ಉತ್ತರ ಕರ್ನಾಟಕ ಹೈದರಾಬಾದ್ ಕರ್ನಾಟಕ ಮಳೆಯ ಅತಿವೃಷ್ಟಿ ನದಿ ಪ್ರವಾಹ ಬೆಳೆನಷ್ಟ ಹಳ್ಳಿಗಳ ಮುಳುಗಡೆ ಬಗ್ಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಕಳೆದ ವರ್ಷ ಅತಿವೃಷ್ಟಿ ಹಾನಿಯಿಂದ 35 ಸಾವಿರ ಕೋಟಿ ಉತ್ತರ ಕರ್ನಾಟಕದಲ್ಲಿ ನಷ್ಟ ಅನುಭವಿಸಿದ್ದಾರೆ ಕಳೆದ 2-3 ತಿಂಗಳಿಂದ ಸುರಿಯುತ್ತಿರುವ ಭೀಕರ ಮಳೆ ಪ್ರವಾಹದಿಂದ, ಭೀಮಾ ನದಿ ಕೃಷ್ಣಾ ನದಿ ನೀರಿನ ಪ್ರವಾಹದಿಂದ 10 ಲಕ್ಷ ಹೆಕ್ಟರ್ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಕಬ್ಬು, ಹತ್ತಿ, ಮೆಕ್ಕೆಜೋಳ, ಬಾಳೆ ಮತ್ತಿತರ ಬೆಳೆಗಳು ಸಾವಿರಾರು ಗ್ರಾಮಗಳು ನೀರಿನಲ್ಲಿ ಮುಳುಗಿದೆ, ಈ ಗ್ರಾಮಗಳ ಜನರನ್ನು ಒಂದು ವಾರವಾದರೂ ಭೇಟಿ ಮಾಡುವ ಸೌಜನ್ಯವನ್ನು ಸರ್ಕಾರದ ಯಾವುದೇ ಅಧಿಕಾರಿಗಳು ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರವಾಹದಿಂದಾಗಿ ರೈತರ ಬಾಳು ನರಕವಾಗಿದೆ, ರಾಜ್ಯದ 25 ಸಂಸದರು ನಿದ್ರಿಸುತ್ತಿದ್ದು ಜನರ ಪಾಲಿಗೆ ಸತ್ತಂತಿದ್ದಾರೆ, ಕೇಂದ್ರವನ್ನು ಎಚ್ಚರಿಸುವ ಯಾವುದೇ ಕಾರ್ಯ ನಡೆಸುತ್ತಿಲ್ಲ, ಕೇಂದ್ರ ಸರ್ಕಾರ ಪದೇಪದೇ ರಾಜ್ಯದ ಬಗ್ಗೆ ನಿರ್ಲಕ್ಷ ಧೋರಣೆ ತಾಳುತ್ತಿದೆ, ಕಳೆದ ವರ್ಷ 35 ಸಾವಿರ ಕೋಟಿ ನಷ್ಟಕ್ಕೆ ಕೇವಲ ಮೂರು ಸಾವಿರ ಕೋಟಿ ನೀಡಿ ತೇಪೆ ಹಾಕಿದ್ದಾರೆ, ಈಗಲಾದರೂ ಕೇಂದ್ರ ಸರ್ಕಾರದ ಕೇಂದ್ರ ಸಚಿವರ ತಂಡ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸಂಗತಿಯನ್ನು ಅರಿತು ಇದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರವನ್ನು ಒತ್ತಾಯಿಸಲಿ ಎಂದು ಅವರು ಹೇಳಿದ್ದಾರೆ.
ಎನ್ ಡಿ ಆರ್ ಎಫ್ ನಷ್ಟ ಪರಿಹಾರದ ಹಣವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲಿ, ಈಗ ನೀಡುತ್ತಿರುವುದು ಭಿಕ್ಷಾ ರೂಪದ ಪರಿಹಾರವಾಗಿದೆ ಎಂದಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರಾಜ್ಯ ಸರ್ಕಾರ ಜಿಲ್ಲೆಗೊಬ್ಬ ಮಂತ್ರಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿ ಸಂತ್ರಸ್ತ ಜನರಿಗೆ ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿ, ಸರ್ಕಾರ ಉತ್ತರ ಕರ್ನಾಟಕದ ಬಗ್ಗೆ ಅಲಸ್ಯ ಭಾವನೆ ತಾಳಬಾರದು ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಕರೋನಾ ಸಂಕಷ್ಟದ ಸಂದರ್ಭದಲ್ಲಿ ದಸರಾ ಆಚರಣೆ, ಅಬ್ಬರದ ಚುನಾವಣೆ ಬಗ್ಗೆ ಕಾಳಜಿವಹಿಸುವ ಬದಲು ನೊಂದ ಜನರ ರಕ್ಷಣೆಗೆ ಸರ್ಕಾರ ಸಮಾರೋಪದಿಯದಲ್ಲಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಿ, ಕೇಂದ್ರ ಸರ್ಕಾರ ಕೃಷಿಕ್ಷೇತ್ರವನ್ನು ನಾಶಮಾಡುವ ಕಾಯ್ದೆಗಳನ್ನು ಜಾರಿಗೆ ತರುವ ಬದಲು ಡಾ ಎಂ ಎಸ್ ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿ ಶಾಸನಬದ್ಧ ದರ ಮಾನದಂಡ ಜಾರಿಗೆ ತರಲಿ ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಎಫ್ ಆರ್ ಪಿ ಬೆಲೆ ನಿಗದಿ ಮಾನದಂಡ ಜಾರಿಯಾದ ಎರಡು ಮೂರು ವರ್ಷದಿಂದ ಸಕ್ಕರೆ ಇಳುವರಿಯನ್ನು ಕಡಿಮೆ ತೋರುತ್ತಿರುವುದರಿಂದ ಕಬ್ಬಿನ ಎಫ್ ಆರ್ ಪಿ ದರದಲ್ಲಿಯೂ ರೈತರಿಗೆ ಮೋಸವಾಗುತ್ತಿದೆ, ಪ್ರಸಕ್ತ ಸಾಲಿನಲ್ಲಿ ನಿಗದಿಮಾಡಿರುವ ಎಫ್ ಆರ್ ಪಿ ದರ ಆವೈಜ್ಞಾನಿಕವಾಗಿದೆ ಆದ್ದರಿಂದ ಪ್ರಸಕ್ತ ಸಾಲಿನ ಕಬ್ಬಿನ ಬೆಲೆಯನ್ನು ರಾಜ್ಯ ಸರ್ಕಾರ ಟನ್ಗೆ 3300 ನಿಗದಿ ಮಾಡಲಿ ಎಂದು ಒತ್ತಾಯಿಸಲಾಗಿದ್ದು ನಿರ್ಲಕ್ಷ್ಯ ಮಾಡಿದರೆ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿದ್ದಾರೆ