ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ವಿಚಾರದಲ್ಲೀಗ ಮತ್ತೆ ಮಹಾರಾಷ್ಟ್ರ ಖ್ಯಾತೆ ತೆಗೆದಿದೆ. ‘ಬೆಳಗಾವಿ, ಕಾರವಾರ, ನಿಪ್ಪಾಣಿ ನಮ್ಮದು’ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನೀಡಿದ್ದ ಹೇಳಿಕೆಯೀಗ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. ಇವರ ಹೇಳಿಕೆಗೆ ಕನ್ನಡಪರ ಸಂಘಟನೆಗಳು, ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯದ ಹಲವು ಶಾಸಕ-ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಹೇಳಿಕೆ ಸಂಬಂಧ ಚಿಕ್ಕೋಡಿಯಲ್ಲಿ ಮಾತನಾಡಿದ ಸಚಿವ ಪ್ರಭು ಚವ್ಹಾಣ್, “ಏ ಕರ್ನಾಟಕ ಉಸ್ಕಾ ಬಾಪ್ಕಾ ನಹೀ, ಹಮಾರಾ ಹೈ( ಕರ್ನಾಟಕ ಅವರಪ್ಪನದ್ದಲ್ಲ, ನಮ್ಮದು). ಕನ್ನಡ ನಮ್ಮ ತಾಯ್ನುಡಿ, ಅಜಿತ್ ಪವಾರ್ ಮಾತಿಗೆ ನಾವು ಬೆಲೆ ಕೊಡಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಾಯಿ ಭುವನೇಶ್ವರಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ. ಅಜಿತ್ ಪವಾರ್ ಉದ್ಧಟತನದ ಹೇಳಿಕೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಬೆಳಗಾವಿ, ಕಾರವಾರದ ತಂಟೆಗೆ ಬಂದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಕುಡಚಿ ಶಾಸಕ ಪಿ ರಾಜೀವ್, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಕರ್ನಾಟಕದ ಕಿರೀಟ ಇದ್ದಂತೆ. ಹೀಗೆ ಹೇಳಿಕೆ ನೀಡಿದ ಎಷ್ಟೋ ಮಂದಿ ಅಸ್ತಿತ್ವ ಇಲ್ಲದಾಗೇ ಕಾಣೆಯಾಗಿದ್ದಾರೆ ಎಂದು ಗುಡುಗಿದ್ದಾರೆ.
ಅಜಿತ್ ಪವಾರ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಈ ಹಿಂದೆಯೂ ಸೊಲ್ಲಾಪುರದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಹೀಗೆ ಪವಾರ್ ಹೇಳಿಕೆ ನೀಡಿದ್ದ ಪರಿಣಾಮ ಏನಾಯ್ತು ಎಂದು ಎಲ್ಲರಿಗೂ ಗೊತ್ತಿದೆ. ಸೂರ್ಯಚಂದ್ರ ಇರುವ ತನಕ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
Also Read: ಮರಾಠಾ ನಿಗಮ ಘೋಷಣೆ ಬೆನ್ನಲ್ಲೇ ಬೆಳಗಾವಿ ನಮ್ಮದು ಎಂದ ಮಹಾರಾಷ್ಟ್ರ!
ನಾವು ಮರಾಠಿಗರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನೇ ಆರಂಭಿಸಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಅಜಿತ್ ಪವಾರ್ ಇಂತಹ ಬೆಂಕಿ ಹಚ್ಚುವ ಹೇಳಿಕೆ ನೀಡಬಾರದು ಎಂದು ಸಿಎಂ ಬಿಎಸ್ ಯಡಿಯೂರಪ್ಪನವರು ವಿರೋಧ ವ್ಯಕ್ತಪಡಿಸಿದ್ದಾರೆ.
ಮರಾಠಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿರುವ ಕರ್ನಾಟಕದ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ನಮ್ಮದು. ಇವು ಮೂರು ಪ್ರದೇಶಗಳೊಂದಿಗೆ ಸೇರಿದ ಅಖಂಡ ಮಹಾರಾಷ್ಟ್ರದ ಅಭಿವೃದ್ಧಿ ಬಾಳಾ ಠಾಕ್ರೆಯವರ ಕನಸಾಗಿತ್ತು. ಅದನ್ನ ನಾವು ನನಸು ಮಾಡಬೇಕು ಎಂದು ಅಜಿತ್ ಪವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.