಡಿ ಅವರ ಹುಟ್ಟೂರು. ಅವರ ಪೂರ್ವಿಕರು ಮೈಸೂರು ಸಮೀಪದ ಗ್ರಾಮವೊಂದರ ನಿವಾಸಿಗಳು. ತಂದೆಯ ಕಾಲದಲ್ಲಿ ಬೆಳಕವಾಡಿಗೆ ಬಂದು ನೆಲೆಸಿದ್ದರು. ಮಹದೇವಪ್ಪನವರ ತಂದೆ ಕೆಂಚಪ್ಪ ಹಳ್ಳಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರಂತೆ. ತಂದೆ ನಟಿಸುತ್ತಿದ್ದ ನಾಟಕಗಳನ್ನು ನೋಡುತ್ತಾ ಬೆಳೆದ ಮಹದೇವಪ್ಪ ರಂಗಭೂಮಿಯತ್ತ ಆಕರ್ಷಿತರಾದರು.

ವಿದ್ಯಾಭ್ಯಾಸ ಪೂರ್ಣಗೊಳಿಸಿದ ಮಹದೇವಪ್ಪ ಬಸ್ ಕಂಪನಿಯೊಂದರಲ್ಲಿ ಕೆಲಕಾಲ ಕ್ಲರ್ಕ್ ಆಗಿ ಕೆಲಸ ಮಾಡಿದ್ದೂ ಆಯ್ತು. ಆದರೆ ನಟನೆಯ ಸೆಳೆತದಿಂದ ಕೆಲಸ ತೊರೆದು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ‘ರಾಜಾ ವಿಕ್ರಮ’ ನಾಟಕದೊಂದಿಗೆ ಬಣ್ಣ ಹಚ್ಚಿದ ಅವರಿಗೆ ‘ಶನೀಶ್ವರ ಮಹಾತ್ಮೆ’ಯ ಶನಿದೇವನ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಯಶಸ್ಸಿನೊಂದಿಗೆ ‘ಮಹದೇವಪ್ಪ’ ಮುಂದೆ ‘ಶನಿಮಹದೇವಪ್ಪ’ ಎಂದೇ ಹೆಸರಾದರು.

ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ‘ಬಡವನ ಬಾಳು’, ‘ಅತ್ತೆ ಸೊಸೆ’, ‘ಬಿಡುಗಡೆ’, ‘ಸತ್ಯವಿಜಯ’, ‘ಚಂದ್ರಹಾಸ’ ಮುಂತಾದ ನಾಟಕಗಳಲ್ಲಿ ಮಹದೇವಪ್ಪ ನಾಯಕನಟನಾಗಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದರು. ಇಲ್ಲಿನ ಜನಪ್ರಿಯತೆ ಅವರಿಗೆ ಸಿನಿಮಾ ಅವಕಾಶಗಳಿಗೆ ನಾಂದಿಯಾಯ್ತು. ‘ಧರ್ಮಸ್ಥಳ ಮಹಾತ್ಮೆ’ (1962) ಚಿತ್ರದ ಬ್ರಹ್ಮನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಶನಿಮಹದೇವಪ್ಪ ಮುಂದೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ‘ಭಕ್ತ ಕುಂಬಾರ’ ಚಿತ್ರದಲ್ಲಿ ಜ್ಞಾನೇಶ್ವರನಾಗಿ, ‘ಮೂರೂವರೆ ವಜ್ರಗಳು’ ಚಿತ್ರದಲ್ಲಿ ಶಕುನಿಯಾಗಿ, ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿ ಡಿಂಡಿಮ ಕವಿಯಾಗಿ… ಹೀಗೆ ಹತ್ತಾರು ಪಾತ್ರಗಳಲ್ಲಿ ಶನಿಮಹದೇವಪ್ಪ ಸಿನಿಪ್ರೇಮಿಗಳಿಗೆ ನೆನಪಾಗುತ್ತಾರೆ. ಐದು ದಶಕಗಳ ಸಿನಿಮಾ ಜೀವನದಲ್ಲಿ ಅವರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

“ಶನಿಮಹದೇವಪ್ಪ ನಮ್ಮ (ದೊರೈ-ಭಗವಾನ್) ನಿರ್ದೇಶನದ ಬಹುತೇಕ ಎಲ್ಲಾ ಚಿತ್ರಗಳಲ್ಲೂ ನಟಿಸಿದ್ದಾನೆ. ಎಲ್ಲಾ ಪಾತ್ರಗಳಿಗೂ ಒಪ್ಪುವಂತಹ ವ್ಯಕ್ತಿತ್ವ. ಯಾರೊಂದಿಗೂ ಮುನಿಸಿಕೊಂಡವನಲ್ಲ. ಒಮ್ಮೆಯೂ ಚಿತ್ರೀಕರಣಕ್ಕೆ ತೊಂದರೆ ಕೊಟ್ಟವನಲ್ಲ. ರಂಗಭೂಮಿ ಹಿನ್ನೆಲೆ ಇದ್ದುದರಿಂದ ಸ್ಪಷ್ಟ ಉಚ್ಛಾರಣೆ, ಸಂಭಾಷಣೆ ದಾಟಿಸುವ ರೀತಿಯೂ ಸೊಗಸಾಗಿರುತ್ತಿತ್ತು” ಎನ್ನುತ್ತಾರೆ ಹಿರಿಯ ಚಿತ್ರನಿರ್ದೇಶಕ ಭಗವಾನ್. ವರನಟ ರಾಜಕುಮಾರ್ ಕುಟುಂಬಕ್ಕೆ ಆತ್ಮೀಯರಾಗಿದ್ದ ನಟ ಮಹದೇವಪ್ಪ. ರಾಜ್ ಅಭಿನಯದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಶನಿಮಹದೇವಪ್ಪನವರಿಗೊಂದು ಪಾತ್ರ ಕೊಡಬೇಕೆಂದು ರಾಜ್ ತಾಕೀತು ಮಾಡುತ್ತಿದ್ದರು ಎಂದು ನೆನಪು ಮಾಡಿಕೊಳ್ಳುತ್ತಾರೆ ಭಗವಾನ್.

ಹಿರಿಯ ನಟ ಡಿಂಗ್ರಿ ನಾಗರಾಜ್ ಅವರಿಗೆ ಶನಿಮಹದೇವಪ್ಪ ಐದು ದಶಕಗಳ ಸ್ನೇಹಿತರು. ಅದು ರಂಗಭೂಮಿ ಒಡನಾಟ. “ಶನಿಮಹದೇವಪ್ಪ, ಭಟ್ಟಿ ಮಹದೇವಪ್ಪ, ಉಮೇಶ… ನಾವೆಲ್ಲಾ ಹಲವು ನಾಟಕಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಶನಿಮಹದೇವಪ್ಪ ಕೆಲವು ಪಾತ್ರಗಳಲ್ಲಿ ವಿಶೇಷವಾಗಿ ಜನಾಕರ್ಷಣೆಗೆ ಪಾತ್ರನಾಗಿದ್ದರು. ಅದರಲ್ಲೂ ಅವರ ಶನೀಶ್ವರನ ಪಾತ್ರವನ್ನು ಜನರು ತುಂಬಾ ಮೆಚ್ಚಿಕೊಂಡಿದ್ದರು. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಿದ್ದಾರೆ. ಕೊನೆಯ ದಿನಗಳಲ್ಲಿ ಕಾಡಿದ ಅನಾರೋಗ್ಯದಿಂದಾಗಿ ಅವರು ತುಂಬಾ ನೊಂದಿದ್ದರು” ಎಂದು ಅಗಲಿದ ಹಿರಿಯ ಸ್ನೇಹಿತನನ್ನು ಸ್ಮರಿಸುತ್ತಾರೆ ಡಿಂಗ್ರಿ ನಾಗರಾಜ್. ಶನಿಮಹದೇವಪ್ಪನವರ ಪತ್ನಿ ಜಯಮ್ಮ ಅವರೂ ರಂಗಭೂಮಿ ನಟಿ. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ‘ಎರಡು ಕನಸು’ ಚಿತ್ರದಲ್ಲಿ ಪತಿ-ಪತ್ನಿ ಇಬ್ಬರೂ ಅಭಿನಯಿಸಿದ್ದಾರೆ. ಶನಿಮಹದೇವಪ್ಪನವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
